Monday 13 January 2014

ಎದೆಯ ಹಾಡು


ನಾಗರಾಜ ಹರಪನಹಳ್ಳಿ

 Nagaraj Harapanahalli


 

ನಾವಿಬ್ಬರೂ ಸೋತವರು
ಬಯಲ ಬೆಳಕಲ್ಲಿ ಕೂತು ಧ್ಯಾನ
ಒಬ್ಬರ ಬೊಗಸೆಯಲ್ಲಿ ಇನ್ನೊಬ್ಬರ ಮುಖವಿಟ್ಟು 
ಕಳೆದವರ ಸುಳಿದು ಬೀಸುವ ಗಾಳಿಯಲಿ ಎಳೆದು ತರೋಣ
ನಾಲ್ಕು ಹನಿ ಕಣ್ಣೀರ ಹರಿಸೋಣ

ಹರಿವ ನದಿ ಕಣ್ಣಂಚಲಿ ಸಂತೈಸುತ್ತಿರಲಿ 
ಕೆನ್ನೆಯ ಮೇಲೆ ಹರಿದ ತೊರೆಗೆ
ನೆಲದಲ್ಲಿನ ಕನಸ ಬೀಜಗಳು 
ನಾಳೆಯನ್ನ ಹಸಿರಾಗಿಸಲಿ

ನಮ್ಮಿಬ್ಬರ ನಿಟ್ಟುಸಿರು
ಗಾಳಿಯಲಿ ಬೆರತು ಬಯಲ ಆಕಾಶ ಸೇರಲಿ ಬಿಡು
ಅಲ್ಲಿ ಅವು ಕಪ್ಪನೆಯ ಮೋಡವಾಗಿ
ಮಳೆ ಸುರಿದು ಬಿಡಲಿ
ನೆಲ ಮುಗಿಲು ಒಂದಾಗಿ
ನಗುತಿರಲಿ ನನ್ನವ್ವನೊಡಲು 

ನಾವು ಆಡಿದ ಮಾತು
ಕಾವ್ಯ

ನಮ್ಮವರ ಎದೆತುಂಬಲಿ
ಅಳಿದು ಹೋಗಲಿ ಹಗೆ
ಇಲ್ಲವಾಗಲಿ ದ್ವೇಷದ ಜ್ವಾಲೆ
ನಮ್ಮವರ ಬದುಕು ಜಂಗಮವಾಗಲಿ 
ಹಾದಿ ತುಂಬಾ ನನ್ನವ್ವನ ಕನಸು 
ಬೆಳದಿಂಗಳ ಬೆಳಕಾಗಲಿ
ಬಯಲ ಆಗಸದ ತುಂಬೆಲ್ಲಾ ಕಾಳು ಚೆಲ್ಲಿದ ನಕ್ಷತ್ರ


***

No comments:

Post a Comment