Thursday, 16 January 2014

ಅವರ್ಣನೀಯ
ಡಾ.ಕಸಾಬಿ ಡೆಲಿಹಾ ಹಜಾರಿಕಾ


ಆಕಾಶ-ಮೋಡಗಳಂತೆ
ನದಿ ಮತ್ತು ಗೋಲಿಕಲ್ಲುಗಳಂತೆ
ಹೆಸರು ಹೊತ್ತಿರುವ ಕೆಲವು ಸಂಬಂಧಗಳು
ಹಾಗೇ,
ದಿಕ್ಕಿಲ್ಲದವರಂತೆ
ಖಾಲಿ ಗುಡಿಸಲಿನಂತ
ಮನದ ಮೃದು ಮೂಲೆಗಳಲ್ಲಿ
ಮನುಷ್ಯರ ನಡುವಿನ ಹೆಸರಿಲ್ಲದ ಕೆಲ ಬಂಧಗಳು

ಅವು ಕೆಲವೊಮ್ಮೆ ಹೊರಗಡಿಯಿಟ್ಟು
ಹಳ್ಳದ ತುದಿಯ ಕೆರೆ ಹತ್ತಿ
ಸುಖದ ಮಂದಿಯ ನಗರದಲ್ಲಿ
ಸಂಚಾರ ಹೊರಡುತ್ತವೆ
ಕೆರೆ ನೀರು ಗಾಳಿಗೆ ಅದುರುತ್ತದೆ
ಪ್ರತೀ ಹೆಜ್ಜೆಗಂಟಿದ ಅನಿಶ್ಚಿತತೆಯಲ್ಲಿ
ಮುಚ್ಚಿದ ಕಿಟಕಿಗಳಿಗೆ ಕಿವಿಗೊಡುತ್ತಾ
ನೆರಳಿನಂತೆ ಇಡೀ ನಗರದಲ್ಲಿ ಅಲೆಯುತ್ತವೆ
ಅವುಗಳನ್ನು ಖುಶಿಯಿಂದಿಡಲು
ಸಾಕು
ಹಸಿವಿಗೊಂದು ಚೂರು ಬೆಳಕು
ಬಾಯಾರಿಕೆಗೊಂದು ಹನಿ ಹಾಡು

ಹೀಗೇ ಅಲೆಯುತ್ತ
ಮುಸ್ಸಂಜೆ ಹೊತ್ತಿಗೆ
ಪತರುಗುಡುವ, ಆತಂಕದ, ದೈನ್ಯದ
ಉಡುಪುಗಳನ್ನು ನಾಳೆಗೆ ನೀಟಾಗಿ ಮಡಿಸಿಟ್ಟು
ತಮ್ಮ ಒಣಎಲೆಯ ಹಾಸಿಗೆಯಲ್ಲಿ ಮತ್ತೆ ಒರಗುತ್ತವೆ

ಅವು
ಅರೆನಿದ್ರೆಯಲಿ ಕಂಡ
ಅಸ್ಪಷ್ಟ ಪ್ರತಿಮೆಗಳನ್ನು
ಶನಿವಾರದ ಸಂಜೆಯ ಪೇಟೆಯಲ್ಲಿ
ಕೊಳ್ಳುತ್ತವೆ, ಮಾರುತ್ತವೆ

ರವಿವಾರ ಬೆಳಿಗ್ಗೆ
ನದಿದಂಡೆಯಲ್ಲಿ
ಸೂರ್ಯಸ್ನಾನಕ್ಕೆ ಹಪಹಪಿಸುತ್ತವೆ
ಆದರೆ ಯಾರನ್ನು ಯಾರು ಕರೆಯುವುದು,
ಯಾರಿಗೂ ಹೆಸರಿಲ್ಲದಿರುವಾಗ...

ಎಲ್ಲಾ ಕಳಕೊಂಡ ಕೆಲವಂತೂ   
ಎಷ್ಟು ಒಂಟಿಯೆಂದರೆ
ಒಂದು ಹನಿ ನೀರು ಕೊಡುವುದರಲ್ಲಿ
ಕಣ್ಣಲ್ಲಿ ನೀರೇ ಬಂದುಬಿಡುತ್ತದೆ

ಇದೆಲ್ಲದರ ಹೊರಗೆ
ಈ ಅಸಂಖ್ಯ ವಿಚಿತ್ರ ಸಂಬಂಧಗಳನ್ನು
ಸದಾ ಎಚ್ಚರದ ಕಾಲ
ಮೊಂಡು ಕ್ಷಣಗಳೊದಿಗೆ
ಅನವರತ ಗಮನಿಸುತ್ತಿರುತ್ತದೆ

***

(ನಾಗರಾಜ ಹರಪನಹಳ್ಳಿಯವರು ಕಳಿಸಿದ ಈ  ಅಸ್ಸಾಮಿ ಕವಿತೆಯನ್ನು ಇಂಗ್ಲಿಷಿಂದ ಕನ್ನಡಕ್ಕೆ ಅನುವಾದಿಸಿದೆ. ಕವಿಯನ್ನು ಗೂಗಲಲ್ಲಿ ಹುಡುಕಿದೆ, ಸಿಗಲಿಲ್ಲ. )

No comments:

Post a Comment