Sunday, 8 September 2013

ತಂಗಿ ನೀಲು

ಬಸವರಾಜ ಹಳ್ಳಿ

























ತಂಗಿ ನೀಲು 
ನಿನ್ನ ಮರಣದ ವಾರ್ತೆ
ಕಿವಿಗೆ ಬಿದ್ದಾಗ ಹಸಿದ ಹೊಟ್ಟೆಯ ಹೊತ್ತು
ಸತುವಿಲ್ಲದ ಕಾಲುಗಳಲ್ಲಿ ನಡೆಯುತ್ತಿದ್ದೆ
ಮನುಷ್ಯರೆಲ್ಲರೂ ಮಂದಿರ, ಮಸೀದಿಗೆ ಎಡೆ ಹಿಡಿದು ಹೊರಟಿದ್ದರು.

ಕೆಂಡದ ಮ್ಯಾಲೆ ಚಿಕ್ಕೆಗಳ ಎಣಿಸುತ ಮಲಗಿದ್ದವಳಿಗೆ
ಉರಗದ ನಾಲಿಗೆ ಬಡಿಯಿತೇ
ಬೂಜುಗಟ್ಟಿದ ಚರ್ಮ ಕಿತ್ತುಕೊಳ್ಳುತ್ತಲೇ
ಉಂಗುಟ ಹರಿದ ಚಪ್ಪಲಿಗೆ
ಹೊಟ್ಟೆಯ ಸಿಟ್ಟು ಚಿಮ್ಮುತ್ತದೆ
ನಿನ್ನ ನೆನೆದಾಗಲೆಲ್ಲಾ ನೆನೆಯುತ್ತಲೆ ಹೋಗುತ್ತೇನೆ.

ಅವ್ವನ ಮುರಿದ ಪೆಟಾರಿಯಲಿ ಮುಚ್ಚಿಟ್ಟ ಅಂಕಪಟ್ಟಿಗಳು
ಗೆದ್ದಲಗಳಿಗೆ ದಿನದೂಟ
ಹಣೆಗಚ್ಚಿಕೊಂಡು ತಿರುಗಿದರೆ ಕಸದ ಬುಟ್ಟಿಯೆಡೆಗೆ ತೋರುಬೆರಳು
ತೂತುಬಿದ್ದ ಬೊಕುಣದಲಿ ಗಾಂಧಿತಾತ ನಗುತ್ತಾನೆಯೇ ?
ನಿನಗೆ ಲಂಗ ಕೊಳ್ಳಲು ಆಕಾಶ ನೋಡಿದ ನಾನು ಶಾಪ ಹಾಕಿಕೊಂಡೆ.

ಹಿಂಗಾರು ಮಳೆಗೆ ಗುಡಿಸಲು ತುಂಬ ಸಾವಿರ ನಲ್ಲಿಯ ಆರ್ಭಟ
ತೊಯ್ದ ಬಟ್ಟೆಯಲಿ ನಿಂತ ಮುದ್ದು ಭಾವಚಿತ್ರ ಹಸಿಯಾಗಿದೆ
ಜಗಲಿ ಮ್ಯಾಲಿನ ಮೂರೂ ಫೋಟೋ ಕಟ್ಟುಗಳು ಹೊಗೆಯಾಗಿವೆ
ಅಪ್ಪ ಚುಟ್ಟಾ ಸೇದುತ್ತಲೆ ನಿನ್ನ ಆತ್ಮದ ಕುಲಾವಿ ನೇವರಿಸುತ್ತಿದ್ದಾನೆ
ಹಂಚಿಟ್ಟ ಅವ್ವ ಧ್ಯಾನದಲೆ ರೊಟ್ಟಿಯ ಬದಲು ಕೈಯಿಟ್ಟಿದ್ದಾಳೆ.

ಸಾವಿರ ಚೇಳು, ಉರಗ ಕಚ್ಚಿದರೂ

ಪಾಪಿ ಬದುಕಿದ್ದೇನೆ ಕೊನೆಯ ಮುಖ ನೋಡದೆ,
ನಾಲಿಗೆ ಹರಿದ, ಸೀಳು ಮೂಗಿನ, ಗಾಳಿಗೆ ತೇಲುವ ಮನುಷ್ಯರೇ ಬೇಕು
ಜಗದ ಅಪಮಾನಗಳನ್ನು ಹೊತ್ತು ತಿರುಗಲು.

ನಿನ್ನ ಚೆಲುವಿಗೆ ಬೆಂಕಿ ಹಚ್ಚಿದ ಖೂಳರು
ನನ್ನ ಮೂರು ಜನುಮದ ಯಜಮಾನರು
ಸೆಟೆದ ನಾಲಿಗೆ ಮಾತೆತ್ತಿದರೆ ತಿರುಗು ಯಂತ್ರಕೆ
ಲಕ್ಷ ತುಕಡಿಗಳು
ನಾನು ಮಾತನಾಡುವ ಮೂಕ, ನೋಡುವ ಕುರುಡ, ಕೇಳುವ ಕಿವುಡ.

ಮಹಲುಗಳ ಓಟಕೆ ಜೋಪಡಿ ಪಟ್ಟಿಗಳು ನರಳಿವೆ
ನಿನ್ನೆ ಕುಳಿತು ಉಂಡ ಜಾಗೆಯಲಿ ಪಿಲ್ಲರ್ಗಳೆದ್ದಿವೆ
ಬದುಕು ಕಪ್ಪೆ ಆಟ
ನಿದ್ದೆಗಳನು ಬಿಡದು ರೋಲರ್ಗಳ ಸದ್ದು..

ಜೀವ ಹಿಂಡುವ ಲೋಕಕೆ ಬಂದ ತಂಗಿ ಕ್ಷಮೆಯಿರಲಿ
ಸುಡುವ ಕಡಾಯಿಯಲಿ ಬಿದ್ದ ಕೈಗೆ ಸ್ಪರ್ಶ ಜ್ಞಾನವಿಲ್ಲ
ನಾಲ್ಕೆ ನಾಲ್ಕು ಹನಿ ಹನಿಸುವ ಶಕ್ತಿ ಕಣ್ಣುಗಳಿಗೆ
ಕಬರಸ್ತಾನ, ಸುಡುಗಾಡು ಸುತ್ತುತ್ತಲಿದ್ದೇನೆ
ಬೂದಿಯಾದರೂ ಸಿಕ್ಕೀತು ಎದೆಗಪ್ಪಿಕೊಳ್ಳಲೆಂದು

ಬಯಲ ಮೂರು ಹೊಲೆಗುಂಡುಗಳು
ಸುರಿದ ಬಿಸಿಲಿಗೆ
ಅನ್ನ ಬೇಯುತ್ತಿದೆ
ಗುಂಪಲ್ಲಿ ಊರ ಜಾತ್ರೆಯ ಸಡಗರ
ಬಾಯಿಗೆ ಇಷ್ಟಿಷ್ಟು ತುತ್ತಿನ ಸರಬರಾಜು
ಸಿಲ್ವರ್ ತಾಟಿಡಿದ ಹರಿದ ಲಂಗದ ತಂಗಿ ಮತ್ತೆ ಕಂಡಳು

ದಾರಿ ಹೋಕರು ಬರುವ ಮುಂಚೆ
ದೂರ ಸಾಗಬೇಕಾಗಿದೆ
ತಂಗಿಗೊಂದು ಹೊಸ ಲಂಗ ತರಲು
ಮೈ ಹುರಿಗೊಳಿಸಬೇಕಾಗಿದೆ ಕಾವಲಾಗಲು...


***
ಕಪ್ಪು ಸುಂದರಿ ಜೋಯಿಡಾ : 

ಜನ ನತದೃಷ್ಟರಾಗೇ ಉಳಿಯಬೇಕೆ?


ಯಮುನಾ ಗಾವ್ಕರ್ 


Yamuna Gaonkar


ಸರ್ವ ಸಂಪನ್ನ ಜೋಯಿಡಾ ತಾಲೂಕು ಇದೀಗ ತನ್ನ ಒಡಲಿನಿಂದ ಕೆಲವು ಭಾಗದ ಮನುಷ್ಯರನ್ನು ಹೊರಹಾಕಲಿದೆಯಂತೆ; ಹಾಕಿಸುತ್ತಿದ್ದಾರಂತೆ! ಮುಕ್ಕಾಲು ಭಾಗ ಜೋಯಿಡಾ ವನ್ಯಧಾಮಕ್ಕೆ, ಅದರಲ್ಲೂ ವಿಶೇಷವಾಗಿ ಹುಲಿ ಯೋಜನೆ, ಆನೆ ಯೋಜನೆ, ಪಕ್ಷಿ ಯೋಜನೆಗಳಿಗೆ. ಅರಣ್ಯೀಕರಣದ ಹೆಸರಲ್ಲಿ ಮನುಷ್ಯ ಮಾತ್ರ ದಿಕ್ಕಾಪಾಲು! ಇಷ್ಟು ದಿನ ಮನುಷ್ಯ ಮತ್ತು ಪ್ರಾಣಿಗಳ ಸಂಬಂಧ ಚೆನ್ನಾಗಿಯೇ ಇದ್ದವಲ್ಲ. ಅರಣ್ಯವೂ ಚೆನ್ನಾಗಿಯೇ ಇತ್ತು. ಜೊಯಿಡಾದ ಮೂಲ ನಿವಾಸಿಗಳಿಂದ ಕಾಡಿಗೆ-ಕಾಡು ಪ್ರಾಣಿಗಳಿಗೆ ಧಕ್ಕೆ ಬಂದಿರಲಿಲ್ಲ. ಆದರೆ, ಅರಣ್ಯ ರಕ್ಷಿಸುವ ಹೊಣೆ ಹೊತ್ತೂ ಅದರ ಭಕ್ಷಣೆ ಕಾಯಕದಲ್ಲೇ ಇದ್ದ ಕೆಲವು ಅಧಿಕಾರಶಾಹಿಗೆ, ಶ್ರೀಮಂತರ, ರಾಜಕಾರಣದ ತೆವಲಿಗೆ, ಗುತ್ತಿಗೆದಾರರ ಹಪಾಹಪಿತನಕ್ಕೆ ಜೋಯಿಡಾ ಬಲಿಯಾಯಿತು. ಇಂದು ಅದಕ್ಕೆ ನಿಜವಾದ ಧ್ವನಿ ನೀಡುವವರು ಕುಸಿದು ಹೋಗುತ್ತಿದ್ದಾರೆ.
 
ರಾಜಸ್ತಾನದ ಸಾರಿಸ್ಕಾ ಅರಣ್ಯ ಪ್ರದೇಶವನ್ನು ಅರಣ್ಯ ಇಲಾಖೆಯ ತಾಬಾ ತೆಗೆದುಕೊಂಡರೂ ಅಲ್ಲಿ ಒಂದೇ ಒಂದು ಪ್ರಾಣಿಯೂ(ಹುಲಿ) ಇಲ್ಲದಂತಾಯಿತು. ಈ ಬಗ್ಗೆ ಪರ್ತಕರ್ತ ಮುಜುಂದಾರ್ ಸುದ್ದಿ ಮಾಡಿದ್ದರು. ಆದರೆ ಜೋಯಿಡಾ ಹಾಗೆ ಮಾಡಿಲ್ಲ. ಇನ್ನು ಸ್ಥಳೀಯರ ವಾಸವಿಲ್ಲದೆ ಅಂದರೆ ಮನುಷ್ಯಪ್ರಾಣಿಯ ಇರುವಿಕೆ ನಿಷೇಧಿಸಿದರೆ ಜೋಯಿಡಾದ ವನ್ಯ ಸಂಪತ್ತು ಹಾಗೂ ಪ್ರಾಣಿ ಸಂಕುಲ ಖಂಡಿತ ಹೆಚ್ಚು ದಿನ ಉಳಿಯಲಾರದು. ಅವೈಜ್ಞಾನಿಕ ಪ್ರವಾಸೋದ್ಯಮದ ಸೋಗಲಾಡಿತನಕ್ಕೆ, ಮನುಷ್ಯ ಕೇಂದ್ರಿತವಲ್ಲದ ಅಭಿವೃದ್ಧಿ ಪ್ರಣಾಳಿಕೆಗೆ ಇದೀಗ ಜೋಯಿಡಾದ ಜನ ಬಲಿಯಾಗುತ್ತಿದ್ದಾರೆ. ದೇಶದಲ್ಲಿಯೇ 4000ಕ್ಕೂ ಅಧಿಕ ಕುಟುಂಬಗಳು ವನ್ಯಧಾಮ ಮತ್ತು ವಿಶೇಷವಾಗಿ ಹುಲಿ ಯೋಜನೆಗೆ ಮನೆ-ಭೂಮಿ ಕಳಕೊಳ್ಳಲಿರುವವರಲ್ಲಿ ಜೋಯಿಡಾ ಮೊದಲ ಸಾಲಿನಲ್ಲಿದೆ. 



 


ಹಿಂದೆ ಪೇಪರ್ ಮಿಲ್ಗೆ, ಸಾಮಿಲ್ಗೆ, ನಂತರ ಗಣಿಗಾರಿಕೆಯ ನೆಪದಲ್ಲಿ ಬಂದವರು ಸೂರ್ಯ ಕಿರಣ ಹೊಕ್ಕದ ಕಾಡನ್ನು ಹೊಕ್ಕೇ ಬಿಟ್ಟರು; ಲೂಟಿ ಮಾಡೇ ಬಿಟ್ಟರು. ಆದರೆ ಆದಿವಾಸಿಗಳು, ರೈತರು ದೈನಂದಿನ ಜೀವನಕ್ಕೆ ಕಾಡನ್ನು ಕಡಿಯದೇ ಕಾಡನ್ನೇ ದೇವರೆಂದು ಆಶ್ರಯಿಸಿದ್ದವರು, ಬಿದ್ದ ಒಣ ಉರುವಲು ಕಟ್ಟಿಗೆ ತಂದರೂ ಶಿಕ್ಷೆಗೊಳಗಾಗುವ ಪ್ರಸಂಗ ಬಂತು. ಹಾಗೆ ಕಾಳಿ ಜಲ ವಿದ್ಯುತ್ ಯೋಜನೆಗೆ ಭೂಮಿ ಕಳಕೊಂಡವರು ಇಂದು ಭೂಹೀನರಾಗಿದ್ದಾರೆ. ಇದೂವರೆಗೂ ಪರಿಹಾರ-ಪುನರ್ವಸತಿ ಕೆಲಸ ನಿಜವಾಗಿ ಪೂರ್ತಿಗೊಂಡಿಲ್ಲ. 
ನಿಜವಾಗಿಯೂ ಆದಿವಾಸಿಗಳಾದ ಇಲ್ಲಿಯ ಕುಣಬಿ ಜನರನ್ನು ಪರಿಶಿಷ್ಟ ಪಂಗಡಕ್ಕೆ ಇನ್ನೂತನಕ ಸೇರಿಸದೇ ಸ್ವತಂತ್ರ ಭಾರತದಲ್ಲಿ ಅನ್ಯಾಯವೆಸಗಲಾಗಿದೆ. (ಸ್ವಲ್ಪ ಗೌಳಿ, ಸಿದ್ದಿ ಜನರೂ ಇದ್ದಾರೆ.) ಇವರಿಗೆ ಅತ್ತ ಅರಣ್ಯ ನಂಬಿ ಬದುಕಲಾರದ ಸ್ಥಿತಿ, ಇತ್ತ ಸಾಗುವಳಿ ಭೂಮಿಗೆ ಸೂಕ್ತ ದಾಖಲೆಗಳಿಲ್ಲದ ಪರದಾಟ. ಯಾರು ಇವರ ಗೋಳು ಕೇಳುವವರು? 

 
ಜೋಯಿಡಾ ವಿಸ್ತೀರ್ಣದಲ್ಲಿ 1910.44 ಚ.ಕಿ.ಮಿ ಇದೆ. 3 ಹೋಬಳಿಗಳನ್ನು ಒಳಗೊಂಡಿದೆ. 15 ಗ್ರಾಮ ಪಂಚಾಯ್ತಿಗಳನ್ನು, 101 ಉಪ ಗ್ರಾಮಗಳನ್ನು, 114 ಜನ ವಸತಿ ಪ್ರದೇಶವನ್ನೂ 6 ಜನ ವಸತಿ ಇಲ್ಲದ ಪ್ರದೇಶಗಳನ್ನೂ ಹೊಂದಿದೆ. ಕೆಲವರನ್ನಂತೂ ಎಲ್ಲಾ ದಾಖಲೆಗಳಿಂದಲೂ ವಂಚಿಸಲಾಗಿದೆ. ಇಲ್ಲಿ ಒಟ್ಟಾರೆ 48914 ಜನ ವಾಸಿಸುತ್ತಿದ್ದಾರೆ. ಜೋಯಿಡಾದ ಅರಣ್ಯದಿಂದ ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯ ಸಂದಾಯವಾಗುತ್ತಿದೆ. ಅದರಲ್ಲಿ ಕಿಂಚಿತ್ ಪಾಲು ಜೋಯಿಡಾದ ಮೂಲಸೌಕರ್ಯ ಅಭಿವೃದ್ಧಿಗೆ ಮೀಸಲಾಗಿಲ್ಲ. ರಾಜ್ಯದ ಮುಂದುವರಿದ ಜಿಲ್ಲೆಗಳಲ್ಲೊಂದಾದ ಉತ್ತರ ಕನ್ನಡದ ಜೋಯಿಡಾದ್ದು ಮಾತ್ರ -10 ರ ಋಣಾತ್ಮಕ ಅಭಿವೃದ್ಧಿ! 
160 ಕಿ.ಮಿ ಹರಿಯುವ ಕಾಳಿಯ ಮೂಲ ಜೋಯಿಡಾ. ಪರವೂರುಗಳಿಗೆಲ್ಲ ಬೆಳಕು ಕೊಡುವ ಜೋಯಿಡಾ ತಾನು ಮಾತ್ರ ಎಲ್ಲಾ ವಿಷಯಗಳಲ್ಲಿ ಕಪ್ಪು ಸುಂದರಿ! ಯಾಕೆ ಈ ಮಾತು? 

 
ಅರಣ್ಯ ಇಲಾಖೆಯದು ಖಂಡಿತ ಮನುಷ್ಯ ಕೇಂದ್ರಿತ ಕೆಲಸವಲ್ಲ ಎಂಬುದು ಸಾಬೀತು. ಅಂಥ ಯೋಜನೆಗಳೇ ಇಲ್ಲದ್ದರಿಂದ ಶ್ರೀಮಂತರ ಹಾಗೂ ಶ್ರೀಮಂತ ದೇಶಗಳ ಮರ್ಜಿ ಕಾಯುವ ನೀತಿಗಳು ಇಲ್ಲಿ ಬೇಕಾದಷ್ಟಿವೆ. ಇದರ ಹಿಂದೆ ಅಂತಾರಾಷ್ಟ್ರೀಯ ಹುನ್ನಾರವೂ ಇಲ್ಲದಿಲ್ಲ. ಮುಂದುವರಿದ ದೇಶಗಳು ಅಭಿವೃದ್ಧಿಗೆ ತೊಡಕಾಗುವ ಅನೇಕ ಯೋಜನೆಗಳನ್ನು ಮೂರನೇ ಜಗತ್ತಿನ ರಾಷ್ಟ್ರಗಳಿಗೆ ವರ್ಗಾಯಿಸುವ ಕ್ರಿಯೆ ಇಂದು ನಿನ್ನೆಯದಲ್ಲ. ಅಣುಸ್ಥಾವರ, ಹಸಿರು ಮನೆ ಯೋಜನೆ, ಪ್ರವಾಸೋದ್ಯಮ (ಲೈಂಗಿಕ ಪ್ರವಾಸೋದ್ಯಮದ ಉತ್ತೇಜನಕ್ಕೆ ಪೂರಕ) ಹಾಗೆಯೇ ರಾಷ್ಟ್ರೀಯ ಉದ್ಯಾನವನ, ಅಭಯಾರಣ್ಯ, ಹುಲಿಧಾಮ,ಆನೆ,ಸಿಂಹಧಾಮ,ಪಕ್ಷಿಧಾಮ ಇತ್ಯಾದಿ ಯೋಜನೆಗಳ ಹೆಸರಲ್ಲಿ ಜನತಾ ಯೋಜನೆ ನಾಪತ್ತೆ! ಜನರ ಕಥೆ ಏನು? ಇದರ ಅರ್ಥ ವನ್ಯಜೀವಿಗಳು ಹಾಗೂ ಕಾಡು ಉಳಿಯಬಾರದೆಂದೇನೂ ನಾನು ಹೇಳುತ್ತಿಲ್ಲ. ಆದರೆ ಇವುಗಳ ನಾಶದ ಹಿಂದಿನ ಕಾರಣ-ಕೈವಾಡಗಳನ್ನು ಶೋಧಿಸಬೇಕಾಗಿದೆ. 




 ಕರ್ನಾಟಕದ ಶೇ.20 ಅರಣ್ಯ ಭೂಮಿಯಲ್ಲಿ ಶೇ. 3 ಸಂರಕ್ಷಿತ ಅರಣ್ಯ ಪ್ರದೇಶ. ಇದರಲ್ಲಿ ಶೇ. ಒಂದಕ್ಕಿಂತ ಸ್ವಲ್ಪ ಕಡಿಮೆ ಭಾಗ ಹುಲಿ ಸಂರಕ್ಷಣೆಗೆ ನೀಡಲಾಗಿದೆ. ಅದರಲ್ಲಿ ನಮ್ಮ ಜೊಯಿಡಾದ ಕೆಲವು ಭಾಗವೂ ಸೇರಿದೆ. 28-12-2007 ರಂದು ನೋಟಿಫಿಕೇಶನ್ ಕೂಡ ಆಗಿದೆ. 
ಇಲ್ಲಿ ಮೂಲಭೂತವಾದ ಸಮಸ್ಯೆ ಏನೆಂದರೆ, ಇಂಥ ಯೋಜನೆ ಬರುವ ಪೂರ್ವ ಅದರ ಸಾಧ್ಯಾಸಾಧ್ಯತೆಗಳ ಕುರಿತು ಅನಕ್ಷರಸ್ಥರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಜನರೊಂದಿಗೆ ಆಳವಾಗಿ ಚರ್ಚಿಸಿಲ್ಲ. ಹೆಚ್ಚು ಪ್ರಚಾರವನ್ನೂ ಕೊಟ್ಟಿಲ್ಲ. ಯೋಜನೆ ಘೋಷಣೆಯಾದ ನಂತರ ತುರುಸಿನಿಂದ ಪ್ರಚಾರ ನಡೆಯುತ್ತಿದೆ. ಅರಣ್ಯೋತ್ಪನ್ನಗಳನ್ನು ಅವಲಂಬಿಸಿದ ವನವಾಸಿ, ಆದಿವಾಸಿ, ಇತರೇ ಅರಣ್ಯವಾಸಿಗಳ ಹಕ್ಕು ಚ್ಯುತಿಯಾಗಿದೆ. ಅರಣ್ಯೋತ್ಪನ್ನಗಳನ್ನು ಸಂಗ್ರಹಿಸಿದರೆ ಅರಣ್ಯ ಕಾಯ್ದೆ ಪ್ರಕಾರ ಕೇಸು ದಾಖಲೆ ಖಂಡಿತ. ಕಾಡಿನಿಂದ ಒಣ ಕಟ್ಟಿಗೆಯನ್ನೂ ತರುವಂತಿಲ್ಲ. ಜನ-ಜಾನುವಾರು ನಿರ್ಭೀತಿಯಿಂದ ಓಡಾಡುವಂತಿಲ್ಲ. ಹಗಲು ರಾತ್ರಿ ಯಾವುದೇ ಇರಲಿ, ಮುಖ್ಯ ರಸ್ತೆಯಿಂದಾಚೆ ಅರಣ್ಯದೊಳಗಿನ ತಮ್ಮ ಮನೆಗಳಿಗೆ ಹೋಗುವುದಿದ್ದಲ್ಲಿ ಅರಣ್ಯ ಪ್ರದೇಶವನ್ನು ಪ್ರವೇಶಿಸುವ ಗೇಟ್ ಬಂದ್. 

 
26-6-2011ರಂದು ಕರಡು ಕಾಯ್ದೆ ಮಾಡಲಿಕ್ಕೆ ಸರ್ಕಾರ ತರಾತುರಿಯಲ್ಲಿ ತಯಾರಿಯನ್ನೂ ನಡೆಸಿದೆ. ಹುಲಿ ಯೋಜನೆಯಿಂದ ಜನರನ್ನು ಹೇಗೆ ಎತ್ತಂಗಡಿ ಮಾಡುವುದು ಅಥವಾ ನಿರಂತರ ಕಿರುಕುಳದಿಂದ ಜನರೇ ಬೇರೆ ಕಡೆಗೆ ಹೋಗುವಂತೆ ಹೇಗೆ ಮಾಡುವುದು ಎಂಬ ಹುನ್ನಾರವೇ ಈ ಕಾಯ್ದೆ. ಯಾಕೆಂದರೆ ಪ್ರಾಣಿಗಳಿಂದ ಸ್ವಯಂರಕ್ಷಣೆಗೆ ಮನುಷ್ಯನಿಗೆ ಅವಕಾಶಗಳಿಲ್ಲ. ಆನೆ, ಹುಲಿ, ಕರಡಿ ಏನೇ ಧಾಳಿ ಇಟ್ಟರೂ, ಮನುಷ್ಯ ಸತ್ತರೂ, ಕೃಷಿ ನಾಶವಾದರೂ ಸಕರ್ಾರಕ್ಕೆ ಚಿಂತೆಯಿಲ್ಲ. ಮೂಲಸೌಕರ್ಯದಿಂದ ವಂಚಿಸಿದರೆ ಜನರೇ ಬೇಸತ್ತು ತಮ್ಮ ಜಾನುವಾರು ಸಮೇತ ಓಡಿಹೋಗುತ್ತಾರೆ. ಆಗ ಪರಿಹಾರನೂ ಕೊಡಬೇಕೆಂದಿಲ್ಲ ಅಲ್ಲವೇ? ಒಳ್ಳೇ ಉಪಾಯ. ಆದರೆ ಈ ಉಪಾಯ ಮಾಡಿದ ಸರ್ಕಾರ 'ಉಪಾಯಂ ಚಿಂತಯೇತ್ ಪ್ರಾಜ್ಞಃ ತಥಾಪಾಯಂಚ ಚಿಂತಯೇತ್' ಎನ್ನುವ ಹಾಗೆ ಭವಿಷ್ಯದ ಪ್ರಾಣಿ-ಪಕ್ಷಿ ಕುರಿತು ಯೋಚಿಸುವಾಗಲೇ ಮನುಷ್ಯ ಸಂತತಿ ಕುರಿತೂ ಯೋಚಿಸಲಿ. 

 
ಕರ್ನಾಟಕದ ನಾಗರ ಹೊಳೆ, ಭದ್ರಾ, ಕುದುರೆಮುಖ, ಬಿಳಿಗಿರಿ ರಂಗನಬೆಟ್ಟ, ಬಂಡೀಪುರ, ಅಲ್ಲದೇ ಹೊರ ರಾಜ್ಯಗಳಾದ ಗೋವಾ, ಆಂದ್ರ, ತಮಿಳುನಾಡು, ಓರಿಸ್ಸಾ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ತಾನ, ಸಿಕ್ಕಿಂ, ಉತ್ತರಾಖಂಡ, ಬಂಗಾಳ, ಗುಜರಾತ್, ಹಯರ್ಾಣಾ, ಕೇರಳಗಳಲ್ಲಿ ಸೆಂಚುರಿಗಳಾದಾಗ, ವನ್ಯಪ್ರಾಣಿ ಪ್ರೊಜೆಕ್ಟಗಳಾದಾಗ (ಗೋವಾದ ಮಹಾವೀರ ಸೆಂಚುರಿ, ಆಂದ್ರದ ಶ್ರೀಶೈಲಂ, ಮಂಜಿರಾ, ನಾಗಾರ್ಜುನ ಸಾಗರ ಸೆಂಚುರಿ, ರಾಜಸ್ತಾನದ ಸಾರಿಸ್ಕಾ, ಭರತ್ ಪುರ, ಕುರುಂಬಿನ್, ಮಹಾರಾಷ್ಟ್ರದ ಸಂಜಯಗಾಂಧಿ ವನ್ಯ ಜೀವಿಧಾಮ, ದಾಜಿಪುರ, ತಮಿಳುನಾಡಿನ ಹಸ್ತಿನಾಪುರ, ಮಧುಮಲೈ, ಸಿಕ್ಕಿಂನ ಕ್ಯಾಂಗ್ನೋಸ್ಲಾ, ಸಿಂಗ್ಬಾ, ಬರ್ಸೈ, ಓರಿಸ್ಸಾದ ಚಿಲ್ಕಾ, ಬಿಟರ್ಕಾನಿಕಾ, ಉತ್ತರ ಪ್ರದೇಶದ ಕಿಶನಪುರ, ಹಸ್ತಿನಾಪುರ ಹೀಗೆಲ್ಲ ಕಡೆಗಳಲ್ಲಿ) ಏನಾಗಿದೆ ಎಂಬುದು ಕೆಲವರಿಗಾದರೂ ಗೊತ್ತಿದೆ. ಪುನರ್ವಸತಿ-ಪರಿಹಾರ ನೀಡುವಲ್ಲಿ ಸರ್ಕಾರದ ಈವರೆಗಿನ ಕಾಳಜಿ ಏನೂ ಸಾಲದ್ದರಿಂದಲೇ ಹೋರಾಟದ ಹಲವು ಮಾರ್ಗ ಕಂಡುಕೊಂಡಿದ್ದಾರೆ. ಬೋಳು ಗುಡ್ಡದಲ್ಲಿ ಭೂ ಆಧಾರಿತ ಸೌಲಭ್ಯ ಅಥವಾ 10 ಲಕ್ಷ ಪರಿಹಾರ. 


 

ಹಾಗಾದರೆ ಒಳಗೇನಿದೆ? ಗ್ರಾಮ ಪಂಚಾಯಿತಿ ವ್ಯಾಪ್ತಿಗಳಾದ ಅಣಶಿ, ಉಳವಿ, ನಂದಿಗದ್ದೆ (ಗುಂದ), ಕಾಟೇಲಿ (ಕುಂಬಾರವಾಡಾ) ಪ್ರಧಾನಿಯ ಫಣಸೋಲಿ-ವಿನರೋಲಿಯ ಭಾಗ ಕೋರ್ ಏರಿಯಾವನ್ನಾಗಿ, ಡಿಗ್ಗಿ ಹಾಗೂ ಕಾರವಾರದ ಕದ್ರಾದ ಸುತ್ತ-ಮುತ್ತ ಕೆಲವು ಭಾಗಗಳನ್ನು ಪೆರಿಪೇರಿಯಲ್ ಏರಿಯಾವನ್ನಾಗಿಯೂ ಗುರುತಿಸಿಕೊಳ್ಳಲಾಗಿದೆ. ಪಾಪ! ಬಹುತೇಕ ಜನಕ್ಕೆ ಇದಿನ್ನೂ ಗೊತ್ತೇ ಇಲ್ಲ. ಹಾಗೆಯೇ ಹಾರ್ನ ಬಿಲ್ ಪ್ರೊಜೆಕ್ಟ ಕೂಡ ಬಹುತೇಕ ಜಾರಿಯಾದಂತೆಯೇ.
 
ಒಂದು ಕುಟುಂಬಕ್ಕೆ 10 ಲಕ್ಷ ರೂ ಆಮಿಷ ತೋರಿಸಿ ಕೆಲವರನ್ನು ಒಪ್ಪಿಸಲಾಗಿದೆಯಂತೆ. ಇತ್ತೀಚಿನ ವರದಿ ಪ್ರಕಾರ ಪರಿಹಾರದ ಪ್ಯಾಕೇಜ್ನಲ್ಲಿ ಕುಟುಂಬದ ಪರಿಕಲ್ಪನೆ ಅವೈಜ್ಞಾನಿಕವಾಗಿದೆ. 18 ವರ್ಷ ಮೇಲ್ಪಟ್ಟ ಹುಡುಗನನ್ನು ಒಂದು ಕುಟುಂಬವೆನ್ನುವುದಾದರೆ ಹುಡುಗಿಯರೇಕೆ ಸೇರಿಲ್ಲ? ಹೋರಾಟದ ಕಾವು ಕಡಿಮೆ ಮಾಡಲಿಕ್ಕೇ? 

 
1972 ರ ವನ್ಯ ಜೀವಿ ಸಂರಕ್ಷಣಾ ಕಾಯಿದೆ ಸೆಕ್ಷನ್ 38 ರ ಉಪ ಕಲಂ ಪ್ರಕಾರ ಹುಲಿ ಯೋಜನೆ ಘೋಷಿಸಿದೊಡನೆ ಅರಣ್ಯವಾಸಿಗಳನ್ನು ಸ್ಥಳಾಂತರಿಸಬಾರದೆಂದಿದೆ. ಜೀವಿಸುವ ಹಕ್ಕು ಇದೆ ಎನ್ನುತ್ತದೆ. ಆದರೆ ಜೀವನೋಪಾಯದ ಕೆಲವು ಮಾರ್ಗಗಳನ್ನು ಕಸಿದುಕೊಂಡಿದೆ. ಹಾಗೆಯೇ, 2006 ರ ಅರಣ್ಯ ಹಕ್ಕು ಕಾಯ್ದೆಯ ಕಾಲಂ 4 ಪ್ರಕಾರ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಜನಕ್ಕೆ ಅರಣ್ಯ ಹಕ್ಕಿಲ್ಲ. ಹಾಗಾಗಿ ಪರಿಹಾರ ಕೊಡಲಿಕ್ಕೆ ಹತ್ತು ಲಕ್ಷ ಸಾಕೇ? ಬೇರೆ ಯಾವ ಉದ್ಯೋಗದ ತರಬೇತಿಯಿಲ್ಲದ ಈ ಜನ ಸಕರ್ಾರ ನೀಡುವ ಕವಡೆ ಕಿಮ್ಮತ್ತನ್ನು ಪಡೆದು, ದೇಶಕ್ಕಾಗಿ ತ್ಯಾಗಮಾಡಿದ್ದಾರೆಂಬ ಹೊಗಳಿಕೆ ಮಾತು ಹೇಳಿಸಿಕೊಂಡೊಂಡಿರಲಿಕ್ಕೆ ಮಾತ್ರ ಸಾಕು. ಜೋಯಿಡಾದ ಈ ಪ್ರದೇಶದಲ್ಲಿ ವಾಸಿಸುವ ಕೆಲವರಿಗೆ ಭೂಮಿ ಪಟ್ಟಾ ಇನ್ನೂ ಸಿಕ್ಕಿಲ್ಲ, ವನವಾಸಿ, ಆದಿವಾಸಿ ಕುಣುಬಿಗಳನ್ನು ಪರಿಶಿಷ್ಟ ಪಂಗಡ(ಬುಡಕಟ್ಟು) ಎಂದು ಇನ್ನೂ ಘೋಷಿಸಿಲ್ಲ, ಕಾರಣ ಬೇರೆಡೆಗೆ ಬದುಕಲಿಕ್ಕಾಗದ ವಾತಾವರಣ ಇಂದು ಸೃಷ್ಟಿಯಾಗಿದೆ. 


ಕಾಡಿನೊಂದಿಗಿನ ಭಾವನಾತ್ಮಕ, ಸಾಂಸ್ಕೃತಿಕ ಸಂಬಂಧ ಅತ್ಯಂತ ಪುರಾತನವಾದುದು. ಎಲ್ಲರನ್ನೂ ಸಂತೃಸ್ತರನ್ನಾಗಿ ಮಾಡಿ, ಅವರಿಗೆ ಯಃಕ್ಕಶ್ಚಿತ್ ಹಣ-ಬರಡು ಭೂಮಿ ಎದುರಿಗಿಟ್ಟರೆ ನಾಗರಿಕತೆ ಮುಂದೋಡುತ್ತದೆಯೇ? ಸಾಮಾಜಿಕ, ಆರ್ಥಿಕ ಭದ್ರತೆಯಿಲ್ಲದೇ ಒತ್ತಡದ ಬದುಕಿನ ಮಧ್ಯೆ ಬೀದಿಪಾಲಾಗುತ್ತಾರೆ ಅಷ್ಟೇ. ಇದೆಲ್ಲ ನಮ್ಮ ಎಂಪಿ, ಶಾಸಕರುಗಳಿಗೆ ಗೊತ್ತಿಲ್ಲವೆಂದಲ್ಲ. ಪ್ರಧಾನಮಂತ್ರಿಗಳ ಸಮ್ಮುಖದಲ್ಲಿ ನಮ್ಮ ಅಳಲನ್ನು ತೋಡಿಕೊಳ್ಳುವುದಕ್ಕೆ ಸೇತುವೆಯಾಗಿರುವ ಎಂಪಿಗಳು ಕೇಂದ್ರದಲ್ಲಿ ಈ ನೀತಿಗೆ ಪೂರಕವಾಗಿ ಕೆಲಸ ಮಾಡಿದರು,ಆದರೆ ಇಲ್ಲಿ ಬಂದು ವಿರೋಧಿಸುವ ನಾಟಕ ಆಡಿದರೇ? ಇಲ್ಲದಿದ್ದರೆ ಈ ಸ್ಥಿತಿ ಬರುತ್ತಿತ್ತೇ? 


ಜೋಯಿಡಾದ ಜನ ಪ್ರ್ರಾರಂಭದಿಂದಲೂ ಒಂದಲ್ಲ ಒಂದು ಆಘಾತಕ್ಕೆ ಒಳಗಾಗುತ್ತಲೇ ಬಂದಿದ್ದಾರೆ. ಕಾಳಿಯ ಪಕ್ಕದಲ್ಲೇ ಇದ್ದರೂ ಅವರು ಕಾಳಿಯ ಆವೇಶವನ್ನು ತಾಳಿಲ್ಲ ಅಷ್ಟೆ. ಜೋಯಿಡಾದ ಸಂರಕ್ಷಿತ ಪ್ರದೇಶದಲ್ಲಿ ಮನುಷ್ಯ ಮತ್ತು ಕಾಡು ಪ್ರಾಣಿಗಳು ಏಕಕಾಲದಲ್ಲಿ ವಾಸಿಸುವಷ್ಟು ಜಾಗ ಖಂಡಿತ ಇದೆ ಮತ್ತು ಈವರೆಗೆ ಸಹಜೀವನ ನಡೆಸಿದ್ದಾರೆ. ಆದರೆ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಜನಪರ ಇಚ್ಛಾಶಕ್ತಿ ಇರಬೇಕು. ಇಲ್ಲದಿದ್ದರೆ ಜನ ಅದನ್ನು ಅವರಿಗೆ ಕಲಿಸಿಕೊಡಲು ಮುಂದಾಗುವುದು ಅನಿವಾರ್ಯವಾಗುತ್ತದೆ.

***

Saturday, 7 September 2013

ಎರಡು ಬಸೂ ದ್ವಿಪದಿಗಳು

Basavaraj Sulibhavi


1.

ಲೋಕವೇನೊ ನಿನ್ನ ಅಲ್ಲೇ ಬಿಟ್ಟು ಹೊರಟನೆಂದು ಭಾವಿಸಿತು

ಬೆನ್ನಟ್ಟಿ ಬಂದ ಪರಿಮಳ ಯಾರದೆಂದು ತಿಳಿಯದೆ ದಾರಿ ದಿಗಿಲಾಯಿತು.






2.

ಒಂದು ಕೊಲೆ ಹೀಗೂ ಸಂಭವಿಸಿಬಿಡುತ್ತದೆ

ಬೆಳಕಿನ ಮನೆಯಲ್ಲಿ ಮಿಣುಕುಹುಳ ತಂದುಬಿಡಲಾಗಿದೆ.








ನಾನು ಬಿಡಿಸಿದ ಮೂವರು ಗಣಪರು...

1. ವಿಮುಖ ಗಣಪತಿ




*********

2. ಶೇಡು, ಗೆರೆಗಳೇ ಆಭರಣ



**********

3. ಢುಂಢಿಯೂ ಗಣಪತಿಯೂ...



******************************************************
ನಮ್ಮ ರಾಷ್ಟ್ರೀಯ ವೃಕ್ಷ  



ಅಫ್ಜಲ್ ಅಹ್ಮದ್ ಸಯ್ಯದ್*


ಬಿಳಿಮಲ್ಲಿಗೆ ಮರದ ಬದಲು
ಅಕೇಶಿಯಾವೇ ನಮ್ಮ ರಾಷ್ಟ್ರೀಯ ವೃಕ್ಷವೆಂದು ಘೋಷಿಸುತ್ತಿದ್ದೇವೆ
ಅದು ಸಾಲಾಗಿ ಅಮೆರಿಕದ ಕಾಲೇಜುಗಳ ಕ್ಯಾಂಪಸ್ ರಸ್ತೆಗಳನ್ನು ಸಿಂಗರಿಸುವುದಿಲ್ಲ
ಸಮಶೀತೋಷ್ಣ ವಲಯದ ತೋಟಗಳಲ್ಲಿ ಕಾಣುವುದಿಲ್ಲ
ಇಕೆಬಾನಾ ಅಲಂಕರಣದವರಿಂದ ಮುಟ್ಟಿಸಿಕೊಳ್ಳುವುದಿಲ್ಲ
ಜೀವಶಾಸ್ತ್ರಜ್ಞರ ಪ್ರಕಾರ ಅದು ಮರವೇ ಅಲ್ಲ
ಏಕೆಂದರೆ ಗಿಡಬಳ್ಳಿಗಳು ತೂಗಲು ಅದು ಯೋಗ್ಯವಿಲ್ಲ

ಅಕೇಶಿಯಾ ಒಂದು ಮುಳ್ಳುಕಂಟಿ ಪೊದೆ
ನಮ್ಮ ಪಟ್ಟಣಗಳು, ಮರುಭೂಮಿ
ಮತ್ತು ಕವಿತೆ ಅದರಿಂದ ಸಮೃದ್ಧ

ಮುಳ್ಳುಗಿಡ ಅಕೇಶಿಯಾ ಕುರಿತು 
ನಮಗೆ ಎಂಥದೋ ಪ್ರೀತಿ
ನಮ್ಮ ನೆಲ ಅರೇಬಿಯಾ ಕಡಲಿನಲ್ಲಿ ಕೊಚ್ಚಿಹೋಗದಂತೆ 
ತಡೆದು ಹಿಡಿದಿರುವುದು ಅದೇ..


- ಇಂಗ್ಲಿಷ್: ಮುಷ್ರಫ್ ಅಲಿ ಫಾರೂಕಿ
- ಕನ್ನಡಕ್ಕೆ: ಡಾ. ಅನುಪಮಾ. ಎಚ್ ಎಸ್

*ಅಫ್ಜಲ್ ಅಹ್ಮದ್ ಸಯೀದ್(1946-    ) ಸಮಕಾಲೀನ ಉರ್ದು ಕವಿಗಳಲ್ಲಿ ಪ್ರಮುಖರು. ಉರ್ದುವಿನಲ್ಲಿ ಶಾಸ್ತ್ರೀಯ ಹಾಗೂ ನವ್ಯ ಕಾವ್ಯಾಭಿವ್ಯಕ್ತಿಯುಳ್ಳವರು. ನವೀನ ಭಾಷಾಪ್ರಯೋಗಗಳ ಪ್ರತಿಪಾದಕರು. An Arrogant Past, Death Sentence in Two Languages, Rocco and other Worlds ಇವರ ಕವನ ಸಂಕಲನಗಳು. The Dark Pavillion ಇವರ ಗಝಲ್ ಸಂಗ್ರಹ.

Thursday, 5 September 2013

ಲಾಲಸೆ
ಶ್ರೀದೇವಿ ಕೆರೆಮನೆ
Shreedevi Keremane
ನೀನು ಇಷ್ಟ ಪಟ್ಟೆ ಎಂದು
ಮೊಲೆ ತೊಟ್ಟಿಗೆ ಕಹಿಬೇವು ಲೇಪಿಸಿ
ಮಗುವಿನ ಹಾಲು ಬಿಡಿಸಿದೆ
ಹಾಲು ಕಟ್ಟಿದ ಮೊಲೆಗೀಗ
ಬಾವು ಬಂದಿದೆ

ಬಚ್ಚಲಿನ ಚಿಲಕ ಹಾಕಿ
ಕಷ್ಟಪಟ್ಟು ಹಾಲು ಹಿಸುಕಿ
ಅನಾಥವಾಗಿ ಚೆಲ್ಲಿ ಮೇಲೊಂದಿಷ್ಟು
ಬಿಸಿನೀರ ಶಾಕ ಕೊಟ್ಟು
ಬಿಸಿಯಾದ ನಿಟ್ಟುಸಿರಿಟ್ಟು
ಮಲಗಲೆಂದು ಬಂದರೆ…
ನಿನ್ನ ಪಕ್ಕದಲ್ಲಿ ಮಲಗಿದ್ದ ಮಗು
ಕನಸಿನಲ್ಲೂ ಹಾಲು ಕುಡಿದಂತೆ
ಬಾಯಿ ಚಪ್ಪರಿಸುತ್ತಿದೆ

ಈಗ,
ನನ್ನ ಕಣ್ಣ ತುಂಬಾ ನೀರ ಪಸೆ
ಜೊತೆಗೆ ನಿನ್ನ ಕಣ್ಣಿನಲ್ಲೂ…..

***
ಕೃಪೆ: ಅವಧಿ

Wednesday, 4 September 2013

ಟು ಸರ್ ವಿತ್...


ಅಕ್ಷತಾ ಹುಂಚದಕಟ್ಟೆ



 


ನಾನು ನಗ್ತಿದ್ದೆ... ಬಹಳ ಬಹಳ ನಗ್ತಿದ್ದೆ. ಅದು ಎದುರಿಗಿರುವವರನ್ನು ತಲುಪಿ ಅವರಿಗೂ ನಗುವಿನ ಸಾಂಕ್ರಾಮಿಕ ಕಾಯಿಲೆ ಹತ್ತಿ ಬಿಡಬೇಕು ಹಾಗೆ ನಗ್ತಿದ್ದೆ. ಮತ್ತೆ ಮಾತಾಡ್ತಿದ್ದೆ. ತುಂಬಾ ತುಂಬಾ ಮಾತು. ಹುಡುಗ. ಹುಡುಗಿಯರೆಂಬ ಭೇದವಿಲ್ಲದೆ ಎಲ್ಲರ ಜೊತೆ ಬೆರೆತು ಮಾತು-ನಗೆ, ನಗೆ-ಮಾತು. ನನ್ನ ಕಂಠವೂ ಸ್ವಲ್ಪ ದೊಡ್ಡದೆ, ಮೈಕ್ ಇಲ್ಲದಿದ್ದಾಗ ಭಾಷಣ ಮಾಡಲು ಉಪಯೋಗಕ್ಕೆ ಬರುವಂತದ್ದು. ಗಲಗಲ ಮಾತು ಮತ್ತು ನಗುವಿನಿಂದಾಗಿ ನಾನು ಎಲ್ಲರ ಹಿತವಚನ ಕೇಳ್ಬೇಕಾಗಿತ್ತು. ಪ್ರೈಮರಿ ಶಾಲೆಯಲ್ಲಿದ್ದಾಗ ಈ ಬಗ್ಗೆ ಯಾರ ಆಬ್ಜೆಕ್ಷನ್ನೂ ಇರಲಿಲ್ಲ. ಎಲ್ಲವೂ ಸಹಜವಾಗಿತ್ತು.

ಹೈಸ್ಕೂಲಿಗೆ ಬಂದ ಕೂಡಲೇ ನನ್ನ ಮಾತು, ನಗೆ ಎರಡನ್ನೂ ನಿಲ್ಲಿಸಬೇಕು ಎಂದು ನನ್ನ ಜಗತ್ತಿನ ಅಪ್ಪಣೆಯಾಯಿತು. ಯಾಕೆ ನಿಲ್ಲಿಸಬೇಕು ಎಂಬ ಪ್ರಶ್ನೆಗೆ ಉತ್ತರವಿಷ್ಟೆ; ಹೆಣ್ಣುಮಕ್ಕಳು ಕಡಿಮೆ ನಗ್ಬೇಕು, ಕಡಿಮೆ ಮಾತಾಡ್ಬೇಕು; ಅಷ್ಟೆ ಅಲ್ಲ ನಗು ಮತ್ತು ಮಾತು ಎರಡೂ ಮೆಲುದನಿಯಲ್ಲಿರಬೇಕು. `ಜೋರಾಗಿ ನಗಾಡೋಳು, ಮಾತಾಡೋಳು ಹೆಣ್ಣೆ ಅಲ್ಲ'. ಹುಡುಗಿ ಹೆಣ್ಣಾಗುವ ಆ ಸಂದರ್ಭದಲ್ಲೆ ಗಲಗಲ ಎನ್ನುವಂತಹ ನಗು ಮತ್ತು ಮಾತಿನಿಂದಾಗಿ ನನ್ನಲ್ಲೆ ನನ್ನ ಹೆಣ್ತನದ ಬಗ್ಗೆ ಶಂಕೆ ಹುಟ್ಟಿದ್ದೂ ಇದೆ. ಆಗೆಲ್ಲ ತಪ್ಪಿತಸ್ಥ ಭಾವನೆ ಅನುಭವಿಸಿದ್ದೇನೆ. ನಗು ಮತ್ತು ಮಾತು ಎರಡನ್ನೂ ಅಪರಾಧವೆಂದು ಪರಿಗಣಿಸಿ `ಪರಿಪೂರ್ಣ ಹೆಣ್ಣಾಗುವ' ನಿಟ್ಟಿನಲ್ಲಿ ನಾನು ನಾಲ್ಕು ಹೊತ್ತು ಬಿಗಿದುಕೊಂಡೆ ಇರಲು ಪ್ರಯತ್ನಿಸುತ್ತಿದ್ದೆ-ಮುಖವನ್ನು ಅಷ್ಟೆ ಅಲ್ಲ ಮನಸ್ಸನ್ನು. ಜೊತೆಗೆ ಮತ್ತೊಂದಿಷ್ಟು ಬಿಗಿದುಕೊಳ್ಳುವ ವಿಷಯಗಳಿದ್ದವು; ಜಡೆ ಹೆಣೆದುಕೋ, ಕೂದಲು ಬಿಟ್ಕಂಡು ಅಲೀಬೇಡ, ಎಲ್ಲೇ ಹೋಗ್ಬೇಕಿದ್ರೂ ನಮ್ಮ ಒಪ್ಪಿಗೆ ಪಡೆದೇ ಹೊರಗೆ ಕಾಲಿಡಬೇಕು. ಲಕ್ಷಣವಾಗಿ ಹೂ ಮುಡಿದುಕೊಂಡು ಕುಂಕುಮ ಹಚ್ಕೊ, ಮಣ್ಣಿನ ಬಳೆ ಒಡೆಯುತ್ತದೆ; ಒಡೆದು ಹೋಗುವಂತ ಆಟ ಆಡ್ಬೇಡ. `ಹುಡುಗರ ಜೊತೆ ಏನು ಮಾತು? ಅವರಿಗ್ಯಾಕೆ ನೀನು ನೋಟ್ಸ್ ಕೊಡೋದು? ಮೊದಲಿಗೆ ಪ್ರಾರಂಭ ಆಗೋದು ಹೀಗೆ...'

 

`ಏನು ಪ್ರಾರಂಭ ಆಗೋದು?' `ಅದೆಲ್ಲ ಗೊತ್ತಿಲ್ವ, ಒಳ್ಳೆ ಮಳ್ಳಿ ತರ ಆಡ್ಬೇಡ'. `ಹೂಂ ಗೊತ್ತಾಯ್ತು, ಹುಡುಗರ ಜೊತೆ ಮಾತಾಡೋದು ತಪ್ಪು, ಅದಕ್ಕಿಂತ ದೊಡ್ಡ ತಪ್ಪು ಮಾತಾಡೋದ್ರಿಂದ ಆಗೋ ಪರಿಣಾಮ ಏನು ಅಂತ ಕೇಳೋದು'. ಆಯ್ತು ಆಯ್ತು ಎಲ್ಲದಕ್ಕೂ ತಲೆ ಆಡಿಸ್ತಿದ್ದೆ. ಅವರು ವಿಧಿಸಿದ ನಿಯಮಗಳನ್ನೆಲ್ಲ ಅವರು ಹೇಳಿದ್ದಕ್ಕಿಂತ ಕಠೋರ ರೀತಿಯಲ್ಲಿ ಅಳವಡಿಸಿಕೊಳ್ಳಲು ಯತ್ನಿಸುತ್ತಿದ್ದೆ. ಅದೆಷ್ಟೇ ಕಷ್ಟವಾದ್ರೂ. ಹೂವು, ಕುಂಕುಮ ಮರೆತು ಹೋಗಿ, ನನ್ನ ಮರೆಗುಳಿ ಗುಣದ ಬಗ್ಗೆಯೇ ದುಃಖಿತಳಾದೆ. ಹುಡುಗರ ಜೊತೆ ಮಾತಾಡೋದಿರ್ಲಿ ಅವರ ಮುಖ ನೋಡುವುದನ್ನು ತಪ್ಪಿಸತೊಡಗಿದೆ. ಹಾಗೊಮ್ಮೆ ಮಾತಾಡಿಸಿದ್ರೂ ಯಾರಾದ್ರೂ ನನ್ನನ್ನ ಗಮನಿಸ್ತಿದ್ದಾರ ಎಂಬ ಎಚ್ಚರಿಕೆಯ ಕಣ್ಣಿಟ್ಟಿರುತ್ತಿದ್ದೆ. ಯಾರಿಗೂ ಗೊತ್ತಾಗದಂತೆ ಕದ್ದು ಕನ್ನಡಿಯ ಮುಂದೆ ನಿಂತು ಕೂದಲು ಬಿಚ್ಚಿ ಹರವಿಕೊಂಡು, ವಿವಿಧ ಭಂಗಿಗಳಲ್ಲಿ ನನ್ನ ನಾ ಪ್ರಸೆಂಟ್ ಮಾಡಿಕೊಳ್ತಾ ನೋಡಿಕೊಳ್ತಿದ್ದೆ. ಇಂತಹ ಕದ್ದು ಮುಚ್ಚಿದ ಚಟುವಟಿಕೆಗಳು ಜೊತೆಗೆ ಪ್ರಜ್ಞಾಪೂರ್ವಕವಾಗಿ ಕಟ್ಟಿ ಹಾಕಿದಷ್ಟೂ ಅಪ್ರಜ್ಞಾಪೂರ್ವಕವಾಗಿ ಪುಟಿದು ಬರುತ್ತಿದ್ದ ಮಾತು ಮತ್ತು ನಗೆ ನನ್ನಲ್ಲಿ ಅಪರಾಧಿ ಭಾವ ಮೂಡಿಸಿ ಗೊಂದಲಕ್ಕೀಡು ಮಾಡೋದು.

ಹೆಣ್ಣಿಗಿರಬೇಕಾದ ಗುಣ ನಡತೆ ಅಂತ ಇವರೆಲ್ಲ ಏನು ಹೇಳ್ತಿದ್ದಾರೊ ಅವ್ಯಾವು ನನ್ನಲ್ಲಿಲ್ಲ. ಅವನ್ನು ನನ್ನೊಳಗೆ ತಗೊಳೋಕೆ ಹೋದಷ್ಟು ನಾನು ಖಾಲಿ ಖಾಲಿ ಆದಂತೆನಿಸೋದು. ನಾನು ಹೆಣ್ಣೇ ಅಲ್ವಾ ಹಾಗಾದ್ರೆ? ಅಂತ ತಳಮಳಿಸೋ ಸಂದರ್ಭದಲ್ಲಿ... ಸರ್ ಅಲ್ಲಿ ನೀವಿದ್ರಿ. ತಳಮಳದ ಮನಸ್ಸಿಗೆ ಧೈರ್ಯ ತುಂಬಲು. `ನೀನು ಹೆಣ್ಣೇ, ಈ ಮಾತು, ನಗೆ ಎಲ್ಲ ಕಂಟ್ರೋಲ್ ಮಾಡ್ಲಿಕ್ಕೆ ನಿನ್ನ ಕೈಲಿ ಸಾಧ್ಯವಿದೆ' ಎಂಬ ಆಶಾವಾದದ ಯಾವ ಮಾತನ್ನೂ ನೀವು ಆಡಿ ತೋರಿಸಲಿಲ್ಲ. ಬದಲಿಗೆ ಆ ಬಗ್ಗೆ ಯೋಚಿಸಿ ಹಣ್ಣಾಗುವುದಕ್ಕೆ, ನನ್ನೊಳಗೆ ನಾನು ಖೊಟ್ಟಿಯಾಗುವುದಕ್ಕೆ ಅವಕಾಶ ಕೊಡದಂತೆ ಕಾದಿರಿ.
ಏಳೆಂಟು ವಿದ್ಯಾರ್ಥಿಗಳಿದ್ದ ಸಂಸ್ಕೃತದ ತರಗತಿಯದು. ನೀವು ನಮಗೆ ಮೇಷ್ಟ್ರು. ನಿಮ್ಮ ಜೊತೆ ನಮಗೆ ನೇರ ಸಂಭಾಷಣೆ ಸಾಧ್ಯವಾಗ್ತಿತ್ತು. ಸಂಸ್ಕೃತ ನಮಗೆಲ್ಲ ಹೊಸ ಭಾಷೆ. ಅದರಲ್ಲೂ ಶೂದ್ರರ ಮನೆಯ ಹುಡುಗಿಯಾದ ನನಗೆ ಸಂಪೂರ್ಣ ಅಪರಿಚಿತವಾದ ಭಾಷೆ. ಆದರೆ ಆ ಬಗ್ಗೆ ಆತಂಕ ಪಡಲು ಅವಕಾಶವೇ ಇಲ್ಲದಂತೆ ನೀವು ಹೆಚ್ಚಾಗಿ ಕನ್ನಡದಲ್ಲೇ ಮಾತಾಡ್ತಿದ್ರಿ. ಸಂಸ್ಕೃತವನ್ನು ಓದಿ ಕನ್ನಡದಲ್ಲಿ ವಿವರಿಸ್ತಿದ್ರಿ. ಕನ್ನಡ ಭಾಷೆಯ ಸ್ಪರ್ಷ, ಸೊಗಡು, ಗಂಧ ದೊರಕಿದ್ದು ನಿಮ್ಮ ಸಂಸ್ಕೃತದ ತರಗತಿಯಲ್ಲಿ.


ಒಂದು ದಿನ ನಿಮ್ಮ ತರಗತಿಯಲ್ಲಿ ಏನೋ ಚರ್ಚೆ ನಡೆಯುತ್ತಿತ್ತು. ನಾನು ಜೋರು ಜೋರಾಗಿ ಮಾತಾಡ್ತಿದ್ದೆ. ನೀವು ಎಂದಿನ ನಿಮ್ಮ ಮಂದಸ್ಮಿತ ನಿಲುವಿನೊಂದಿಗೆ ಆಲಿಸ್ತಿದ್ದಿರಿ. ಜೊತೆಗೆ ಉಳಿದ ವಿದ್ಯಾರ್ಥಿಗಳು ಮಾತಿಗೆ ಸೇರಿಕೊಂಡು ಚರ್ಚೆ ಸ್ವಾರಸ್ಯಮಯ ಘಟ್ಟಕ್ಕೆ ತಲುಪಿದಾಗ ಬೆಲ್ ಆಯಿತು. ನೀವು ಕ್ಲಾಸಿಂದ ಹೊರ ಹೋಗೋಕೆ ಬಾಗಿಲು ದಾಟ್ತಿದ್ದಂತೆ, ತರಗತಿಯಲ್ಲಿ ಅದುವರೆಗೆ ಸುಮ್ಮನೆ ಸುಭಗಿಯಂತೆ ಕೂತಿದ್ದ ಸಹಪಾಠಿಯೊಬ್ಬಳು ನನ್ನನ್ನು ಉದ್ದೇಶಿಸಿ, `ಗಟ್ಟಿ ಧ್ವನಿಯಲ್ಲಿ ಎಷ್ಟೊಂದು ಮಾತಾಡ್ತೀಯಪ್ಪಾ' ಎಂದು ತನ್ನ ವೈರಾಗ್ಯ ಪ್ರಕಟಿಸಿದಳು. ನೀವು ಬಾಗಿಲನ್ನು ಇನ್ನೇನು ದಾಟಬೇಕಿದ್ದವರು ಮತ್ತೆ ಮರಳಿಬಂದು ನನ್ನ ಸಹಪಾಠಿಯ ಎದುರಿಗೆ ನಿಂತು `ಮಿಣ್ಣಗಿರುವವರ ಬಣ್ಣ ಬೇರೆ' ಅನ್ನೋ ಒಂದೆ ಒಂದು ವಾಕ್ಯ ಹೇಳಿ ಹೊರಟೋದ್ರಿ. ಮೊದಲಬಾರಿಗೆ ನನಗನ್ನಿಸಿದ್ದನ್ನು ಹೇಳಿಕೊಳ್ಳುವ ಬಗ್ಗೆ ಯಾವುದೇ ತಪ್ಪಿತಸ್ಥ ಭಾವನೆ ನನ್ನೊಳಗೆ ಮೂಡದೇ ಇರುವಂತೆ ನೋಡಿಕೊಂಡ್ರಿ.



 

ನನ್ನ ನಗೆ ಮತ್ತು ಮಾತನ್ನು ಕಡಿಮೆ ಮಾಡಲು ಕಾರಣಕರ್ತರು ನೀವೇ. ನಮ್ಮ ಹೈಸ್ಕೂಲ್ ನಲ್ಲಿ ಅಗಾಧವಾದ ಪುಸ್ತಕ ಸಂಗ್ರಹವಿತ್ತು. ದೊಡ್ಡ ದೊಡ್ಡ ಕಪಾಟುಗಳಲ್ಲಿ ಪುಸ್ತಕಗಳನ್ನು ತುಂಬಿಟ್ಟಿದ್ದರು. ಯಾರಿಗೂ ಕೊಡುತ್ತಿರಲಿಲ್ಲ. ತರಗತಿ ಪುಸ್ತಕದಿಂದ ವಿಚಲಿತರಾಗಿ ಕಥೆ ಪುಸ್ತಕದತ್ತ ಆಕರ್ಷಿತರಾಗಿಬಿಟ್ಟರೆ ಎಂಬ ಎಚ್ಚರಿಕೆ. ಆದರೆ ನೀವು ಉಳಿದವರ ಅಡ್ಡಿ, ಆತಂಕಗಳನ್ನೆಲ್ಲ ಎದುರಿಸಿ, ಬದಿಗೊತ್ತಿ, ಪುಸ್ತಕಗಳ ಧೂಳು ಕೊಡವಿ ನಮಗೆ ಓದಲು ಕೊಟ್ರಿ, ಓದಿಸಿದ್ರಿ, ಚರ್ಚಿಸಿದ್ರಿ. ಹೆಚ್ಚು ಹೆಚ್ಚು ಓದಿದಷ್ಟೂ ಮತ್ತಷ್ಟು ಮಗದಷ್ಟು ಪುಸ್ತಕ ಕೊಟ್ಟು ಓದುವಂತೆ ಮಾಡಿದ್ರಿ. ಪುಸ್ತಕಗಳ ಒಡನಾಟದಲ್ಲಿ ನನ್ನ ಮಾತು ಆದಷ್ಟು ಕಳೆದೇ ಹೋಯ್ತು. ನಗು ಮನಸ್ಸಿನ ಆನಂದವಾಗಿ ಪರಿವರ್ತನೆಯಾಯ್ತು. ಮತ್ತು ಹೀಗೆಲ್ಲ ಯಾವುದೇ ಒತ್ತಡವಿಲ್ಲದೆ ಅಪ್ರಜ್ಞಾಪೂರ್ವಕವಾಗಿ ನಡೆಯಿತು. ನೀವು ನಮಗೆಂದೂ ಉಳಿದ ಮೇಷ್ಟ್ರುಗಳಂತೆ ಅಲ್ಲಿಗೆ ಹೋಗ್ಬೇಡಿ ಇಲ್ಲಿಗೆ ಹೋಗ್ಬೇಡಿ ಎಂದು ಕಟ್ಟುನಿಟ್ಟು ಮಾಡ್ಲಿಲ್ಲ. ಬದಲಿಗೆ ಕಾಡು ಸುತ್ತುವ ಆಶೆಯನ್ನು, ವಿವಿಧ ಹಣ್ಣು, ಹೂವು, ಪ್ರಾಣಿ, ಪಕ್ಷಿಗಳ ಪ್ರಪಂಚದ ಬಗ್ಗೆ ಕುತೂಹಲವನ್ನು ನಮ್ಮಲ್ಲಿ ಹುಟ್ಟಿಸಿದ್ರಿ. ಆದ್ದರಿಂದ ಎಲ್ಲಿಗೆ ಹೋಗೋದಾದ್ರೂ ನಿಮಗೆ ಹೇಳಿಯೇ ಹೋಗೋಣ ಅಂತ ನನಗೆ ಅನ್ನಿಸೋದು.


ನೀವು ಕುಂಕುಮ ಹಚ್ಚಿಕೊಂಡು ಬರ್ತಿದ್ರಿ. ಆದರೆ ಆ ಬಗ್ಗೆ ನಮಗ್ಯಾರಿಗೂ ಕಟ್ಟುನಿಟ್ಟು ಮಾಡ್ತಿರಲಿಲ್ಲ. `ನಾವು ಮಕ್ಕಳು, ನಾವು ಎಳೆಯರು. ನಾವು ಹೇಗಿದ್ದರೂ ಚೆಂದ ಎಂಬುದನ್ನು ನಮಗೆ ಮನದಟ್ಟು ಮಾಡಿಸಿದ್ರಿ. ಆದ್ರಿಂದ ಕನ್ನಡಿ ಮುಂದೆ ಗಂಟೆ ಗಟ್ಟಲೆ ಕಳೆಯುವ, ಹುಡುಗರನ್ನು ನೋಡದೇ ಮುಖ ಮರೆಸಿಕೊಳ್ಳುವಂತ ಅಸಹಜ ವರ್ತನೆಗಳು ಬಹಳ ದಿನ ನಡೆಯಲಿಲ್ಲ.


ಯಾವತ್ತೂ ಹೊಡೆದು, ಬೈದು ಮಾಡದ ನೀವು ಬಲಪ್ರಯೋಗದಿಂದ ಏನನ್ನೂ ಕಲಿಸೋಕೆ ಸಾಧ್ಯವೇ ಇಲ್ಲ ಅಂತ ನಂಬಿದ್ರಿ. ಕೈಯಲ್ಲಿ ಸದಾ ಕಾಲ ಕೋಲನ್ನು ಹಿಡಿದೇ ಇರುವ, ತಾವೇ ತಪ್ಪು ಮಾಡಿದಾಗಲೂ ಅದನ್ನು ಮರೆಸುವುದಕ್ಕೆ ಹುಡುಗರ ಮೇಲೆ ಬಲಪ್ರಯೋಗ ಮಾಡ್ತಿದ್ದ ಮೇಷ್ಟ್ರುಗಳಿಂದ ಕಲಿಸಲಾಗದೇ ಇರುವುದನ್ನು ಒಂದು ದಿನಕ್ಕೂ ಹೊಡೆಯದೆ ಬಡಿಯದೆ ನೀವು ಕಲಿಸಿದ್ರಿ. ಇಪ್ಪತೈದು, ಇಪ್ಪತ್ತಾರು ವರ್ಷದ ನೀವು ಹಿರಿಯ ಗೆಳೆಯನಂತೆ ಕಾಣಿಸ್ತಿದ್ರಿ. ಜಗತ್ತಿನ ಜ್ಞಾನ ಶಾಖೆಗಳನ್ನೆಲ್ಲ ಅರೆದು ಕುಡಿದಂತಹ ಆದರೆ ಆ ಬಗ್ಗೆ ಕಿಂಚಿತ್ ಅಹಂಕಾರವಿಲ್ಲದ, ಪಾಂಡಿತ್ಯ ಪ್ರದರ್ಶಿಸದ ನಮ್ಮೊಡನೆ ನಮ್ಮಂತೆ ಬೆರೆತು ಒಂದಾಗುವ ಜೊತೆಗೆ ನಮ್ಮ ಅನಿಸಿಕೆಗಳನ್ನು ಹೇಳಲು ಪ್ರೇರೇಪಿಸುವ, ಕೇಳಿಸಿಕೊಳ್ಳುವ ಕಾತರ ತೋರುವ ಹಿರಿಯ ಗೆಳೆಯ. ನೀವು ಕಲಿಸಿದ ಪಾಠ ಅಗಾಧವಾದದ್ದು, ಟೆಕ್ಸ್ಟ್ ಬುಕ್ ಗಳ ಸೀಮಿತತೆಗೆ ನಿಲುಕದೆ ಹೋದಂತದ್ದು, ಸರ್ ನೀವು ಯಾವಾಗ್ಲೂ ತಾಳ್ಮೆಯಿಂದ ಇರ್ತಾ ಇದ್ರಿ. ನಮಗೂ ಅದನ್ನೆ ಕಲಿಸಿಕೊಟ್ರಿ. ಎಷ್ಟೋ ಕಠಿಣ ಸಂದರ್ಭದಲ್ಲಿ ನೀವು ಅಂದು ಹಚ್ಚಿಕೊಟ್ಟ ತಾಳ್ಮೆ ಎಂಬ ದೀಪ ಬೆಳಕು ತೋರಿಸಿದೆ. ಬುಧವಾರ ನಮಗೆ ನಿಮ್ಮ ಕ್ಲಾಸಿರ್ತಾ ಇರಲಿಲ್ಲ. ಆವತ್ತಿಡಿ ದಿನ ಏನನ್ನೋ ಕಳೆದುಕೊಂಡ ಹಾಗಾಗೋದು. ನಿಮ್ಮನ್ನ ಆವತ್ತು ತುಂಬಾ ತುಂಬಾ ನೆನಪಿಸಿಕೊಳ್ತಿದ್ದೆ.


ಒಂದೆ ಒಂದು ವರ್ಷ ನೀವು ನಮಗೆ ಪಾಠ ಹೇಳಿದ್ದು. ಮುಂದೆ ನಮ್ಮ ಶಾಲೆಯನ್ನೆ ಬಿಟ್ಟು ಹೊರಟು ಹೋದ್ರಿ. ನೀವು ಹೋದ ದಿನದಿಂದ ಎಲ್ಲ ವಾರಗಳು ಖಾಲಿ ಖಾಲಿ ಬುಧವಾರಗಳೇ. ಆವತ್ತಿಂದ ಇವತ್ತಿನವರೆಗೂ ನಿಮ್ಮನ್ನ, ನಿಮ್ಮ ತರಗತಿಯನ್ನ ನಿಮ್ಮ ಪಾಠವನ್ನು, ನಿಮ್ಮ ಸ್ನೇಹಮಯಿ ವರ್ತನೆಯನ್ನು ತುಂಬಾ ತುಂಬಾ ನೆನಪಿಸಿಕೊಳ್ಳುತ್ತೇನೆ ಮಾಧವ ಹೊಳ್ಳ ಸರ್.


(ಕೃಪೆ: ಮಯೂರ)

***