Friday, 18 October 2013


ಸಾಲುಗಳು



1.

ನಾವು
ಸರ್ವಧರ್ಮ ಸಹಿಷ್ಣುಗಳು
ಗುರುವಾರ
ರಾಯರ ಮಠ
ಭಾನುವಾರ
ಚರ್ಚು
ಶುಕ್ರವಾರ
ಮಸೀದಿ-

ಮುಂದೆ
ಕೈ ಚಾಚಿ
ಭಿಕ್ಷೆ ಬೇಡುವವರು.

(ನೀಲು ಪ್ರೇರಿತ)





2 .




ಆವರಿಸುವ

ಒಂದೇ ಗುಣ

ಕಾಮ

ಪ್ರೇಮ

ಪ್ರೀತಿ-

ಯಲ್ಲೂ


ಸೇರಿಕೊಂಡಿರುವುದು


ಸೋಜಿಗ-


ವೇ?

 





3.


ಯಶಸ್ಸಿನ ದಾರಿ

ಅದರದ್ದೇ ಇರಬೇಕೆಂದಿಲ್ಲ

ರಕ್ತ ಕಂಡರೆ

ತಲೆತಿರುಗುವವನೂ

ಒಂದುದಿನ

ಸರ್ಜನ್ನಾಗಿ 

ರಕ್ತಸ್ರಾವವೇ ಆಗದಂತೆ

ಕುಯ್ಯುವ ಕಲೆ

ಕರಗತ ಮಾಡಿಕೊಳ್ಳುವುದು

ಅನಿವಾರ್ಯವಾಗಿ
 
ಯಶಸ್ಸು


ಕದ ತಟ್ಟಬಹುದು!





4.


ಹಿಗ್ಗುತ್ತ ಉರಿವಾಗ

ಒಂದು ನೆನಪಿಡು-

ನಾವೇ

ನಿನ್ನುರಿಯ

ಉರುವಲು.


 




5.


ಗುರಿ

ತಪ್ಪದಿರಲಿ

ಬೇಡ


ಹೊಸ ಗಾಯ.




6.


ಗುರಿ ಮುಟ್ಟುವ 

ಓಟದ

ಕೊನೆಯಲ್ಲಿ

ಒಂಟಿತನ-



ಸ್ವಾಗತ.


  


7.


ಪೊರೆ ಕಳಚುವುದೆಂದರೆ

ಒಳಗು

ಹೊರಗಾಗುವುದು

ಮತ್ತೆ

ಮೈ ಕಾಯಿಸಿಕೊಳ್ಳುವುದು

ಕಳಚುವುದು.




8.

ಎಷ್ಟು ವಿಚಿತ್ರ ನೋಡು
 
ಗಾಲಿಬ್,

 
ಕನಸನ್ನಾದರೂ

 
ಕಾಣ್ತೀನೀಂತ

 
ಮಲಗಿದ್ರೆ

 

 
ದುರ್ಭರದಲ್ಲಿ


ನಿದ್ರೆ


ಸತಾಯಿಸುತ್ತೆ


ಎಲ್ಲ ಕನಸಿಗಿಂತ


ಚಂದವಿದ್ದಾಗ


ಕಣ್ಣೆಷ್ಟು


ಎಳೀತಿತ್ತಲ್ಲ!


 



9.

ಇಬ್ಬರಿರುವಾಗ
 
ಭಯವಿಲ್ಲ.


 




10.

ಮರೆಯಲ್ಲಿ
 
ಅವಿತಿದ್ದ ಗೋಡೆ

 
ಕನ್ನಡಿ ಕಳಚಿಟ್ಟ ದಿನ

 
ಬೆಪ್ಪುಗಟ್ಟಿತು

 
ಯಾರ ಮುಖವನ್ನೂ

 
ತದೇಕಚಿತ್ತನಾಗಿ

 
ದಿಟ್ಟಿಸಲಾಗದ


ತನ್ನ


ವಿಮುಖತೆಗೆ


ನಾಚುವ ಭರದಲ್ಲೂ


ಅಭ್ಯಾಸ ಬಲದಿಂದ


ಗಿಂಜುವವರ

ಉದ್ಘಾರಕ್ಕೆ ನಸುನಕ್ಕಿತು


ಕನ್ನಡಿಯ ಕಷ್ಟಕ್ಕೆ


ಮರುಗಿತು.


 



11.

ನನ್ನ ಬಗ್ಗೆ
 
ನಿಮ್ಮ 

 
ಅಭಿಪ್ರಾಯಗಳನ್ನು

 
ಬಲ್ಲೆ

 
ನಿಮ್ಮ ಬಗ್ಗೆ

 
ನನ್ನದನ್ನು ಬಲ್ಲಿರಾ?


 
ಪ್ರಾಚೀನ ಜ್ಞಾನ



ಎಝ್ರಾ ಪೌಂಡ್
 

ಸೋಷುಗೆ ಕನಸು ಬಿತ್ತು-
ತಾನೊ೦ದು ಹಕ್ಕಿಯಾದ೦ತೆ,
ದು೦ಬಿಯಾದ೦ತೆ, ಚಿಟ್ಟೆಯಾದ೦ತೆ
ಅನಿಶ್ಚಯತೆಯ ಗೊ೦ದಲದಲ್ಲಿದ್ದ ಅವನು

ತಾನೇಕೆ ಏನಾದರೂ ಒ೦ದು
ಆಗಲೇ ಬೇಕೆ೦ದು
ಪ್ರಯತ್ನಿಸುವುದು
ಅ೦ದು ಕೊ೦ಡ
ಒಡನೆಯೇ
ತೃಪ್ತನಾದ!


ಅನುವಾದ: ರಮೇಶ್ ಮೇಗರವಳ್ಳಿ


(Ezra Weston Loomis Pound (30 October 1885 – 1 November 1972) ,ಅಮೇರಿಕನ್ ಮೂಲದ ವಿವಾದಾತ್ಮಕ ಕವಿ,ಇಪ್ಪತ್ತನೇ ಶತಮಾನದ ಆದಿಯಲ್ಲಿ ಲಂಡನ್ನಲ್ಲಿ ಏಲಿಯಟ್, ಹೆಮಿಂಗ್ವ್, ಫ್ರಾಸ್ಟ್, ಜಾಯ್ಸ್ ಮುಂತಾದ ಕವಿಗಳನ್ನು ಪ್ರೋತ್ಸಾಹಿಸಿ ಬೆಳೆಸಿದವ, ಜಪಾನೀ ಹಾಯ್ಕುಗಳ ಬಗ್ಗೆ ವಿಶೇಷ ಒಲವನ್ನಿಟ್ಟುಕೊಂಡವ)

Wednesday, 16 October 2013




ನೀಲು

 





 





 




ಬಸೂ

ಹಾಗೇ ಇದೆ ಇರುಳ ವಿಶಾಲ ಗೋಡೆ
ಕಂತು ಕಂತಾಗಿ ಮೂಡುತ್ತಿವೆ ಬೆಳಕಿನ ಚಿತ್ರಗಳು.





ಮೌನ ಇಷ್ಟೇ ಇಷ್ಟು ಅರ್ಥವಾಗಿದ್ದರೂ ಸಾಕಿತ್ತು
ನಿರರ್ಗಳ ಮಾತು ಹುಟ್ಟುತ್ತಿದ್ದವು ಎಂದಿನ ಹಾಗೆ.








ಬಿಲ್ಹಣ


ಇಂದಿಗೂ ನೆನಪಿದೆ ನನಗೆ 
ಪ್ರೇಮದ ಜಾಗರಣೆಯಲ್ಲಿ
ಮೈದುಂಬಿ ಕುಣಿದಾಡಿದ ಆ 
ತೀಕ್ಷ್ಣ ಕಣ್ಣಾಲಿಗಳು,
ಹುಚ್ಚು ಹಾಸಿಗೆಯಲ್ಲಿ ಆಕೆ
ಕಾಡು ಕೋಳಿಯಂತೆ ಸೆಣಸಿದ ಪರಿ,
ಸೂರ್ಯ ಹುಟ್ಟುವ ಮುಂಚೆಯೇ
ನಾಚಿ ಕೆಂಪೇರಿದ ಅವಳ ಮುಖ.
ಎಲ್ಲ ನೆನಪಿದೆ ನನಗೆ.


(ಅನುವಾದ: ಚಿದಂಬರ್ ನರೇಂದ್ರ)




 


ಸಿದ್ರಾಮ್ ಕಾರ್ಣಿಕ್ 

ಸಂಬಂಧಗಳಿಗೆ ಸೂತಕಗಳಿರುವುದಿಲ್ಲ
ಅನುಬಂಧಕ್ಕೆ ಮಾತುಗಳೇ ಬೇಕೆಂದೇನೂ ಇಲ್ಲ
ಅರಿಯುವ ಮನ ; ಅರಿತುಕೊಳ್ಳುವ ಗುಣ
ಬೆರತರೆ ಬದುಕು ಎನ್ನುವುದು ಬಲು ಚೆನ್ನ
ಕಾರಣಿಕ ಸಿದ್ಧರಾಮ ಅರಿತೂ ಅರಿಯದ
ತಿಳಿಗೇಡಿಗಳ ಮೆಚ್ಚಲು ಹುಚ್ಚನಲ್ಲ ಮರುಳೆ !


 

Monday, 14 October 2013

ಕವಿತೆ ಮತ್ತು ನೀನು 


ವಿಭಾ ತಿರುಕಪಡಿ 




















ನಾನೀಗ
ಹರಿಯುವ ನದಿ, ಉಕ್ಕುವ ಕಡಲು
ವಿಶಾಲ ಬಾನು, ಕ್ಷಮಾಮಯಿ ಭೂಮಿ
ನಗುವ ಹೂಗಳ ಕುರಿತು
ಬರೆಯಲು ಕೂತೆ
ಅಚ್ಚರಿಯೆಂದರೆ,
ಪ್ರತಿಯೊಂದರಲ್ಲೂ ನನಗೆ
ಕಂಡದ್ದು ಬರೀ ನೀನು.

***





Sunday, 13 October 2013

ಸಾಲುಗಳು


ಕಾಳಲ್ಲಿ ತುಂಬಿದ ಹಾಲು
ಮೊಲೆಹಾಲು
ರುಚಿಯಲ್ಲಿ ಸಾಮ್ಯ
ಸಾಧಿಸಿದ ಬಗೆ
ಒಂದೇ.




ಬೆತ್ತಲೆ ಕುಣಿತ
ಕಿಂಡಿಯಿಂದ ನೋಡುತ್ತಿದ್ದ
ಅನುಭಾವಿಯ
ಆಸೆ
ಕೇಳಿತು-
ಹೆಂಗಸರಿದ್ದಾರೇನಯ್ಯ?
ಮಗ್ನತೆಯ
ಒಳಗಿಂದ ಉತ್ತರ ಬಂತು-
ಯಾರೂ ಬಟ್ಟೆ ತೊಟ್ಟಿಲ್ಲ,
ತಿಳಿಯುತ್ತಿಲ್ಲ.

(ಮುಲ್ಲಾ ನಸ್ರುದ್ದೀನ್ ಕತೆಯಿಂದ ಪ್ರೇರಿತ)



ಸುಮ್ಮನೆ
ಇಣುಕುತ್ತೇನೆ
ತುಂಬಿದ ಬೊಗಸೆಯ
ಹೊಸತಿನೊಳಗೆ
ಎಂದೋ ಸಂಧಿಸಿದ
ಒಂದು ಹನಿಗಾಗಿ.







ಕತ್ತಲಲ್ಲಿ ಕಳೆದಿದ್ದು
ಬೆಳಕಲ್ಲಿ ಸಿಕ್ಕಿದ ಮೇಲೆ
ಬೀದಿ ಬೆಳಕಲ್ಲಿ
ಸೂಜಿ ಹುಡುಕಿದ
ಅಜ್ಜಿಯ ಕತೆ
ನಗು ತರಿಸುತ್ತಿಲ್ಲ



ಅವನ ಕುತಂತ್ರ ಅರ್ಥವಾದ ಖುಶಿಯಲ್ಲಿ
ಮುಗ್ಧತೆಯ ಅಳು ಕೇಳಿಸಿತೇ?



ಕಣ್ಣು ಪಿಳಿ ಪಿಳಿ
ಬಾಲ ಪಟ ಪಟ
ಎಂದರೆ
ಹುಲಿ
ಎನ್ನುವುದು
ದಿನದ ದಣಿವಿನ ಮಧ್ಯೆ
ತಾಯಿಗೆ ಹೊಳೆಯದೇ ಹೋದುದು
ಆಶ್ಚರ್ಯವಲ್ಲ
ಅರ್ಧ ರೊಟ್ಟಿ ಸಾಕಮ್ಮ
ಬಾಗಿಲು ತೆರೆ
ಎಂಬ
ದನಿ ಕೂಡ
ನಿರ್ಲಿಪ್ತಿಯಲ್ಲಿ
ಹೂತುಹೋಯಿತಲ್ಲ
ಹೊತ್ತೊಯ್ದ ಮೇಲೆ
ಎಲ್ಲವೂ ಸ್ಪಷ್ಟ,
ದುಃಖವೂ.


ನಿರೀಕ್ಷೆಯ ಕಾತರದಲ್ಲಿ
ಹೆಜ್ಜೆ ಸದ್ದಿಗಿಂತ
ದೊಡ್ಡ ಭ್ರಮೆ
ಇನ್ನೊಂದಿಲ್ಲ.




ಬೆಲ್ಲಿ ಡ್ಯಾನ್ಸಿಗೆ
ಹಸಿದ ಹೊಟ್ಟೆಯ
ತಾಳ
ನಿಷಿದ್ಧ.

ಚಿತ್ರ:ಗೂಗಲ್




ಮೇಲೆ ತೂಕಡಿಸುವ ಮರಿಕಳೆದುಕೊಂಡ ಬೆಕ್ಕು
ಕಿವಿ ನಿಮಿರಿ ಮೈ ಅಲುಗಿತು
ಕೆಳಗೆ ಮಡಿಲಲ್ಲಿ ಕುಯ್ಞ್ ಗುಡುವ ನಾಯಿಮರಿ.























ಹಸಿವೆ
ಎಂದೊಡನೆ 
ಅಮ್ಮನ ಜೊತೆ
ಸಿಟ್ಟು ಮಾಡಿ
ಊಟ ಬಿಟ್ಟು
ಬೆಳಗಿನ ಜಾವ
ಗುಟ್ಟಾಗಿ
ಲೋಟ ನೀರಲ್ಲಿ
ಮರ್ಯಾದೆ
ಉಳಿಸಿಕೊಂಡ
ನೆನಪು.

ಖಾತ್ರಿಯಿತ್ತು
ಬೆಳಗಿನ ತಿಂಡಿ.

ಅದಿಲ್ಲದ
ಹಸಿವಿನ ಅರಿವಷ್ಟೆ
ನನ್ನ ಗುರು.






ಗಾಂಧಿ ಬಗ್ಗೆ
ಬರಿಯೋಕೆ
ತುಂಬಾ ಹಿಂಸೆಯಾಗುತ್ತೆ.


ನೀಲು ಕವಿತೆಗಳು





ಕಾಳಿದಾಸ ಸುಂದರಿಯ ವರ್ಣಿಸುವಾಗ
ತನ್ನ ವರ್ಣನೆಯನ್ನೇ ಹೆಚ್ಚು ಪ್ರೀತಿಸಿದ 
ಅನ್ನಿಸುತ್ತೆ, ಕ್ಷಮಿಸಿ.





ಪ್ರಿಯಾ, ನಿನ್ನೆಯ ನಿನ್ನ ತತ್ತ್ವ
ಇಂದಿನ ಪ್ರೇಮ
ಎಲ್ಲದರ ಹುಸಿಯನ್ನರಿಯುವ
ಧೈರ್ಯ ನಿನಗೆ ಬಂದ ದಿನ
ನೀನು ದಿಟದ ಇನಿಯ.




ಗಿಡ ಬೆಳೆಸುವ ನಾನು
ಹೂ ಅರಳಿಸಲಾರೆ
ಎನ್ನುವುದು
ನನ್ನ ಅಸಹಾಯಕತೆ





ನನ್ನ ಕವನದ ಪಾತ್ರವಗಿದ್ದ
ನನ್ನ ಇನಿಯ
ನನ್ನತ್ತ ನಡೆದುಬರುವುದ
ಕಂಡು
ಬೆಚ್ಚಿಬಿದ್ದು ಅಳತೊಡಗಿದೆ.



ನಿಜವಾದ ಕವಿ
ಹೊಂಗೆಯ ಚಿಗುರನ್ನು ಕೂಡ
ಮಾನವ ಕುಲ
ಮೊಟ್ಟಮೊದಲಿಗೆ ಕಂಡಂತೆ
ಕಾಣುವುದು
ಮನುಕುಲಕ್ಕಿರುವ ಭರವಸೆ.




ಈಗ ತಾನೆ ರೆಕ್ಕೆ ಪಡೆದ ಹಕ್ಕಿಯಂತೆ,
ಈಗ ಅರಳಿದ ಹೂವಿನಂತೆ,
ಈಗ ಬೆಳಗಿದ ಹಗಲಿನಂತೆ
ಎಂದು ನನ್ನ ಪ್ರೇಮದ ಕುರಿತು ವರ್ಣಿಸಲೆತ್ನಿಸಿ
ಹೋಲಿಕೆಗಳ ಬಲೆಗೆ ನಾಚಿ
ನನ್ನವನ ಅಪ್ಪಿಕೊಂಡು ಕಣ್ಣುಮುಚ್ಚುವೆ.







ಪ್ರಕೃತಿ ನಿಯಮಗಳ ಪ್ರಕಾರವೇ
ಬದುಕುವ ಶಪಥ ಮಾಡಬೇಡ:
ಯಾಕೆಂದರೆ,
ಮನುಷ್ಯ ಪ್ರಕೃತಿಗೆ ಅದು
ಪೂರ್ಣ ಹೊಂದುವುದಿಲ್ಲ.



ಕವಿತೆ:
ಬಸವರಾಜ ಸೂಳಿಭಾವಿ

Basavaraj Sulibhavi



ನಿಃಶ್ಶಬ್ಧ ರಾತ್ರಿ























1

ನಿಶಬ್ಧ ರಾತ್ರಿ
ಕೊನೆಯ ಜಾವ ಮಳೆ ಮಿಡಿತ
ನಿಶಾಚರ ವಾಹನ ಗೌಜಿನ ಸ್ವಪ್ನ
ಕೋಣೆಯೊಳಗಿನ ಗಾದಿಗಂಟಿದ ತಂಪು
ಏದುಸಿರ ಜಾರು
ಪ್ರವಾಹ; ಬೆಳಕ ಸ್ಫೋಟ
ನೀರ ಬಿಂದುಗಳ ಗರಿಕೆ ಎಸಳು

ಪೂರ್ವ ಚೆಲ್ಲುವ ಕಿರಣ
ಬೆವರ ಬೆನ್ನ ಹಾದಿ
ಅಲುಗುವ ಎಲೆಯೆವೆ
ಎಲ್ಲ ಮುಟ್ಟಿಬಿಡುವ ಪಯಣ
ದಣಿವಿಗೆ ನಿಂತು ಕೂತು
ಮತ್ತೆ ಸರಾಗ
ಹಾದಿಯುದ್ದ ಏರು ಇಳಿವು
ಬಯಲಲ್ಲಿ ಜುಳುಜುಳು
ತಗ್ಗಿನೆಡೆ ಜಲಪಾತ
ಕಡಲ ಕೂಟ
ಅಬ್ಬರದಲೆಗಳ ದಂಡೆ

2

ಹೆಜ್ಜೆಮೂಡಿದಂಗಳದ ಬಾಗಿಲಿಗೆ
ಬಂದು ನಿಂತಿದೆ ಒಂಟಿತನದ ರಾತ್ರಿ
ಮಳೆಯಿಲ್ಲದ ನೆಲ ನದಿ ದಡಗಳ ಬಿಕ್ಕು
ಸುಖದ ಹಳೆಯ ಮನೆ; ದುಃಖ ನಿವಾಸಿ
ನೋಯುವ ಅಂಗದೆಡೆ ಹೊರಳುವ ಬೆರಳು

ಕಾಲದಾಟ ನನ್ನೊಂದಿಗೆ ನೂರಾರು ತಲೆಮಾರು.


***