Tuesday, 7 January 2014

 ನಾಲ್ಕು ಗೆಜ್ಜೆ ದನಿಯ ಚೆಲ್ಲಿ... 
 

ಎಂ.ಆರ್ ಕಮಲಾ


ಗೆಜ್ಜೆ-ಒಂದು
ತಂತಿ ಮೀಟಿದರೆ ಮೋಡವೇಕೆ ಅಳುತ್ತದೆ
ಹೆಜ್ಜೆಯಿಟ್ಟರೆ ಗೆಜ್ಜೆಯೇಕೆ ನರಳುತ್ತದೆ
ಕಂಪಿನುಸಿರಿಗೆ ಗಾಳಿಯೇಕೆ ನಿಡುಸುಯ್ಯುತ್ತದೆ
ಹೆರಳ ಬಿಚ್ಚಿದರೆ ಕನಸೇಕೆ ಬಿಕ್ಕುತ್ತದೆ
ಮೈ ಚಾಚಿದರೆ ಕಡಲೇಕೆ ಭೋರ್ಗರೆಯುತ್ತದೆ?!

ಗೆಜ್ಜೆ-ಎರಡು
ರೆಪ್ಪೆ ತುದಿಯಲ್ಲಿ ಹೆಪ್ಪುಗಟ್ಟಿದೆ ಹನಿ
ಭಾವದ ಕಾವ ತಾಗಿಸಬೇಡ
ವೀಣೆ ಮನೆ ಮನೆಯಲ್ಲೂ ಹಾಡು
ತಂತಿಯ ಭ್ರಾಂತಿ ಸೋಕಿಸಬೇಡ
ಹೂವ ಬಟ್ಟಲಿನಲ್ಲಿ ಜೇನುಗನಸು
ದಳ ದಳನೆ ದಳ ಬಿಚ್ಚಬೇಡ
ಹೆಜ್ಜೆ ಹೆಜ್ಜೆಯಲು ಸ್ವರ, ಜಾತಿ, ವರ್ಣ
ಗೆಜ್ಜೆ ನಾದವನೆಂದು ಕೇಳಿಸಬೇಡ

ಗೆಜ್ಜೆ-ಮೂರು
ಬೊಗಸೆಯೊಡ್ಡು -ಕಣ್ಣಿಂದ ಚುಕ್ಕೆ ಹರಳು ಜಾರುತ್ತದೆ
ತೋಳ ತಬ್ಬು- ಮುತ್ತು ತಂತಾನೆ ಮಾಲೆಯಾಗುತ್ತದೆ
ಅಂಗಾಲ ಸವರು-ಕೆಂಡ ಹವಳ ಉದುರುತ್ತದೆ
ಎದೆಗೊರಗಿಕೋ -ಪಚ್ಚೆಯ ಹಚ್ಚೆ ಮೂಡುತ್ತದೆ

ಗೆಜ್ಜೆ-ನಾಲ್ಕು
ನೀನು ಕದ ತಟ್ಟದೆ ನಾನು ಬಾಗಿಲು ತೆರೆದೆ
ಇದೀಗ ನನ್ನ ಕೋಣೆಯ ತುಂಬಾ ನಿನ್ನ `ಪದ' ಕುಣಿತ!
ತಾಳವನ್ನೇಕೆ ತಪ್ಪಿಸಬೇಕು?
ರಂಗಿನ ಹಂಗು ತೊರೆದು ವರುಷಗಳೇ ಉರುಳಿವೆ
ಗೆಜ್ಜೆ ಕಟ್ಟಿ ಅಟ್ಟಕ್ಕಿಟ್ಟಾಗಿದೆ!
ಬೇಡ ಬೇಡ ಈ ದ್ರುತ ಗತಿಯ ನರ್ತನ
ಮಂದ್ರದಿ ಮಿಡಿಸು ಎದೆಯ ವೀಣಾ


***

No comments:

Post a Comment