Monday, 10 February 2014

ಮಗೂ...

ಡಾ. ಎಚ್.ಎಸ್ ಅನುಪಮಾ
 
 
ಮಗೂ,
ನಿನ್ನ ಎಳೆಯ ಬೆರಳು ನನ್ನ ಕೈಬಿಡಿಸಿ ಓಡಿದಾಗ
ಕೊರಳ ಬಳಸಿದ ಕೈ ಕಣ್ಣಾಮುಚ್ಚಾಲೆ ಆಡುವಾಗ
ಉದುರಿಬಿದ್ದ ಅಂಗಿ ಗುಂಡಿ ನೀನೇ ಹೊಲಿದುಕೊಳುವಾಗ
ಬಿದ್ದಾಗ ಅಮ್ಮಾ ಎನದೆ ತುಟಿಕಚ್ಚಿ ಎದ್ದು ಸಾವರಿಸಿಕೊಳುವಾಗ 
ನೀ ಬೆಳೆದ ಅನುಭವವಾಯಿತು.

ಬಚ್ಚಲ ಬಾಗಿಲ ಚಿಲಕ ಸರಿಸಿ ನಾನೇ ಮೀಯುವೆ ಎಂದಾಗ
ಚಂದವಾಯಿತೆ ಎಂದು ನನ್ನೆದುರೆ ಕನ್ನಡಿಯ ಕೇಳಿದಾಗ 
ನನ್ನ ಭಯಗಳಿಗೆ ನಿನ್ನ ಉಡಾಫೆಯ ನಗು ಉತ್ತರವಾದಾಗ
ಗೆಳತಿಯೊಡನೆ ಮಾತು ಪಿಸುದನಿಯ ಗುಟ್ಟುಗಳಾದಾಗ
ನಾನು ಅನಾಥೆ ಎನಿಸಿತು.

ಏರತೊಡಗಿದ ಮೆಟ್ಟಿಲು ಎತ್ತರ
ಇಳಿಯತೊಡಗಿದ ಗುಂಡಿ ಆಳ
ಎನಿಸುವಾಗಲೇ ಕರೆದಂತಾಯಿತು,
‘ಮಗೂ..’
ಹಿಂತಿರುಗಿದೆ,
ಬೆನ್ನು ಬಾಗಿದ ಅಮ್ಮ ಬಾಗಿಲ ಹಿಡಿದು ಹೊಸಿಲ ಮೇಲೆ ನಿಂತಿದ್ದಳು
ನೈಟಿ ಉಟ್ಟವಳ ಕೈಲಿ ಉಡಲಾಗದ ಹದಿನಾರು ಮೊಳ ಸೀರೆ ಗಂಟು..

ಮಗೂ, ಹೀಗೇ,
ಬೆಳೆಯುವುದೆಂದರೆ 
ಎದುರಿಗಿದ್ದೂ ಕಾಣದಾಗುವುದು
ಕಾಣದಂತೆ ಜೊತೆ ನಡೆಯುವುದು

ಚಲಿಸುತ್ತ ಹರಡಿಕೊಳುವುದು
ಹರಡುತ್ತ ಆಳ ಇಳಿಯುವುದು

ಮತ್ತೆ ಆವಿಯಾಗುವುದು ಮತ್ತೆ ಹನಿಯಾಗುವುದು
ಹನಿಯೊಳಗೆ ಸೂರ್ಯನ ಅಡಗಿಸಿಟ್ಟುಕೊಳುವುದು..

1 comment:

  1. ತುಂಬಾ ಇಷ್ಟವಾಯಿತು ಕವಿತೆ. ಬದುಕಿನ ಎಷ್ಟೆಲ್ಲಾ ಪಲ್ಲಟಗಳನ್ನು ಒಂದೇ ಬೀಸಿನಲ್ಲಿ ಹಿಡಿದಿಡಬಹುದು.....!!

    ReplyDelete