Friday, 15 November 2013

ವಚನಾನುಸಂಧಾನ: ಕೆ ನೀಲಾ

 Neela K Gulbarga


ಬೀದಿಯ ತುಂಬ ಬೆಳದಿಂಗಳು ಹರಡಿಕೊಂಡಿದೆ. ಕಂಬದ ಲೈಟು ಕಿರಿಕಿರಿಯುಂಟು ಮಾಡುತ್ತಿದೆ. ಹಾಲ್ದಿಂಗಳ ಹೊತ್ತಲ್ಲಿ ಚಂದ್ರನ ಬೆಳಕು ಹೊರತು ಮತ್ತ್ಯಾವ ಬೆಳಕು ಇರಬಾರದೆನಿಸುತ್ತದೆ. ನಿತಾಂತವಾಗಿ ಹರಡಿಕೊಂಡ ಹೊಂಬೆಳಕನ್ನು ಮನದುಂಬಿಕೊಳ್ಳುವುದರಲ್ಲಿ ಅನಿರ್ವಚನೀಯವಾದ ಆನಂದವಿದೆ. ಈ ಬಾರಿ ಬೀದರದ ಶರಣ ಉದ್ಯಾನವನದಲ್ಲಿ ಆಯೋಜಿಸಿದ ಶರಣಸಂಗಮದ ವಚನಾನುಸಂಧಾನಕ್ಕೆ ಕಿವಿಗೊಟ್ಟಿದ್ದೆ. ಹೊರಗೆ ಬೆಳದಿಂಗಳು. ಒಳಗೆ ವಚನಗಳ ಬೆಳಕು. ಅಕ್ಕ ಅನ್ನಪೂರ್ಣ ಆಡಿದ ಮಾತುಗಳು ಅರ್ಥಪೂರ್ಣವೆನಿಸಿದವು.

'ಇನ್ನೂ ಎಷ್ಟು ದಿನ ಈ ಜಾತಿಗಳ ಬಂಧನದಲ್ಲಿ ನರಳುವುದು? ಹನ್ನೆರಡನೆ ಶತಮಾನಕ್ಕೇ ಬಸವಾದಿಪ್ರಮಥರು ಮಧುವರಸರ ಮಗಳು ಮತ್ತು ಹರಳಯ್ಯನ ಮಗನಿಗೆ ಮದುವೆ ಮಾಡಿಸಿ ತಾರತಮ್ಯದ ಜಾತಿವ್ಯವಸ್ಥೆಯನ್ನು ತಿರಸ್ಕರಿಸಿದರು. ಇಬ್ಬರದೂ ಬೇರೆ-ಬೇರೆ ಜಾತಿ. ಶ್ರೇಣೀಕೃತ ಚಾತುರ್ವರ್ಣ ವ್ಯವಸ್ಥೆಯನ್ನು ಧಿಕ್ಕರಿಸಿ ಸಮಾನತೆಯ ಬದುಕು ಕಟ್ಟಲು ಶರಣರು ತಮ್ಮ ಬದುಕನ್ನೇ ಬಲಿದಾನಗೈದರು. ಪುರೋಹಿತಶಾಹಿಯು ಅಂತರ್ಜಾತಿ ವಿವಾಹ ಮಾಡಿದ ಶರಣರ ಕಣ್ಣು ಕಿತ್ತರು. ಆನೆ ಕಾಲಿಗೆ ಕಟ್ಟಿ ಕಲ್ಯಾಣದ ಪಟ್ಟಣದ ತುಂಬ ಎಳೆದರು. ಆದರೆ ಇಂಥ ಕಠೋರತಮ ಶಿಕ್ಷೆಗೆ ಕಿಂಚಿತ್ತೂ ಹೆದರಲಿಲ್ಲ. ಮತ್ತು ವೈದಿಕ ಸಿದ್ದಾಂತ ಒಪ್ಪಲಿಲ್ಲ. ಶರಣರ ಈ ತ್ಯಾಗದ ಹಿಂದೆ ನಮ್ಮ ಬದುಕಿನ ಭವಿಷ್ಯವು ಹಸನುಗಳಿಸುವ ಕನಸುಗಳಿವೆ. ನಾವೀಗ ನಮ್ಮ ಮಕ್ಕಳ ಮದುವೆಯನ್ನು ಜಾತಿ ಮೀರಿ ಮಾಡುವ ಜರೂರಿ ಇದೆ. ಇನ್ನು ಎಷ್ಟು ದಿನ ಜಾತಿ ಪ್ರೇಮಿಗಳಾಗುವಿರಿ?' 


ಅಕ್ಕ ಅನ್ನಪೂರ್ಣ ಅವರ ಮಾತುಗಳು ಕಿವಿಯಲ್ಲಿ ಅನುರಣಿಸುತ್ತಿದ್ದವು.
 


ಹೌದು. ಎಷ್ಟು ದಿನ ಹೀಗೆ ಅವೈಜ್ಞಾನಿಕವಾಗಿ ಬಾಳುವುದು? ನಮಗೊಂದು ಬಹು ದೊಡ್ಡ ಮಾನವೀಯ ಪರಂಪರೆಯಿದೆ. ಜೇವರ್ಗಿಯ ಬಸವಕೇಂದ್ರದ ಕಾರ್ಯಕ್ರಮ ವಚನ-ಚಿಂತನಕ್ಕೆ ಹೋದಾಗ ಈ ವಿಷಯ ಪ್ರಸ್ತಾಪಸಿಬೇಕಾಯಿತು. ವೈದಿಕರಂತೆಯೇ ಲಿಂಗಾಯತರು ನಡೆದುಕೊಂಡರೆ ವ್ಯತ್ಯಾಸವೇನು? ಲಿಂಗಾಯತರಲ್ಲಿಯೇ ಸಕಲೆಂಟು ಪಂಗಡಗಳಿವೆ. ಉಪಜಾತಿಗಳಿವೆ. ಬಗಿಗಳಿವೆ. ಅವುಗಳ ನಡುವೆ ಮದುವೆಗಳು ಏರ್ಪಡುವುದಿಲ್ಲ. ಲಿಂಗಾಯತ ತತ್ವವೆನ್ನುವುದು ಜಾತಿಯಾಗಿ ಮಾರ್ಪಟ್ಟಿದೆ. ಲಿಂಗಾಯತರು ಕೆಳಜಾತಿಯವರೊಂದಿಗೆ ಮದುವೆ ಮಾಡಿಕೊಳ್ಳುವುದು ದೂರ ಉಳಿಯಿತು. ತಮಗಿಂತಲೂ ಕೆಳಜಾತಿಯವರಿಗೆ ಬಾಡಿಗೆಗೆ ಮನೆಗಳು ಸಹ ಕೊಡಲಾರದ ಪ್ರಕರಣಗಳಿವೆ. ಲಿಂಗಾಯತ್ ಸಿದ್ಧಾಂತವನ್ನು ಪ್ರಖರವಾಗಿ ಮಂಡಿಸುವವರು ಸಹ ತಮ್ಮ ಮಕ್ಕಳ ಮದುವೆಯ ಪ್ರಶ್ನೆ ಬಂದಾಗ ಜಾತಿಪ್ರೇಮದತ್ತ ಜಾರುವುದು ನೋಡುತ್ತಿದ್ದೇವೆ. (ಅಪವಾದವೆನ್ನುವಂಥ ಪ್ರಕರಣಗಳಿವೆ). ಲಿಂಗಾಯತಧರ್ಮವು ಹಿಂದೂಧರ್ಮಕ್ಕೆ ಸಂಬಂಧವಿಲ್ಲವೆಂದು ಪ್ರತಿಪಾದಿಸಲಾಗುತ್ತಿದೆ. ಹೌದು. ನೈಜಾರ್ಥ-ಮೂಲಾರ್ಥದಲ್ಲಿ ಲಿಂಗಾಯತ ತತ್ವವು ವೈದಿಕತ್ವವನ್ನು ಧಿಕ್ಕರಿಸಿ ಹುಟ್ಟಿದ್ದೇ. ವೈದಿಕತೆ-ಕರ್ಮಠತೆ ಪ್ರತಿಪಾದಿಸುವ ಯಾವುದೇ ಧರ್ಮದೊಂದಿಗೆ ಲಿಂಗಾಯತ ತತ್ವವನ್ನು ಸಮೀಕರಿಸಲು ಸಾಧ್ಯವೇ ಇಲ್ಲ. ಲಿಂಗಾಯತ ಎನ್ನುವುದು ಜಾತಿ-ಧರ್ಮವಾಗಿ ನೋಡಲಾಗದು. ಅದನ್ನೊಂದು ಸಿದ್ಧಾಂತವಾಗಿಯೇ ನೋಡಬೇಕಾಗುತ್ತದೆ. ಹಾಗೆ ನೋಡಿದರೆ ಹನ್ನೆರಡನಯ ಶತಮಾನಕ್ಕೆ ವಿಜ್ಞಾನ-ತಂತ್ರಜ್ಞಾನವು ಈ ಪರಿ ಬೆಳೆದಿರಲಿಲ್ಲ. ಆದರೆ ಅಮಾನವೀಯ ಜಾತಿ ವ್ಯವಸ್ಥೆಯನ್ನು ಕಿತ್ತು ಹಾಕುವುದೇ ಶರಣರ ಗುರಿಯಾಗಿತ್ತು. ಅವರ ನಿಲುವು ವೈಜ್ಞಾನಿಕವಾದದ್ದೇ ಆಗಿತ್ತು. ಆದ್ದರಿಂದಲೇ ಸಕಲ ಜೀವಾತ್ಮರಿಗೆ ಲೇಸು ಬಯಸುವ ಸಿದ್ದಾಂತವನ್ನೊಳಗೊಂಡ ತತ್ವವನ್ನು ಕಟ್ಟಿಕೊಟ್ಟರು. ಆದ್ದರಿಂದ ಲಿಂಗಾಯತರು ಯಾವ ಕಾರಣಕ್ಕೂ ಜಾತಿವಾದಿಗಳಾಗಬಾರದಾಗುತ್ತದೆ. ಲಿಂಗವನ್ನು ಆಯತ ಮಾಡಿಕೊಂಡವರು ಲಿಂಗಾಯತರು ಅಂತಾದರೆ, ಲಿಂಗವನ್ನು ಅಖಂಡ ಭೂಮಂಡಲದ ಸಂಕೇತವೆಂದು ಒಪ್ಪುವುದಾದರೆ ಲಿಂಗದ ತತ್ವವನ್ನು ಒಂದು ಜಾತಿಗೆ ಧರ್ಮಕ್ಕೆ ಸೀಮಿತಗೊಳಿಸಬಾರದಾಗುತ್ತದೆ. ವರ್ಗ-ವರ್ಣ-ಜಾತಿ-ಲಿಂಗ ತಾರತಮ್ಯವನ್ನು ತೊಡೆಯಲೆಂದೇ ಹುಟ್ಟಿಕೊಂಡ ಚಳುವಳಿಯ ಬಹು ಪ್ರಮುಖ ಘಟ್ಟವೇ ಅಂರ್ಜಾತಿ ವಿವಾಹದ್ದಾಗಿತ್ತು. ಪ್ರಜ್ಞಾಪೂರ್ವಕವಾಗಿ ಚಿಂತನೆ-ಚಳುವಳಿಯನ್ನು ಕಟ್ಟಿದ ವಚನಕಾರರಿಗೆ ವಿವಾಹ ಮತ್ತು ಜಾತಿ ಕುರಿತು ಸ್ಪಷ್ಟ ತಿಳುವಳಿಕೆಯಿತ್ತು. ಜಾತಿವ್ಯವಸ್ಥೆಯನ್ನು ಗಟ್ಟಿಗೊಳಿಸಿ ಆರ್ಥಿಕ ಹಿಡಿತ ಹೊಂದಲು ವಿವಾಹ ಪದ್ಧತಿಯನ್ನು ಬಳಸಿಕೊಳ್ಳಲಾಗುತ್ತಿದೆಯೆಂಬುದು ಚಾರಿತ್ರಿಕ ಸತ್ಯ. ಜಾತಿ ಪದ್ದತಿ ಕಾಪಾಡಬೇಕೆಂಬುದು ಕರ್ಮಸಿದ್ಧಾಂತ. ಹೀಗಾಗಿಯೇ ಅಂತರ್ಜಾತಿ ವಿವಾಹ ಮಾಡಿದ್ದಕ್ಕಾಗಿ ಶರಣರಿಗೆ ಹಿಂಸಾತ್ಮಕವಾಗಿ ಶಿಕ್ಷಿಸಿದ್ದು ಪುರೋಹಿತಶಾಹಿ. ಕರ್ಮಸಿದ್ಧಾಂತದ ಜಾತಿವ್ಯವಸ್ಥೆಯ ಬೇರು ಅಲ್ಲಾಡಿಸುವುದಕ್ಕಾಗಿಯೇ ವಿವಾಹವನ್ನು ಜಾತಿಯ ಹೊರಗೆ ಏರ್ಪಡಿಸಿದ್ದು ವಚನಸಿದ್ಧಾಂತ. ಇವೆರಡು ಸಿದ್ಧಾಂತಗಳ ನಡುವಿನ ಸಂಘರ್ಷವು ನಿತ್ಯ ನಿರಂತರವಾದದ್ದು. ಈ ಸಂಘರ್ಷವನ್ನು ಈಗಲೂ ಗಮನಿಸಬಹುದು. ಯಾವ ಕಾರಣಕ್ಕೂ ಜಾತಿ-ಧರ್ಮ ಮೀರಿ ಮದುವೆಯಾಗಲಾರದಂಥ ಚಟುವಟಿಕೆಗಳು ಭಯೋತ್ಪಾದಕ ರೂಪದಲ್ಲಿ ನಡೆಯುತ್ತಿರುತ್ತವೆ. ಕರುಳ ಕುಡಿಗಳಿಗಿಂತಲೂ ಜಾತಿ-ಧರ್ಮವೇ ಶ್ರೇಷ್ಠ-ಪವಿತ್ರವೆಂಬಂಥ ನಂಬಿಕೆಯನ್ನು ಹೆತ್ತರವರಲ್ಲಿ ಬಿತ್ತಲಾಗುತ್ತಿದೆ. ಪೌರೋಹಿತ್ಯದ ಈ ಕ್ರೂರ ಹಿಡಿತವು ಕೆಲವೊಮ್ಮೆ ವಿಕಾರವಾಗಿ ವ್ಯಕ್ತವಾಗುತ್ತಿರುತ್ತದೆ. ಯುವಜನತೆ ತಮ್ಮ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಂಡಾಗ ನೈತಿಕ ಪೋಲೀಸಗಿರಿಯ ಹೆಸರಿನಲ್ಲಿ ಬಹಿರಂಗವಾಗಿಯೇ ಧಾಳಿ ನಡೆಸಲಾಗುತ್ತಿದೆ. ಇಂಥ ಕೃತ್ಯವನ್ನು ಬೆಂಬಲಿಸುವುದಕ್ಕಾಗಿ ಸಮೂಹವಿರುತ್ತದೆ. ಸರಿಯೆನ್ನುವಂಥ ಅಭಿಪ್ರಾಯ ರೂಪಿಸಲು ಅನೇಕ ಮಾದ್ಯಮಗಳು ಟೊಂಕಕಟ್ಟಿ ನಿಂತಿರುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತಿ ರಕ್ಷಿಸಿಕೊಳ್ಳುವ ಇಂಥ ಕ್ರಮಗಳು ಸಮಾಜವನ್ನು ಹಿಮ್ಮುಖವಾಗಿ ಚಲಿಸುವಂತೆ ಮಾಡುತ್ತವೆ. 


 

ಹಾಗೆ ನೋಡಿದರೆ, ಮಾನವರ ನಾಗರೀಕತೆಯು ಅನೇಕ ಹೊರಳು ಹಾದಿಗಳಲ್ಲಿ ಕ್ರಮಿಸುತ್ತ ಬಂದಂತೆ ಸ್ತ್ರೀ-ಪುರುಷರ ಸಂಬಂಧಗಳು ಬದಲಾಗತೊಡಗಿದವು. ಸಂತಾನೋತ್ಪತ್ತಿ ಮತ್ತು ಕಾಮ ಪೂರೈಕೆಯು ವೈವಾಹಿಕ ಚೌಕಟ್ಟಿಗೆ ಪಲ್ಲಟಗೊಳ್ಳತೊಡಗಿತು. ಕಾಲಕಾಲಕ್ಕೆ ನಾನಾ ನಮೂನೆಯ ವೈವಾಹಿಕ ಸ್ವರೂಪಗಳು ಹುಟ್ಟಿಕೊಂಡವು. ಅವೆಲ್ಲವೂ ಖಾಸಗಿ ಆಸ್ತಿಯ ಮೇಲೆ ನಿರ್ಭರವಾಗಿದ್ದವು. ಕ್ರಮೇಣ ಮದುವೆಯು ಪುರುಷ ಮತ್ತು ಮಹಿಳೆಯ ನಡುವಿನ ಸಂಬಂಧವಾಗಿ ಉಳಿಯದೆ, ಅದು ಜಾತಿಯನ್ನು ಗಟ್ಟಿಗೊಳಿಸುವ ಮತ್ತು ಮಹಿಳೆಯ ಅಸ್ತಿತ್ವದ ಮೇಲೆ ಹತೋಟಿ ಸಾಧಿಸುವ ಸಂಸ್ಥೆಯಾಗಿ ಮುಂದುವರೆಯತೊಡಗಿತು. ಅನೇಕ ಬುಡಕಟ್ಟು, ಆದಿವಾಸಿ, ಮತ್ತಿತರ ಸಮುದಾಯಗಳ ನಡುವಲ್ಲಿ ವಿಭಿನ್ನ ರೀತಿಯ ಮದುವೆ ಪದ್ಧತಿಗಳಿವೆ. (ಈ ಚರ್ಚೆ ಒತ್ತಟ್ಟಿಗಿರಲಿ.) ಆದರೆ ಈ ಹೊತ್ತಿನಲ್ಲಿ ಮದುವೆಯೆನ್ನುವುದು ಜಾತಿ ರಕ್ಷಿಸುವ ಸಾಧನವಾಗಿರುವುದರಿಂದ ಖ್ವಾಫ್ ಪಂಚಾಯತ್ನಂಥ ವ್ಯವಸ್ಥೆಗಳು ಅಂತರ್ಜಾತಿ ವಿವಾಹ ತಡೆಗೋಡೆಗಳಾಗಿ ನಿಂತಿವೆ. ಲವ್ ಜೆಹಾದ್ ಎಂಬ ಹೆಸರಿಟ್ಟು, ಮತಾಂತರ ಮಾಡಿಸುವರೆಂಬ ವಾದ ಮುಂದಿಟ್ಟು ಧಾಳಿ ನಡೆಸಲಾಗುತ್ತಿದೆ. ಧಾರ್ಮಿಕ ಗುರುಗಳು ಜಾತಿವ್ಯವಸ್ಥೆ ಇರಬೇಕೆಂದು ಬಹಿರಂಗವಾಗಿ ಪ್ರತಿಪಾದಿಸುವುದರ ಅರ್ಥವೇನೆಂದರೆ ಅಂತರ್ಜಾತಿ ಅಥವ ಅಂತರಧರ್ಮೀಯ ವಿವಾಹ ನಡೆಯಬಾರದೆಂದೇ ಅರ್ಥ. ಸುತ್ತಿಬಳಸಿ ವಿವಾಹ ಸಂಸ್ಥೆಯನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಳ್ಳಲು ಜಾತಿ ಸಂಸ್ಥೆಯು ಹೆಣಗುತ್ತಿರುತ್ತದೆ. ಅಂತರ್ಜಾತಿ-ಅಂತರ್ಧಮೀಯ ಮದುವೆಗಳು ನಡೆದಾಗ ಜಾತಿ ವ್ಯವಸ್ಥೆಯು ಇನ್ನಿಲ್ಲದಂತೆ ನರಳುತ್ತದೆ. ಕೆರಳುತ್ತದೆ. ಯುವಜನತೆಯನ್ನು ಹೆಚ್ಚೆಚ್ಚು ಜಾತಿವಾದಿಗಳು ಮತ್ತು ಮತೀಯವಾದಿಗಳನ್ನಾಗಿ ಪರಿವರ್ತಿಸಲು ಶ್ರಮಿಸುತ್ತದೆ. ಅಂದರೆ ಅಷ್ಟರ ಮಟ್ಟಿಗೆ ಅವೈಜ್ಞಾನಿಕತೆಯನ್ನು ಬಿತ್ತುತ್ತದೆ. ಈ ಸಂಘರ್ಷದ ಕಾರಣವಾಗಿಯೇ (ಅವ)ಮರ್ಯಾದಾ ಹತ್ಯೆಗಳು ಘಟಿಸುತ್ತಿವೆ.

ಚರ್ಚೆಯೊಂದರಲ್ಲಿ ದ್ವಾರಕಾನಾಥರು ಕೇಳಿದ ಪ್ರಶ್ನೆ ಹೀಗಿದೆ: ಲಿಂಗಾಯತರು ವೈದಿಕರಂತೆ ಶ್ರೇಣೀಕೃತ ವ್ಯವಸ್ಥೆಯ ನಂಬಿಕೆ ಹೊಂದಿದ್ದರೆ ಹಿಂದುಳಿದವರು ದಲಿತರು ಮಹಿಳೆಯರು ಹೇಗೆ ಅವರನ್ನು ನಂಬಬೇಕು? ಲಿಂಗಾಯಧರ್ಮದ ಪ್ರತಿಪಾದಕರು ದಲಿತ ಹಿಂದುಳಿದವರೊಂದಿಗೆ 'ರೋಟಿ ಬೇಟಿ' ಸಂಬಂಧ ಏರ್ಪಡಿಸಲು ಸಿದ್ಧರಿದ್ದಾರೆಯೇ? ಅಂದರೆ ಪ್ರಜ್ಞಾಪೂರ್ವಕವಾಗಿ ದಲಿತ-ಹಿಂದುಳಿದವರೊಂದಿಗೆ ವೈವಾಹಿಕ ಸಂಬಂಧ ಏರ್ಪಡಿಸುವರೇ? ಇಷ್ಟಕ್ಕೂ ರಕ್ತಸಂಬಂಧದಲ್ಲಿ ವಿವಾಹ ನಡೆದರೆ ಶೇಕಡ 25ರಷ್ಟು ಸಂತಾನವು ಅಂಗವೈಕಲ್ಯದಿಂದ ನರಳುವುದು. ಆರೋಗ್ಯವಂತ ಸಮಾಜಕ್ಕೆ ಆರೋಗ್ಯವಂತ ಮಕ್ಕಳು ಬೇಕು. ಆರೋಗ್ಯವಂತ ಸಮಾಜ ಬೇಕೆಂದರೆ ಜಾತಿಯ ತಾರತಮ್ಯವೆಂಬ ರೋಗ ಹೋಗಲಾಡಿಸಬೇಕು. ವಿವಾಹಸಂಸ್ಥೆಯನ್ನು ಬಳಸಿಕೊಂಡು ಜಾತಿವ್ಯವಸ್ಥೆ ಗಟ್ಟಿಗೊಳ್ಳುವುದು ಅಂತಾದರೆ, ಜಾತಿ ಮೀರಿ ನಡೆವ ಪ್ರಬುದ್ಧ ಚಿಂತನೆಯ ವಿವಾಹಗಳು ಪ್ರಜಾಪ್ರಭುತ್ವೀಯ ಮೌಲ್ಯದ ಕುಟುಂಬ ಮತ್ತು ಸಮಾಜ ನಿರ್ಮಾಣಕ್ಕೆ ಮುಂದಾಗಬೇಕಾದ ಜರೂರಿ ಇದೆ. ಇದು ನಮ್ಮ ಸಂವಿಧಾನದ ಆಶಯವೂ ಹೌದು.

ಕಾವ್ಯ ಕಾರಣ ಕವಿತೆ: ಅಪ್ಪ :ಡಾ.ಜಿ.ಕೃಷ್ಣ






















ನನ್ನಪ್ಪ
ಒಂದು ದಿನವೂ
ಉಪ್ಪಿನ ಮೂಟೆ, ಕೂಸುಮರಿ
ಮಾಡಿ ಆಡಿಸಲಿಲ್ಲ
ಶಾಲೆ ಬಿಡುವ ಹೊತ್ತಿಗೆ
ಕಾದುಕೂತು
ಹೋಟೆಲ್ಲಿನ ದೋಸೆ ತಿನಿಸಲಿಲ್ಲ
ಮಾಸ್ತರರ ಹತ್ತಿರ
ಮಗ ಹೇಗೆ ಎಂದು ವಿಚಾರಿಸಲಿಲ್ಲ
ಮಂಡಿ ಗಾಯಕ್ಕೆ
ಮುಲಾಮು ಹಚ್ಚಿ ಉಫ್ ಅನ್ನಲಿಲ್ಲ
ಅಮ್ಮನ ಕೈಯ ಹೊಡೆತ ತಪ್ಪಿಸಲು
ಬರಲಿಲ್ಲ
ಗಾಳಿಪಟ, ಗೂಡುದೀಪ ಮಾಡುವುದು
ಹೇಳಿಕೊಡಲಿಲ್ಲ


ನನ್ನೊಬ್ಬನ್ನೇ ಕರೆದುಕೊಂಡು
ಅಲ್ಲಿ ಇಲ್ಲಿ ಸುತ್ತಿದ್ದಿಲ್ಲ
 
ಓದಿ
ದೊಡ್ಡವನಾಗಿ
ಮನೆಗೆ ಬಂದಾಗ
ಖುಶಿಯ ಬಚ್ಚಿಡುತ್ತ
ಸರ ಬರ ತಿರುಗಿ
ಬಂದವರೊಡನೆ ಗಟ್ಟಿಯಾಗಿ ಮಾತಾಡಿ
ಯಾರೂ ಇಲ್ಲದ ಹೊತ್ತಲ್ಲಿ
ನನ್ನ ನೋಡುತ್ತಾ ನಿಂತು
ಮೈಮರೆತದ್ದಿಲ್ಲ

ಇಲ್ಲ
ನನ್ನ ಹೆಗಲಿಗೇರಿಸಿ
ಲೋಕದ ಬೆರಗ ತೋರಿಸುವುದರೊಳಗೆ
ನಾಕು ಜನರ ಹೆಗಲೇರಿ
ಸಾಗಿಹೋದ
ನನ್ನಪ್ಪ
ಯಾವುದಕ್ಕೂ ಸಿಗಲಿಲ್ಲ.

Friday, 8 November 2013

ಬಸೂ ಸಾಲುಗಳು

 Basavaraj Sulibhavi



ಬರೀ ಕಲ್ಲೆನಬೇಡ ಅಹಲ್ಯ ಒಳಗಿರಬಹುದು
ಮುಟ್ಟಿ ನೋಡು.


 









ಇರುಳು ಎದೆಗೂದಲಲಿ ಬೆರಳಾಡುವಾಗ ಬಳೆ ಸದ್ದಾಯಿತು
ಥಟ್ಟನೆ ಕತ್ತಲುಡುಪು ಕಳಚಿಟ್ಟ ಬೆಳಕು ಬೆತ್ತಲಾಗಿ ಕಂಡಿತು



 




 


  ಕುರುಡುಗಣ್ಣಿಗೆ ಕನ್ನಡಿ ಮೇಲೆಯೇ ಸಿಟ್ಟು...


 








 ***
















ಸಾಲುಗಳು : ಡಾ.ಜಿ. ಕೃಷ್ಣ





ಈ ಗಿಡ 
ಗಂಡು ಹೆಣ್ಣು
ಹತ್ತಿರವಿದ್ದೂ
ಫಲವಂತಿಕೆಗೆ
ಚಿಟ್ಟೆಯ ಸಹಾಯ ಕೇಳುತ್ತಲ್ಲ ಗಾಲಿಬ್,
ಅಪ್ಪಿ ಮುದ್ದಾಡೋಕೂ
ಕಷ್ಟನಾ?



 








 









ನನ್ನ ನೋಡಿ ನಗುವ
ಲೋಕ ಸರಿಯಿಲ್ಲ
ಎಂದೆ
ಅಹಂಕಾರ ಎಂದರು
ನನ್ನನ್ನೇ ನೋಡಿಕೊಂಡು
ನಕ್ಕೆ
ವಿನಯ ಅತಿಯಾಯ್ತು,
ಕೀಳರಿಮೆಯೂ ಇರಬಹುದು
ಎಂದುಬಿಟ್ಟರು
ಅಹಂಕಾರ, ವಿನಯದ
ಮಧ್ಯದ ದಾರಿ
ಶ್ರೇಷ್ಟ ಎಂದರು
ಕತ್ತಿಯಂಚು
ಕಾಲೆಲ್ಲ ಗಾಯ.





 




 




 ***

ಕರ್ನಾಟಕ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕ 2013

ರಾಜ್ಯ ಸರ್ಕಾರದ ಮುಂದಿರುವ ಕರ್ನಾಟಕ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕ, ೨೦೧೩ರ ಕುರಿತು ಈಗಾಗಲೇ ಹಲವು ಬಗೆಯಲ್ಲಿ ಪರ ವಿರೋಧದ ಅಭಿಪ್ರಾಯಗಳು ನಾಡಿನಾದ್ಯಂತ ವ್ಯಕ್ತಗೊಳ್ಳುತ್ತಿವೆ.


ಈ ವಿಧೇಯಕದಲ್ಲಿರುವ ಮುಖ್ಯ ಅಂಶಗಳು...

ಈ ವಿಧೇಯಕದಲ್ಲಿ ಕಾಯ್ದೆಯ ಕರಡು ಮತ್ತು ಪರಿಕಲ್ಪನಾ ಟಿಪ್ಪಣಿಗಳಿವೆ. ಕಾಯ್ದೆಯ ಕರಡನ್ನು ರಾಷ್ಟ್ರೀಯ ಕಾನೂನು ಶಾಲೆಯ ’ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ'ದ ಕಾನೂನು ತಜ್ಞರು ರಚಿಸಿದ್ದರೆ' ಪರಿಕಲ್ಪನಾ ಟಿಪ್ಪಣಿಯನ್ನು ಈ ಸಂಸ್ಥೆಯ ಉಪಕ್ರಮದಲ್ಲಿ ರಚಿಸಲಾದ, ರಾಜ್ಯದ ಹಿರಿಯ ಚಿಂತಕರು, ಸಾಹಿತಿಗಳು, ನ್ಯಾಯವಾದಿಗಳು, ಜಾನಪದ ತಜ್ಞರು, ವಿಚಾರವಾದಿಗಳನ್ನೊಳಗೊಂಡ ಸಮಿತಿಯಿಂದ ರೂಪಿಸಲಾಗಿದೆ. ಅಲ್ಲದೆ ನಾಡಿನ ವಿವಿಧೆಡೆಗಳಿಂದ ಬಂದ ಸಲಹೆ, ಅಭಿಪ್ರಾಯಗಳನ್ನು ಒಳಗೊಂಡಿದೆ. 

ವಿಧೇಯಕದ ಪ್ರಕಾರ ಮೂಢನಂಬಿಕೆ ಆಚರಣೆ ಎಂದರೆ, (ಎ)ಇನ್ನೊಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಕಾಯಿಲೆಯನ್ನು ಅಥವಾ ಸಂಕಟವನ್ನು ಪರಿಹರಿಸುವ ಭರವಸೆ ನೀಡಿ ಅಥವಾ ಅವರಿಗೆ ಲಾಭ ಉಂಟಾಗುತ್ತದೆಂದು ತಿಳಿಸಿ ಅಥವಾ ಪ್ರತಿಕೂಲ ಪರಿಣಾಮ ಉಂಟಾಗುತ್ತದೆಂದು ಹೆದರಿಸಿ ಅತಿಮಾನುಷ ಶಕ್ತಿಯನ್ನು ಆಹ್ವಾನಿಸುವ ಮೂಲಕ ಅವರಿಗೆ ತೀವ್ರತರವಾದ ದೈಹಿಕ ಅಥವಾ ಮಾನಸಿಕ ಹಾನಿಯುಂಟು ಮಾಡುವ ಅಥವಾ (ಬಿ) ಹಣಕಾಸಿನ ಅಥವಾ ಯಾವುದೇ ಲೈಂಗಿಕ ಶೋಷಣೆಯನ್ನುಂಟು ಮಾಡುವ ಅಥವಾ (ಸಿ) ಮನುಷ್ಯನ ಘನತೆಗೆ ಘಾಸಿಯುಂಟುಮಾಡುವ ಯಾವುದೇ ಕೃತ್ಯ.

-ಮೂಢನಂಬಿಕೆ ಆಚರಣೆಯನ್ನು ಉತ್ತೇಜಿಸುವ, ಪ್ರಸಾರ ಮಾಡುವ ಅಥವಾ ನಡೆಸುವ ಯಾರೇ ವ್ಯಕ್ತಿಯು ಒಂದು ವರ್ಷಕ್ಕೆ ಕಡಿಮೆಯಲ್ಲದ ಅವಧಿಯ ಆದರೆ ೫ ವರ್ಷಗಳಿಗೆ ವಿಸ್ತರಿಸಬಹುದಾದ ಕಾರಾವಾಸದಿಂದ ಅಥವಾ ಹತ್ತು ಸಾವಿರ ರೂಪಾಯಿಗಳಿಗೆ ಕಡಿಮೆಯಿಲ್ಲದ ಆದರೆ ಐವತ್ತು ಸಾವಿರ ರೂಪಾಯಿಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆಯಿಂದ ಅಥವಾ ಇವೆರಡರಿಂದಲೂ ದಂಡಿತನಾಗತಕ್ಕದ್ದು.

-ಬಲಿಯಾದ ವ್ಯಕ್ತಿಯ ಸಮ್ಮತಿಯು ಈ ಪ್ರಕರಣದ ಅಡಿಯಲ್ಲಿ ಪ್ರತಿರಕ್ಷೆಯಾಗತಕ್ಕದ್ದಲ್ಲ.

-ಬಲಿಯಾದ ವ್ಯಕ್ತಿ ಎಂದರೆ ಮೂಢನಂಬಿಕೆ ಆಚರಣೆಯನ್ನು ಮಾಡಿದುದರಿಂದಾಗಿ ಯಾವ ವ್ಯಕ್ತಿಗೆ 
ತೀವ್ರತರವಾದ ದೈಹಿಕ ಅಥವಾ ಮಾನಸಿಕ ಹಾನಿಯುಂಟಾಗಿದೆಯೋ, ಯಾರು ಆರ್ಥಿಕವಾಗಿ ಅಥವಾ ಲೈಂಗಿಕವಾಗಿ ಶೋಷಣೆಗೆ ಒಳಗಾಗಿರುವನೋ ಅಥವಾ ಯಾರ ಘನತೆಗೆ ಧಕ್ಕೆಯುಂಟಾಗಿದೆಯೋ ಅಂಥ ವ್ಯಕ್ತಿ.


 



ವಿಧೇಯಕವು ಕೆಳಕಂಡ ಕೃತ್ಯಗಳನ್ನು ಅಪರಾಧಗಳೆಂದು ಹೆಸರಿಸಿದೆ.


1) ಈ ಮುಂದಿನ ಅಪರಾಧಗಳು ಸಂಜ್ಞೇಯ ಅಪರಾಧಗಳಾಗಿರತಕ್ಕದ್ದು:

- ಲಾಭಕ್ಕಾಗಿ ಅಥವಾ ದೈವವನ್ನು ಸಂಪ್ರೀತಗೊಳಿಸುವುದಕ್ಕಾಗಿ ನರಬಲಿ ಕೊಡುವುದು

-ನರಬಲಿಯಲ್ಲಿನ ನಂಬಿಕೆಯನ್ನು ಹರಡುವುದು ಅಥವಾ ನರಬಲಿ ಕೊಡುವಂತೆ
ಇತರರನ್ನು ಪ್ರೇರೇಪಿಸುವುದು.

- ಕಾಯಿಲೆಯನ್ನು ಗುಣಪಡಿಸಲು ಪ್ರಯತ್ನಿಸುವುದು ಅಥವಾ ಹಿಂಸಾತ್ಮಕ ರೀತಿಯಿಂದ
ಭೂತೋಚ್ಚಾಟನೆಯನ್ನು ನಡೆಸುವುದು.

- ಭಾರತ ದಂಡ ಸಂಹಿತೆ, ೧೮೬೦ರ ೨೯೭ನೇ ಪ್ರಕರಣದ ಉಲ್ಲಂಘನೆಯಲ್ಲಿ ಅಘೋರಿ,
ಸಿದ್ದುಭುಕ್ತಿ ಅಥವಾ ಸದೃಶ ಆಚರಣೆಯನ್ನು ನೆರವೇರಿಸುವುದು.

- ಅಂಥ ಆಚರಣೆಗಳಲ್ಲಿ ತೊಡಗುವಂತೆ ಇತರರನ್ನು ಒತ್ತಾಯಿಸುವುದು; ಅಥವಾ

- ಅಂಥ ಆಚರಣೆಗಳಿಂದ ಪಡೆಯಲಾಗಿದೆಯೆನ್ನಲಾದ ಶಕ್ತಿಯ ಭಯವನ್ನು ಉಪಯೋಗಿಸಿಕೊಂಡು
ಆರ್ಥಿಕವಾಗಿ ಮತ್ತು ಲೈಂಗಿಕವಾಗಿ ವ್ಯಕ್ತಿಗಳ ಶೋಷಣೆ ಮಾಡುವುದು.

- ದೈವಿಕ ಅಥವಾ ಅಧ್ಯಾತ್ಮಿಕ ಶಕ್ತಿ ಸ್ವಾಧೀನವಾಗಿದೆಯೆಂದು ಘೋಷಿಸುವುದು ಮತ್ತು ಅಂಥ
ಘೋಷಣೆಯನ್ನು ಬಳಸಿಕೊಂಡು ಹಣವನ್ನು ಪಡೆದು ಪರಿಹಾರಗಳ ಅಥವಾ ಲಾಭಗಳ ಭರವಸೆಯನ್ನು ಕೊಡುವುದು.

- ಅಥವಾ ವೈಯಕ್ತಿಕ ಲಾಭಕ್ಕಾಗಿ ದೈವದ ಕೋಪದ ಅಥವಾ ಆತ್ಮದ ಖಂಡನೆಯ ಭಯವನ್ನು
ಹುಟ್ಟಿಸುವುದು.

- ಹಣಕ್ಕಾಗಿ ಅಥವಾ ಇಲ್ಲವೇ ಉಚಿತವಾಗಿ ವಾಮಾಚಾರವನ್ನು (ಬ್ಲ್ಯಾಕ್ ಮ್ಯಾಜಿಕ್) ಅಥವಾ
ಮಾಟವನ್ನು ಇತರ ವ್ಯಕ್ತಿಗಳಿಗೆ ತೊಂದರೆಯುಂಟು ಮಾಡುವ ಉದ್ದೇಶದಿಂದ ಮತ್ತು ಅವರಿಗೆ
ತೀವ್ರವಾಗಿ ಭಯವುಂಟು ಮಾಡುವಂತೆ ಬಳಸುವುದು ಅಥವಾ ಮಾಡುವುದು.

- ದೇಹದೊಳಗೆ ಚುಚ್ಚಿಕೊಳ್ಳುವ ಕೊಕ್ಕೆಯಿಂದ ನೇತಾಡುವಂತಹ (ಸಿಡಿ) ಅಥವಾ ದೇಹದೊಳಗೆ
ತೂರಿಸಿಕೊಂಡಿರುವ ಕೊಕ್ಕೆಯಿಂದ ರಥವನ್ನು ಎಳೆಯುವಂತಹ ಸ್ವ ದಂಡನೆಯಿಂದ
ಗಾಯಗೊಳ್ಳುವ ಮತಾಚರಣೆಗಳನ್ನು ಆಚರಿಸುವಂತೆ ಒತ್ತಾಯಿಸುವುದು, ಹರಡುವುದು
ಅಥವಾ ಅದಕ್ಕೆ ಅನುಕೂಲ ಕಲ್ಪಿಸುವುದು.

- ಮಕ್ಕಳ ಕಾಯಿಲೆಯನ್ನು ವಾಸಿ ಮಾಡುವ ಹೆಸರಿನಲ್ಲಿ ಅವರನ್ನು ಮುಳ್ಳುಗಳ ಮೇಲೆ ಅಥವಾ
ಎತ್ತರದಿಂದ ಎಸೆಯುವ ಮೂಲಕ ಅವರನ್ನು ಹಾನಿಗೊಳಪಡಿಸುವಂತಹ ಆಚರಣೆಗಳನ್ನು
ಒತ್ತಾಯಿಸುವುದು, ಹರಡುವುದು ಮತ್ತು ಅಂತಹ ವಾತಾವರಣವನ್ನು ಕಲ್ಪಿಸುವುದು.

- ಮಾನವ ಘನತೆಯನ್ನು ಉಲ್ಲಂಘಿಸುವಂತಹ ಮಡೆ ಸ್ನಾನ ಅಥವ ಸದೃಶ ಆಚರಣೆಗಳಿಗೆ ಅನುಕೂಲ ಕಲ್ಪಸುವುದು.

- ಮೂಢನಂಬಿಕೆಯ ಹೆಸರಿನಲ್ಲಿ ಜಾತಿ ಅಥವಾ ಲಿಂಗದ ಆಧಾರದ ಮೇಲೆ ತಾರತಮ್ಯ
ಕಲ್ಪಿಸುವುದು.

- ಪಾದರಕ್ಷೆಗಳನ್ನು ಅವನ/ ಅವಳ ತಲೆಯ ಮೇಲೆ ಒಯ್ಯುವ ಅವಮಾನಕರ ಆಚರಣೆಗಳನ್ನು
ನೆರವೇರಿಸುವಂತೆ ಸಮಾಜದ ದುರ್ಬಲ ವರ್ಗಳಿಗೆ ಸೇರಿದ ಯಾರೇ ವ್ಯಕ್ತಿಯನ್ನು
ಒತ್ತಾಯಿಸುವುದು.

- ಆಹಾರ ವಿತರಣೆ ಮಾಡುವಾಗ ಜಾತಿಯ ಆಧಾರದ ಮೇಲೆ ಪಂಕ್ತಿ ಬೇಧ ಮಾಡುವಂತಹ
ಆಚರಣೆಗಳನ್ನು ಮಾಡುವುದು.


ಮಹಿಳೆಯರ ವಿರುದ್ಧ ಮೂಢನಂಬಿಕೆ ಆಚರಣೆಗಳ:-



-ಋತುಮತಿಯಾದ ಅಥವಾ ಗರ್ಭಿಣಿ ಮಹಿಳೆಯರನ್ನು ಒತ್ತಾಯಪೂರ್ವಕವಾಗಿ
ಒಂಟಿಯಾಗಿರಿಸುವುದು, ಗ್ರಾಮದೊಳಗೆ ಬಾರದಂತೆ ನಿಷೇಧಿಸುವುದು ಅಥವಾ ಬೇರೆ ಇರಿಸಲು
ಅನುಕೂಲ ಕಲ್ಪಿಸುವುದು.

- ಸಮಾಜದ ದುರ್ಬಲ ವರ್ಗಗಳ ಮಹಿಳೆಯರ ಮೇಲೆ ಬಣ್ಣದ ನೀರನ್ನು ಎರಚುವ, ಓಕುಳಿ,
ಮೂಲಕ ಅವರನ್ನು ಅವಮಾನಗೊಳಿಸುವುದು ಅಥವಾ ಅವರ ಘನತೆಗೆ ಧಕ್ಕೆಯುಂಟು
ಮಾಡುವುದು.

- ಪೂಜೆ ಅಥವಾ ಇತರ ಯಾವುದೇ ಹೆಸರಿನಲ್ಲಿ ಅವರನ್ನು ಬೆತ್ತಲೆಯಾಗಿ ಪ್ರದರ್ಶಿಸುವುದು,
ಉದಾಹರಣೆಗೆ ಬೆತ್ತಲೆ ಸೇವೆ ಅಂಥ ಅಮಾನವೀಯ ಮತ್ತು ಅವಮಾನಗೊಳಿಸುವ
ಆಚರಣೆಗಳಿಗೆ ಮಹಿಳೆಯರನ್ನು ಒಳಪಡಿಸುವುದು.

- ಗರ್ಭಿಣಿಯರನ್ನಾಗಿಸುವುದೂ ಸೇರಿದಂತೆ ಸಾಮಾಜಿಕ ಅಥವಾ ವೈಯಕ್ತಿಯ ಲಾಭವನ್ನು
ಉಂಟು ಮಾಡುವ ಭರವಸೆಯೊಂದಿಗೆ ಅತಿಮಾನುಷ ಶಕ್ತಿಯನ್ನು ಆಹ್ವಾನಿಸುವ ಮೂಲಕ
ಮಹಿಳೆಯರನ್ನು ಲೈಂಗಿಕವಾಗಿ ಶೋಷಣೆಗೆ ಒಳಪಡಿಸುವುದು.

- ಸಾರ್ವಜನಿಕ ಆರೋಗ್ಯಕ್ಕೆ ಹಾನಿಯುಂಟು ಮಾಡುವಂಥ, ಕತ್ತನ್ನು ಕಚ್ಚುವ ಮೂಲಕ
ಪ್ರಾಣಿಗಳನ್ನು ಕೊಲ್ಲುವ ಆಚರಣೆಗಳನ್ನು (ಗಾವು) ನೆರವೇರಿಸುವಂತೆ ಯಾರೇ ವ್ಯಕ್ತಿಯನ್ನು
ಒತ್ತಾಯಿಸುವುದು.



2)ಈ ಮುಂದಿನ ಅಪರಾಧಗಳು ಸಂಜ್ಞೇಯವಲ್ಲದ 
ಅಪರಾಧಗಳಾಗಿರತಕ್ಕದ್ದು:

- ಯಾರೇ ವ್ಯಕ್ತಿಯ ಜನನದ ಸಮಯ, ಸ್ಥಳದ ಆಧಾರದ ಮೇಲೆ ಅವನಿಗೆ ಕಳಂಕ
ಹಚ್ಚುವುದಕ್ಕೆ ಅಥವಾ ಅವನನ್ನು ತೆಗಳುವುದಕ್ಕೆ,

- ಭವಿಷ್ಯವಾಣಿ ನಿಜವಾಗುತ್ತದೆಂದು ನಂಬಿಸಿ ಅವಮಾನಕರ ಆಚರಣೆಗಳನ್ನು ವ್ಯಕ್ತಿಗಳಿಂದ ಮಾಡಿಸುವುದಕ್ಕೆ, ಅಥವಾ

- ವ್ಯಕ್ತಿಗಳಿಗೆ ತೀವ್ರ ಹಣಕಾಸು ನಷ್ಟ ಉಂಟಾಗುವುದಕ್ಕೆ
ಕಾರಣವಾಗುವ ಹಾನಿಕರ ಭವಿಷ್ಯ ನುಡಿಯುವುದು
-ಜ್ವಾಲೆಯನ್ನು ಬರೀ ಕೈಗಳಿಂದ ಮುಟ್ಟುವಂತೆ ಒತ್ತಾಯಿಸುವ ರೀತಿಯ ದೈಹಿಕ ಅಥವಾ
ಮಾನಸಿಕ ಹಾನಿಗೆ ಒಳಪಡಿಸುವ ಮೂಲಕ ಮಾಡುವ ಯಾರೇ ವ್ಯಕ್ತಿಯ ಅಪರಾಧವನ್ನು
ಅಥವಾ ನಿರಪರಾಧಿತ್ವವನ್ನು ಘೋಷಿಸುವುದು;

ವಿಧೇಯಕವು ದೈವನಂಬಿಕೆ, ಆಚರಣೆ ಮತ್ತು ಮೂಢನಂಬಿಕೆಗಳನ್ನು ಕೆಳಕಂಡಂತೆ ಪ್ರತ್ಯೇಕಗೊಳಿಸುತ್ತದೆ. 
ಮೂಢನಂಬಿಕೆಗಳನ್ನು ವಿರೋಧಿಸುವುದೆಂದರೆ, ಜನರ ಧಾರ್ಮಿಕ ನಂಬಿಕೆಗಳನ್ನು ಅಲ್ಲಗಳೆಯುವುದಲ್ಲ, ಹೀನಾಯಿಸುವುದಲ್ಲ. ಜನಸಾಮಾನ್ಯರು ತಮ್ಮ ಬದುಕಿನ ಅನುಭವಗಳಿಂದ, ಸುತ್ತಮುತ್ತಲ ಸಾಮಾಜಿಕ ಪ್ರೇರಣೆಗಳಿಂದ ಹಾಗೂ ಪ್ರಚೋದನೆಗಳಿಂದ ಹಲವಾರು ನಂಬಿಕೆಗಳನ್ನು ಬೆಳೆಸಿಕೊಂಡಿರುತ್ತಾರೆ. ನಂಬಿಕೆಗಳಿಂದ ಆಚರಣೆಗಳು ಹುಟ್ಟಿಕೊಳ್ಳುತ್ತವೆ. ನಂಬಿಕೆಗಳು ಮೂಲ ಅಸ್ತಿತ್ವ ಕಳೆದುಕೊಂಡಾಗ ಮೂಢನಂಬಿಕೆಗಳಾಗುವುದು ಇನ್ನೊಂದು ಹಂತ. ಸಾಮಾಜಿಕ ಅಸಮಾನತೆ, ವೈಚಾರಿಕ ಜ್ಞಾನದ ಅಲಭ್ಯತೆ, ಜ್ಞಾನ ಸಂವಹನದ ಕೊರತೆ ಮುಂತಾದ ಹಲವಾರು ಕಾರಣಗಳಿಂದ ಕೆಲವು ಮೂಢಾಚಾರಗಳು ಕಾರ್ಯಕಾರಣ ಸಂಬಂಧವಿಲ್ಲದೆಯೇ ನಂಬುವಂತೆ ಮಾಡುತ್ತವೆ. ಇಂಥ ನಂಬಿಕೆಗಳ ಮೇಲೆ ರೂಢಿಗೆ ಬಂದ ಆಚರಣೆಗಳು ಅರ್ಥಹೀನವಾಗಿರುತ್ತವೆ. ಇವು ಅಜ್ಞಾನವನ್ನು, ಅಂಧಶ್ರದ್ಧೆಯನ್ನು ಹೇರುವ ಮತ್ತು ಪೋಷಿಸುವ ಶಕ್ತಿಗಳ ಕೈಯಲ್ಲಿ ದುರ್ಬಳಕೆಯಾಗುತ್ತವೆ. 
ಮೂಢನಂಬಿಕೆ ಮತ್ತು ಧಾರ್ಮಿಕ ಶ್ರದ್ಧೆ ನಡುವಿನ ಅಂತರ ತೀರಾ ತೆಳುವಾದದ್ದಾದರೂ ಇವೆರಡರ ನಡುವಿನ ವ್ಯತ್ಯಾಸವನ್ನು ಗುರುತಿಸುವ ಕೆಲಸ ಅತ್ಯಂತ ಜರೂರಾಗಿ ಆಗಬೇಕಿದೆ. ಹೀಗೆ ಗರುತಿಸಲು ನಮಗೆ ಸಂವಿಧಾನಬದ್ಧವಾದ ಮೂಲಭೂತ ಕರ್ತವ್ಯಗಳು ಮತ್ತು ಮಾನವ ಹಕ್ಕುಗಳ ಪರಿಕಲ್ಪನೆಗಳು ಹಾಗೂ ನಮ್ಮ ಬಹುಮುಖಿ ಸಂಸ್ಕೃತಿಯ ನೆಲೆಗಳು ಒಂದು ವಿಶಾಲ ಭಿತ್ತಿಯನ್ನು ಒದಗಿಸಬಹುದು. ಯಾವ ಮೂಢನಂಬಿಕೆಯ ಆಚರಣೆಗಳು ದೈಹಿಕ ಮತ್ತು ಮಾನಸಿಕ ಹಿಂಸೆಗೆ ಕಾರಣವಾಗುತ್ತವಯೋ, ಮಾನವನ ಸಾಮಾಜಿಕ ಘನತೆ-ಗೌರವಕ್ಕೆ ಧಕ್ಕೆಯನ್ನುಂಟುಮಾಡುತ್ತವೆಯೋ ಹಾಗೂ ಆರ್ಥಿಕವಾಗಿ ಸಹಮಾನವರನ್ನು ಶೋಷಿಸಲು ವಂಚಕ ಶಕ್ತಿಗಳಿಂದ ಬಳಕೆಯಾಗುತ್ತವೆಯೋ, ಅವುಗಳನ್ನು ಈ ವಿಧೇಯಕದ ವ್ಯಾಪ್ತಿಯೊಳಗೆ ತರಬಹುದು.

ಜ್ಯೋತಿಷಿಗಳು, ಮುಲ್ಲಾಗಳು, ಬಾಬಾಗಳು, ಪಾದ್ರಿಗಳು, ಪುರೋಹಿತರು ಹೀಗೆ ಪಂಚಾಂಗವನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿ ಭವಿಷ್ಯ ಹೇಳುತ್ತೇವೆಂದು ಜನರನ್ನು ಶೋಷಿಸುವ ಮತ್ತು ಮೌಢ್ಯದ ಬೀಜ ಬಿತ್ತುವ ಎಲ್ಲರನ್ನೂ ಈ ಕಾಯ್ದೆಯಡಿ ಅಪರಾಧಿಗಳೆಂದು ಘೋಷಿಸಬಹುದಾಗಿದೆ.

***

ಬರಹ ಕೃಪೆ: ಸಮಾನ

Wednesday, 6 November 2013

ಕಪ್ಪು ಕಂದೀಲು: ಹರವು ಸ್ಪೂರ್ತಿ ಗೌಡ




1.
ದಾರಿಗಾಗಿ ಹಚ್ಚಿದ ಕಂದೀಲು
ಅದರ ಬೆಳಕಲ್ಲೇ
ಹಳದಿ ಮೈ ಬಿಸಾಡಿಕೊಂಡಿದೆ
ಬಂದು ಬಿಡು..
ಕಂದೀಲ ಕಪ್ಪ ಕಣ್ಣಿಗೆ ತೀಡಿ
ಹೆಬ್ಬೆರಳ ಮೇಲೆ ನಿಂತಿದ್ದೇನೆ











2
ಹಚ್ಚಿಬಿಟ್ಟೆ ಕಂದೀಲ
ಹೆಚ್ಚು ಉರಿ ಮೈಯೊಳಗೆ
ಬೇಗೆ..
ಬೆರಳ ತುದಿ ಚಕ್ರಕ್ಕೆ ಬೇಕು
ನಿನ್ನದೇ
ಗಟ್ಟಿ ಎದೆಮೇಲಿನ ಕೂದಲು
ಎಣಿಸಲು..
ನೀ ಹಚ್ಚಿದ ಕಂದೀಲ ಬೆಳಕಲಿ












3.
ದೀರ್ಘವಾಗಿ ಒರಗಿಬಿಟ್ಟೆ
ರೆಡಾಕ್ಸೈಡ್ ನೆಲದ ಮೇಲೆ
ಭಾರವೆಲ್ಲಾ ಇಳಿಸುವಂತೆ
ಮಂದ ಬೆಳಕಾದರೇನು
ಬಿಟ್ಟು ಹೋಗಿಲ್ಲ
ನೀ ಹಚ್ಚಿದ ಕಂದೀಲು





Tuesday, 5 November 2013

ವಿದ್ಯಾ ಕುಂದರ್ಗಿ ಕವಿತೆ



ಸಾಬರಮತಿಯಲ್ಲೀಗ... 



 

 
















ಗಾಂಧೀ ಎದೆಯೊಳಗೆ 
ಅಂತರ್ಗಾಮಿಯಾಗಿದ್ದ
ಸಾಬರಮತಿಯೀಗ ಸ್ಥಾವರ .
ಜುಳುಜುಳು ಹರಿಯುವುದಿಲ್ಲ 
ಅಹಿಂಸೆಯ ವಿಚಾರಧಾರೆ…..
ನಿಂತೇ ಕತ್ತಿ ಮಸೆಯುತ್ತಿದೆ
ತಿಳಿಯಾಗಿದ್ದ ಹೃದಯವೀಗ
ತಿಪ್ಪೆಯಾಗಿದೆ ಮೇಲೆತ್ತದಂತೆ


ಕೈಕೋಲು,ಕನ್ನಡಕ
ತಟ್ಟೆ,ತಂಬಿಗೆಗಳು
ಶೋಕೇಸ್ನ ಅಟ್ಟ ಏರಿವೆ,
ಸೊಂಟದ ತಾಳಬಡಿತ
ಎಣಿಸುತ್ತಿದ್ದ ಟಿಕ್ ಟಿಕ್….
ಮುಳ್ಳಿನ ಕಾಲಲ್ಲಿ ನೆಗ್ಗಿಲ ಮುಳ್ಳು 
ನಂಜು ಕಾರಿದೆ,
ಹೃದಯ ಬಡಿತ ನಿಂತು ಹೋಗಿದೆ
ಆತ್ಮಕತೆಗಳು……ಮಾತ್ರ
ಮಾರಾಟವಾಗುತ್ತಿವೆ.

ಏನೇ ಆದರೂ 
ಬೋಳು ಭಿತ್ತಿಯ ಕಸ್ತೂರಬಾ 
ಕೋಣೆ,ಕಪಾಟುಗಳು ಮಾತ್ರ
ಒಂಚೂರೂ ಕಸ,ಕಡ್ಡಿ 
ಇಲ್ಲದಂತೆ ಶುಭ್ರವಾಗಿವೆ…..

ಸತ್ಯದೊಂದಿಗಿನ ಪ್ರಯೋಗ ….
ನಿಸ್ಸಂದೇಹ ಸಜೀವವಾದಂತಿದೆ.



***