Thursday, 8 August 2013

ಕವನ


                                                                                                                           


ಗಂಗಾಧರ ಚಿತ್ತಾಲ


                         
೧                                                            

ಹತ್ತು ದಿನದಿಂದ ಹುಡುಕಾಟ ಮಿಲಿಮಿಲಿ ಮಿಡುಕಿ ತಡಕಾಟ
ಬಾಯಿಗೆ ಬಾರದು
ಎಲ್ಲೋ ಒಳಗೇ ನಟ್ಟು
ಮುಳ್ಳೂರಿ ಕಾಡಿಸುವ ಬೆತ್ತದಂತಹದೇನೋ
ಮೊಳಕೆ ತೋರದು

ಕಾವು ಕೂತದ್ದಾಯ್ತು ಸಿಡುಕಿ ಶತಪಥ ತುಳಿದು
ಕಾಲು ಸೋತದ್ದಾಯ್ತು ಏನೋ ಲವಲವಿಸಿ
ಕೊರಳವರೆಗೆ ಬಂದಂತಾಗಿ ಕರುಳು ತಳಮಳವಾಯ್ತು

ಕದಲಲಾರದು
ಮಿದುಳ ಮೊದ್ದು ಮನಸಿಗೆ ಹೊದ್ದು
ಬಿಗಿದ ಗುಮ್ಮನ ಗುಸುಕ ಮುಸುಕು
ನಾಲಗೆಯು ಬಿದ್ದಿದೆ ಜೊಳ್ಳು

ಈ ಮಸಕುಮಸಕಲ್ಲೂ ಏನೋ ಚಳುವಳಿ ಸುಳಿವು
ದೂಡಿ ಬರಲಿದೆ ಮೂಡಿ ಕೂಡಿ ಬರಲಿದೆ ಎಂಬ
ಹೊಂಚು ಒಳಸಂಚು ಕೇಳಿಸುವ ಮುಂಚಿನ ಸೊಲ್ಲು

ಎಂದು ಮುಗಿವುದೋ ಹೊಸ್ತಿಲಂಚಿಗೂ ಬಂದು ಮುಖ
ಮರೆಸಿ ತಡವರಿಸುವೀ ಇದಕೆ ಕತ್ತಲ ವಾಸ


ಅಲೆ ಉಲಿ ಮೆಲ್ಲನ್ನ ಉಲುಹು ಅಲ್ಲಲ್ಲಿ
ಮಿನುಗು ಮಾತಿನ ಮಿಸುನಿ ಹೊಳಪು
ಒಮ್ಮೆಲೇ
ತಾನಾಗಿ ನಾಲ್ಕಾರು ನುಡಿ ಸಾಲು
ಹೊಯ್ದಾಟ

ಕಲುಕುಮಲಕಲ್ಲಿ
ಕೂಡಿ ಮೂಡಿ ಕದಡಿ ಮತ್ತೆ ಕೂಡಿ ಮೂಡಿ
ತೇಲುವ ಬಿಂಬ
ಚುಂಬಕ ಸೆಳೆತ ಹಿಡಿವ ಪಡೆಯುವ ತುಡಿತ
ನೆತ್ತರಲ್ಲೆಲ್ಲ ಒತ್ತು ಒತ್ತಡದ ಎದೆ ಬಡಿತ

ಕೊಕ್ಕೆಗೆ ಸಿಕ್ಕಿದ್ದೇ ತಡ ಎಷ್ಟು ತಡಪಡಿಸಿದರೂ
ಬಿಡಿಸಿಕೊಳ್ಳದ ಬಿಗಿತ
ಹಿಡಿತ ಸಾಕಾದೀತೇ ಮಿಡಿತ ಸಾಕಾದೀತೇ - ಅಳುಕು
ಆಮೇಲೆ ಒಂದೇ ಒಂದು - ಮಾತು ಮಿದ್ದುವ ಮಸಕ
ಕಂಡದ್ದು ಉಂಡದ್ದು ಅನಿಸಿದ್ದು ಕನಸಿದ್ದು
ಮೂಡಿ ಮೈಗೂಡಿದ್ದು ಮೊಳಗಿ ತೊಳಗುವ ತನಕ
ಕೈ ಬಾಯ್ಗೆ ಬರುವನಕ

ಸ್ಪಂದಿಸುವ ಹೊಸತೊಂದು!



ಬಂದಾದ ಮೇಲೆ ಬರಿ ಬಂದುದಷ್ಟೆ ಬಂತು
ಯಾಕೆ ಬಂತು ಹ್ಯಾಗೆ ಬಂತು ಅದರ ಗತ್ತು ಅದರ ಗಮ್ಮತ್ತು
ಎಲ್ಲಾ ಊಹಾಪೋಹ
ಇಷ್ಟು ನಿಜ ಬರಲು ಹಿಡಿದಷ್ಟೂ ಹೊತ್ತು 
ಮತ್ತು ತಲೆಗೇರಿತ್ತು

ತಡೆಯಲಾರದೆ ಬಾಯಿಬಾಯಿ ಬೇಡುತ್ತಿತ್ತು
ಗರಡಿಯಲ್ಲಿಳಿದು ಹಿಡಿತಕ್ಕೆ ಸಿಕ್ಕಿಯೂ ಸಿಗದೆ
ನುಸುಳಿ ಜಾರುವ ಯಾತರೊಡನೆಯೋ
ಪಟ್ಟು ಹಿಡಿದಂತಿತ್ತು

ಇದು ಬರಿಯ ಹಿಡಿದಾಟ? ಬರಿಯ ಪಟ್ಟಾಟ?
ಒಂದರೊಳಗಿನ್ನೊಂದು ಹೊಕ್ಕು ಕೂಡುವ ಪರಿಯೋ?
ಕತ್ತಲೊತ್ತಡದಲ್ಲೆ ಪಿಂಡ ಬಲಿಯುತಲಿತ್ತು
ಗರ್ಭ ಭಾರಕೆ ಬಸಿರು ಬೀಗಿ ನಲಿಯುತಲಿತ್ತು
ಕೊನೆಗೊಮ್ಮೆ ಬಾಯೊಡೆದು 
ಒಂದು ಜೀವಕ್ಕೆ ಎರಡು ಜೀವವಾಗಿ
ಬಿಡುಗಡೆಯಾಯ್ತು.


ಈ ಮುಖೋದ್ಗತ ನಿನ್ನ ಹೃದ್ಗತವೇ ಆದ ದಿನ 
ಸುದಿನ
ಆವರೆಗೂ ಇದು
ತಕ್ಕ ಮಣ್ಣಿನ ತೇವಕಾಗಿ ಕಾದೇ ಇರುವ 
ಬೀಜ

***

Monday, 5 August 2013

ಮೂರು ಸೂಫಿ ಕವಿತೆಗಳು


  ನಿನ್ನನ್ನು ಪಂಡಿತನೆಂದೇಕೆ   
  ಕರೆದುಕೊಳ್ಳುವೆ ಓ ಮುಲ್ಲಾ?

  ಶಬ್ದಗಳ ಗೊಂಡಾರಣ್ಯದಲ್ಲಿ
  ಕಳೆದುಹೋಗಿರುವೆ.
  ಅಸಂಬದ್ಧ ಮಾತುಗಳನಾಡುತ್ತ
  ನಿನ್ನನ್ನೇ ಪೂಜಿಸಿಕೊಳ್ಳುತ್ತಿರುವೆ.
  ಕಣ್ತೆರೆದು ದೇವರನ್ನು ಅರಸುವ ಬದಲು
  ಧೂಳಿನ ರಾಶಿಗೆ ಹಾರಿ ಬೀಳುತ್ತಿರುವೆ.
  ನಾವು ಸೂಫಿಗಳು
  ಪವಿತ್ರ ಕುರಾನಿನ ಮಿದು ಮಾಂಸ ಪಡೆದಿದ್ದೇವೆ.
  ನೀವು ನಾಯಿಗಳು ಕಚ್ಚಾಡುತ್ತಿದ್ದೀರಿ
  ಪರಸ್ಪರ ಕಿತ್ತೆಳೆಯುತ್ತಿದ್ದೀರಿ
  ಒಣ ಎಲುಬು ಕಡಿಯುವ ಅವಕಾಶ ಸಿಗಲೆಂದು.. ‘

  ಶಾಹ್ ಅಬ್ದುಲ್ ಲತೀಫ್ 

   ***

   ನಾನೊಬ್ಬ ಪ್ರೇಮಿ, ಪ್ರೇಮದ ವ್ಯಾಪಾರಿ.
   ಹೂವನ್ನು ಬಿತ್ತು: ನಿನ್ನ ಸುತ್ತ ಉದ್ಯಾನ ಮೈದಳೆಯುತ್ತದೆ.
   ಮುಳ್ಳನ್ನು ಬಿತ್ತದಿರು: ಅವು ನಿನ್ನ ಕಾಲನ್ನೇ ಚುಚ್ಚುತ್ತವೆ.
   ನಮದೆಲ್ಲ ಒಂದೇ ದೇಹ.
   ಅವಗೆ ಕೊಡುವ ಹಿಂಸೆಗೆ 
   ಗಾಯಗೊಳುವುದು ನಮದೇ ದೇಹ.

  ರೆಹಮಾನ್ ಬಾಬಾ


   ಓ ದೇವರೇ,
   ನೀನು ಮೆಕ್ಕಾದ ಕಾಬಾದಲ್ಲಿರುವೆ
   ಸೋಮನಾಥದ ಲಿಂಗದಲ್ಲೂ ಇರುವೆ
   ಮಠದಲ್ಲಿರುವೆ
   ಪಡಖಾನೆಯಲ್ಲೂ ಇರುವೆ.

   ನೀನು ಒಮ್ಮೆಲೇ
   ದೀಪ ಮತ್ತು ಪತಂಗ
   ಮದಿರೆ ಮತ್ತು ಬಟ್ಟಲು
   ಸಂತ ಮತ್ತು ಮೂರ್ಖ
   ಸ್ನೇಹಿತ ಮತ್ತು ಅಪರಿಚಿತ
   ಗುಲಾಬಿ ಮತ್ತು ಕೋಗಿಲೆ
   ಎಲ್ಲವೂ ಆಗಿರುವೆ. 

   - ದಾರಾ ಶುಕೋ

(ವಿಲಿಯಮ್ ಡ್ಯಾಲ್ ರಿಂಪಲರ 'ನೈನ್ ಲೈವ್ಸ್' ಪುಸ್ತಕದ 'ಲಾಲ್ ಫೇರಿ' ಅಧ್ಯಾಯದಿಂದ ಅನುವಾದ: ಡಾ. ಎಚ್.ಎಸ್ ಅನುಪಮಾ)

Sunday, 4 August 2013


ಸರ್ಕಾರಿ ವೈದ್ಯರು, ಕೋರ್ಟು ಕಛೇರಿ ಇತ್ಯಾದಿ...

ಡಾ. ಜಿ.ಕೃಷ್ಣ



ಸರ್ಕಾರಿ ವೈದ್ಯರಿಗೆ, ಅದರಲ್ಲೂ ಜನರಲ್ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ  ವೈದ್ಯರಿಗೆ ಮೆಡಿಕೋ ಲೀಗಲ್ ಕರ್ತವ್ಯಕ್ಕೆ ಪೂರಕವಾಗಿ ಕೋರ್ಟಿನಲ್ಲಿ ಪ್ರಾಸಿಕ್ಯೂಶನ್ ಪರ ಸಾಕ್ಷಿಯಾಗಿ ಹೋಗುವುದು ಇದ್ದೇ ಇರುತ್ತದೆ.  ಹೊಡೆದಾಡಿಕೊಂಡು ಬರುವವರಿಗೆ, ವಾಹನ ಅಫಘಾತದಲ್ಲಿ ಗಾಯಗೊಂಡಿರುವವರಿಗೆ ಚಿಕಿತ್ಸೆಯ ಜೊತೆಗೆ ಮುಂದೆ ಕಾನೂನು ಕ್ರಮಕ್ಕೆ ಬೇಕಾಗುವ ಗಾಯದ ಪ್ರಮಾಣ ಪತ್ರ (Wound Certificate) ವನ್ನು ನೀಡುವುದು ಕೂಡ ಕರ್ತವ್ಯದಲ್ಲಿರುವ ಸರ್ಕಾರಿ ವೈದ್ಯರ ಜವಾಬ್ದಾರಿ. ಅನುಮಾನಾಸ್ಪದ ಎನಿಸುವಂತ ಗಾಯಾಳು ಬಂದಾಗ ಅದರ ಬಗ್ಗೆ ಪೋಲೀಸರಿಗೆ ಮಾಹಿತಿ ಕಳಿಸುವುದು ಕೂಡ ವೈದ್ಯರ ಕರ್ತವ್ಯ. ಪ್ರಮಾಣಪತ್ರ ಕೊಟ್ಟಮೇಲೆ ಕೋರ್ಟಿನಲ್ಲಿ ಕೇಸು ನಡೆಯುವಾಗ ಸಾಕ್ಷಿಯಾಗಿ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ.



ಇದೇನೂ ಬೇಸರದ ವಿಷಯವಲ್ಲ. ಆದರೆ ಹೊಡೆದಾಡಿಕೊಂಡು ಬರುವ ಜನಸಾಮಾನ್ಯರಿಗೆ ಕಾನೂನಿನ ಬಗ್ಗೆ ತಪ್ಪು ಕಲ್ಪನೆಗಳಿರುವುದರಿಂದ ಪ್ರಮಾಣ ಪತ್ರ ನೀಡುವ ವೈದ್ಯ ಕೆಲವೊಮ್ಮೆ ಒತ್ತಡದಲ್ಲಿ ಸಿಕ್ಕಿಕೊಳ್ಳುತ್ತಾನೆ. ಗಾಯಗಳನ್ನು ಎರಡು ವಿಧದಲ್ಲಿ ಗುರುತಿಸಬೇಕಾಗುತ್ತದೆ-ಒಂದು ಸಾದಾ ಸ್ವರೂಪದ ಗಾಯ(Simple Injury), ಇನ್ನೊಂದು ತೀವ್ರ ಸ್ವರೂಪದ ಗಾಯ (grievous Injury). ಗಾಯದ ಪ್ರಮಾಣಪತ್ರದಲ್ಲಿ ವೈದ್ಯರು ಗಾಯ ಸಾದಾ ಸ್ವರೂಪದ್ದೋ ತೀವ್ರವಾದದ್ದೋ ಎಂಬ ಅಭಿಪ್ರಾಯವನ್ನು ಕೊಡಲೇಬೇಕು. ತರಚಿದ, ಹರಿದ, ಕುಯ್ದ ಗಾಯಗಳು ಸಾದಾ ಗಾಯಗಳು ಎಂದು ಪರಿಗಣಿಸಲ್ಪಡುತ್ತವೆ. ಎಲುಬು ಮುರಿತ, ಹಲ್ಲು ಮುರಿತ, ಬೆರಳು ಅಥವಾ ಕೈ ಕಾಲು ಕತ್ತರಿಸಲ್ಪಡುವುದು, ತಲೆ, ಎದೆ ಅಥವಾ ಹೊಟ್ಟೆಯ ಒಳಭಾಗಕ್ಕೆ ಜಖಂ ಇವೆಲ್ಲ ತೀವ್ರ ಸ್ವರೂಪದ ಗಾಯಗಳು. ಅಪರಾಧ ದಾಖಲಾಗುವಾಗ ಐ ಪಿ ಸಿ(Indian Penal Code)ಯ ಯಾವ ಸೆಕ್ಷನ್ ಹಾಕಬೇಕು ಎನ್ನುವುದನ್ನು ತನಿಖಾಧಿಕಾರಿಗಳು ಗಾಯದ ಸ್ವರೂಪದ ಮೇಲೆ ನಿರ್ಧರಿಸುತ್ತಾರೆ. ಅದರಂತೆ ಅಪರಾಧ ಸಾಬೀತಾದಾಗ ಶಿಕ್ಷೆಯ ಪ್ರಮಾಣವೂ ನಿರ್ಧಾರವಾಗುತ್ತದೆ, ಹೊಡೆದಾಡಿಕೊಂಡು ಬರುವ ಎಲ್ಲರಿಗೂ ತಮಗಾದ ಗಾಯ ತೀವ್ರ ಸ್ವರೂಪದ್ದು ಎಂದು ದಾಖಲಿಸುವ ಬಯಕೆ.  'ಇದು ಮೊದಲ ಸಲ ಅಲ್ಲ ಸರ್. ಅವನು ದೊಡ್ಡ ರೌಡಿಯೆ ಆಗಿಬಿಟ್ಟಿದ್ದಾನೆ. ಈ ಸಲ ಅವನನ್ನು ಹಾಗೇ ಬಿಡಬಾರದು. ನೀವು ಎಲ್ಲ ಸ್ವಲ್ಪ ಹೆಚ್ಚು ಬರೆದುಕೊಡಿ. ಕೇಸ್ ಗಟ್ಟಿಯಾಗುವಂತೆ ಮಾಡಿ' ಅಂತ ದುಂಬಾಲು ಬೀಳುವವರು, ಊರ ಮುಖಂಡರಿಂದ ಫೋನ್ ಮೂಲಕ ಒತ್ತಡ ಹೇರುವವರು, 'ನಾಕುದಿನ ಅಡ್ಮಿಟ್ ಮಾಡಿಕೊಳ್ಳಿ, ಕೇಸು ಬಿಗಿಯಾಗಬೇಕು' ಅಂತ ಒತ್ತಡ ಹೇರುವವರು, 'ನೀವು ಪಕ್ಷಪಾತ ಮಾಡುತ್ತಿದ್ದೀರಿ' ಅಂತ ವೈದ್ಯರ ಮೇಲೇ ಆರೋಪ ಹೊರಿಸುವವರು ಎಲ್ಲಾ ಸೇರಿ ಆಸ್ಪತ್ರೆಯಲ್ಲಿ ಒಂದು ಬಿಗುವಿನ ವಾತಾವರಣವೆ ಸೃಷ್ಟಿಯಾಗಿಬಿಡುತ್ತದೆ. ಇದಕ್ಕೆಲ್ಲ ಸಮಜಾಯಿಶಿ ನೀಡುವುದರಲ್ಲಿ ವೈದ್ಯ ಹೈರಾಣಾಗುತ್ತಾನೆ. ಈ ಮಧ್ಯೆ ಹೊಡೆದವನೂ ಪ್ರತಿದೂರು ಕೊಟ್ಟು ತನಗೂ ವಿಪರೀತ ಪೆಟ್ಟಾಗಿದೆ, ಹೊಡೆದದ್ದು ಅವನೇ ಹೊರತು ತಾನಲ್ಲ, ತನಗೂ ಯೋಗ್ಯವಾದ ಸರ್ಟಿಫಿಕೇಟ್ ಕೊಡಿ ಎನ್ನುತ್ತಾ ಬರುವುದೂ ಸಾಮಾನ್ಯ. ಇಬ್ಬರೂ ಒಟ್ಟಿಗೇ ಬಂದು ಆಸ್ಪತ್ರೆಯಲ್ಲಿ ಮತ್ತೆ ಹೊಡೆದಾಟಕ್ಕೆ ತಯಾರಾಗುವುದೂ ಉಂಟು.

ಹೊಡೆತ ತಿಂದ ಅವಮಾನ ಹೊಡೆದವನಿಗೆ ಶಿಕ್ಷೆಯಾಗಲೇ ಬೇಕು ಎಂಬ ರೋಷ, ಹಟಕ್ಕೆ ಕಾರಣವಾಗುವುದು ಸಹಜ. ಆದರೆ ಇವುಗಳಲ್ಲಿ ೯೯% ಪ್ರಕರಣಗಳು ಕೋರ್ಟಿನಲ್ಲಿ ಸಾಬೀತಾಗುವಂತವಲ್ಲ. ದೂರುಕೊಟ್ಟ ಒಂದೋ ಎರಡೋ ವರ್ಷಗಳ ನಂತರ ಕೇಸು ಕೋರ್ಟಿಗೆ ಬರುತ್ತದೆ (ಅಷ್ಟರಲ್ಲಿ ರಾಜಿಯಾಗದಿದ್ದರೆ). ಹೆಚ್ಚಿನ ಪ್ರತ್ಯಕ್ಷಸಾಕ್ಷಿಗಳು ತಿರುಗಿಬೀಳುತ್ತಾರೆ. ಪಿರ್ಯಾದಿದಾರನಿಗೂ ಕೋರ್ಟಿಗೆ ಅಲೆದು ಅಲೆದು ಸಾಕಾಗಿರುತ್ತದೆ. ಆಪಾದಿತ ಕೋರ್ಟಿಗೆ ಅಲೆದು, ವಕೀಲರ ಫೀಸ್ ಕೊಟ್ಟು ಕಂಗಾಲಾಗಿರುತ್ತಾನೆ. ಇಂತಹ ಹೊತ್ತಲ್ಲಿ ತಜ್ಞ ಸಾಕ್ಷಿ ವೈದ್ಯಾಧಿಕಾರಿ ಕಟಕಟೆಗೆ ಬರುತ್ತಾರೆ. ಅವರ ಕೋರ್ಟ್ ಸೀನ್ ಹೀಗಿರುತ್ತದೆ-

ಪ್ರಮಾಣ ವಚನ- ದೇವರ ಮೇಲೆ ಪ್ರಮಾಣ ಮಾಡಿ ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲ ಸತ್ಯ.

ಮೊದಲು ಸರಕಾರಿ ವಕೀಲರ ಸವಾಲು. ಹೊಡೆದಾಟಕ್ಕೆ ಉಪಯೋಗಿಸಿದ ಕತ್ತಿ, ದೊಣ್ಣೆ, ಹಾರೆ, ಪಿಕಾಸುಗಳನ್ನೆಲ್ಲ ಹಾಜರುಪಡಿಸಿರುತ್ತಾರೆ. ವೈದ್ಯರು ಕೊಟ್ಟ ಪ್ರಮಾಣಪತ್ರದಲ್ಲಿರುವ ಗಾಯಗಳ ಬಗ್ಗೆ ಇನ್ನೊಮ್ಮೆ ವಿವರವಾಗಿ ಕೇಳುತ್ತಾರೆ. ಪಿರ್ಯಾದಿದಾರ ಆಸ್ಪತ್ರೆಗೆ ಬಂದ ದಿನಾಂಕ, ಸಮಯ, ಯಾರು ಕರೆತಂದಿದ್ದರು ಮುಂತಾದ ವಿವರಗಳನ್ನು ಕೋರ್ಟು ಇವರ ಮುಖಾಂತರ ಖಚಿತಪಡಿಸಿಕೊಳ್ಳುತ್ತದೆ. ಹತ್ಯಾರುಗಳನ್ನು ತೋರಿಸಿ ಅವುಗಳಿಂದ ಪ್ರಮಾಣಪತ್ರದಲ್ಲಿ ಹೇಳಲಾದ ಗಾಯಗಳು ಸಂಭವಿಸಬಹುದು ಎಂಬುದನ್ನೂ ಹೇಳಿಸುತ್ತಾರೆ
.
ಇನ್ನು ಪಾಟೀಸವಾಲು. ಆಪಾದಿತನ ಪರ ವಕೀಲರು ಬರುತ್ತಾರೆ.

"ನೋಡಿ ಡಾಕ್ಟ್ರೇ, ನೀವು ಹೇಳಿದ ಈ ತರಚು ಗಾಯ, ಹರಿದ ಗಾಯ, ಗುದ್ದು ಗಾಯ ಇವೆಲ್ಲಕ್ಕೂ ನೀವು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಟ್ಟಿದ್ದೀರಿ ಅಲ್ವಾ?"

"ಹೌದು"

"ಈ ಗಾಯಗಳು ಆಗ ತೋರಿಸಿದ ಹತ್ಯಾರುಗಳಿಂದ ಆಗಿವೆ ಅಂತ ನೀವು ಹೇಳ್ತೀರಿ ಅಲ್ವಾ?"

"ಹೌದು"

"ಡಾಕ್ಟ್ರೇ, ಒಬ್ಬ ವ್ಯಕ್ತಿ ಒರಟಾದ ನೆಲದ ಮೇಲೆ ಜಾರಿ ಬಿದ್ದರೆ, ಚೂಪಾದ ವಸ್ತುವಿನ ಮೇಲೆ ಬಿದ್ದರೆ ಇಂತಹ ಗಾಂiiಗಳು ಆಗಬಹುದಾ?"

"ಆಗಬಹುದು."

ಇಲ್ಲಿಗೆ ಈ ಪ್ರಕರಣದಲ್ಲಿ ಆರೋಪಿಯ ಖುಲಾಸೆ ಆಯ್ತು ಅಂತ ಅರ್ಥ. ಹೆಚ್ಚಿನ ಪ್ರಕರಣಗಳು ಇದೇ ದಾರಿಯಲ್ಲೇ ಸಾಗುತ್ತವೆ. ಈ ಹಂತದಲ್ಲಿ ಇಷ್ಟು ಸಣ್ಣ ಪ್ರಕರಣಗಳಲ್ಲಿ ಸರಕಾರಿ ವಕೀಲರೂ ಮತ್ತೆ ಪಾಟೀಸವಾಲಿಗೆ ಮುಂದಾಗುವುದಿಲ್ಲ. ಪೋಲೀಸರ ಬಳಿಯೂ ಗಟ್ಟಿಯಾದ ಬೇರೆ ಸಾಂದರ್ಭಿಕ ಸಾಕ್ಷಿಗಳು ಇರುವುದಿಲ್ಲ. ಜಿದ್ದಿರುವವರು ಮೇಲ್ಮನವಿಗೆ ಹೋಗಬಹುದು.

ಈ ರೀತಿಯ ಚಿಕ್ಕಪುಟ್ಟ ಪ್ರಕರಣಗಳು ನ್ಯಾಯದಾನ ವ್ಯವಸ್ಥೆಯ ಅಮೂಲ್ಯವಾದ ಸಮಯವನ್ನು ತಿಂದು ಹಾಕುತ್ತವೆ. ಇಡೀ ವ್ಯವಸ್ಥೆಯೇ ಬಸವನಹುಳುವಿನಂತೆ ತೆವಳುತ್ತದೆ. 'ಕೋರ್ಟು ಹತ್ತಿದರೆ ಈ ಜನ್ಮದಲ್ಲಿ ನ್ಯಾಯಸಿಗುವ ಸಾಧ್ಯತೆ ಕಡಿಮೆ' ಎನ್ನುವ ಮಾತು ನಿಜವಾಗುತ್ತದೆ.

ಸರಕಾರಿ ಸೇವೆಯಲ್ಲಿ ಈ ತರದ ಅಪರಾಧ ತಡೆ/ನ್ಯಾಯದಾನ ವ್ಯವಸ್ಥೆಯ ಜೊತೆಗಿನ ನಿರಂತರ ಮುಖಾಮುಖಿ, ಒತ್ತಡ ಎಷ್ಟೋ ವೈದ್ಯರು ಸರ್ಕಾರಿ ಸೇವೆಗೆ ಸೇರಲು ಹಿಂದೇಟು ಹಾಕಲು, ಸೇವೆಯಿಂದ ಹೊರಗೆ ಹೋಗಲು ಕಾರಣವಾಗುತ್ತಿದೆ ಎಂಬುದು ವಾಸ್ತವ. ತಮ್ಮ ತಜ್ಞತೆಗೆ ಹೊರತುಪಡಿಸಿದ ಈ ತರದ ಸೇವೆಯನ್ನು ಕೊಡಲು  ಹೆಚ್ಚಿನ ತಜ್ಞವೈದ್ಯರು ಬಯಸುವದಿಲ್ಲ.

ಕೋರ್ಟಿಗೆ ಕೇಸುಗಳ ಸಾಂದ್ರತೆ ಕಡಿಮೆ ಮಾಡಲು ಪ್ರಾಥಮಿಕ ಹಂತದಲ್ಲಿ ಜರಡಿಯಂಥ ವ್ಯವಸ್ಥೆಯನ್ನು ಅಳವಡಿಸಲು ಸಾಧ್ಯವೆ ಎನ್ನುವುದರ ಕುರಿತು ಕಾನೂನು ತಜ್ಞರು ಚಿಂತಿಸಬೇಕು.

ಅರೋಗ್ಯ ಸೇವೆಯಲ್ಲೂ ಪ್ರತಿ ತಾಲೂಕು ಮಟ್ಟದ ಆಸ್ಪತ್ರೆಯಲ್ಲಿ ನ್ಯಾಯವೈದ್ಯ (Medico-legal) ವಿಭಾಗವನ್ನು ತೆರೆದು ಅದಕ್ಕೆ ನ್ಯಾಯವೈದ್ಯಶಾಸ್ತ್ರದಲ್ಲಿ ತಜ್ಞತೆ ಹೊಂದಿರುವ ಅಥವಾ ಅದರಲ್ಲಿ ತರಬೇತಿ ಪಡೆದ ವೈದ್ಯಾಧಿಕಾರಿಯನ್ನು ನೇಮಿಸಬೇಕು. ಆಗ ಮೆಡಿಕೋ ಲೀಗಲ್ ಕೇಸುಗಳಿಗೆ ಹೆದರಿ ಸರ್ಕಾರಿ ಸೇವೆಯಿಂದ ದೂರ ಸರಿಯುವ ವೈದ್ಯರನ್ನು ಹಿಡಿದಿಟ್ಟುಕೊಳ್ಳಬಹುದು.

Saturday, 3 August 2013

ಎರಡು ಕವಿತೆಗಳು                          ಡಾ.ಜಿ.ಕೃಷ್ಣ



ವಿರೋಧ

 
ಆತ ಬಂಡವಾಳಶಾಹಿ ವಿರೋಧಿ
ಕಂಪ್ಯೂಟರ್ ಕೀಲಿಮಣೆ ಮೇಲೆ
ಬೆರಳು ಕುಣಿಯುವ
ಒಂದು ಕ್ಷಣದಲ್ಲಿ
ಅನ್ನಿಸಿಬಿಟ್ಟಿತು
ನಿಮಿಷಗಳ ಲೆಕ್ಕದಲ್ಲಿ
ತಾನೂ
ಅವರ ಜೋಳಿಗೆ ತುಂಬುತ್ತಿದ್ದೇನೆ
ಕೂರಿಸಿಕೊಂಡು
ಗಾಡಿ ಎಳೆಯುತ್ತಿದ್ದೇನೆ


ಹಗ್ಗ ಬಿಟ್ಟು
ನಡೆದುಬಿಟ್ಟ.


***






ಕೇಳಿಸುತ್ತೆ...

 
ದೂರ ಹೆಚ್ಚಿದಷ್ಟೂ
ಕೂಗು, ಕಿರುಚಾಟ
ಕೇಳಿಸಿಕೊ ಎಂಬ
ಹಕ್ಕೊತ್ತಾಯ
ಬೆಟ್ಟದಿಂದ ಹೊರಟ
ಪ್ರತಿಧ್ವನಿ
ಕೇಳಿಸುತ್ತೆ
ಏನೂ ಕೇಳಿಸುವುದಿಲ್ಲ.

ಬೆಸೆದುಕೊಂಡಾಗ
ಪಿಸುದನಿ
ಮೌನ
ಕೇಳಿಸುವುದಿಲ್ಲ
ಎಲ್ಲ ಕೇಳಿಸುತ್ತೆ.


***

Friday, 2 August 2013



ನೋಟ                                                                                                                     

ಡಾ.ಜಿ.ಕೃಷ್ಣ


ದಾರಿಯಲ್ಲಿ

ಕಳೆದ

ಅಮ್ಮ ಕೊಟ್ಟ

ನಾಕು ಕಾಸು

ಜಾತ್ರೆ ಬೀದಿಯಲ್ಲಿ

ಆಸೆಗಣ್ಣು

ಬೆಂಡು ಬತ್ತಾಸಿನವರಿಗೆ

ಪೀಪಿ ಪುಗ್ಗದವರಿಗೆ

ಮುಖ ನೋಡಿಯೆ ತಿಳಿದುಬಿಟ್ಟಿದೆ

ಹಕೀಕತ್ತು

ಕಣ್ಣಿಟ್ಟೇ ಇದ್ದಾರೆ.


ಬೆಂಕಿಗೆ

ಎಷ್ಟು ನೀರೆರಚಿದರೂ

ಒಳಗಿನ ಬಿಸಿ

ಹೆಚ್ಚುತ್ತಲೆ ಇದೆ

ನೋಟ

ಮಸುಕಾಗುತ್ತಿದೆ.


***

ಕೂಲಿಯ ಕದಿಯುವ ಕುಲವೆಲ್ಲ.......     

Neela K Gulbarga


ನೀಲಾ. ಕೆ ಗುಲ್ಬರ್ಗಾ


ಬಲ್ಲಿದ ಹಗೆಯವ ತೆಗೆವನ್ನಬರ

ಬಡವರ ಹರಣ ಹಾರಿಹೋದ ತೆರನಂತಾಯಿತ್ತು.

-ಅಕ್ಕಮಹಾದೇವಿ



ಇಪ್ಪತ್ತು ವರ್ಷದ ಹಿಂದಿರಬೇಕು. ಸಾಕ್ಷರತೆಗಾಗಿ ಕೆಲಸ ಮಾಡುತ್ತಿದ್ದ ದಿನಗಳವು. ಜಿಲ್ಲಾ ಸಂಯೋಜಕರಿಗೆ ಗೌರವಧನ ರೂ.500 ಕೊಡುತ್ತಿದ್ದರು. ತಾಲ್ಲೂಕು ಸಂಯೋಜಕರಿಗೆ 300 ರೂಪಾಯಿ. ಹಳ್ಳಿಗಳಿಗೆ ಹೋಗುವುದು. ಅಕ್ಷರದ ಬೆಳಕು ಯಾಕಾಗಿ ಬೇಕೆಂದು ಮನನ ಮಾಡಿಸಿ ಜನರನ್ನು ಸಾಕ್ಷರತಾ ಕೇಂದ್ರಗಳಿಗೆ ಬರುವಂತೆ ಒಲಿಸುವುದು. ನನಗೆ ತುಂಬ ಖುಷಿ ಕೊಟ್ಟ ಕೆಲಸವದು. ಆದರೆ ಇತರರಿಗೆ ಈ ಕಡಿಮೆ ಗೌರವಧನ ಯಾತಕ್ಕೂ ಸಾಲುತ್ತಿರಲಿಲ್ಲ. ಜನರನ್ನು ಅಕ್ಷರದ ಅಂಗಳಕ್ಕೆ ತರುವ ನೇರ ಕೆಲಸ ಮಾಡುವವರಿಗೆ ತುಂಬಾ ಕಡಿಮೆ ಮೊತ್ತ ಖರ್ಚು ಮಾಡುವ ಸರ್ಕಾರವು, ಅದೇ ಹೊತ್ತಿನಲ್ಲಿ ಅನಾವಶ್ಯಕ ಅದ್ಧೂರಿ ಕಾರ್ಯಕ್ರಮಗಳಿಗೆ ವಿಪರೀತ ದುಂದುವೆಚ್ಚ ಮಾಡುತ್ತಿತ್ತು. ಗಾಬರಿಗೊಳಿಸುವಷ್ಟು ಲಂಚ, ಪೋಲು ಇದ್ದೇ ಇತ್ತು. ಕಾರ್ಯಕ್ರಮದ ಮುಖ್ಯ ಉದ್ಧೇಶ-ಗುರಿ ತಲುಪಲು ಅರ್ಥಪೂರ್ಣ ಖರ್ಚು ಮಾಡುವ ಇಚ್ಚೆಯೇ ಇಲ್ಲದ್ದು ಎಲ್ಲ ಹಂತಗಳಲ್ಲಿಯೂ ನೋಡಬಹುದು. ಅಂಥ ಸಂದರ್ಭದಲ್ಲಿ ಬೇರುಹಂತದಲ್ಲಿ ಕೆಲಸ ಮಾಡುವವರಿಗೆ ಫಲಾಪೇಕ್ಷೆಯಿಲ್ಲದೆ ಕಾಯಕ ಮಾಡಬೇಕೆಂದು ಉಪದೇಶ ಮಾಡುವುದರಿಂದ ಗುರಿ ಮುಟ್ಟಲು ಸಾಧ್ಯವೆ? ಆದ್ದರಿಂದಲೇ ಈಗಲೂ ನಮ್ಮ ಸಾಕ್ಷರತೆಯ ಪ್ರಮಾಣ ಶೇ.70ಕ್ಕೂ ತಲುಪಲಿಲ್ಲ. ಮಹಿಳಾ ಸಾಕ್ಷರತೆ ಅರ್ಧದಷ್ಟೂ ಮುಂದೆ ಹೋಗಲಿಲ್ಲ. ದಲಿತ ಸಾಕ್ಷರತೆ ಇನ್ನೂ ಕಡಿಮೆ ಇದೆ.

ಮಂಡಳ ಪಂಚಾಯತ್ ನೌಕರರಿಗೆ ವೇತನ ನಿಗದಿಗೊಳಿಸಬೇಕೆಂದು ಬೀದರ ಜಿಲ್ಲಾ ಪರಿಷತ್ತಿನ ಮುಂದೆ ತಿಂಗಳಗಟ್ಟಲೆ ಹೋರಾಟ ನಡೆಸಿದ ಮೇಲೆ ಮಾತುಕತೆಗೆ ಕರೆದಿದ್ದರು. ವೇತನದ ಪಟ್ಟಿ ಮಂಡಿಸಿದರು. ಕಸಗುಡಿಸುವವರಿಗೆ, ಚರಂಡಿ ತೆಗೆವವರಿಗೆ ಅತ್ಯಂತ ಕಡಿಮೆ ವೇತನ ನಿಗದಿಪಡಿಸಿದ್ದರು. ಯಾಕೆನ್ನುವುದಕ್ಕೆ ಅವರ ಸಮಜಾಯಿಶಿಯೆಂದರೆ, 'ದಿನದ ಒಂದೆರಡು ಗಂಟೆಯ ಕೆಲಸಕ್ಕೆ ಅದರಲ್ಲೂ ಕಸಗುಡಿಸುವುದಕ್ಕೆ ಹೆಚ್ಚು ವೇತನ ಯಾಕೆ?' ಎಂದು. ನನಗೆ ಸಿಟ್ಟು ಬಂದು 'ಸಾರ್ ಲಕ್ಷ ಕೊಟ್ಟರೂ ನಿಮ್ಮಂಥ ಅಧಿಕಾರಿಗಳು ರಸ್ತೆ ಕಸಗುಡಿಸಲಾಗುವುದಿಲ್ಲ. ರಸ್ತೆ,ಚರಂಡಿ ಶುಚಿಯಿಡುವವರಿಗೆ ಕಡಿಮೆ ವೇತನ ಸರಿಯೇನ್ರೀ?' ಮಾತುಗಳು ಅಲ್ಲಿ ಇರುಸು-ಮುರುಸು ಮಾಡಿದ್ದೇನೋ ಹೌದು. ಆದರೆ ತಳಹಂತದ ಕೆಲಸಗಳಿಗೆ ಕಡಿಮೆ ಕೂಲಿಯಲ್ಲಿ ಅಥವ ಬಿಟ್ಟಿಯಾಗಿ ದುಡಿಸಿಕೊಳ್ಳಬೇಕೆಂಬ ಮನೋಭೂಮಿಕೆ ಸರಿಯೇ? ಕೇವಲ ಐವತ್ತು ರೂಪಾಯಿಯಲ್ಲಿ ಗ್ರಾಮದ ಕಸಗುಡಿಸುತ್ತಿದ್ದ ಸಿದ್ದಮ್ಮಕ್ಕ, 'ಸಾಬ್ರೆ, ನಂಗನೂ ವಯಸ್ಸಾತು. ಹ್ಯಾಂಗನೂ ನಮ್ಮ ದುಡಮಿಗಿ ಕಿಮ್ಮತ್ತಿಲ್ಲ. ತಿಂಗಳಪೂರ್ತಿ ಕಸ ಹೊಡ್ಯಾದು ನಂಗನೂ ಆಗಲ್ಲ' ಅಂದಳು. ಸಿದ್ದಮ್ಮಕ್ಕ ಕೆಲಸ ಮಾಡಲಿಚ್ಛಿಸದವಳು ಅನ್ನಬಹುದು. ಕೂಲಿ ಕದಿಯುವುದು ಅಪರಾಧವೆನಿಸುವುದಿಲ್ಲ. ಆದರೆ ಹೆಚ್ಚು ಕೂಲಿ ಬೇಡಿದರೆ ಅಥವ ಕೂಲಿಗೆ ತಕ್ಕಷ್ಟು ಶ್ರಮಿಸುತ್ತೇವೆನ್ನುವುದು ಅಪರಾಧವಾಗುವುದು. ಇದು ನ್ಯಾಯವೇ?



ಇತ್ತೀಚೆಗೆ ಬಿಸಿಯೂಟದ ನಿರ್ವಹಣೆ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಅದರಲ್ಲಿಯೂ ವಿಷಪೂರಿತ ಆಹಾರ ಸೇವಿಸಿ 21 ಮಕ್ಕಳು ಅಸುನೀಗಿದ ಮೇಲಂತೂ ಶಿಕ್ಷಕರು ಸಹ ಬಿಸಿಯೂಟದ ಯೋಜನೆಗೆ ವಿರೋಧಿಸುತ್ತಿರುವುದು ವರದಿಯಾಗುತ್ತಿವೆ. ಬೀದರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಹಣಮಂತವಾಡಿ(ಎಂ) ಗ್ರಾಮದ ಶಾಲೆಯಲ್ಲಿ ಅಡುಗೆ ಮಾಡುತ್ತಿದ್ದ ಕುಸುಮಳನ್ನು ಅರ್ಧ ಕೇಜಿ ಬೇಳೆ ಕಳ್ಳತನದ ಆರೋಪದಲ್ಲಿ ಗ್ರಾಮ ಪಂಚಾಯತಿಯವರು ಕಿತ್ತು ಹಾಕಿದರು. ಶಾಲೆಯ ಮುಖ್ಯೋಪಾಧ್ಯಾಯರು ಮುದ್ರೆ ಒತ್ತಿದರು. ವಿಧವೆ ಕುಸುಮ ತುಂಬ ಹೋರಾಡಿದಳು. ಊರ ರಾಜಕೀಯ ಸೇರಿಕೊಂಡು ಅವಳನ್ನು ಪುನಃ ಕೆಲಸಕ್ಕೆ ತಗೊಳ್ಳಲಿಲ್ಲ. ಅದೊಂದು ದಿನ ಕುಸುಮ ಸತ್ತ ಸುದ್ದಿ ಬಂತು. ಯಾವಾಗೆಂದರೆ ಆವಾಗ ಕೆಲಸದಿಂದ ಕಿತ್ತು ಹಾಕುವ ಪ್ರಕರಣಗಳಿಗೆ ಕೊರತೆಯೇನಿಲ್ಲ. ಏನೆಲ್ಲ ಅವಘಡಗಳಿಗೆ ಅವರನ್ನು ಗುರಿಯಾಗಿಸಲಾಗುತ್ತಿದೆ. ಶಿಕ್ಷಕರಿಗೂ ಈ ಯೋಜನೆ ತಲೆನೋವು ತಂದಿದೆ. ಅಕ್ಷರ ಕಲಿಸಬೇಕಾ? ಅನ್ನ ಕೊಡಬೇಕಾ? ನಮ್ಮ ಮಕ್ಕಳಿಗೆ ಅಕ್ಷರವೂ ಅನ್ನವೂ ಎರಡೂ ಬೇಕು. ಶಿಕ್ಷಕರಿಗೂ ಮತ್ತೊಂದು ಹೊರೆ ಹೊರೆಸುವಂತಿಲ್ಲ. ಮತ್ತು ಅತ್ಯಂತ ಕಡಿಮೆ ಕೂಲಿಯಲ್ಲಿ ದುಡಿಸಿಕೊಂಡು ಈ ಯೋಜನೆ ಸಾಫಲ್ಯಗೊಳಿಸಲೂ ಆಗುವುದಿಲ್ಲ. ಆರಂಭದಲ್ಲಿ ಅಡುಗೆಯವಳಿಗೆ ತಿಂಗಳಿಗೆ ರೂ.300, ಮುಖ್ಯಅಡುಗೆಯವಳಿಗೆ ರೂ.400 ಕೊಡುತ್ತಿದ್ದರು. ಈಗ ಕ್ರಮವಾಗಿ ರೂ.1100, ರೂ.1000 ಗೌರವಧನವಿದೆ. ತಿಂಗಳುಪೂರ್ತಿ ಕಡಿಮೆ ಕೂಲಿಯಲ್ಲಿ ದುಡಿಯುವುದು ಸಾಧ್ಯವೇ? ಇವರನ್ನು ಖಾಯಂಗೊಳಿಸಿ ಸುಸಜ್ಜಿತ ಅಡುಗೆಕೋಣೆ, ಮುಂತಾದ ಸೌಲಭ್ಯ ಕೊಡಬಹುದಲ್ಲವೇ? 

ದೇಶದ ಮಕ್ಕಳ ಅಪೌಷ್ಠಿಕತೆ ನಿವಾರಣೆಗಾಗಿ ಆರಂಭಗೊಂಡ ಮಕ್ಕಳಾಭಿವೃದ್ಧಿ ಯೋಜನೆ(ಐಸಿಡಿಎಸ್)ಯಲ್ಲಿ ದುಡಿಯುವ ಅಂಗನವಾಡಿ ಶಿಕ್ಷಕಿಯರಿಗೆ ಆರಂಭದಲ್ಲಿ ರೂ.175 ಮತ್ತು ಸಹಾಯಕಿಯರಿಗೆ ಕೇವಲ ರೂ.50 ತಿಂಗಳಿಗೆ ಗೌರವಧನ ಕೊಡುತ್ತಿದ್ದರು. ಬಹಳಷ್ಟು ವರ್ಷ ಇಷ್ಟೆ ಕಡಿಮೆ ಕೂಲಿಯಲ್ಲಿ ದುಡಿದರು. ಈಗ ಅದರಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ಆಹಾರದಿಂದಲೂ ಅಕ್ಷರದಿಂದಲೂ ವಂಚಿತವಾದವರಿಗಾಗಿ ಹುಟ್ಟಿಕೊಂಡ ಯೋಜನೆಗಳನ್ನು ತಲಸ್ಪರ್ಶಿಯಾಗಿ ಜಾರಿ ಮಾಡುವಲ್ಲಿ ಗಂಭೀರವಾದ ದೋಷವಿದೆ. ಮೇಲ್ಮಟ್ಟದ ಕಡತಗಳ ನಿರ್ವಹಣೆ ಒಂದು ಭಾಗ. ಆದರೆ ತಳಹಂತದಲ್ಲಿ ನೇರವಾಗಿ ಜನತೆಗೆ ತಲುಪಿಸುವವರಿಗೆ ಅತ್ಯಂತ ಕಡಿಮೆ ವೇತನ\ಕೂಲಿ ನಿಗದಿಸುವುದು ಸರಿಯೇ? ಕರ್ನಾಟಕದಲ್ಲಿ 54260 ಅಂಗನವಾಡಿ ಕೇಂದ್ರಗಳಿವೆ. (ಎಲ್ಲಕ್ಕೂ ಕಟ್ಟಡಗಳಿಲ್ಲ) 33 ಲಕ್ಷಕ್ಕೂ ಹೆಚ್ಚು ಮಕ್ಕಳು ಇದರಲ್ಲಿರುವರು. ಹಿಂದೆ ಕ್ರಿಸ್ಟ್ ಸಂಸ್ಥೆಯಿಂದ ಭಾರಿ ಅವ್ಯವಹಾರ ನಡೆದು ಈಗ ಮಹಿಳಾ ಸಪ್ಲಿಮೆಂಟರಿ ಪ್ರೊಡಕ್ಷನ್ ಹೆಸರಿನಲ್ಲಿರುವ ಕಮಿಟಿಗಳ ಮೂಲಕ ಆಹಾರ ತಯಾರಿಕೆ ನಿರ್ವಹಿಸುತ್ತಿರುವರು. ಆರಂಭದಿಂದಲೂ ಪೌಷ್ಠಿಕ ಆಹಾರ ತಯಾರಿಕೆ-ಪೂರೈಕೆ ಖಾಸಗಿಯವರಿಗೆ ಕೊಡಲಾಗಿದೆ. ಮಿಡೇಮೀಲ್ಸನ್ನು ಅದಮ್ಯ ಚೇತನ, ಇಸ್ಕಾನ್ದಂಥ ಸಂಸ್ಥೆಗಳು ನಿರ್ವಹಿಸುತ್ತಿವೆ. ಇವುಗಳು ಸರಕಾರದಿಂದ ಕೋಟಿಗಟ್ಟಲೇ ಲೂಟಿ ಮಾಡಿ ಲಾಭದಲ್ಲಿದ್ದ ಮೇಲೆಯೂ ಮಕ್ಕಳ ಅಪೌಷ್ಠಿಕತೆ ನಿಲ್ಲಲಿಲ್ಲ. ಬದಲಿಗೆ ಹೆಚ್ಚಾಗಿದೆ. 2011ರಲ್ಲಿ ರಾಯಚೂರೊಂದರಲ್ಲಿಯೇ 2,689 ಮಕ್ಕಳು ಅಪೌಷ್ಠಿಕತೆಯಿಂದ ಅಸುನೀಗಿವೆ. 2-3 ಮಕ್ಕಳು ಪ್ರತಿದಿನ ಸಾಯುತ್ತಿವೆ. ಸ್ಟೇಟ್ ಎಕಾನಾಮಿಕ್ ಸರ್ವೆ ಪ್ರಕಾರ 63% ಗರ್ಭಿಣಿಯರು ಅನೆಮಿಕ್. ಇದಕ್ಕೆ ಅಂಗನವಾಡಿ ಟೀಚರನ್ನು ಹೊಣೆ ಮಾಡಲು ಹೇಗೆ ಸಾಧ್ಯ?



ಅಂತೆಯೇ ನ್ಯಾಷನಲ್ ಹೆಲ್ತ್ ಮಿಷನ್ನವರು ಎಲ್ಲರಿಗೂ ಆರೋಗ್ಯದ ಹಿನ್ನೆಲೆಯಲ್ಲಿ ಸಾವಿರ ಜನಸಂಖ್ಯೆಯ ವ್ಯಾಪ್ತಿಯಲ್ಲಿ ಒಬ್ಬ 'ಆಶಾ'ಳನ್ನು ನೇಮಿಸಿರುವರು. ಅವಳಿಗೆ ಕೊಡುವ ಕೂಲಿ ಪೀಸ್ ವರ್ಕ್ ತರ.  ಒಂದು ಕೇಸಿಗೆ ರೂ.200. ತಿಂಗಳಲ್ಲಿ ಎಷ್ಟು ಬಸುರಿ-ಬಾಣಂತಿ ಕೇಸಿರಬಹುದು? ತಿಂಗಳಿಗೆ ರೂ.500 ಸಹ ಪಡೆಯದವರಿರುವರು. ಇನ್ನು 108 ಅಂಬ್ಯೂಲೆನ್ಸ್-ಚಾಲಕ ನಿರ್ವಾಹಕರು ಸಹ ಕಡಿಮೆ ಹಣದಲ್ಲಿ ದುಡಿಯುತ್ತಿದ್ದು, ಸಾಲದೆಂದು ಈಗ ಹೋರಾಟಕ್ಕಿಳಿದಿರುವರು. ಸರಕಾರದ ಇಂಥ ಕ್ರಮದಿಂದ ಎಲ್ಲರಿಗೂ ಆರೋಗ್ಯ ದೊರೆಯಲು ಸಾಧ್ಯವೇ? ಇದೆ ರೀತಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯ ಹಣೆಬರಹ. ನೆಲಜಲದ ರಕ್ಷಣೆಯೊಂದಿಗೆ ದುಡಿಯುವ ಜನರ ಕೈಗೆ ಕೆಲಸ ಕೊಡುವ ಯೋಜನೆ ನಿರ್ವಹಿಸಲು ಪ್ರತ್ಯೇಕ ಸಿಬ್ಬಂದಿ, ಸಂಪನ್ಮೂಲಗಳ ಜರೂರಿಯಿದೆ. ಆದರೆ ಪ್ರಭುತ್ವಕ್ಕಿದು ಬೇಕಿಲ್ಲ. 

ಆಹಾರ, ಆರೋಗ್ಯ, ಉದ್ಯೋಗ, ಶಿಕ್ಷಣದಂಥ ಜನಾವಶ್ಯಕ ಯೋಜನೆಗಳನ್ನು ರೂಪಿಸಿ ಜನಪ್ರಿಯ ಘೋಷಣೆಗಳನ್ನು ಕೊಡುವ ಸರಕಾರಕ್ಕೆ ಇವುಗಳನ್ನು ಜಾರಿಗೊಳಿಸುವ ಹಂತದಲ್ಲಿ ಸಂಪೂರ್ಣ ವಿರುದ್ಧ ನಿಲುವಿರುತ್ತದೆ. ಆದ್ದರಿಂದಲೇ ಸುಪರ್ವೈಜ್ಗಾಗಿ ಹೆಚ್ಚು ಹಣ ವ್ಯಯಿಸುವುದರೊಂದಿಗೆ ಖಾಸಗಿಯವರಿಗೆ ಲಾಭ ಮಾಡಿಕೊಡುವ ಇಚ್ಛೆಯಿರುವುದು ಸ್ಪಷ್ಟ. ಇದೇ ಸಮಯದಲ್ಲಿ ಯೋಜನೆ ಜಾರಿಗೊಳಿಸುವ ಆಶಾ, ಅಂಗನವಾಡಿ ಅಕ್ಕಂದಿರು, ಬಿಸಿಯೂಟದ ಅನ್ನಪೂರ್ಣೆಯರು ಮತ್ತಿತರರನ್ನು ಕಡಿಮೆ ಕೂಲಿಯಲ್ಲಿ ದುಡಿಸಿಕೊಳ್ಳುವುದೆಂದರೆ ಏನರ್ಥ? ಜನಪ್ರಿಯ ಯೋಜನೆಯಿಂದ ಕುರ್ಚಿಯಂತು ಭದ್ರ. ಆದರೆ ಬಡಜನತೆ ಮಾತ್ರ ನಿರಂತರ ಸಂಕಟದಲ್ಲಿ ಬೇಯುವುದು ತಪ್ಪುವುದಿಲ್ಲ. 'ಸಾವ್ಕಾರ್ರು ಸಿರಿವಂತ್ರು ಪಟ್ಟಗಟ್ಟಿ ಆಳುವವರು ಕೂಲಿಯ ಕದಿಯುವ ಕುಲವೆಲ್ಲ'...ಹಾಡು ಹೃದಯದಲ್ಲಿ ಹಲಿಗೆ ಬಡಿಯುತ್ತಿದೆ....

ಚಿತ್ರ: ಯಮುನಾ ಗಾಂವ್ಕರ್
***

Thursday, 1 August 2013

ಮೂರು ಸಾಲೆರಡುಗಳು                ಡಾ.ಜಿ ಕೃಷ್ಣ





ಉದ್ದವಾಗುವ ನೆರಳ ಎಳೆತಂದು
ಬೆಳಕಿನಡಿ ತುರುಕಿ ಇಲ್ಲವಾಗಿಸಬೇಕು.


***

ಎಲ್ಲವನ್ನೂ ಹಿಡಿಯುವ ಕನ್ನಡಿಗೆ
ಯಾವುದು ಬೇಕೋ, ಯಾವುದು ಬೇಡವೋ..



ಅರಸುತ್ತಿದ್ದೇನೆ ನಾ ಎದುರಿದ್ದಾಗ ನಿನ್ನ
ನೀ ಎದುರಿದ್ದಾಗ ನನ್ನ ತೋರಿಸುವ ಕನ್ನಡಿಯನ್ನ.


***