Tuesday 25 February 2014

ಪ್ರೇಮ

ಖಲೀಲ್ ಗಿಬ್ರಾನ್
ಅನುವಾದ: ಡಾ.ಎಚ್.ಎಸ್ ಅನುಪಮಾ
 
ಅವರು ಹೇಳುತ್ತಾರೆ, ನರಿ ಮತ್ತು ಹೆಗ್ಗಣ
ಒಂದೇ ತೊರೆಯಿಂದ ನೀರು ಕುಡಿಯುತ್ತವೆ
ಎಲ್ಲಿ ಸಿಂಹವೂ ಬಂದು ನೀರು ಕುಡಿಯುವುದೋ ಅಲ್ಲಿ..

ಅವರು ಹೇಳುತ್ತಾರೆ, ಹದ್ದು ಮತ್ತು ರಣಹದ್ದು 
ಸತ್ತ ಪ್ರಾಣಿಯ ಅದೇ ಮಾಂಸದಲ್ಲಿ ಕೊಕ್ಕು ತೂರಿಸುತ್ತವೆ
ಆದರೂ ಸತ್ತ ವಸ್ತುವಿನೆದುರಿಗೆ
ಒಂದರೊಡನೊಂದು ಶಾಂತಿಯಿಂದಿವೆ..

ಯಾವ ದೈವೀ ಹಸ್ತ 
ನನ್ನ ಬಯಕೆಗಳಿಗೆ ಲಗಾಮು ಹಾಕಿದೆಯೋ,
ನನ್ನ ಹಸಿವು, ದಾಹಗಳನ್ನು 
ಘನತೆ ಮತ್ತು ಹೆಮ್ಮೆಯನ್ನಾಗಿಸಿದೆಯೋ,
ಓ, ಅಂಥ ಪ್ರೇಮವೇ,
ನನ್ನೊಳಗಿನ ಅಚಲ ಮತ್ತು ಬಲಶಾಲಿ
ರೊಟ್ಟಿ ತಿಂದು ವೈನ್ ಕುಡಿದು
ನನ್ನೊಳಗಿನ ದುರ್ಬಲನನ್ನು ಆಮಿಷಗೊಳಿಸದೇ ಇರಲಿ.
ಅದಕ್ಕಿಂತ ನಾ ಹಸಿದು ಉಪವಾಸ ಬೀಳಲಿ, 
ನನ್ನ ಹೃದಯ ದಾಹದಿಂದ ಒಣಗಲಿ,
ನಾ ಮರಣಿಸಿ ನಾಶವಾಗಲಿ,
ಅದಕ್ಕೂ ಮುನ್ನ ನಾನು ಕೈ ಚಾಚುತ್ತೇನೆ
ನೀನು ತುಂಬಿಸದ ಬಟ್ಟಲಿಗೆ,
ನೀನು ಹರಸಿ ನೀಡದ ಆ ಪಾತ್ರೆಗೆ.

Monday 10 February 2014

ಮಗೂ...

ಡಾ. ಎಚ್.ಎಸ್ ಅನುಪಮಾ
 
 
ಮಗೂ,
ನಿನ್ನ ಎಳೆಯ ಬೆರಳು ನನ್ನ ಕೈಬಿಡಿಸಿ ಓಡಿದಾಗ
ಕೊರಳ ಬಳಸಿದ ಕೈ ಕಣ್ಣಾಮುಚ್ಚಾಲೆ ಆಡುವಾಗ
ಉದುರಿಬಿದ್ದ ಅಂಗಿ ಗುಂಡಿ ನೀನೇ ಹೊಲಿದುಕೊಳುವಾಗ
ಬಿದ್ದಾಗ ಅಮ್ಮಾ ಎನದೆ ತುಟಿಕಚ್ಚಿ ಎದ್ದು ಸಾವರಿಸಿಕೊಳುವಾಗ 
ನೀ ಬೆಳೆದ ಅನುಭವವಾಯಿತು.

ಬಚ್ಚಲ ಬಾಗಿಲ ಚಿಲಕ ಸರಿಸಿ ನಾನೇ ಮೀಯುವೆ ಎಂದಾಗ
ಚಂದವಾಯಿತೆ ಎಂದು ನನ್ನೆದುರೆ ಕನ್ನಡಿಯ ಕೇಳಿದಾಗ 
ನನ್ನ ಭಯಗಳಿಗೆ ನಿನ್ನ ಉಡಾಫೆಯ ನಗು ಉತ್ತರವಾದಾಗ
ಗೆಳತಿಯೊಡನೆ ಮಾತು ಪಿಸುದನಿಯ ಗುಟ್ಟುಗಳಾದಾಗ
ನಾನು ಅನಾಥೆ ಎನಿಸಿತು.

ಏರತೊಡಗಿದ ಮೆಟ್ಟಿಲು ಎತ್ತರ
ಇಳಿಯತೊಡಗಿದ ಗುಂಡಿ ಆಳ
ಎನಿಸುವಾಗಲೇ ಕರೆದಂತಾಯಿತು,
‘ಮಗೂ..’
ಹಿಂತಿರುಗಿದೆ,
ಬೆನ್ನು ಬಾಗಿದ ಅಮ್ಮ ಬಾಗಿಲ ಹಿಡಿದು ಹೊಸಿಲ ಮೇಲೆ ನಿಂತಿದ್ದಳು
ನೈಟಿ ಉಟ್ಟವಳ ಕೈಲಿ ಉಡಲಾಗದ ಹದಿನಾರು ಮೊಳ ಸೀರೆ ಗಂಟು..

ಮಗೂ, ಹೀಗೇ,
ಬೆಳೆಯುವುದೆಂದರೆ 
ಎದುರಿಗಿದ್ದೂ ಕಾಣದಾಗುವುದು
ಕಾಣದಂತೆ ಜೊತೆ ನಡೆಯುವುದು

ಚಲಿಸುತ್ತ ಹರಡಿಕೊಳುವುದು
ಹರಡುತ್ತ ಆಳ ಇಳಿಯುವುದು

ಮತ್ತೆ ಆವಿಯಾಗುವುದು ಮತ್ತೆ ಹನಿಯಾಗುವುದು
ಹನಿಯೊಳಗೆ ಸೂರ್ಯನ ಅಡಗಿಸಿಟ್ಟುಕೊಳುವುದು..