Wednesday, 9 October 2013

 
 13804445891121.jpg
ಬೇಲಿ
ಕಾಜೂರು ಸತೀಶ್ 
                 -೧-


ಅಪ್ಪನಪ್ಪನಪ್ಪ ಹೊಲಕ್ಕೆ ನೆಟ್ಟ ಕಳ್ಳಿ ಬೇಲಿ
ಎಷ್ಟೊಂದು ಮರಿಮಕ್ಕಳನ್ನು ಹಡೆದಿದೆ.
ಕರುಳ ಬಳ್ಳಿಯಂತಿರುವ ಕಳ್ಳಿ ಬೇಲಿ,
ಅವನ ಗೋರಿಗೆ ಕಾವಲಿರುವ ಹೂಗಿಡಗಳಂಥ ಬೇಲಿ.
ಮೊನ್ನೆ ಬಲವಂತವಾಗಿ  ಸಂತಾನಹರಣ ಚಿಕಿತ್ಸೆ ನಡೆದಿದೆ
ಬೇಲಿಗೆ.
ಬುಲ್ಡೋಜರ್ರಿನಲ್ಲಿ ಬಂದಿಳಿದ ಕೋಟು ಧರಿಸಿದ ಮಂದಿ
ಒಕ್ಕಲೆಬ್ಬಿಸಿದ್ದಾರೆ ಬೇರೂ ಕೂಡ ಉಳಿಯದ ಹಾಗೆ.
ಚಕ್ರ ಹಾರಿಸಿದ ಧೂಳಿಗೆ ಅಸ್ತಮಾ ಹಿಡಿದಿದೆ ಅಪ್ಪನಪ್ಪನಪ್ಪನ ಗೋರಿಗೆ!
ನಾಶಪಡಿಸಲಾಗಿದೆ-
ಬೇಲಿಯೊಳಗಿದ್ದ ಎತ್ತು, ಕಪ್ಪೆ, ಹಾವು,
ಎರೆಹುಳು, ಕೊಕ್ಕರೆಗಳ ಬೆರಳಚ್ಚುಗಳನ್ನು.
ಹನಿಮಳೆಯ ತಲೆ ಟೈಲ್ಸ್ ನೆಲದ ಮೇಲೆ ಚಚ್ಚಿ
ಹುಚ್ಚು ಬಂದ ಹಾಗೆ
ಕಳೆದುಹೋದ ದನಗಳ ಹುಡುಕುವ ಹಾಗೆ
ಕಡಲ ಬೆನ್ನಟ್ಟಿದೆ.
ಅತ್ತಿತ್ತ ಕಪ್ಪುಬಿದ್ದ ರಸ್ತೆ ಕ್ರಿಮಿಗಳಂತೆ ಹರಿಯುವ ಚಕ್ರಗಳಿಗೆ
ಶಬ್ದವನ್ನುಣಿಸುತ್ತಿದೆ ಫೀಡ್ ಬಾಟಲಿಗಳಲ್ಲಿ.
ಬೇಲಿ ಮೇಯ್ದ ಜಾಗದಲ್ಲಿ
ಕಾಂಪೌಂಡು ಗುತ್ತಿಗಳು.
ಒಳಗೆ ಬಂಜರುಬಿದ್ದ ಕಾಂಕ್ರೀಟು ಅವ್ವ.
ಹಸಿದು ಅತ್ತರೆ ಬೆಂಕಿಯಂಥ ಮಳೆ.
ಎಷ್ಟು ಪ್ರಾಣಗಳ ನೆಕ್ಕಿನೋಡಿದರೂ
ಚಿಗುರಲಾಗುತ್ತಿಲ್ಲ.


                    -೨-
ಬೇಲಿ-
ಬಂಧಿಸಿಬಿಡುತ್ತದೆ ಕಾಲಿಟ್ಟಾಗಲೆಲ್ಲ
ಬಿಗಿದು ಹೆಬ್ಬಾವಿನಂತೆ.
ಇತಿಹಾಸದ ಪುಟಕ್ಕಾಗ ಸೈಜುಗಲ್ಲಿನ ತೂಕ!
ಬೇಲಿ ಬಿಗಿದಷ್ಟೂ
ಲೋಕವೊಂದು ಬೆಂಕಿಪೆಟ್ಟಿಗೆ,
ಬಾಂಬಿನ ಒಳಮೈ.
ಬೇಲಿ ಕಟ್ಟಿ ಬಂದೂಕು ಕೊಟ್ಟು
ತುಂಬಿಟ್ಟ ಉಗ್ರಾಣಕ್ಕೆ
ಬೂಸ್ಟು,ನುಸಿಗಳ ಕಾವಲು.
ರಣಹದ್ದುಗಳ ಬಾಯಲ್ಲಿ ಹಸಿದವರ ಹಾಡು.


                  -೩-


ಸೂರ್ಯನೇ ಬಾ..
ಮೇಯ್ದುಕೊಂಡಿರು ಬೇಲಿಗಳನ್ನು
ಕಣ್ಣೀರ ಬದಲಿಗೆ!

***



ನೀಲು ಕವಿತೆಗಳು 


ನನ್ನ ಸಾಲುಗಳು
ಬೆತ್ತಲೆ ಹುಟ್ಟಿ ಅಳುತ್ತ
ಬಂದು

ನನ್ನ ಹೃದಯ ಬೆಚ್ಚಗಾಗಿಸುವ
ಮಗುವೆನ್ನಿಸಿದಾಗ ಮಾತ್ರ
ಜೀವಂತ ಸಾಲುಗಳು.









ಹೂವಿನ ಸುಗಂಧ
ಹಣ್ಣಿನ ಸವಿಯಾಗಿ
ಅದರ ಬೀಜ
ಮರವಾದಂದು
ಆತ್ಮಕ್ಕೆ ತಂಪೆರೆವುದು.


 

ಪ್ರತಿಯೊಂದು ಕಂದಾಚಾರಿ
ಧರ್ಮವೂ
ಒಂದಾದರೂ ಪ್ರತಿಭಟನೆಯ
ಸುವಾಸನೆಯ ಹೂವಿನ ಬಳ್ಳಿ
ಬೆಳೆಯಲು
ಕಾರಣವಾಗುವುದು.

 
 

ನನ್ನ ಬಗ್ಗೆ ನಾನು
ನಿಷ್ಟುರ ಸತ್ಯಗಳ ಹೇಳಬೇಕೆಂದು
ಹೊರಟ ಕ್ಷಣ
ಅಸತ್ಯಗಳ ಹೂಮಾಲೆ ಹಾಕಿ
ಅಪ್ಪಿಕೊಳ್ಳುವವನ
ನಿಷ್ಟೆಯ ಹೇಗೆ ಅಲ್ಲಗಳೆಯಲಿ?

 



ಡಿಸೆಂಬರ್ ತುಂಬ ಅಂಟಿಕೊಂಡಿದ್ದ ಪ್ರೇಮಿಗಳು
ಮೊನ್ನೆ ಎಪ್ರಿಲ್ ಶಾಖಕ್ಕೆ ಹೊರಬಂದು
ದೂರದಿಂದಲೇ ಮುಗುಳ್ನಕ್ಕಿದ್ದು
ಬಿಡುಗಡೆಯಿಂದಲೋ, ಬೇಸರದಿಂದಲೋ?





ಭೂಮಿ, ಆಕಾಶ ಸಮುದ್ರದ
ಸಹಸ್ರ ಪವಾಡಗಳಲ್ಲಿ
ವಿಸ್ಮಯಕರವಾದದ್ದು
ತಮ್ಮ ಕಠೋರ ನಿಷ್ಟುರತೆಯಲ್ಲೇ
ಜೀವಗಳ ಪೊರೆಯುವ ಕ್ರಿಯೆ.





Monday, 7 October 2013

ಬಸೂ
 
ನಾನು ಕನ್ನಡಿ ನಿಜ
ನೀ ಕಾಣಬೇಕಿದ್ದರೆ ಬೆಳಕಿರಬೇಕು.
 
 
ಸಮಯ ನುಂಗಿದವರ ಅಡಿಯಲ್ಲೇ ಇರುವುದೆಂದಲ್ಲ
ಅಷ್ಟು ತಣ್ಣನೆಯ ಚಂದ್ರ ಹಗಲ ಹೊಟ್ಟೆಯನ್ನೇ ಸೀಳಿಕೊಂಡು ಬಂದ.
 
 
 

 
 
 
 
 
 
 
 
 
 
 
 
 
 
 
 
 
ಲೆಕ್ಕ ಹಾಕಬಾರದೆಂದರೂ ಅಷ್ಟು ಸಲ ಸೂಜಿಯಿಂದಲೇ
ಪ್ರೇಮದ ಹೂ ಬದುಕಿನ ದಾರದಲಿ ಪೋಣಿಕೆಯಾಯಿತು
.

 
 
 
ಮುಚ್ಚಿದ ಕಂಗಳ ಬಗ್ಗೆ ಏನೂ ಹೇಳಲಾರೆ
ಎಷ್ಟೊ ಸಲ ತೆರೆದ ಕಣ್ಣೇ ಕಾಣುವುದಿಲ್ಲ.
 

 
 
 
  
ಚಿದಂಬರ್ ನರೇಂದ್ರ
ಬಾಪು,
ನಿನ್ನ ನೋಡಿ ನಗುವುದು,
ನಿನ್ನ ನೆನೆದು ಅಳುವುದು
ಎರಡೂ ಆತ್ಮವಂಚನೆಗಳೇ.
 
 


 
 
ಮೇಲೆ ಹಾರುತ್ತಿದ್ದoತೆಯೇ
ಪತಂಗ
ತನ್ನ ನೆರಳು ಕಳೆದುಕೊಳ್ಳುತ್ತದೆ.
 
 
 
 
Rajendra Prasad
ಹಗಲು ರಾತ್ರಿಗಳು
ಮರೆತು ಹೋಗಿ 
ಹೊಟ್ಟೆ ಹಸಿದಾಗ 
ಅವಳ ರಸಿಕತೆಗೆ 
ನಾನು ಬೆಪ್ಪಾದೆ.. 

ಥೇಟ್ ಭತ್ತದಗದ್ದೆಯಲಿ
ನಿಂತ ಬೆದರುಬೊಂಬೆ!
 


 
 

Saturday, 5 October 2013

ಮೂರು ಮುಳ್ಳಿಗೆ ಗಾಯಗೊಂಡಿದೆ ನಾಡು
ನೀಲಾ. ಕೆ 
 Neela K Gulbarga

ನಸಿಲ್ಲದ ಮನಸಿನಿಂದ ಯೋಜನೆಗಳು ರೂಪಿಸಿದರೆ ಮತ್ತು ಅವುಗಳನ್ನು ಜಾರಿಗೊಳಿಸಲು ಬೇಕಾದ ವ್ಯವಸ್ಥೆ ಮಾಡದೇ ಹೋದರೆ ಆಗುವ ಅನಾಹುತಗಳಿಗೆಲ್ಲ ಬಲಿಯಾಗುವುದು ಸರಕಾರವಲ್ಲ. ಬದಲಿಗೆ ಪ್ರಜೆಗಳು. ಅದರಲ್ಲಿಯೂ ಬಡಜನತೆ. ಎಲ್ಲಕ್ಕೂ ಮಿಗಿಲಾಗಿ ನಾಡಿನ ಅಭಿವೃದ್ಧಿ ಧಕ್ಕೆಯಾಗುವುದು. ಕೆಲವು ಸಂಗತಿಗಳನ್ನು ಗಮನಿಸಿದರೂ ಸಾಕು ಮನದಟ್ಟಾಗುವುದು. 

ಇತ್ತೀಚೆಗೆ ಶಾಲೆಯೊಂದರಲ್ಲಿ ಮಗುವೊಂದು ಸಾಂಬಾರಿನ ಪಾತ್ರೆಯಲ್ಲಿ ಬಿದ್ದು ಸಾವಿಗೀಡಾದ ದಾರುಣ ಘಟನೆ ನಡೆದಿದೆ. ಬಿಹಾರದಲ್ಲಿ ವಿಷಾಹಾರ ಸೇವಿಸಿ ಮಕ್ಕಳು ಸಾವಿಗೀಡಾದವು. ಇದಕ್ಕೆಲ್ಲ ಸಿಬ್ಬಂದಿಯ ಬೇಜವಾಬ್ದಾರಿಯೆಂದು ಹೇಳಲಾಗುತ್ತಿದೆ. ಆದ್ದರಿಂದಲೇ ಇತ್ತೀಚೆಗೆ ಸರಕಾರವು ಬಿಸಿಯೂಟದ ನಿರ್ವಹಣೆಯನ್ನು ಸಂಪೂರ್ಣ ಶಿಕ್ಷಕರ ಹೆಗಲ ಮೇಲೆ ಹೊರಿಸಿದೆ. ಶಿಕ್ಷಕರು ಈಗ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಅನೇಕ ಶಾಲೆಗಳ ಮಕ್ಕಳಿಗೆ ಖಾಸಗಿಯವರು (ಅದಮ್ಯ ಚೇತನ, ಇಸ್ಕಾನ್) ಬಿಸಿಯೂಟ ವಿತರಿಸುತ್ತಿರುವರು. ನಡು ರಾತ್ರಿ ಮಾಡಿಟ್ಟ ಅನ್ನದ ಮೇಲೆ ಅರಿಶಿಣದ ನೀರು ಚಿಮುಕಿಸಿ ಕೊಡುತ್ತಿರುವರು. ಇದರಿಂದ ಮಕ್ಕಳಿಗೆ ಎಂಥ ಪೌಷ್ಠಿಕ ಆಹಾರ ಸಿಗಬಲ್ಲದು? ಹಾಗಾದರೆ ಇದಕ್ಕೆ ಯಾರು ಕಾರಣ? ಏನು ಮಾಡಬೇಕು.? ಈಗ ಅನ್ನಭಾಗ್ಯದೊಂದಿಗೆ ಕ್ಷೀರ ಭಾಗ್ಯವೂ ಸೇರಿಕೊಂಡಿದೆ. ಮಕ್ಕಳಿಗೆ ಖಂಡಿತ ಈ ಎಲ್ಲ ಪೌಷ್ಠಿಕಾಹಾರ ಬೇಕು. ಆದರೆ ಪೂರೈಕೆಯ ಕ್ರಮದಲ್ಲಿ ಸರಿಯಾದ ವ್ಯವಸ್ಥೇ ಇಲ್ಲದೆ ಹೋದರೆ ಉದ್ದೇಶ ಈಡೇರಲು ಹೇಗೆ ಸಾಧ್ಯ? 


 


ಓಟುಬ್ಯಾಂಕನ್ನು ಕಣ್ಣಲ್ಲಿಟ್ಟುಕೊಂಡು ಯೋಜನೆ ಮಾಡಿದರೆ ಯೋಜನೆಗಳು ಕೇವಲ ಜನಪ್ರಿಯತೆಯ ಮಟ್ಟದಲ್ಲಿ ಮಾತ್ರ ಉಳಿಯುತ್ತವೆ. ನೈಜಾರ್ಥದಲ್ಲಿ ಜನತೆಗೆ ತಲುಪಿಸುವ ನಿಸ್ವಾರ್ಥ-ಪ್ರಾಮಾಣಿಕ ಮತ್ತು ಮಾನವೀಯ ಅಂತಃಕರಣದಿಂದ ಕಾರ್ಯಕೈಗೊಂಡರೆ ಆಗ ನಿರ್ಧಿಷ್ಟ ಕ್ರಮಗಳಿಗೆ ಮುಂದಾಗಬೇಕಾಗುತ್ತದೆ. 

ಅಂತೆಯೇ ಉದ್ಯೋಗ ಖಾತ್ರಿಯ ಗತಿಯೂ ಇದೇ ಆಗಿದೆ. ಯಾವ ಹಳ್ಳಿ ಸುತ್ತಾಡಿದರೂ ಅಲ್ಲಿ ಉದ್ಯೋಗ ಖಾತ್ರಿ ಕೆಲಸ ಖಂಡಿತ ನಡೆಯುತ್ತಿಲ್ಲವೆಂಬ ಸತ್ಯ ಸಂಗತಿ ಬೆಳಕಿಗೆ ಬರುತ್ತಿದೆ. ಅನೇಕ ಕಡೆ ನೂರಕ್ಕೆ ನೂರರಷ್ಟು ಬೋಗಸ್. ಹಾಗೆ ನೋಡಿದರೆ ಪ್ರತಿ ಹಳ್ಳಿಗಳಿಗೆ ಒಂದಿಲ್ಲ ಒಂದು ಕೆರೆಗಳಿವೆ. ನೆಲ-ಜಲ ಅಭಿವೃದ್ಧಿಗೆ ಸಂಬಂಧಪಟ್ಟ ಕಾಯ್ದೆಯಿದು. ಕಡೆಪಕ್ಷ ಕೆರೆಗಳ ಹೂಳೆತ್ತಿಸಿ ನೀರಿನ ಕೊರತೆ ನೀಗಿಸಬಹುದಿತ್ತು. ಬಡರೈತರು ಮತ್ತು ಕೃಷಿ ಕೂಲಿಕಾರ್ಮಿಕರು ದುಡಿದುಣ್ಣುವ ಸಂಸ್ಕೃತಿಯವರೇ. ದುಡಿದವರಿಗೆ ಕಾಯ್ದೆ ಪ್ರಕಾರ ವಾರಕ್ಕೊಮ್ಮೆ ಕಡ್ಡಾಯವಾಗಿ ಕೂಲಿ ಕೊಟ್ಟಿದ್ದರೆ ಕಾಯ್ದೆಯು ಯಶಸ್ವಿಯಾಗುತ್ತಿತ್ತು. ಆದರೆ ಯಾವ ಹಳ್ಳಿಯಲ್ಲಿಯೂ ವಾರಕ್ಕೊಮ್ಮೆ ಕೂಲಿ ಪಾವತಿಸಿದ ಉದಾಹರಣೆಗಳಿಲ್ಲ. ಕೆಲಸ ಕೊಟ್ಟು, ಕೂಲಿ ಪಾವತಿಸುವ ಮುನ್ನ ಕೆಲಸದ ಅಳತೆ ಮಾಡಬೇಕು. ಕಾಯ್ದೆಯಂತೆ ಅವರಿಗಿರುವ ಸೌಕರ್ಯಗಳೆಲ್ಲ ಒದಗಿಸಬೇಕು. ವಾರದ ಕೊನೆಯ ದಿನದಲ್ಲಿ ಅವರ ಅಕೌಂಟಿಗೆ ಕೂಲಿ ಜಮಾ ಮಾಡಬೇಕು. ಇಷ್ಟು ಕೆಲಸಗಳನ್ನು ಮಾಡಲು ಕನಿಷ್ಠ ಪ್ರತಿ ಗ್ರಾಮ ಪಂಚಾಯತಿಗೆ ಹತ್ತರಿಂದ ಹದಿನೈದು ಸಿಬ್ಬಂದಿಯಾದರೂ ಬೇಕು. ಸಿಬ್ಬಂದಿಗಳು ಖಾಯಂ ನೌಕರಸ್ಥರಾಗಿರಬೇಕು. ಹೊರಗುತ್ತಿಗೆಯಾಧಾರದ ಸಿಬ್ಬಂದಿಯೋ ಅಥವ ದಿನಗೂಲಿಯೋ ನೇಮಿಸಿದ್ದರೆ ಗುರಿ ತಲುಪಲು ಸಾಧ್ಯವಿಲ್ಲ. ಏಕೆಂದರೆ ಸಿಬ್ಬಂದಿಯಿಲ್ಲ ಎನ್ನುವ ಕಾರಣವನ್ನು ಮುಂದೆ ಮಾಡಿ ಎಲ್ಲಿಯೂ ಸಮಯಕ್ಕನುಸರಿಸಿ ಕೂಲಿ ಪಾವತಿಸಿಲ್ಲ. ತಾಂತ್ರಿಕ ಸಿಬ್ಬಂದಿಯು ಇಲ್ಲದ್ದರಿಂದ ಸಮಯಕ್ಕೆ ಮಾಪನ ಮಾಡಲಾರದ್ದಕ್ಕೆ, ಸಾವಿರಾರು ಕೂಲಿಕಾರರು ಕೂಲಿಯಿಂದಲೇ ವಂಚಿತರಾಗಿರುವರು. ಕ್ರಮೇಣ ಹಳ್ಳಿಯಲ್ಲಿರುವ ಅನೇಕ ರೈತರು ಈ ಕಾಯ್ದೆಯ ವಿರೋಧಿಗಳಾದರು. ಹಾಗೆ ನೋಡಿದರೆ ಈ ಕಾಯ್ದೆಯು ರೈತರಿಗೆ ದುಪ್ಪಟ್ಟು ಲಾಭದಾಯಕವಾದದ್ದು. ಇದನ್ನು ತಿಳಿಸಿಕೊಡಲು ಗ್ರಾಮ ಪಂಚಾಯತಿಯ ಹತ್ತಿರ ಯಾವ ವ್ಯವಸ್ಥೆಯು ಇಲ್ಲವಾಗಿದೆ. ಗ್ರಾಮೀಣಾಭಿವೃದ್ಧಿಯ ಗುರಿ ಹೊಂದಿ ರಚನೆಗೊಂಡ ಇಂಥ ಪ್ರಮುಖ ಕಾಯ್ದೆಯ ಜಾರಿ ಮಾಡಿಸಬೇಕಾದ ಹೊಣೆಯೂ ಸರಕಾರದ್ದೇ ಅಲ್ಲವೆ? ಸರಕಾರಕ್ಕೆ ಜನತೆಯ ಪರವಾದ ಬದ್ಧತೆಯುಳ್ಳ ರಾಜಕೀಯ ಇಚ್ಛೆ ಇದ್ದಿದ್ದರೆ ಈ ಮೇಲಿನಂತೆ ಕ್ರಮಗಳನ್ನು ಕೈಗೊಳ್ಳುತ್ತಿತ್ತು. 


ಈ ಕಾಯ್ದೆಯ ಯಶಸ್ಸಿಗೆ ಏನು ಮಾಡಬೇಕು ಎಂದು ಹೈದರಾಬಾದಿನಲ್ಲೊಮ್ಮೆ ಕಾರ್ಯಾಗಾರ ನಡೆಯಿತು. ಕೇಂದ್ರ ಸರಕಾರಕ್ಕೆ ಕಳಿಸಲಾದ ಶಿಫಾರಸ್ಸುಗಳಲ್ಲಿ ಕೊಟ್ಟ ಪ್ರಮುಖ ಸಲಹೆಯೆಂದರೆ, ಇದರ ಜಾರಿಗಾಗಿ ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಬೇಕು ಎಂದು. ಅತ್ಯಂತ ಪ್ರಮುಖ ಅಂಶಗಳಾದ ಕೆಲಸ ಕೊಡುವುದು, ಅಳತೆ ಮಾಡುವುದು, ಕೂಲಿ ಪಾವತಿಸುವುದು. ಇರುವ ಸೌಲಭ್ಯಗಳೊಂದಿಗೆ ಸಾಕ್ಷರತೆ, ಆರೋಗ್ಯ, ವೈಜ್ಞಾನಿಕ ತಿಳುವಳಿಕೆಗಳನ್ನೆಲ್ಲ ಕೊಡಲು ಸಾಧ್ಯವಿರುವ ಸಲಹೆಗಳನ್ನು ಕೊಡಲಾಗಿತ್ತು. ಜೊತೆಗೆ ಕೆಲಸಕ್ಕೆ ಬಳಸುವ ಸಾಧನ-ಸಲಕರಣೆಗಳು ಪುರುಷರು ಉಪಯೋಗಿಸುವಂಥವು. ಮಹಿಳಾಸ್ನೇಹಿ ಸಲಕರಣೆಗಳು ಒದಗಿಸಬೇಕು ಎಂದಿದ್ದೆವು. ಆಶ್ಚರ್ಯವೆಂದರೆ ಇವ್ಯಾವುದನ್ನೂ ಜಾರಿ ಮಾಡಲಿಲ್ಲ. ಬದಲಿಗೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಏಜೆಂಟರ ಕಿಸೆ ತುಂಬಲು ಈ ಕಾಯ್ದೆಯ ಹಣವನ್ನು ಕೊಳ್ಳೆ ಹೊಡೆದರು. ಈಗ ಮತ್ತೆ ರೇಗಾ ಜಾರಿ ಮಾಡುವುದು ಹೇಗೆ ಎಂದು ಚರ್ಚಿಸಲು ಸಮಿತಿಗಳನ್ನು ರಚಿಸಲಾಗುತ್ತಿದೆ. ಇದೊಂದು ಅದ್ಭುತವಾದ ವ್ಯಂಗ್ಯವಲ್ಲದೆ ಇನ್ನೇನು? ಎಷ್ಟು ವರ್ಷ ಹೀಗೆ ಬಹಿರಂಗ ಮೋಸ ಮಾಡುವುದು?

 
  
ಇನ್ನೊಂದು ಕಡೆ ಎಲ್ಲರಿಗೂ ಆರೋಗ್ಯ ಕೊಡುವ ವಾಯ್ದೆ ಮಾಡಿ, ಇದನ್ನು ಜಾರಿಗೊಳಿಸಲು ಬೇಕಾದ ಸಂಪನ್ಮೂಲ ಒದಗಿಸದೆ ಕಣ್ಣೊರೆಸುವ ತಂತ್ರ ಮಾಡುತ್ತಿದೆ. ಗ್ರಾಮಗಳ ಮಟ್ಟದಲ್ಲಿ ಅವಶ್ಯಕತೆಗನುಸರಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲ. ಇದ್ದಲ್ಲಿ ಅಗತ್ಯ ಸೌಕರ್ಯಗಳಿಲ್ಲ. ಸಾವಿರಕ್ಕೊಬ್ಬ ಆಶಾ ಕಾರ್ಯಕರ್ತೆಯನ್ನು ಪೀಸ್ ವರ್ಕ್ ಲೇಬರ್ನಂತೆ ದುಡಿಸಿಕೊಳ್ಳಲಾಗುತ್ತಿದೆ. 

ಶಿಕ್ಷಣ, ಆರೋಗ್ಯ, ಉದ್ಯೋಗದಂಥ ಮೂಲಭೂತ ಅವಶ್ಯಕ ಸೌಕರ್ಯಗಳ ಕುರಿತೇ ಸರಕಾರಕ್ಕೆ ಯಾಕಿಷ್ಟೊಂದು ಬೇಜವಾಬ್ದಾರಿ? ಏಕೆಂದರೆ ಜನತೆಗೆ ಕೊಟ್ಟ ವಚನ ಪಾಲಿಸುವ ಬದಲಿಗೆ ಸಾರ್ವಜನಿಕ ನಿರ್ವಹಣಾ ವೆಚ್ಚ ಕಡಿತ ಮಾಡಬೇಕೆಂಬ ವಿಶ್ವ ಬ್ಯಾಂಕಿನ ಆದೇಶ ಪಾಲಿಸುತ್ತಿದೆ ಸರಕಾರ. ಉದ್ಯೋಗ ಖಾತ್ರಿ ಕಾಯ್ದೆ ಜಾರಿಗಾಗಿ ಪ್ರತ್ಯೇಕ ಖಾಯಂ ಸಿಬ್ಬಂದಿ ನೇಮಿಸಿದ್ದರೆ ಎಷ್ಟೆಲ್ಲ ಭ್ರಷ್ಟಾಚಾರ ನಡೆದರೂ ಅರ್ಧದಷ್ಟಾದರೂ ಜಾರಿಯಾಗುತ್ತಿತ್ತು. ಕಡೆಪಕ್ಷ ಹಳ್ಳಿಗೊಂದು ಕೆರೆ ಹೂಳೆತ್ತಿದ್ದರೆ ಸುರಿವ ಮಳೆನೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿತ್ತು. ಮತ್ತು ಅದೇ ಹೊತ್ತಿನಲ್ಲಿ ಸಾವಿರಾರು ಜನರ ದಿನದ ತಲಾ ಆದಾಯ ಹೆಚ್ಚಳವಾಗುತ್ತಿತ್ತು. ತನ್ಮೂಲಕ ಸ್ಥಳೀಯ ಮಾರುಕಟ್ಟೆಯೂ ಚೇತರಿಸಿಕೊಳ್ಳುತ್ತಿತ್ತು. ಹಾಗೆಯೇ ಬಿಸಿಯೂಟಕ್ಕಾಗಿ ಬೇಕಾದ ಸೌಲಭ್ಯದೊಂದಿಗೆ ಖಾಯಂ ಸಿಬ್ಬಂದಿ ನೇಮಿಸಿದ್ದರೆ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತಿತ್ತು. ಶಿಕ್ಷಕರು ವಿದ್ಯಾರ್ಥಿಗಳ ಆಟ-ಪಾಠದಲ್ಲಿ ಧ್ಯಾನಸ್ಥರಾಗಲು ಸಾಧ್ಯವಾಗುತ್ತದೆ. ಇದೇ ಹೊತ್ತಿನಲ್ಲಿ ಉದ್ಯೋಗಗಳನ್ನು ಸೃಷ್ಟಿಸಿ, ನಿರುದ್ಯೋಗ ಸಮಸ್ಯೆಗೆ ಕೊಂಚವಾದರೂ ಪರಿಹಾರ ಕಾಣಿಸಬಹುದು. ಡಾಲರಿನ ಎದುರು ಕುಸಿಯುತ್ತಿರುವ ರೂಪಾಯಿಯನ್ನು ಚೇತರಿಸುವ ಬಗೆ ಇದೇ ಆಗಿದೆಯಲ್ಲವೆ. ಈಗಾಗಲೆ 1.80 ಲಕ್ಷ ಹುದ್ದೆಗಳು ಖಾಲಿಯಿವೆ. 1.25 ಲಕ್ಷ ಒಪ್ಪಲ್ಪಟ್ಟ ಖಾಲಿ ಹುದ್ದೆಗಳಿವೆ. ಆದರೆ ಸರಕಾರವು ಬಡಜನರಿಂದ ಬಿಟ್ಟಿ ಶ್ರಮ ಪಡೆದು ಜನಪ್ರಿಯ ಯೋಜನೆಗಳನ್ನು ಜಾರಿಯಾಗಿಸಬೇಕೆನ್ನುತ್ತದೆ. ವಾಸ್ತವದಲ್ಲಿ ಇದು ಜನರನ್ನು ಮೋಸಗೊಳಿಸುವ ಹುನ್ನಾರವಾಗಿದೆ. ಖಾಸಗೀಕರಣ-ಉದಾರೀಕರಣ-ಜಾಗತೀಕರಣವೆಂಬ (ಖಾಉಜಾ) ಮೂರು ಮುಳ್ಳುಗಳ ಕ್ರೌರ್ಯವನ್ನು ಮುಚ್ಚಿಟ್ಟು ಜನರನ್ನು ದಿಕ್ತಪ್ಪಿಸುವ ಕುತಂತ್ರವಾಗಿದೆ. ಆದ್ದರಿಂದಲೇ ಗೌರವಧನದ ಹೆಸರಿನಲ್ಲಿ ಕಡಿಮೆ ಕೂಲಿಗೆ ದುಡಿಸಿಕೊಳ್ಳುವುದು, ಹೊರಗುತ್ತಿಗೆಯ ಹೆಸರಿನಲ್ಲಿ ಅಭದ್ರ ಹುದ್ದೆಗಳನ್ನು ಸೃಷ್ಟಿಸುವುದು, ಅಭಿವೃದ್ಧಿ ಯೋಜನೆಗಳನ್ನು ಎನ್ಜಿಓಗಳ ಹೆಗಲಿಗೇರಿಸಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು ನಡೆಯುತ್ತಿದೆ. ಇದರ ಫಲಿತಾಂಶವೆಂದರೆ ಬಡತನ, ನಿರುದ್ಯೋಗದ ಸೃಷ್ಟಿ. ಹಾಗಾದರೆ ಜನಪ್ರಿಯ ಯೋಜನೆಗಳು? ಯೋಜನೆ ಮಾಡುವುದು ಜನರನ್ನು ನಂಬಿಸಲು. ಯೋಜನೆಯನ್ನು ವಿಫಲಗೊಳಿಸುವ ಅಸ್ತ್ರವೂ ಅದರಲ್ಲಿಟ್ಟು ವಿಶ್ವದ ದೊಡ್ಡಣ್ಣನನ್ನು ಮೆಚ್ಚಿಸುವುದು. ಅಂತರಂಗದಲ್ಲಿ ಹೊಸ ಆರ್ಥಿಕ ನೀತಿಯ ಜಾರಿಗೆ ಬದ್ದ. ಬಹಿರಂಗದಲ್ಲಿ ಜನಪರತೆಯ ಮುಖವಾಡ. ಇದೆಂಥ ಮುಖೇಡಿತನ?


***

 ಮೂರು ಕವಿತೆಗಳು

ಡಾ.ಅನುಪಮಾ ಎಚ್.ಎಸ್













ಜಗದ ಕಣ್ಣಿಗೆ ಹಸಿದ ನೀನು ಕಾಣುವುದೊಂದು ಬಗೆ
ನಿನ್ನ ಹಸಿವೆಯೇ ನಾನಾಗಿ ಅರಿವುದಿನ್ನೊಂದು ಬಗೆ





ಬಿರುಗಾಳಿಗೆದುರಾಗಿ ನಡೆಯುತ್ತಿದ್ದೇವೆ
ಬಟ್ಟೆ ಬಿಚ್ಚಿಡು, ಮಡಚು ಎನುವೆಯಲ್ಲ?





ಕೊರೆವ ಮಂಜು ಸುರಿವ ಈ ಇರುಳು
ನಾಲ್ಕು ಗೋಡೆಗಳ ನಡುವೆ ಕುಳಿತು
ಬರಲಿರುವ ವಸಂತದ ಬೆಳಗಿನ ಕುರಿತು
ಕವಿತೆ ಬರೆಯಬೇಕೆನಿಸುತ್ತಿದೆ

ಅಪರಾಧವೇನಲ್ಲ
ಕತ್ತಲಾಗುವವರೆಗೂ ಆಗಸದ ಚುಕ್ಕಿಗಳು ಮಿನುಗುವುದಿಲ್ಲ
ಶಿಶಿರನ ಹಿಂದೆ ವಸಂತ ಕಾಲಿಡದೇ ಬೇರೆ ದಾರಿಯಿಲ್ಲ..




Wednesday, 2 October 2013

ಗಾಂಧಿ ಮತ್ತು ಪದ್ಯ..

 

ಮಲಯಾಳಮ್:  ಕೆ. ಸಚ್ಚಿದಾನಂದನ್
ಅನುವಾದ: ಕುಮಾರ್ ಎಸ್






ಒಂದು ದಿನ ಸಣ್ಣ ಪದ್ಯವೊಂದು ಗಾಂಧಿ ಆಶ್ರಮಕ್ಕೆ ಬಂತು;
ಗಾಂಧಿಯನ್ನು ನೋಡಬೇಕಿತ್ತು ಅದಕ್ಕೆ.
ಗಾಂಧಿಯ ಕೈಯಲ್ಲಿ ನೂಲಿತ್ತು, ಬಾಯಲ್ಲಿ ರಾಮನಾಮ.
ಬಾಗಿಲಲ್ಲಿ ನಿಂತಿದ್ದ ಪದ್ಯವನ್ನು ಅವರು ನೋಡಲೇ ಇಲ್ಲ.

ನಾನೊಂದು ಭಜನೆಯಾದರೂ
ಆಗಬೇಕಿತ್ತು ಅಂದುಕೊಂಡಿತು ಪದ್ಯ,
ಗಂಟಲು ಸರಿ ಮಾಡಿಕೊಂಡಿತು. ಗಾಂಧಿ ಬೀರಿದರು ಓರೆ ನೋಟ,
ನರಕವನ್ನೇ ಕಂಡ ತಮ್ಮ ಕನ್ನಡಕದ ಮೂಲಕ.
'ಎಂದಾದರೂ ನೂಲುವ ಕೆಲಸ ಮಾಡಿದ್ದೀಯಾ?'
'ಎಂದಾದರೂ ಜಾಡಮಾಲಿಯ ಕೈಗಾಡಿ ಎಳೆದಿದ್ದೀಯಾ?'
'ಹೊಗೆ ತುಂಬಿದ ಅಡುಗೆ ಮನೆಗೆ
ಯಾವ ಬೆಳಗಿನಲ್ಲಾದರೂ ಹೋಗಿದ್ದೀಯಾ?'
ಪದ್ಯ ಹೇಳಿತು; 'ನಾನು ಹುಟ್ಟಿದ್ದು ಕಾಡಿನಲ್ಲಿ, ಬೇಟೆಗಾರನ ಬಾಯಲ್ಲಿ
ಬೆಳೆದಿದ್ದು ಮೀನುಗಾರನ ಪುಟ್ಟ ಗುಡಿಸಲಲ್ಲಿ
ಆದರೂ ನನಗೇನೂ ಬರದು. ಗೊತ್ತಿರುವುದೊಂದೇ ಹಾಡುವುದು.
ಆಸ್ಥಾನಗಳಲ್ಲಿ ಹಾಡಿದೆ. ಆಮೇಲೆ ಮೆದುವಾದೆ, ಸುರೂಪಿಯಾದೆ
ಆದರೀಗ ಅರೆ ಹಸಿದು ಬೀದಿಯಲ್ಲಿದ್ದೇನೆ..'
ಒಳ್ಳೆಯದು, ನಿಗೂಢ ನಗೆ ಸೂಸಿ ಗಾಂಧಿ ಹೇಳಿದರು,
'ಯಾವಾಗಲೂ ಸಂಸ್ಕೃತದಲ್ಲಿ ಮಾತನಾಡುವುದ ಬಿಡು.
ಹೋಗು ಹೊಲಗಳಿಗೆ; ರೈತರಾಡುವ ಮಾತು ಕೇಳು.'

ಪದ್ಯ ಬೀಜವಾಗಿ ನೆಲಕ್ಕೆ ಬಿತ್ತು.
ಹೊಸ ಮಳೆಗೆ ನೆನೆಯಲು ಕಾಯುತ್ತಿತ್ತು.


***

Tuesday, 1 October 2013




ಸಾಲುಗಳು


ರಾತ್ರಿ
ಬಯಲಾಟಕ್ಕೆ ಹೋಗಿದ್ದೆ
ಅಮ್ಮ ಕೊಟ್ಟ
ರುಪಾಯಿಯಲ್ಲಿ
ಶೇಂಗಾ ತಿನ್ನುತ್ತ
ರಾಕ್ಷಸನ ಆರ್ಭಟಕ್ಕೆ
ನಿದ್ರೆಯ
ತೂಕಡಿಕೆಗೆ
ಕೈ ಚೆಲ್ಲಿ
ಒಂದೆರಡು ಕಾಳುಗಳು
ನೆಲ ಕಚ್ಚಿದವು
ಬೆಳಿಗ್ಗೆ
ಶಾಲೆಗೆ ಹೋಗುವಾಗ
ಹರಿದಂಗಿ ರವಿಕೆ
ತೊಟ್ಟ
ಮಂದಿ
ಆಟದ ಗರದ
ಸಂದುಗೊಂದಿಯಲ್ಲಿ
ಬಿದ್ದ ಕಾಳುಗಳಿಗಾಗಿ
ಹುಡುಕಾಟ ನಡೆಸಿದ್ದರು

ಅವತ್ತೇ ಅದು
ಮನಕ್ಕೆ ತಟ್ಟಿತ್ತೇ
ಅಥವಾ ಇವತ್ತೇ?








ಒಂಟಿತನ ಬೇಸರ ತಂದಿತು
ದೀಪ ಹಚ್ಚಿದೆ
ನೆರಳಿನೊಂದಿಗೆ
ಜೊತೆಯಾಯ್ತು.

(ಎರವಲು ತಂದ ದೀಪ!)









ತಂಪು ಹೊತ್ತಲ್ಲಿ
ಮುಂದೆ
ದಾರಿತೋರಿಸುತ್ತ
ನಡೆದ ನೆರಳು
ಸುಡುತಾಪಕ್ಕೆ
ಹೆದರಿ
ಪಾದಗಳಡಿಯಲ್ಲಿ
ಬಚ್ಚಿಟ್ಟುಕೊಂಡಿತು.





ನೆರಳಿಗೆ ಹೆದರಿ
ಆರಿಸಲು ಹೋದವನ
ತಲೆ ಮೇಲೆ
ದೀಪ ಇಟ್ಟು
ಬುದ್ಧ
ನಕ್ಕ.








ಓದಲು
ಶುರುಹಚ್ಚಿದ್ದು
ಹೌದು
ಕನಸಿನಲ್ಲಿ
ಮಧ್ವ, ಬುಧ್ದ ಇಬ್ಬರೂ
ಬಂದು
ಬೆಚ್ಚಿಬೀಳಿಸಿದರು.



ಮರೀಚಿಕೆಗಳ ನೋಡುತ್ತಾ ದಣಿದು ತೂಕಡಿಸಿದ ಕಣ್ಣು
ಮಲೆನಾಡನ್ನು ಕನಸಿತು.




ಈಗಷ್ಟೆ ನೋಡಿದೆ
ಉರುಳುವ ಮಂದಿ
ನಡೆಸಿದ
ತೆವಳುವವರ
ಕುಪ್ಪಳಿಸುವವರ
ಮಾರಣಹೋಮ.

(ಚಿತ್ರ: ಗೂಗಲ್)








ಅಮ್ಮನ
ಕಿರುಬೆರಳು
ಜಾತ್ರೆಯ ಬೆರಗು
ಕಳೆದುಹೋಗುವವರೆಗೆ
ಒಟ್ಟೊಟ್ಟಿಗೇ
ಇದ್ದವು.




ಎಚ್ಚರವಿರಲಿ,
ಶುಭ್ರ ಬಿಳಿ ಹಾಳೆಯ ಮೇಲೆ
ಕಪ್ಪು ಶಾಯಿ
ಅಕ್ಷರಗಳನ್ನು
ಸ್ಫುಟವಾಗಿ ಮೂಡಿಸುತ್ತದೆ.








ಮೈಮರೆತು
ಮಲಗಿ
ಎದ್ದಾಗ ನಾನೇ
ಹೌದೋ
ಅಲ್ಲವೋ
ಎನಿಸಿತು
ಕನ್ನಡಿ ನೋಡಿದೆ
ಹೌದು
ಅವನೇ
ನಾನಾಗಿದ್ದೆ.











ಲೋಕ ಅರಿತುಕೊಳ್ಳಲು
ಸಾಹಿತ್ಯ ಓದು
ಎಂದರು
ಓದಿದೆ
ಸಾಹಿತಿ
ಅರ್ಥವಾದ.

ಚಿತ್ರ: ಗೂಗಲ್


***