Thursday 31 October 2013

ಎರಡು ಕವಿತೆಗಳು: ಡಾ. ಜಿ. ಕೃಷ್ಣ

ದೃಷ್ಟಿ 



















ನಿನ್ನೆ ಕನ್ನಡಕ ಬದಲಾಯಿಸಿದೆ
ದೂರ ದೃಷ್ಟಿ ಹತ್ತಿರದ್ದು
ಎರಡೂ ಎಕ್ಕುಟ್ಟಿದ್ದವು

ದ್ವಿದೃಷ್ಟಿಯ
ಚಸ್ಮ
ಮೂಗನೇರಿ ಕುಳಿತಾಗ
ನನ್ನ ದಡ್ಡ ಕಣ್ಣುಗಳು
ಹತ್ತಿರದ್ದನ್ನು
ದೂರದಲ್ಲಿ
ದೂರದ್ದನ್ನು ಹತ್ತಿರದಲ್ಲಿ
ಕೀಲಿಸಲು ಹೋಗಿ
ಎರಡೂ ಕಲಸು
ಕಣ್ಣಿಗೆ
ಪಾಠ ಹೇಳಬೇಕಿದೆ
ದೂರ
ಹತ್ತಿರಗಳೆರಡೂ
ನಿಚ್ಚಳವಾಗಬೇಕಿದೆ.







ಅಂದಿನ ಚಿತ್ರ





















ಅಂದು
ಶಿಲಾಯುಗದ ಹೆಸರಿಲ್ಲದ
ಒಂದು ದಿನ
ಬೆಳಗಿಡೀ ಸುತ್ತಿ
ಬೇಟೆಯಾಡಿದ್ದ
ಹಸಿ ಹಸಿ ತಿಂದು
ಸಂಜೆ
ಹೊತ್ತು ಹೋಗದ್ದಕ್ಕೆ
ಕಲ್ಲುಬಂಡೆಯ ಮೇಲೆ
ನಾಕು ಚಿತ್ರ ಬರೆದೆ
ಮರೆತೆ
ಇವತ್ತು ಹಬ್ಬದಡಿಗೆ ಉಂಡ
ತೂಕಡಿಕೆಯಲ್ಲಿ
ಕನವರಿಸಿದೆನಂತೆ
ಮಗಳು ಎಬ್ಬಿಸಿ
ಸೀದಾ ಅಲ್ಲಿಗೇ ಕರೆದೊಯ್ದು
ನಿಲ್ಲಿಸಿದಾಗ
ಅವಳ ಕೈಯ
ಬಿಸಿಯಲ್ಲಿ
ಆ ಚಿತ್ರಗಳೆಲ್ಲ ಮಲಗಿದ್ದವು
ಎಬ್ಬಿಸಲಿಲ್ಲ
ಮೇಲೊಂದು 
ಹುಲ್ಲುಗರಿಕೆ ಹೊದಿಸಿ
ಸದ್ದಿಲ್ಲದೆ
ವಾಪಾಸು ಬಂದೆವು.
ಆ ಪೂಜಿತೆಯರು ನಾವೇ ಇರಬೇಕು..!


ಸುಧಾ ಚಿದಾನಂದಗೌಡ
  Sudha Chidanandgowd


 


ಗಾಳಿ ಬೀಸಿದಾಗೊಮ್ಮೆ
ಸೆರಗು ಸಂಭಾಳಿಸಲು,
ಮಳೆ ಜಿನುಗಿದರೆ ಹನಿ ತಾಕದಿರಲು,
ಒಲೆ ಉರಿಯುವಾಗ ಬೆರಳು ಸುಡದಿರಲು
ನಡೆಸಿದೇವೆ ಅನುಕ್ಷಣದ ಹೋರಾಟ
ನೀವು ಸ್ತುತಿಸುವ ಶಕ್ತಿಸ್ವರೂಪಿಣಿಯರು
ನಾವೇ ಇರಬೇಕು

 
ಎದೆಯ ಉಬ್ಬು ಬಚ್ಚಿಡಲು
ಸೊಂಟ ಬಳುಕದಂತೆ ನಡೆಯಲು
ಚಪ್ಪಲಿಯೊಳಗಿನ ಬೆರಳು
ಯಾರ ಕಣ್ಣನ್ನೂ ಕೋರೈಸದಿರಲಿ
ಎಂದು ಹಾರೈಸಿಕೊಂಡು
ಮೈಗೆ ಮೈಗಾವಲಾಗಿಸಿಕೊಂಡು
ನೂರು ಕಂಗಳ ಕಾವಲಿನ ನಡುವೆ
ಬದುಕುಳಿಯಲು ನಡೆಸಿದೇವೆ
ಅನುಗಾಲ ಯತ್ನ
ನೀವು ಹೇಳುವ
ಕುಚೋನ್ನತೇ ಕುಂಕುಮರಾಗಶೋಭಿತೆ
ಇತ್ಯಾದಿಯರು ನಾವೇ ಇರಬೇಕು

ಶಬ್ದವಾದೊಡನೆ ಬೆಚ್ಚಿಕೊಂಡು,
ಇರುಳಾದೊಡನೆ ನಾಲ್ಕುಗೋಡೆ ನೆಚ್ಚಿಕೊಂಡು
ಹಗಲು ಹರಿದ ಬಟ್ಟೆಯನು ಬಿಗಿಯಾಗಿರಿಸಿ
ಹಿರಿ-ಕಿರಿ ಪರದೆಯಲಿ
ಯಾವಳೋ ಮಾನಗೇಡಿಯ
ಮೈಕುಣಿತಕ್ಕೆ ಹುಚ್ಚೆದ್ದ ಮನಮರ್ಕಟದ
ಮೃಗತೃಷೆಗೆ ಸಮಿತ್ತಾದ
ಪಕ್ಕದ್ಮನೆ ಬಾಲೆ, ಹಿಂದಿನ್ಮನೆ ಅಜ್ಜಿ
ನಾವೇ ಇರಬೇಕು
ನೀವು ಹೇಳುವ
ಪ್ರಚೋದನಕಾರಿ ವೇಷಧಾರಿಣಿಯರು

ಗಿಲೀಟು ಒಡವೆ, ರೇಷ್ಮೆದುಕೂಲ
ಕುದುರೆಸಾರೋಟಿನ ಕನಸಿನಲಿ ಕರಗಿ
ಕಿರುಗೋಣೆಯನೆ ಅರಮನೆಯೆಂದು ಭ್ರಮಿಸಿ
ಕಂಡಕಂಡ ಗಂಡಸರನ್ನು
ಚಿಗಪ್ಪಾ, ದೊಡಪ್ಪಾ, ಅಣ್ಣಾ, ಅಪ್ಪಾ
ಕೂಗಿ ಸಂಬಂಧಗಳ ನೆಟ್ಟಗಿರಿಸಲು ಹೆಣಗಿ
ಚರಂಡಿ ನೀರಿನಲಿ ಬೊಗಸೆಯಾಡಿಸಿ
ಜೀವಜಲ ಹುಡುಕುವವರು
ನೀವು ಹೇಳುವ
ಗಂಗೆ, ಜಮನೆ, ಸಿಂಧು, ಕಾವೇರಿ
ನಾವಲ್ಲದೆ ಇನ್ನು ಯಾರು !?



Wednesday 30 October 2013

ರುಕ್ಮೋದ್ದಿನ್ ತೋಲಾ - ರಾಣೇಶ್ ಪೀರ್ ಸನ್ನಿಧಿಯಲ್ಲಿ...





 Neela K Gulbarga
 ಕೆ. ನೀಲಾ

ಹಿಂಗಾರು ಮಳೆಯು ಉಲ್ಲಾಸದ ಗಿಲಕಿಯಾಡಿಸುತ್ತಿದೆ. ಹೊಲಗಳಲ್ಲಿ ತೊಗರಿಯು ಅರಶಿಣ ಹೂವು ಮುಡಿದು ನಳನಳಿಸುತ್ತಿದೆ. ತೊಗರಿಯ ಕಣಜ ಒಟ್ಟುವ ರೈತರು ಉತ್ತಮ ಬೆಲೆ ಬಂದಲ್ಲಿ ಖಂಡಿತ ಖುಷಿ ಪಟ್ಟಾರು. ನಿಸರ್ಗದ ಈ ನಿರ್ಮಲ ವಾತಾವರಣವನ್ನು ಆಸ್ವಾದಿಸಿ ನಲಿಯಬೇಕಾದ ಮನಸು ಮಾತ್ರ ಒಳ-ಒಳಗೇ ರೋದಿಸುತ್ತಿದೆ. ಈ ನಡುವೆ ಮಂಗಳೂರು, ಬೆಳ್ತಂಗಡಿ, ಮೈಸೂರು ಅಂತೆಲ್ಲ ಸುತ್ತಾಡಿ ಬಂದಿರುವೆನು. ಸೌಜನ್ಯ ಪ್ರಕರಣವು ಇನ್ನಿಲ್ಲದಂತೆ ಕಾಡುತ್ತಿದೆ. ಮಂಡ್ಯ ಜಿಲ್ಲೆಯ ಆಬಲವಾಡಿಯಲ್ಲಿ ತಂದೆಯೇ ಮಗಳನ್ನು ಬಹಿರಂಗವಾಗಿ ನೇಣು ಹಾಕಿದ ಪ್ರಕರಣ ನಡೆದಾಗಲೂ ಹೀಗೇ ಇನ್ನಿಲ್ಲದ ಕಾಡುವಿಕೆಯಲ್ಲಿ ಕುದ್ದು ಹೋಗಿದ್ದೆ. ಆಲೋಚಿಸುತ್ತಿದ್ದಂತೆ ಮೆದುಳಿಗೆ ಹೊಳೆದದ್ದು ಇಷ್ಟು. ಯಾವ ನಾಡಿನಲ್ಲಿ ಕೋಮುವಾದ-ಮೂಲಭೂತವಾದ ಬೆಳೆಯುತ್ತದೆಯೋ ಆ ನಾಡಿನಲ್ಲಿ ಹೆಣ್ಣುಮಕ್ಕಳು ಮತ್ತು ಮಕ್ಕಳು ಸುರಕ್ಷಿತರಾಗಿರುವುದಿಲ್ಲ. ಮತೀಯವಾದ ಬೆಳೆಯುತ್ತಿದ್ದಂತೆ ಜನರ ಹೃದಯದಲ್ಲಿ ಕ್ರೌರ್ಯವೊಂದು ನುಗ್ಗಿ ಇಬ್ಭಾಗಿಸಲು ಹವಣಿಸುತ್ತಿರುತ್ತದೆ. ಕೋಮುದಂಗೆ ನಡೆದಾಗೆಲ್ಲ ಹೆಂಗಸರ ಮೇಲೆ ವ್ಯಾಪಕ ಅತ್ಯಾಚಾರ ನಡೆಯುತ್ತದೆ. ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರಕ್ಕೂ ಕೋಮುವಾದಕ್ಕೂ ನೇರಾ-ನೇರ ಸಂಬಂಧವಿದೆ. ಸಂಸ್ಕೃತಿಯ ಹೆಸರಿನ ಮೇಲೆ ಮಹಿಳೆಯರ ಘನತೆ-ಅಸ್ಮಿತೆಯ ಮೇಲೆ ಧಾಳಿ ನಡೆಯುವುದು ಕೋಮುವಾದ-ಮೂಲಭೂತವಾದ ಬೆಳೆದ ಪ್ರದೇಶಗಳಲ್ಲಿ ಅಧಿಕವಾಗಿರುತ್ತದೆ. ಚರಿತ್ರೆಯು ಮತ್ತೆ-ಮತ್ತೆ ಇದನ್ನು ದಾಖಲುಗೊಳಿಸಿದೆ. ಚರಿತ್ರೆಯಿಂದ ನಮಗೆ ಪಾಠ ಕಲಿಯಲಿಕ್ಕಿದೆ. ಹೃದಯ ಬೆಸುಗೆಯ ಕೋಮುಸಾಮರಸ್ಯ ನೈಜ ಅಭಿವೃದ್ಧಿಯ ಬುನಾದಿಯಾಗಬೇಕಿದೆ. ಇಂಥ ನಡೆಗೆ ಬಹು ದೊಡ್ಡ ಪರಂಪರೆಯೂ ಇರುತ್ತದೆ. ದೇಶದಗಲಕ್ಕೂ ಸಾಮರಸ್ಯದ ಸಾಂಸ್ಕೃತಿಕ ಪರಂಪರೆಯು ಅವಿಚ್ಛಿನ್ನವಾಗಿ ಹರಡಿಕೊಂಡಿದೆ. ಕೋಮುವಾದಿ-ಮೂಲಭೂತವಾದಿಗಳು ಇಂಥ ನೆಲೆಗಳನ್ನು ಹಾಳುಗೆಡವಲು ಹವಣಿಸುತ್ತಿರುವರು. ಅಥವ ಕೈವಶ ಮಾಡಿಕೊಂಡು ಮೂಲ ಸ್ವರೂಪ-ಸಂದೇಶವನ್ನೇ ಅಳಿಸಿ ಹಾಕಿ ಸ್ವಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿರುವರು. ಇದೊಂದು ರೀತಿಯಲ್ಲಿ ಮಾನವೀಯತೆ ಮತ್ತು ಅಮಾನವೀಯ ಕ್ರೌರ್ಯದ ನಡುವಿನ ನಿರಂತರ ಸಂಘರ್ಷ. ಇದು ಸಾಂಸ್ಕೃತಿಕ ಸಂಘರ್ಷವೂ ಹೌದು. 

ನಾಡೆಲ್ಲ ಸುತ್ತಾಡಿ ಬಂದು ಹೀಗೆ ಚಿಂತಿಸುತ್ತ ಒಂದೆಡೆ ಕೂಡಲು ಮನಸು ಒಲ್ಲೆನ್ನತೊಡಗಿತು. ಎಲ್ಲಿಗೆ ಹೊರಡುವುದು? ಅರ್ಧ ಗಂಟೆಯೊಳಗಾಗಿ ರಾಣೇಶ್-ಪೀರ್ ದರ್ಗಾದ ಎಂಬತ್ತರ ಇಳಿವಯಸ್ಸಿನ ಬುರಾನೋದ್ದಿನ್ನ ಮುಂದೆ ಕುಳಿತೆ. ಬಿಳಿಯ ಪೈಜಾಮ-ಅಂಗಿ. ತಲೆಗೆ ಕಸೂತಿಯುಳ್ಳ ಬಿಳಿಯದ್ದೇ ಗೋಲು ಟೋಪಿ. ಬುರಾನೋದ್ದಿನನ ಅಪ್ಪ ಮಷಾಕ್ಸಾಬ್ 1884ರಲ್ಲಿ ಸ್ಥಾಪಿಸಲ್ಪಟ್ಟ ಎಂಎಸ್ಕೆ ಮಿಲ್ಲಿನಲ್ಲಿ ಕಾರ್ಮಿಕನಾಗಿದ್ದ. ಮಕ್ಕಳು ತರಕಾರಿ ಮಾರುವರು. ಕಾರ್ಮಿಕನಾಗಿಯೇ ದುಡಿದವನು ಈಗ ರಾಣೇಶ ಪೀರ್ ದರ್ಗಾದ ಮೆಟ್ಟಿಲುಗಳ ಮೇಲೆ ಕುಳಿತು ದಿನದೂಡುವನು. ಭಕ್ತರು ಕೊಡುವ ಚಿಲ್ಲರೆಕಾಸು ಬೀಡಿ-ಕಾಡಿಗಾಗುವುದಂತೆ. ಇವನಂಥವರು ಮೆಟ್ಟಿಲಿಗೊಬ್ಬರಂತೆ ಕುಳಿತಿದ್ದರು. ಎಲ್ಲರ ನಾಲಿಗೆಯ ಮೇಲೆ ದರ್ಗಾದ ಇತಿಹಾಸವು ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಕತೆಯಾಗಿ ಅರಳಲು ಹವಣಿಸುತ್ತಿತ್ತು. ಎಷ್ಟು ಬಾರಿ ಕೇಳಿಲ್ಲ ಈ ಕತೆ? ಆದರೂ ದರ್ಗಾದ ಪರಿಸರದಲ್ಲಿ ಕುಳಿತು ಮತ್ತೆ-ಮತ್ತೆ ಮನವೊಡ್ಡುವೆನು. ಹೊಸದಾಗಿಯೇ ಕೇಳುವಂತೆ. ಬೊಚ್ಚು ಬಾಯಿಯ ಎಳೆತುಟಿಗಳು ನುಡಿಯುತ್ತಿದ್ದರೆ ಸಂಜೆಗಂಗಳಲ್ಲಿ ಹೊಳಪಿತ್ತು.

 
ಒಳಗೆ ಎರಡು ಮಜಾರ್(ಸಮಾಧಿ) ಇವೆಯಲ್ಲ.. ಹಾಂ ಮೊದಲನೆಯದ್ದು ರುಕ್ಮೋದ್ದಿನ್ನದ್ದು. ಅಂದ್ರೆ ರುಕ್ಮೋದ್ದಿನ್ ತೋಲಾನದ್ದು. ತೋಲಾ ಅಂತ ಹ್ಯಾಂಗ ಹೆಸರು ಬಂತು ಗೊತ್ತೇನು? ರುಕ್ಮೋದ್ದಿನ್ ನಲವತ್ತು ವರ್ಷ ತಪಸ್ಸಿಗೆ ಕೂತಿದ್ದ. ಅಲ್ಹಾನ ನೆನೆಯುತ್ತ ಮಂಡಿಯೂರಿ ಒಂದೇ ಕಡೆ ಕೂತು-ಕೂತು ಕಾಲು-ನೆಲ ಏಕವಾಗಿದ್ದವು. ಮೈಯೆಲ್ಲ ಮಣ್ಣು-ಕಚರಾದಿಂದ ಹುತ್ತೇರಿ ಕಣ್ಣೆರಡು ಮಾತ್ರ ಕಾಣುತ್ತಿದ್ದವು. ಇದೇ ಸಮಯದಲ್ಲಿ ಸುಲ್ತಾನ ತಾಜ್-ಉದ್ದಿನ್ ಫಿರೋಜ್ಷಾನ ಆಮಂತ್ರಣದ ಮೇರೆಗೆ ಗುಲಬರ್ಗ ಕ್ಕೆ ಬಂದು ನೆಲೆಸಿದ್ದ ಖ್ವಾಜ-ಬಂದ-ನವಾಜ್ ಪ್ರಸಿದ್ಧ ಸೂಫಿಯಾಗಿರುತ್ತಾನೆ. ಈತ ಉರ್ದು, ಪರ್ಶಿಯನ್, ಅರೆಬಿಕ್ ಭಾಷೆಗಳಲ್ಲಿ ಸುಮಾರು 195 ಕೃತಿಗಳನ್ನು ರಚಿಸಿರುವನು. ರುಕ್ಮೋದ್ದಿನನ ಮಹಿಮೆಯ ಕಾರಣವಾಗಿ ಸ್ವತಃ ಖ್ವಾಜಾ-ಬಂದಾ-ನವಾಜ್ ಗೇಸುದರಾಜನೇ ರುಕ್ಮೋದ್ದಿನನ ಭೇಟಿಗೆ ಬರುವನು. ನಲವತ್ತು ವರ್ಷ ಅಲ್ಹಾನ ಧ್ಯಾನದಲ್ಲಿದ್ದ ರುಕ್ಮೋದ್ದಿನ್ ಕೈಯೆತ್ತಿ ನಮಸ್ಕರಿಸಿದನಂತೆ. ರುಕ್ಮೋದ್ದಿನನ ವಿಶಾಲ ಹೃದಯಕ್ಕೆ, ಕಠಿಣಸಿದ್ದಿಗೆ ಮೆಚ್ಚಿ 'ರುಕ್ಮೋದ್ದಿನ್ ನೀನು ನನಗಿಂತಲೂ ಒಂದು ತೋಲ ಹೆಚ್ಚು' ಅಂದನಂತೆ. ಅಂದಿನಿಂದ ರುಕ್ಮೋದ್ದಿನ್ತೋಲಾ ಅಂತಲೇ ಹೆಸರು ಬಂತೆಂಬುದು ಪ್ರತೀತಿ. 


 

ಬಾಜುದಲ್ಲಿರುವ ಇನ್ನೊಂದು ಮಜರ್(ಸಮಾಧಿ) ರಾಣೋಜಿಯದ್ದು. ರಾಣೋಜಿ ಜಾತಿಯಿಂದ ಮರಾಠಾ. ಕಾಶಿ ದರ್ಶನಕ್ಕೆಂದು ಈ ಮಾರ್ಗವಾಗಿ ಬರುತ್ತಿರುವಾಗ ರುಕ್ಮೋದ್ದಿನನ ಭೇಟಿಯಾಗುತ್ತದೆ. 'ಕಾಶಿ ಹುಡುಕಿಕೊಂಡು ಅಷ್ಟು ದೂರ ಯಾಕೆ ಹೋಗ್ತಿ? ಇಕೋ ಇಲ್ಲಿದೆ ನೋಡು ಕಾಶಿ' ಅಂತ ರುಕ್ಮೋದ್ದಿನ ಅಂಗೈಯ ಅರಳಿಸಿದನಂತೆ. ರಾಣೋಜಿಗೆ ಅಂಗೈಯಲ್ಲಿ ಕಾಶಿ ಕಂಡಿತಂತೆ. ಭಕ್ತಿಯಿಂದ ಪುನೀತನಾದ ರಾಣೋಜಿಯು ಅಂದಿನಿಂದ ರುಕ್ಮೋದ್ದಿನನ ಗೆಳೆಯನೂ ಶಿಷ್ಯನೂ ಆಗಿ ಇಲ್ಲಿಯೇ ಉಳಿದುಬಿಟ್ಟನು. ಇಬ್ಬರ ಗೆಳೆತನಕ್ಕೆ ಪರಸ್ಪರ ಊಟ, ಆಚರಣೆ, ನಂಬಿಕೆಗಳು ಅಡ್ಡಿಬರಲಿಲ್ಲ. ಗುರು ರುಕ್ಮೋದ್ದಿನನಿಗಾಗಿ ರಾಣೋಜಿಯು ಪ್ರತಿದಿನ ಊರಲ್ಲಿ ಹೋಗಿ ಮಾಂಸಾಹಾರ ತರುತ್ತಿದ್ದನಂತೆ. ಇದನ್ನು ಗಮನಿಸಿದ ಮೇಲ್ಜಾತಿಯವರು ಒಮ್ಮೆ ರಾಣೋಜಿಯನ್ನು ನಡುದಾರಿಯಲ್ಲಿ ತರುಬಿ 'ನೀನು ಮಾಂಸ ತಗೊಂಡು ಹೋಗ್ತಿದ್ದಿ. ಇದರಿಂದ ನಮ್ಮ ಜಾತಿಗೆ ಕಳಂಕವಾಗ್ತದೆ.' ಎಂದು ನಿಂದಿಸಿ ಒತ್ತಾಯದಿಂದ ಜೋಳಿಗೆ ತಪಾಸಣೆ ಮಾಡಲು ಮುಂದಾಗುವರು. ಇಕ್ಕಟ್ಟಿನಲ್ಲಿ ಸಿಕ್ಕಿಬಿದ್ದ ರಾಣೋಜಿಯು ಗುರು ರುಕ್ಮೋದ್ದಿನ್ನನ್ನು ನೆನೆದು 'ಇಲ್ಲ. ನೋಡ್ರಿ ಬೇಕಾದ್ರೆ, ಜೋಳಿಗೆಯಲ್ಲಿ ಹೂವುಗಳಿವೆ' ಎಂದು ಹೇಳುವನಂತೆ. ಜನರು ವ್ಯಗ್ರರಾಗಿ ಜೋಳಿಗೆಯಲ್ಲಿ ಕೈ ಹಾಕುವರು. ಖರೆನೇ ಅಲ್ಲಿ ಗುಲಾಬಿ ಹೂವುಗಳು ನಳನಳಿಸುತ್ತಿದ್ದವಂತೆ. ಬಂದ ಜನರು ಪೆಚ್ಚಾಗಿ ವಾಪಾಸಾಗುವರು. ರಾಣೋಜಿಗೆ ರುಕ್ಮೋದ್ದಿನನ ಮಹಿಮೆಯಿಂದ ಅಭಿಮಾನವಾಗುವುದು. ಆದರೆ ಕತೆ ಇಲ್ಲಿಗೆ ಮುಗಿಯುವುದಿಲ್ಲ. ರಾಣೋಜಿ ಮತ್ತು ರುಕ್ಮೋದ್ದಿನನ ಗೆಳೆತನ ಹೇಗಿತ್ತೆಂದರೆ ಒಬ್ಬರಿಗೊಬ್ಬರು ಗೌರವಿಸಿಕೊಂಡು ಕಾಳಜಿಯಿಂದ ಬದುಕುತ್ತಿದ್ದರು. ಹೀಗಾಗಿ ರುಕ್ಮೋದ್ದಿನ್ ಅಂದಿನಿಂದ ಗೆಳೆಯನಿಗೆ ಸಂಕಟಕ್ಕೀಡು ಮಾಡಿದ ತನ್ನ ಮಾಂಸಾಹಾರವನ್ನೇ ತೊರೆಯುವನು.' ಈ ಕಾರಣವಾಗಿ ದರ್ಗಾಕ್ಕೆ ಬರುವವರು ಮಾಂಸದಡುಗೆ ತರುವುದಿಲ್ಲ. ಬದಲಿಗೆ ಮಾದಲಿ, ಒಗ್ಗರಣೆ ಅನ್ನ, ಸಕ್ಕರೆ, ಟೆಂಗಿನಕಾಯಿ ಮತ್ತು ಹೂವುಗಳೇ ಇಲ್ಲಿ ನೈವೇದ್ಯ
. 
ರುಕ್ಮೋದ್ದಿನ್ ತೋಲಾ ಮತ್ತು ರಾಣೋಜಿ ತಮ್ಮ ಜೀವಿತಾವಧಿಯೆಲ್ಲ ಜೊತೆಯಾಗಿಯೇ ಕಳೆದರು. ಈಗ ಅವರಿಬ್ಬರ ಸಮಾಧಿಗಳು ಅಕ್ಕಪಕ್ಕದಲ್ಲಿವೆ. ಇಬ್ಬರ ಮಜರ್ಗಳು ಹಸಿರು ಚದ್ದರು ಹೊದ್ದುಕೊಂಡಿವೆ. ನವಿಲುಗರಿಗಳ ಗಾಳಿಯು ಮಜರ್ ಸೋಕಿ ಎಲ್ಲೆಡೆ ಪಸರಿಸುತ್ತಿದೆ. ಎರಡೂ ಸಮಾಧಿಗಳನ್ನು ದಾಟಿ ಮುಂದಕ್ಕೆ ಹೋದರೆ, ಹುಣಚೆ ಮರಗಳು, ಕಲ್ಲಿನಿಂದ ಕಟೆದ ದೀಪದ ಸ್ಥಂಭಗಳು ಸಿಗುತ್ತವೆ. ಬರುವ ಭಕ್ತಾದಿಗಳು ಕೊಬ್ಬರಿ ತುಕುಡಿಯನ್ನು ಸಣ್ಣ ಚೀಲದಲ್ಲಿ ಕಟ್ಟಿ ಮರಕ್ಕೆ ನೇತ್ಹಾಕುತ್ತಿದ್ದರು. ಮತ್ತು ಸಣ್ಣ ಚಿಂಪುಗಲ್ಲುಗಳನ್ನು ಒಂದರ ಮೇಲೊಂದು ಪೇರಿಸುತ್ತಿದ್ದರು. ಹರಕೆ ಹೊರುವ ಪರಿಯಿದು. ಬೇಡಿಕೊಂಡಿದ್ದು ಈಡೇರಿದ್ದರೆ ತಾವು ಕಟ್ಟಿದ ಚೀಲ ಬಂದು ಬಿಚ್ಚುವರಂತೆ. ಹೀಗೆ ಹರಕೆಯ ಗಂಟು ಕಟ್ಟುವವರಲ್ಲಿ ಮುಸ್ಲಿಂರು, ಲಿಂಗಾಯತರು, ಕುರುಬ-ಕಬ್ಬಲಿಗರು, ಮರಾಠರು ಹೀಗೆ ಸಕಲೆಂಟು ಜಾತಿಯವರು ಇದ್ದರು. 


ದೂರದ ರಾಯಚೂರಿನಿಂದ ಗಂಡ-ಮಕ್ಕಳೊಂದಿಗೆ ಬಂದಿದ್ದ ಅಮೀನಾಬೇಗಂ ಕೊಬ್ಬರಿ ಒಡೆದು ಸಕ್ಕರೆಯೊಂದಿಗೆ ಬೆರೆಸಿ ಕೊಟ್ಟಳು. ಯಾವಾಗಲೂ ಅಳುವ ಮಗನ ಹಣೆಯನ್ನು ದರ್ಗಾಕ್ಕೆ ಹಚ್ಚಿಸಿ, ಅಳು ನಿಲ್ಲಿಸೆಂದು ಬೇಡಿಕೊಂಡ ಸುಶೀಲಮ್ಮ ಕತೆ ಕೇಳಲು ಬಂದು ಕುಳಿತಳು. ಅವಳೊಂದಿಗೆ ಮಗ. ಯಾರೊಬ್ಬರ ಮನಸಿನಲ್ಲಿಯೂ ಪರಕೀಯತೆಯ ಭಾವ ಹಣಿಕುತ್ತಿಲ್ಲ. ಹದಿಮೂರು-ಹದಿನಾಲ್ಕನೆಯ ಶತಮಾನದ ಹೊತ್ತಿಗೆ ಸೌಹಾರ್ದ ದೀಪವನ್ನು ಬೆಳಗಿಸಿ ಎಂದಿಗೂ ತೀರದ ಎಣ್ಣೆ-ಬತ್ತಿಯಂತೆ ಭಾವೈಕ್ಯ ಪರಂಪರೆಯನ್ನು ಕಟ್ಟಿಕೊಟ್ಟ ರುಕ್ಮೋದ್ದಿನ್ತೋಲಾ-ರಾಣೋಜಿಯರ ಮಜರ್ಗೆ ಹಣೆಮಣಿದೆ.


***

ವಿವಶತೆ

ವಿಭಾ ತಿರುಕಪಡಿ


ಹುಣ್ಣಿಮೆಯ ಆ ಸುಂದರ ರಾತ್ರಿ
ನೀನುಸುರಿದ ಪಿಸುಮಾತು
ಒದ್ದೆ ಮದರಂಗಿಯ ಸುವಾಸನೆ
ಸುಳ್ಳು ತಕರಾರುಗಳು
ಸುಮ್ಮನೆ ನೀಡಿದ ಭಾಷೆಗಳು
ಮೈಯ ತಿರುವುಗಳಲಿ
ತುಟಿಯೊತ್ತಿದ ಗಳಿಗೆಗಳು
ಎಲ್ಲ ನೆನಪಿಸಿಕೊ
ನಿನ್ನ ನಿರ್ದಯ ಮನಸು
ಇನ್ನೂ ಕರಗದಿದ್ದರೆ
ಒಮ್ಮೆ ಅಪ್ಪಣೆ ನೀಡು-ಸಾಕು
ನೆನಪಿನ ನಿಧಿಯನ್ನು ಹುಗಿದುಬಿಡುತ್ತೇನೆ
ಜತೆಗೆ ನಾನೂ ಅಲ್ಲಿಯೇ ಹೂತುಹೋಗುತ್ತೇನೆ.

***


Tuesday 29 October 2013

ಸಾಲುಗಳು: ಡಾ. ಜಿ.ಕೃಷ್ಣ

ಬದಲಾವಣೆ ಮರುಹುಟ್ಟು
ಒಮ್ಮೊಮ್ಮೆ
ಸಾವು
ಇನ್ನೂ ಕೆಲವೊಮ್ಮೆ
ಎರಡೂ...




ಕವಿತೆ ಓದಿದ ಮೇಲೆ
ಖಾಲಿ ಹಾಳೆಯಷ್ಟೆ ಉಳಿಯಿತು.






ಉಸಿರು ತುಂಬಿ-


ನಗು ಬಣ್ಣ ಕಣ್ಣು ಕಿವಿಗಳ
ಹೊತ್ತು ತಿರುಗು-
ತ್ತಾ ಹೋದಂತೆ
ಮಕ್ಕಳೆಂಬ ಮಕ್ಕಳ
ಅಪ್ಪಂದಿರು
ಬೆಲೆ ಕಟ್ಟಿ
ಭಾರ ಇಳಿಸುತ್ತಾ
ಹೋಗುತ್ತಾರೆ
ಉಸಿರಷ್ಟೆ ಉಳಿಯುತ್ತದೆ.




ಅಳುವಿದ್ದಾಗ
ಮಳೆಯೂ ಇರಲಿ...





ನಾನು
ಎಳ್ಳುಕಾಳು ಮುಳ್ಳುಮೊನೆಯಷ್ಟೂ
ಆಗಿಲ್ಲ
ಲೋಕ ಬದಲಾಯಿತು
ಎಂಬ 
ನಿಟ್ಟುಸಿರಿಗೆ
ತಕ್ಕಡಿ ತೂಗಾಡಿತು
ಹಿಂದೆಂದೂ ಹೀಗೆನ್ನದ
ನನ್ನ ನೋಡಿ
ನಕ್ಕಿತು.




ಕುಂಬಳದ ಹೂ
ನಿರಮ್ಮಳ ಬೆಳಗಲ್ಲಿ
ಅಮ್ಮನ ನೆನಪು
ಕೆರಳಿಸಿತು:
ಅವಳು
ಈ ಹೂವಲ್ಲಿ
ರುಚಿಯಾದ ರೊಟ್ಟಿ
ಮಾಡುತ್ತಾಳೆ.




ಬುದ್ಧ ಎಂದಾಗ
ಅವನು
ಒಂದಾನೊಂದು ಕಾಲದಲ್ಲಿ
ಕಪಿಲವಸ್ತುವಿನಲ್ಲಿ
ಶುದ್ಧೋದನ ಮತ್ತು
ಮಾಯಾದೇವಿಯ ಮಗನಾಗಿ
ಜನಿಸಿದನು
ಎನ್ನುವುದ ಬಿಟ್ಟು
ಬೇರೇನೂ
ನೆನಪಾಗುತ್ತಿಲ್ಲ.




ಒಂದೇ...

ತಡವಿ
ಅಂತರಂಗಕ್ಕಿಳಿಯದೆ
ಓಡಿದ
ಶಪಿಸಿ ಕಲ್ಲಾಗಿಸಿದ
ಮುಟ್ಟಿ ಎಬ್ಬಿಸಿ
ಧನ್ಯಳಾಗಿಸಿದ
ಸುಟ್ಟು ಪರೀಕ್ಷಿಸಿ
ಕಾಡುಪಾಲು ಮಾಡಿದ
ಪುರುಷೋತ್ತಮ-
ರು
ಬೇರೆ ಬೇರೆ ಅಲ್ಲ

ಸ್ತ್ರೀಯರೂ
ಅಲ್ಲ.





ತಡೆಯಲಾಗಲಿಲ್ಲ
ನಗು,
ಕತೆ
ಅಹಲ್ಯೋದ್ಧಾರಕ್ಕೆ ಬಂದಾಗ
ಸೀತೆಗೆ.










Monday 28 October 2013

ಕೊರಗರ ಬಗ್ಗೆ ಒಂದಿಷ್ಟು... : ಹೃದಯ ಮಂಗಳೂರ್


Koragerna Alipu Oripu

ಸಮಾಜದ 'ವಿಭಾಜಕ ದೃಷ್ಠಿ'ಯಿಂದಾಗಿ ಪ್ರತ್ಯೇಕಿಸಲ್ಪಟ್ಟ ಕೊರಗರು...

ಕೊರಗರು ಮೂಲತಃ ಅರಣ್ಯವಾಸಿಗಳು.  ಪೂರ್ವಕಾಲದಲ್ಲಿ ದಟ್ಟಾರಣ್ಯದಲ್ಲಿ ವಾಸಿಸುತ್ತಿದ್ದರು. ಕಾಡಿನಲ್ಲಿ ದೊರೆಯುವ ಬಿದಿರು, ಬಿಳಲುಗಳಿಂದ ತಮ್ಮ ನೈಪುಣ್ಯತೆಯನ್ನು ಬಳಸಿ, ವಿವಿಧ ರೀತಿಯ ಪರಿಕರಗಳನ್ನು ಮಾಡಿ ಜೀವನ ಸಾಗಿಸುತ್ತಿದ್ದರು. ಬುಟ್ಟಿ ಹೆಣೆಯುವುದು, ಬೇಟೆಯಾಡುವುದು ಮತ್ತು ಅರಣ್ಯೊತ್ಪನ್ನಗಳನ್ನು ಸಂಗ್ರಹಿಸುವುದು ಕುಲ ಕಸುಬಾಗಿತ್ತು. ಸುಶ್ರಾವ್ಯವಾಗಿ ಡೋಲು ಬಾರಿಸುವುದು, ಕೊಳಲು ಊದುವುದು ಸಾಂಸ್ಕೃತಿಕ ಮತ್ತು ಮನೋರಂಜನಾತ್ಮಕ ಕಲೆಯಾಗಿತ್ತು. ತನ್ನದೇ ಆದ ಶ್ರೇಷ್ಠ ಸಂಪ್ರದಾಯ ಮತ್ತು ಜೀವನ ಕ್ರಮಗಳನ್ನು ಮೈಗೂಡಿಸಿಕೊಂಡಿದ್ದರು. ವಿಶಿಷ್ಟ ’ಕೊರ್ರು’ (ಕೊರಗ) ಭಾಷೆ ಮತ್ತು ಕಾಡಿನ ಸಂಸ್ಕ್ರತಿಯಿಂದಾಗಿ ಪ್ರತ್ಯೇಕವಾಗಿ ಗುರುತಿಸಲ್ಪಡುತ್ತಿದ್ದರು. ಮೈಯನ್ನು ಪ್ರಾಣಿಗಳ ಚರ್ಮ ಮತ್ತು ಸೊಪ್ಪಿನಿಂದ ಮುಚ್ಚಿಕೊಳ್ಳುತ್ತಿದ್ದರು (ಆ ಕಾಲದಲ್ಲಿ ಕಾಡಿನಲ್ಲಿ ಕೊರಗರಿಗೆ ಮಾನ ಮುಚ್ಚಿಕೊಳ್ಳಲು ಅದೊಂದೇ ಆಧಾರವಾಗಿತ್ತು) ಕುಳ್ಳಗಿನ ಧೃಡಕಾಯ ದೇಹ, ಹೊಳೆಯುವ ಕಪ್ಪು ಮೈಬಣ್ಣ,  ವಿಶಿಷ್ಟವಾದ ಮೂಗು, ತುಟಿ , ಕಣ್ಣಿನ ವಿಭಿನ್ನ ಆಕೃತಿ ಮತ್ತು ಇತರ ಜನವರ್ಗದವರು ಅರ್ಥೈಸಿಕೊಳ್ಳಲಾಗದ ಕ್ಲಿಷ್ಟ ಭಾಷಾ ಭಿನ್ನತೆಯಿಂದಾಗಿ ಕೊರಗರನ್ನು ದೂರವೇ ಇರಿಸಲಾಗಿತ್ತು. ದೂರವೇ ಇದ್ದ ಕೊರಗರು ನಿಧಾನವಾಗಿ ತಮ್ಮ ವೇಷಭೂಷಣಗಳಿಂದಾಗಿ ಅಸ್ಪ್ರಶ್ಯರೇ ಆಗಿಬಿಟ್ಟರು. ವೇದಗಳ ಕಾಲದಿಂದಲೂ ಅಸ್ಪ್ರಶ್ಯರಾಗಿದ್ದವರ ಸಾಲಿಗೆ ಕೊರಗರನ್ನೂ ಸೇರಿಸಲಾಯಿತು ಹೀಗೆ ಸ್ಪರ್ಶ ವರ್ಣಗಳ ಅರಿವೇ ಇಲ್ಲದ ಪ್ರತ್ಯೇಕ ಬುಡಕಟ್ಟು ಪಂಗಡವೊಂದು ಸಮಾಜದ ವಿಭಾಜಕ ದೃಷ್ಟಿ’ಯಿಂದಾಗಿ ಅಸ್ಪ್ರಶ್ಯರಾಗಿಬಿಟ್ಟರು ಮತ್ತು ಸಮಾಜದ ಮೇಲಿನ ಭಯದಿಂದಾಗಿ ಮುಗ್ಧ ಕೊರಗರು ತಮ್ಮನ್ನು ತಾವು ಅಸ್ಪ್ರಶ್ಯರೆಂದು ಒಪ್ಪಿಕೊಂಡುಬಿಟ್ಟರು!




ಡೋಲಿನ ಸುಶ್ರಾವ್ಯಕ್ಕೆ ಮನ ಸೋತವರ ವ್ಯಭಿಚಾರ...

ಕೊರಗರು ಬೇಟೆಯಾಡಿ ಬಂದ ನಂತರ, ದಣಿವಾರಿಸಲು ಡೋಲು ಬಾರಿಸಿ, ಕೊಳಲು ಊದಿ ಮನಃ ಶಾಂತಿಯನ್ನು ಪಡೆಯುತ್ತಿದ್ದರು. ಕಾಡಿನಲ್ಲಿ ಕೊರಗರ ಅಬ್ಬರದ ಡೋಲಿನ ಧ್ವನಿಗೆ ಊರ ಅರಸರೂ (ತುಂಡರಸರು ಮತ್ತು ಪಟೇಲರು) ಮನಸೋತರು. ನಿಧಾನವಾಗಿ ಕೊರಗರ ಡೋಲಿನ ಧ್ವನಿ ಕಾಡಿನ ಬದಲು ಪಟೇಲರ ಕಟ್ಟಅಪ್ಪಣೆಯ ಮೇರೆಗೆ ಗುತ್ತಿನ ಮನೆಯ ಹಿತ್ತಲ ಬದಿಯಲ್ಲಿ ಕೇಳಿ ಬರತೊಡಗಿತು. ಊರ ಹಬ್ಬ ಹರಿದಿನಗಳಲ್ಲಿ, ಊರಿನಲ್ಲಿ ಸಾವು ಸಂಭವಿಸಿದರೆ ಅಂತ್ಯಕ್ರಿಯೆ ಸಂದರ್ಭದಲ್ಲಿ ಕೊರಗರಿಗೆ ಡೋಲು ಬಾರಿಸಲು ಅನುವು ಮಾಡಿಕೊಡಲಾಯಿತು. ಗುತ್ತುಬರ್ಕೆಯವರ ಕಂಬಳವೂ ಕೊರಗರ ಡೋಲು ಬಡಿತದಿಂದಲೇ ಆರಂಭವಾಗತೊಡಗಿತು. ತಲೆತಲಾಂತರಗಳಿಂದ ಕೃಷಿಕರು ಬೀಜ ಬಿತ್ತುವುದಕ್ಕೂ ಕೊರಗರ ಡೋಲಿನ ಶಬ್ಧದಿಂದಲೇ ಚಾಲನೆ ನೀಡಲು ಆರಂಭಿಸಿದರು. ಅದರಿಂದ ದೊರೆತ ಬಿಟ್ಟಿ ಸಂಬಳವೂ ಕೊರಗರಿಗೆ ವ್ಯವಹಾರದ ಅರಿವಿಲ್ಲದ್ದರಿಂದ ಅಪ್ಯಾಯಮಾನವಾಗತೊಡಗಿತು. ಸಂಖ್ಯಾಬಲದ ಕೊರತೆಯಿಂದ ಕೊರಗರು ಪ್ರತಿರೋಧ ತೋರುವುದನ್ನು ಯಾವತ್ತು ಬಿಟ್ಟರೋ, ಅದಾಗಲೇ ಬಲಿಷ್ಠರ ಅಡಿಯಾಳಾಗಬೇಕಾಯಿತು ಮತ್ತು ಕೊರಗರ ಮುಗ್ಧತೆಯನ್ನು ದೌರ್ಬಲ್ಯವೆಂಬಂತೆ ಬಳಸಿಕೊಳ್ಳಲಾಯಿತು. ಅವರನ್ನು ಜೀತಕ್ಕೆ ನೇಮಿಸಿಕೊಳ್ಳಲಾಯಿತು. ಅದನ್ನು ಪ್ರಾದೇಶಿಕವಾಗಿ 'ಅಜಲು ಚಾಕರಿ' ಎನ್ನುತ್ತಾರೆ ವಿಶಾಲಾರ್ಥದಲ್ಲಿ ಹೇಳುವುದಾದರೆ, 'ಜೀತ ಪದ್ಧತಿ' ಎನ್ನಬಹುದು.

 


ಅಂಡೆ, ಕುಂಟು, ಸೊಪ್ಪು ಎಂಬ ವಿಂಗಡನೆ...

ಅಸ್ಪ್ರಶ್ಯತೆ ತಾರತಮ್ಯದ ಪಿಡುಗಿಗೆ ಅಂಟಿಕೊಂಡ ಕೊರಗ ಸಮುದಾಯವು ಅಕ್ಷರ ಕಲಿಯುವಂತಿರಲಿಲ್ಲ. ದೇವಸ್ಥಾನಗಳಿಗೆ ಪ್ರವೇಶಿಸುವುದನ್ನು, ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವುದನ್ನು ಮತ್ತು ಕಾಡಿನಿಂದ ಊರಿಗೆ ಬಂದಾಗ ಉಗುಳುವುದನ್ನೂ ನಿಷೇಧಿಸಲಾಗಿತ್ತು!! ಹೀಗಾಗಿ, ಕೊರಗರು ಕಾಡಿನಿಂದ ಊರಿಗೆ ಬಂದಾಗ ಎಂಜಲು ಉಗುಳಲು ತಮ್ಮ ಕೊರಳಿಗೆ ಬಿದಿರಿನ ತುಂಡನ್ನು (ತುಳುವಿನಲ್ಲಿ ಅಂಡೆ ಎನ್ನುತ್ತಾರೆ) ಕಟ್ಟಕೊಳ್ಳುತ್ತಿದ್ದರು. ಇದಕ್ಕೆ ಇವರನ್ನು ಊರಿನ ಇತರ ಜನವರ್ಗದವರು 'ಅಂಡೆ ಕೊರಗರು' ಎಂದು ಕರೆದರು.

ಕಾಡಿನಿಂದ ಊರಿಗೆ ಬಂದು ಅಜಲು ಸೇವೆ ಮಾಡುತ್ತಿದ್ದ ಕೊರಗರಿಗೆ ಸೊಪ್ಪಿನ ಬದಲು ಮಾನ ಮುಚ್ಚಿಕೊಳ್ಳಲು ಊರಿನವರು ಬಟ್ಟೆಯನ್ನು ಕೊಡುತ್ತಿದ್ದರು. ಹೀಗೆ ಬಟ್ಟೆ ತೊಟ್ಟುಕೊಂಡ ಕೊರಗರನ್ನು ಊರಿನ ಇತರ ಜನವರ್ಗದವರು ಕುಂಟು ಕೊರಗರು’ ಎಂದು ಕರೆದರು (ಕುಂಟು ತುಳು ಪದ; ಬಟ್ಟೆ ಎಂದರ್ಥ). ಕಾಡಿನಲ್ಲಿಯೇ ಇದ್ದು ತನ್ನ ಕೆಲಸವನ್ನು ನಿರ್ವಹಿಸಿಕೊಂಡು, ಬರೇ ಸೊಪ್ಪು ಅಥವಾ ಪ್ರಾಣಿಗಳ ಚರ್ಮವನ್ನು ಸುತ್ತಿ ಬದುಕುತ್ತಿದ್ದವರು ಸೊಪ್ಪು ಕೊರಗರು’ ಎಂದು ಕರೆಯಲ್ಪಟ್ಟರು.  ಕೊರಗರನ್ನು 'ಅಂಡೆ, ಕುಂಟು, ಸೊಪ್ಪು ಎಂದು ಗುರುತಿಸಿ ಕರೆದದ್ದು ಇತರ ಜನ ವರ್ಗದವರೇ ಹೊರತು, ಸ್ವತಃ ಕೊರಗರಲ್ಲ! ಸಮಾನತೆ ಬಯಸುತ್ತಿದ್ದ ಕೊರಗರು ತಮ್ಮನ್ನು ತಾವು ಈ ರೀತಿ ಎಂದೂ ಗುರುತಿಸಿದ್ದಿಲ್ಲ ಮತ್ತು ಪ್ರತ್ಯೇಕ ಪಂಗಡಗಳನ್ನ ಕಟ್ಟಿಕೊಂಡವರೇ ಅಲ್ಲ. ಇದು ಕೂಡಾ ಸಮಾಜದ ವಿಭಾಜಕ ದೃಷ್ಠಿಯಿಂದಾಗಿ ಉಂಟಾದ ಗೊಂದಲ! ದುರಾದೃಷ್ಟವಶಾತ್, ಎಲ್ಲಾ ಇತಿಹಾಸಕಾರರು, ಸಂಶೋಧಕರು, ಚಿಂತಕರು ಮತ್ತು ಬರಹಗಾರರೂ - ನೈಜತೆಯನ್ನು ವಿಮರ್ಶಿಸದೆ ಕೊರಗರಲ್ಲಿ ಮೂರು ಒಳಪಂಗಡಗಳು ಇದ್ದವೆಂದು, ಹಾಗೆಯೇ ಬರೆದುಬಿಟ್ಟಿದ್ದಾರೆ!


***

Thursday 24 October 2013

ಸಾಲುಗಳು: ಡಾ. ಜಿ. ಕೃಷ್ಣ


ಕುಡಿ
ಚಿವುಟಿದಾಗ
ಎರಡಾಗಿ ಒಡೆಯುವ
ಗುಣ
ಗಿಡಗಳಲ್ಲಿದೆ
ಮಾನವರಲ್ಲಿ...?





ಗಾಯ
ನೋವು
ಹಸಿವು
ಸಾವು
ಹನಿಗಣ್ಣು
ಮೌನ
ಇತ್ಯಾದಿ-
ಗಳಿರುವ
ಕವಿತೆಗಳು
ಮುಟ್ಟದೆ
ತಟ್ಟದೆ
ಇರುವುದಿಲ್ಲ
ಅಂದರೆ,
ನೀವೇ
ಲೆಕ್ಕ ಹಾಕಿ...


***





ಉಜ್ಜಿ ಉಜ್ಜಿ ಕಿತ್ತುಕೊಂಡ ಮುಖಚರ್ಯೆ ಹೊತ್ತ 
ಕನ್ನಡಿ ಇಲ್ಲದೂರಿನ ಜನ .

 


ಉಕ್ಕುವ ನದಿ ದಂಡೆಯಲಿ
ಸೋತಿದ್ದು
ಬೊಗಸೆ 
ಮರೆತು
ಬಾಯಾರಿದ ಗಳಿಗೆ.


***


ಹೇಗೆ ಪ್ರಾರಂಭಿಸಲಿ....?

ಹತ್ತಾರು ಬಗೆಯ ಚಿಮ್ಮಟ
ಕತ್ತರಿ
ಎಳೆದು ಹಿಡಿಯುವ
ಒತ್ತಿ ಸರಿಸುವ
ಹತ್ಯಾರುಗಳು
ಸೂಜಿ 
ದಾರ
ಕುಯ್ಯುವ ಭಾಗವನಷ್ಟೆ ತೋರಿಸುವ
ಒಸರಿದ್ದನ್ನು ಒರೆಸುವ
ಬಟ್ಟೆ
ಅರಿವಳಿಸುವವರು
ಅಳಿಸಿಕೊಳ್ಳುವವರು
ಶುಶ್ರೂಷಕರು
ಎಲ್ಲ ತಯಾರು
ಮರೆತ ಚಾಕು
ಡಬ್ಬಿಯಲ್ಲೆ
ತಣ್ಣಗೆ ನಕ್ಕಿತು
ಶುಚಿರ್ಭೂತ
ಸರ್ಜನನ 
ಕೈ ಕಟ್ಟಿಸಿ
ಒಂದು ಗಳಿಗೆಯಾದರೂ
ನಿಲ್ಲಿಸಿತು.


***

ಅರಳುವುದೆಂದರೆ
ಒಂದೆ
ಚಿಕ್ಕದಾದರೂ
ದೊಡ್ಡದಾದರೂ...







ತುಟಿ ಕೆನ್ನೆ
ಬಿರುಕು ಬಿಡುವ
ಒಣ ಹವೆಯಲ್ಲಿ
ಒಮ್ಮೊಮ್ಮೆ
ಅನಿಸುತ್ತೆ-
ಎಲ್ಲವೂ
ಅನುಕರಣೆಯೇ?
ಸ್ವಂತದ್ದು
ಏನೂ ಇಲ್ಲವೇ?


 


ನಾವು
ಸರ್ವಧರ್ಮ ಸಹಿಷ್ಣುಗಳು
ಗುರುವಾರ
ರಾಯರ ಮಠ
ಭಾನುವಾರ
ಚರ್ಚು
ಶುಕ್ರವಾರ
ಮಸೀದಿ-

ಮುಂದೆ
ಕೈ ಚಾಚಿ
ಭಿಕ್ಷೆ ಬೇಡುವವರು.

(ನೀಲು ಪ್ರೇರಿತ)


***