Thursday, 29 August 2013

ತುಂಬಿಕೊಂಡ ಖಾಲಿ



ಖಾಲಿ ಎಂದು
ತೋರಿಸಿದ ಮನೆ
ಸೇರಿಕೊಂಡೆ
ಜೋಡಿಹಕ್ಕಿಗಳ ಚಿತ್ರ ತೂಗಿದ್ದ ಜಾಗದಲ್ಲಿ
ಚಾಚಿದ ಎರಡು ಮೊಳೆಗಳು,
ಬಿಳುಚಿಕೊಂಡ ಚೌಕಾಕಾರ
ಗೋಡೆತುಂಬ ಬಾಲಬರಹ
ಒರಗಿ ಕುಳಿತಲ್ಲಿ ಜಿಡ್ಡುಮೂಡಿಸಿದ
ತಲೆ, ಬೆನ್ನು
ಅಡಿಗೆಕಟ್ಟೆಯ ದಂಡೆ ತುಂಬ ಪಾಕಕಲೆ
ಮಂಚ ಇಟ್ಟಲ್ಲಿ
ಮಾಸದ ನೆಲ
ಹಣತೆ ಉರಿದಲ್ಲಿ
ಮಸಿದೀಪ
ಕಾಲ ಬಿಟ್ಟುಹೋದ
ಕ್ಯಾಲೆಂಡರು
ಫ್ಯಾನು ಕಿತ್ತುಕೊಂಡ
ಜೀವತಂತು

ತುಂಬಿದ ಮನೆಯಲ್ಲಿ
ಧ್ಯಾನ ಸಾಧಿಸೀತೆ
ಅಥವಾ
ಎಲ್ಲವನ್ನೂ
ಖಾಲಿಮಾಡಿಕೊಳ್ಳಬೇಕೆ?

***

Wednesday, 28 August 2013


 

ಸಾಲುಗಳು

1. 

ನಾಲಿಗೆಗೆ
ನುಣ್ಣನೆಯ
ಅನ್ನ ದಕ್ಕಲು
ದೇಹವಿಡೀ
ಮುಳ್ಳಾಗಿ
ಕಾಯಬೇಕೇ...?


 



2. 

ಸೊಬಗ
ಸವಿಯುವಾಗ
ಏಕಾಂಗಿತನದ
ಅರಿವೂ
ಇರಲಿ.

 


3. 

ನೀ ಬಂದಾಗ ಬಾಗಿಲಿದ್ದರೆ
ತೆರೆಯುವವರೆಗೆ
ಕಾಯಬೇಡ
ಒಳಗೆ
ಬಂದುಬಿಡು.

 



4. 


ಕಂಬನಿಯೊ
ಆನಂದಬಾಷ್ಪವೊ
ನನದಲ್ಲ-
ನಾನು
ನಿರ್ಗುಣಿ.





5. 

ನಾವು
ತೇವ ಕಾದಿದ್ದು ಇಲ್ಲೆ
ನೆಲ, ಮಣ್ಣು
ಸಾರ
ವಿಸ್ತಾರಗಳನೆಲ್ಲ
ಸಾಪೇಕ್ಷದ
ಗೋಡೆಗೆ ಅಂಟಿಸಿ-
ಬಿಟ್ಟಿದ್ದೇವೆ.






6.
 
ನಿಂತ ಗಡಿಯಾರ ಕೂಡ
ದಿನದಲ್ಲಿ
ಎರಡು ಬಾರಿ
ಸರಿಯಾದ ಸಮಯ
ತೋರಿಸುತ್ತೆ-
ಹಾಗಾಗಿ
ಇದು
ಕವಿತೆಯಲ್ಲ!
 
 
 
 
 
 
7. 

ಹರಿಯುವಾಗ
ಎದುರುಗಟ್ಟಿದರೆ
ಬಳಸಿ ತಬ್ಬದೆ
ಗತಿಯಿಲ್ಲ.
 
 
 
 
 ***
 
 
 
 

Tuesday, 27 August 2013

ಯಾಕೆ ಕಾಡುತ್ತೀಯ ಮಾಧವ?

Metikurke Ramaswamy Kamala

ಎಂ. ಆರ್. ಕಮಲಾ 














ಯಾಕೆ ಕಾಡುತ್ತೀಯ ಮಾಧವ 
ಜೋಪಡಿಯ ಈ ಬಡ ಗೋಪಿಕೆಯ? 

ವೈಶಾಖದ ಬಿರುಬಿಸಿಲಲಿ 
ಕೊರೆವ ಮಾಗಿ ಮಂಜಿನಲಿ
ಯಮುನೆಯಲೆಯಲೆಯಲ್ಲಿ
ಮಡಿಲ ಕಂದನಲಿ
ನೀನೆ ನಿಲ್ಲುತ್ತೀಯ
ಯಾಕೆ ಕಾಡುತ್ತೀಯ?

`ಅತ್ತೆ ಮಾವರಿಗಂಜಿ, ಸುತ್ತೇಳು ನೆರೆಗಂಜಿ'
ಬದುಕ ಸವೆಸುವವಳಿಗುಂಟೆ
ರಾಧಿಕೆಯ ಎದೆಗಾರಿಕೆ?
ಕೊಳಲ ದನಿಗೆ ಕರೆ ಕರೆಗೊಂಡರೂ ಎದೆ
ಮೊರೆತ ನಿಲ್ಲಿಸಬೇಕು
ಲಯಬದ್ಧ ಕಡೆಗೋಲು ಕುಣಿತಕ್ಕೆ
ಸಿಡಿದರು ನೂರು ಜತಿಗಳು
ತಾಳ ತಪ್ಪಿಸಬೇಕು
ಹೆಜ್ಜೆ ಗೆಜ್ಜೆಗಳುಲಿತ
ಯಮುನೆಗಪ್ಪಳಿಸದಂತೆ
ಮೌನವಾಗಿಸಬೇಕು

ಯಾಕೆ ಕಾಡುತ್ತೀಯ ಮಾಧವ
ಯಮುನೆಯುದ್ದಕ್ಕೂ ಹರಿದ ಪ್ರೀತಿಯ
ಪುಟ್ಟ ಎದೆಗೊಡದಲ್ಲಿ ಮುಚ್ಚಿಟ್ಟು
ದಿಟ್ಟಿಸುತ ನಿಟ್ಟುಸಿರಿಡುವ
ಜೋಪಡಿಯ ಈ ಗೋಪಿಕೆಯ???


***
ಸಿದ್ಧರಾಮ ವಚನ



ಕೈಲಾಸ ಕೈಲಾಸವೆಂದು ಬಡಿದಾಡುವ ಅಣ್ಣಗಳಿರಾ

ಕೇಳಿರಯ್ಯಾ

ಕೈಲಾಸವೆಂಬುದು ಭೂಮಿಯೊಳಿರುವ ಹಾಳುಬೆಟ್ಟ

ಅಲ್ಲಿರುವ ಮುನಿಗಳೆಲ್ಲ ಜೀವಗಳ್ಳರು

ಅಲ್ಲಿರ್ದ ಚಂದ್ರಶೇಖರನು ಬಹು ಎಡ್ಡ

ಇದರಾಡಂಬರವೇಕಯ್ಯಾ

ನಮ್ಮ ಪುರಾತನರಿಗೆ ಸದಾಚಾರದಿಂದ ವರ್ತಿಸಿ

ಲಿಂಗಾಂಗ ಸಾಮರಸ್ಯವ ತಿಳಿದು

ನಿಮ್ಮ ಪಾದಪದ್ಮದೊಳು ಬಯಲಾದ ಪದವೆ ಕೈಲಾಸವಯ್ಯಾ

ಕಪಿಲಸಿದ್ಧಮಲ್ಲಿಕಾರ್ಜುನ.


***

Monday, 26 August 2013

ಕಾಲವೆಂದರೆ...

ಪ್ರವರ ಕೊಟ್ಟೂರ್

Pravara Kottur


ಕಾಲವೆಂದರೆ
ಮರದ ಪೊಟರೆಗಳಲ್ಲಿ
ತುಂಬಿದ ಕೆಂಪು ಮಣ್ಣು
ಹಾರಲಾರದ ಹಕ್ಕಿ
ಊಳಿಡಲಾಗದ ಸೀಳು ನಾಯಿ
ಹಸಿರ ಕಾಯಲಾರದ ತಂತಿಬೇಲಿ.

ಕಾಲವೆಂದರೆ ನನಗೆ
ಕಾಲಿಗೆ ಚುಚ್ಚಿದ ಜಾಲಿ ಮುಳ್ಳು
ನೆತ್ತಿಯಲೇ ಉರಿವ ಆಕಾಶ
ಸುಳ್ಳು ಹೇಳುವ ಗಾಂಧಿ, ಗುಂಡು ಹಾರಿಸದ ಪಿಸ್ತೂಲು
ತುಕ್ಕು ಹಿಡಿದು ಮೊಂಡಾದ ತಲ್ವಾರ್
ಗುಂಡಿಗೆ ಕಳೆದುಕೊಂಡ ಅರ್ಧ ಮೀಸೆಯ ಹಿಟ್ಲರ್
ಸೋತು ಬಿಡುವ ಉಸಿರು....

ಅಮೇರಿಕಾದ ಬೂಟುಗಾಲುಗಳ ಮೇಲೆ
ಬಿದ್ದ ಜೊಲ್ಲು
ಬೊಗಸೆಯಲ್ಲಿ ಬಿಳಿಯರು ಬಿಸಾಡಿದ
ಚಿಲ್ಲರೆ ಕಾಸು
ರಕ್ಕಸ ಕುಣಿತದ ಬಾಂಬು
ಅಂಗೈ ಕಾಣದಷ್ಟು ಹೊಗೆ.

ಕಾಲವೆಂದರೆ?
ಕುರಿಯ ದ್ವನಿಯಲ್ಲಿ ಬಡ ಬಡಿಸುತ್ತೇನೆ
ಕೆರೆದುಕೊಂಡಾಗ ಮಣ್ಣು ತುಂಬಿದ ಉಗುರು,
ದೇಶರ ಹೆಸರೇನು?
ಇಂಡಿಯಾ!! ಎಂದು ಬೊಬ್ಬಿಟ್ಟಿತು ಮಗು.

ಕಾಲವೆಂದರೆ ನಮ್ಮ ತನದ ಸಾವು
ಅಂಗಾತ ಮಲಗಿದ ಬೆಳಕು!

***

Saturday, 24 August 2013

ದುಃಖ 

 
 

 


ತಮಟೆ ಬಡಿದು ಆಕ್ರಮಣಕಾರರನ್ನು ಬರಮಾಡಿಕೊಳ್ಳುವ
ನಾಡಿನ ಬಗೆಗೆ ದುಃಖವಾಗುತ್ತಿದೆ ನನಗೆ.
ನಿದ್ರೆಯಲ್ಲಿ ಮಾತ್ರ ಆಕ್ರಮಣವನ್ನು ದ್ವೇಷಿಸುತ್ತ
ಎಚ್ಚರದಲ್ಲಿ ಅದನ್ನು ಒಪ್ಪಿಕೊಂಡಿರುವ
ನಾಡಿನ ಬಗೆಗೆ ದುಃಖವಾಗುತ್ತಿದೆ ನನಗೆ.
ಬಲಿಗಂಬದ ಮೇಲೆ ಕೊರಳನ್ನಿಡುವ ತನಕ
ದಂಗೆ ಏಳದ ನಾಡನ್ನು ಕಂಡು
ದುಃಖವಾಗುತ್ತಿದೆ ನನಗೆ..

- ಖಲೀಲ್ ಗಿಬ್ರಾನ್

ಅನುವಾದ: ಡಾ.ಎಚ್.ಎಸ್ ಅನುಪಮಾ
'ಕಾಮಸೂತ್ರ'ದ ಸಾಲುಗಳು

ಗಂಗಾಧರ ಚಿತ್ತಾಲ








ತೆರೆದೆ ಇದೆ ಬಾಗಿಲವು, ನೇರ ಒಳ ಬಾ ಎಂದೆ
ನನ್ನ ಎದೆಕದವನೂ ತೂರಿ ನೀ ಒಳಬಂದೆ
ಏನು ಸುಮಧುರ ಸಹಜವೀ ಪ್ರವೇಶ.

ಬೇಕಾದ್ದ ತಿನು ಎಂದೆ
ನನ್ನ ತೋಳುಗಳಲ್ಲಿ ಇಡಿಯ ನೀನು
ಬೇಕಾದ್ದ ತಕೋ ಎಂದೆ
ನಿನ್ನ ತೋಳುಗಳಲ್ಲಿ ಇಡಿಯ ನಾನು.

ಆ ಒಂದು ಗಳಿಗೆಯಲಿ ಏನು ಗೈದರು ಮಾಫಿ
ಕಾಡಿದರು ಬೇಡಿದರು ಹಿಡಿಹಿಡಿದು ಆಡಿದರು ಮಾಫಿ
ಸಂದಿಯಲಿ ಮೂಲೆಯಲಿ ಕೈಹಾಕಿ ಬೆದಕಿದರು
ಯಾವ ಗುಟ್ಟನು ಕೆದಕಿದರು ಮಾಫಿ.

ಬರಿಗೈಲೆ ಬಂದು ಪರೆಕಳಚಿ ನಿಂತು
ಬೇಕಾದ್ದ ತಿನಿಸಿ ಬೇಕಾದ್ದ ತಿಂದು

ಕೊಟ್ಟುದೆನಿತು ನಾವು ಕೊಂಡುದೆನಿತು
ಉಣ್ಣಿಸಿದುದೆನಿತು ಉಂಡುದೆನಿತು
ಕಣ್ಮುಚ್ಚಿಯೂ ಕೂಡ ಕಂಡುದೆನಿತು
ಮಾತಿಲ್ಲದೆಯು ಕೂಡ ಅಂದುದೆನಿತು.

ಅಂದು ಬೆತ್ತಲೆ ರಾತ್ರಿ

ಒಡಲಿಗೊಡಲನು ಬೆಸೆತು ನಿನ್ನ ಬಳಿ ಸಾರೆ
ಏಕಾಂತಸಮ್ಮತಿಯ ಆ ಒಂದು ಕ್ಷಣದಿಂದೆ
ಈ ಜಗತ್ತೇ ಬೇರೆ.

ಯಾವ ಹಿಗ್ಗಿನ ಸೆಲೆಯೊ ನಮಗೆ ಸಿಲುಕಿ
ಇಳೆಯಮೂಲಕು ನಮ್ಮ ಬೇರು ನಿಲುಕಿ

ಭೂಗರ್ಭ ಸುರಿದಿತ್ತು ಜೊಲ್ಲುಬಾಯಿ
ನಾವಂದು ಮನುಕುಲದ ತಂದೆತಾಯಿ.


***