Monday 30 December 2013


'ಮಠದ ಹೋರಿ' :ಗ್ರಾಮೀಣ ಕತೆಗಳ ಹಂದರದಲ್ಲಿ ಹೊಸ ಕನಸು

ನಾಗರಾಜ ಹರಪನಹಳ್ಳಿ 

 

 

 

 



'ಕತ್ತಲಗರ್ಭದ ಮಿಂಚು' ಕಥಾ ಸಂಕಲನ, 'ಕೆಂಗುಲಾಬಿ' ಕಾದಂಬರಿ ಮೂಲಕ ಕನ್ನಡ ಸಾಹಿತ್ಯದಲ್ಲಿ ಹೆಜ್ಜೆ ಗುರುತು ಮೂಡಿಸಿದ ಕತೆಗಾರ ಹನುಮಂತ ಹಾಲಗೇರಿ ಇದೀಗ ತಮ್ಮ ಎರಡನೇ ಕಥಾ ಸಂಕಲನ ‘ಮಠದ ಹೋರಿ ಮತ್ತು ಇತರ ಕತೆ’ಗಳನ್ನು  ಪ್ರಕಟಿಸಿದ್ದಾರೆ. ಬಳ್ಳಾರಿಯ ಸಂಸ್ಕೃತಿ ಪ್ರಕಾಶನ ಈ ಕಥಾ ಸಂಕಲನವನ್ನು ಹೊರತಂದಿದೆ.

ಹಾಲಗೇರಿ ಅವರು ಬರೆದ ಹತ್ತು ಕತೆಗಳು ಈ ಸಂಕಲನದಲ್ಲಿವೆ. ಕತೆಗಾರನೊಬ್ಬನ ಎರಡನೇ ಸಂಕಲನ ಆತನ ಚಿಂತನಾ ಕ್ರಮ ಮತ್ತು ಬದುಕನ್ನು ನೋಡುವ ಬಗೆಯನ್ನು ಕಟ್ಟಿಕೊಡುತ್ತದೆ ಎಂಬುದನ್ನು ಈ ಸಂಕಲನದಲ್ಲಿ ಕಾಣಬಹುದು. ಕತೆಗಾರ ಸಮಾಜದ ಸ್ಥಗಿತತೆಯನ್ನು ಪ್ರಶ್ನಿಸುತ್ತಲೇ ಬದಲಾವಣೆಯನ್ನು ಬಯಸುತ್ತಾನೆ ಎಂಬ ಸ್ಪಷ್ಟ ಸುಳಿವು ಈ ಸಂಕಲನದಲ್ಲಿದೆ.

ಮನುಷ್ಯನೋರ್ವನಲ್ಲಿ ಕತೆಗಾರ ಬೆಳೆದಂತೆ ಆತ ಹೆಚ್ಚು ಮಾನವೀಯನಾಗುತ್ತಾನೆ. ಜೊತೆಗೆ ಬದುಕು ಬದಲಾಗಬೇಕು. ಅಸಹನೆ, ಬಡತನ ಇಲ್ಲವಾಗಬೇಕು. ಜಾತೀಯತೆ ಅಳಿಸ ಬೇಕು ಎಂಬ ಕನಸುಕಾಣುತ್ತಾನೆ. ದೇವರು ಧರ್ಮದ ಹೆಸರಲ್ಲಿ, ಜಾತಿಯ ಹೆಸರಲ್ಲಿ ,ಅಭಿವೃದ್ಧಿ ರಾಜಕೀಯದ ಹೆಸರಲ್ಲಿ  ನಡೆಯುವ ಅನ್ಯಾಯ, ಅಕ್ರಮಗಳನ್ನು ವಿರೋಧಿಸುವ ಕ್ರಮ ಪ್ರಗತಿಪರ ಮನಸ್ಸಿನ ಯುವಕರಲ್ಲಿ ಸಹಜವಾಗಿ ಬೆಳೆದುಬಂದಿರುತ್ತದೆ. ಸಮಾಜ ಬದಲಾಗಬೇಕು ಎಂಬ ಆಶಯದಿಂದಲೇ ಬದುಕನ್ನು ನೋಡುತ್ತಾನೆ. ಆದರೆ ಅದಕ್ಕೆ ವಿಪರ್ಯಾಸದ ಸಂಗತಿಗಳು ಕಣ್ಮುಂದೆ ನಡೆದರೆ ಪ್ರತಿಭಟಿಸುವ ಮನಸ್ಸು ಒಳಗೊಳಗೇ ರೂಪಗೊಳ್ಳುತ್ತದೆ.

ಬರವಣಿಗೆಯನ್ನು ಆಯ್ಕೆ ಮಾಡಿಕೊಂಡ ಚಲನಶೀಲ ಮನಸ್ಸಿನ ಯುವಕ ಸಮಾಜದ ಚಲನೆಯ ಪ್ರತಿಘಟ್ಟಗಳನ್ನು ಕತೆ ಮಾಡುವ ಬಗೆ ಮತ್ತು ತಾನು ನಂಬಿಕೊಂಡು ಬಂದ ಬದುಕಿನ ಧೋರಣೆಯನ್ನು ಹೇಳಲು ಕತೆಯ ವಸ್ತುವೊಂದಕ್ಕೆ ತಂತ್ರಗಾರಿಕೆ ರೂಪಿಸಿಕೊಳ್ಳುವ ಬಗೆ ಸಹ ಕತೆಗಾರನ ಪ್ರತಿಭೆಗೆ ಒಡ್ಡಿದ ಸವಾಲು ಆಗಿರುತ್ತದೆ. ಈ ಮಾತಿಗೆ ಪುಷ್ಠಿ ಒದಗಿಸುತ್ತವೆ ‘ಮೂಕ ದ್ಯಾವ್ರು’ ಮತ್ತು ‘ಮಠದ ಹೋರಿ’ ಕತೆಗಳು. ಬಹುಶಃ ಕನ್ನಡ ಕಥಾಲೋಕದಲ್ಲಿ ‘ಮಠದ ಹೋರಿ’ ಕತೆ ಚರ್ಚೆಗೆ ನಾಂದಿ ಹಾಡಬಹುದಾದ ಕತೆ. ಮಠದ ವ್ಯವಸ್ಥೆಯನ್ನು ಅಲ್ಲಿ ಸ್ವಾಮಿಗಳಾದವರ ಮನಸ್ಥಿತಿಯನ್ನು ಮೂಕ ಪ್ರಾಣಿ ಜೊತೆ ನಡೆಯುವ ಸಂಭಾಷಣೆಯ ಮೂಲಕ ಕತೆಗಾರ ಕಟ್ಟಿಕೊಡುವ ಬಗೆ ಮಾನವೀಯವಾದುದು. ಸ್ವಾಮಿ ಆಗುವ ಸಂಕಟಗಳಿಗೆ ಕತೆಗಾರ ಧ್ವನಿಯಾಗಿರುವುದು ಹೆಚ್ಚು ಅರ್ಥಪೂರ್ಣ.

ಮೂಕ ಪ್ರಾಣಿ ಮಠದ ಹೋರಿಯೇ ತನ್ನ ಕತೆ ಹೇಳುವ ಮೂಲಕ ಹೊಸ ಜಗತ್ತನ್ನು ತೆರದಿಡುತ್ತದೆ. ಈ ಕತೆಯಲ್ಲಿನ ಒಂದು ಸಾಲು ಹೀಗಿದೆ....“ಪಾಪ ಸ್ವಾಮಿಗೋಳ ಪರಿಸ್ಥಿತಿ ಮಠದಾಗ ಇದ್ದ ಬಂದಿರೋ ನಮ್ಮಂಥವರಿಗೆ ಮಾತ್ರ ಗೊತ್ತು. ದಿನ ರಾತ್ರಿ ಅವರು ಬಂದು ನನ್ನ ಕೊರಳ ಹಿಡಕೊಂಡು ಮೂಕ ಭಾಷೆಯೊಳಗ ತಮ್ಮ ಕಷ್ಟ ಎಲ್ಲ ಹೇಳಕೋತಿದ್ರು. ಕಟುಕರ ಬಾಯಾಗ ಹೋಗಿದ್ರೂ ಪರವಾಗಿಲ್ಲ. ನಿನ್ನಂಗ ನಾನು ಹೋರಿ ಆಗಿ ಹುಟ್ಟಬೇಕಿತ್ತು, ಈ  ಕಾವಿ ಅರಬಿ ತೆಗದೊಗೆದು ಎಲ್ಲಾದ್ರೂ ದೂರ ಓಡಿ ಹೋಗಿಬಿಡಬೇಕು ಅಂತ ಒಮ್ಮೊಮ್ಮಿ ಅನಸತೈತಿ. ಆದ್ರ ಎಲ ಕಡೆ ಭಕ್ತರಿರೋದ್ರಿಂದ ಎಲ್ಲಿ ಹೋಗಬೇಕು ಅಂತಾನೆ ತಿಳಿವೊಲ್ಲದು....”

ಕತೆಗಾರ ಬಯಸುವ ಕ್ರಾಂತಿಯ ಬೀಜಗಳು ಸಹ ಇಲ್ಲಿವೆ. ಮೂಕ ಪ್ರಾಣಿ ಮತ್ತು ಮಠದ ಸ್ವಾಮಿಜೀಯನ್ನು ಮುಖಾಮುಖಿಯಾಗಿಸುವ ಮೂಲಕ ಕತೆಗಾರನ ಒಳಗಣ್ಣಿನ ಬಂಡಾಯ ತೆರೆದುಕೊಳ್ಳುತ್ತದೆ. ವ್ಯವಸ್ಥೆಯೊಂದನ್ನು ಮೌನವಾಗಿ ಬೀಳಿಸಿ, ಹೊಸದನ್ನು ಕಟ್ಟುವ ಆ ಮೂಲಕ ಪ್ರತಿಭಟನೆಯೊಂದನ್ನು ದಾಖಲಿಸುವ ಬಗೆಯನ್ನು ಇಲ್ಲಿ ಕಾಣಬಹುದು. ‘ಮೂಕ ದ್ಯಾವ್ರು’ ಕತೆ ಸಹ ಜಾತಿ ವ್ಯವಸ್ಥೆಯನ್ನು ಪ್ರತಿಭಟಿಸಲು ತುಳಿತಕ್ಕೆ ಒಳಗಾದ ವರ್ಗದ ದಾಸರ ಶೇಷಪ್ಪ ಹಾಕುವ ವೇಷ, ಮೌಢ್ಯವನ್ನೇ ಅಸ್ತ್ರವಾಗಿಸಿಕೊಳ್ಳುವ ತಂತ್ರ ಮತ್ತು ಕೊನೆಗೆ ಗ್ರಾಮೀಣ ಬದುಕಿನ ವರ್ಣ ಸಂಘರ್ಷ ತೆಗೆದುಕೊಳ್ಳುವ ತಿರುವು ಕತೆಯಲ್ಲಿ ಸೊಗಸಾಗಿ ಪಡಮೂಡಿದೆ. ಕತೆಯ ಅಂತ್ಯ ಕೃತಕ ಎನಿಸಿದರೂ, ದೇವರನ್ನು ತಿರಸ್ಕರಿಸಿ, ಅಕ್ಷರದ ಬೆಳಕಿಗೆ ಹಂಬಲಿಸುವ ಶ್ರಮಿಕ ವರ್ಗದ ಮಾತು, ಬದಲಾವಣೆ ಬಯಸುವ ಸಮಾಜದ ಆಶಯವೇ ಆಗಿದೆ. 


ಬಯಲು ಸೀಮೆಯ ಅದರಲ್ಲೂ ಬಾಗಲಕೋಟೆ ಸುತ್ತಮುತ್ತ ನಡೆಯುವ ಮನುಷ್ಯ ಬದುಕಿನ ಕಷ್ಟಕೋಟಲೆಗಳು , ಆ ಪ್ರದೇಶದ ಗ್ರಾಮೀಣ ಸೊಗಡಿನ ಭಾಷೆಯನ್ನು ದುಡಿಸಿಕೊಂಡು ಕತೆ ಕಟ್ಟುವಲ್ಲಿ ಹಾಲಗೇರಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ‘ಹಾದರ ಕಾಯಕದ ಪುಣ್ಯಸ್ತ್ರೀ’ ಎಂಬ ಕತೆ ಬಾಗಲಕೋಟೆಯ ಕೆಳ ವರ್ಗದ ರೈತನ ಬದುಕು ಮತ್ತು ಆತನ ಮಗಳು ಮುಂಬಯಿ ವೇಶ್ಯಾ ಜಗತ್ತಿಗೆ ಹೋಗಿ ಅಲ್ಲಿ ಕತೆಗಾರನಿಗೆ ಸಿಗುವ, ಮಾತನಾಡುವ ಕತೆ ಹೆಚ್ಚು ಮಾನವೀಯ ಅನ್ನಿಸುವಂತೆ ಮೂಡಿ ಬಂದಿದೆ. ರೈತ ತಿಪ್ಪ ಮತ್ತು ಆತನ ಮಗಳು ಅವ್ವಕ್ಕಳ ಸುತ್ತ ಸುತ್ತುವ ಕತೆ ಹಳ್ಳಿ ಬದುಕಿನ ಕೆಳ ಜಾತಿಯವರ ದುರಂತ ಬದುಕನ್ನು ಬಿಚ್ಚಿಡುತ್ತದೆ. ಕತೆ ಹೆಣೆದ ಶೈಲಿ ಸಹ ಹೊಸದಲ್ಲವಾದರೂ, ಬಾಗಲಕೋಟೆಯ ಭಾಷೆ ಮತ್ತು ರೈತ ಬದುಕಿನ ಶಬ್ದಗಳ ಹಂದರ ಸೊಗಸಾಗಿದೆ. ‘ಕಾರ ಹುಣ್ಣಿಮಿ ಸುತ್ತ ಮಾಗಿ ಮಡಿಕೆ ಹೊಡೆದು ಭೂಮಿ ತಾಯಿಗೆ ಬಿಸಲು  ತಿನಿಸಿ, ಚಕ್ಕಡಿಗಟ್ಟಲೆ ತಿಪ್ಪಿಗೊಬ್ಬರ ಹೇರಿ, ಮತ್ತೊಮ್ಮೆ ಹರಗಿ, ಅಮ್ಯಾಲ ಕೋಲಿ ಆರಿಸಿ ಬಿಟ್ಟರ ಹೊಲ ಗರತ್ಯಾರ ಗಲ್ಲದ ಗತೆ ಮೆತ್ತಗಾಗಿ ಹದಕ್ಕೆ ಬರುತ್ತಿತ್ತು. ಮುಂದೆ ರೋಣಿ ಮಳಿ ಬಿದ್ದಾಗ ಹದ ನೋಡ್ಕೊಂಡು ಜೋಳ ಬಿತ್ತಲಾಗುತ್ತಿತ್ತು....’ ಹೀಗೆ ಪ್ರಾದೇಶಿಕ ಭಾಷೆಯ ಸೊಗಡು ಹಾಲಗೇರಿ ಕತೆಗಳಲ್ಲಿ ಎಲ್ಲೆಡೆ ಕಾಣಸಿಗುತ್ತದೆ. 


‘ಡೈರಿ ಹಾಲಿಗೆ ಹುಳಿ ಬಿತ್ತು’ ಕತೆ ವರ್ಣ ಸಂಘರ್ಷವನ್ನೇ ಕಟ್ಟಿಕೊಡುವಂತಹದ್ದು. ಲಿಂಗಾಯತರ ಕೇರಿಯಲ್ಲಿ ಪ್ರಾರಂಭವಾದ ಹಾಲಿನ ಡೈರಿ ನಾಯಕರ ಕೇರಿಯಲ್ಲಿ ಪ್ರಾರಂಭಿಸಬೇಕೆಂದು ಕೆಳವರ್ಗದ ಯುವಕರು ಹಠ ಹಿಡಿಯುವಲ್ಲಿ ಪ್ರಾರಂಭವಾಗುವ ಘರ್ಷಣೆ ಲಿಂಗಾಯತರ ಕೇರಿಯ ಹಾಲಿನ ಡೈರಿ ಪಾಯಿಂಟ್ ಮನೆಯ ಹುಡುಗಿಯನ್ನ ಪ್ರೀತಿಸಿ ಓಡಿ ಹೋಗುವ ಕತೆಯ ಅಚಾನಕ್ ತಿರುವು ಸಹ ಹೊಸತನ್ನು ಹೇಳಲು ಬಯಸುತ್ತದೆ. ಅಂತರ್ಜಾತಿ ವಿವಾಹದ ಪ್ರಸ್ತುತತೆಯನ್ನು ಮಿಂಚಿನಂತೆ ಸುಳಿದು ಹೋಗಿಬಿಡುತ್ತದೆ. 


 ‘ಬೆಂಕಿ ಉಗುಳುವ ಪಂಕಾ’ ಮತ್ತು ‘ಕಾಂಕ್ರೀಟ್ ಹಕ್ಕಿಯ ಮೊಟ್ಟೆಗಳು’ ಕತೆಗಳು ಅಭಿವೃದ್ಧಿ ರಾಜಕಾರಣ ಗ್ರಾಮೀಣ ಬದುಕನ್ನು ನಾಶ ಮಾಡುವ ಬಗೆಯನ್ನು ದಾಖಲಿಸುತ್ತವೆ. ಕತೆಗಾರ ಸಮಾಜದಲ್ಲಿನ ನಾನಾ ಸ್ತರದ ಪಾತ್ರಗಳ ಮನಸ್ಸಿನ ಒಯ್ದಾಟವನ್ನು ದಾಖಲಿಸುವ ತಂತ್ರ ಒಲಿದಿರುವುದನ್ನು ಕಾಣಬಹುದು. ‘ಕೇರಿಯ ಗಾಯಕ್ಕೆ ಕೆಂಡದ ಮುಲಾಮು’ ಕತೆ ಜಾತಿ ಸಂಘರ್ಷವನ್ನು ಹಾಗೂ ಸಮಯ ಸಾಧಕ ಹೋರಾಟಗಾರರ ಮುಖವಾಡವನ್ನು ಕಳಚುವ ಕತೆಯಾಗಿ ವರ್ತಮಾನವನ್ನು ಹಿಡಿದಿಡುತ್ತದೆ. 
ವರ್ಗ ಮತ್ತು ವರ್ಣ ಸಂಘರ್ಷಗಳನ್ನು ಇಲ್ಲಿ ಬರುವ  ಕತೆಗಳಲ್ಲಿ ಸೂಕ್ಷ್ಮವಾಗಿ ಕಾಣಬಹುದು. ಮನುಷ್ಯನಲ್ಲಿ ಕಾಮ, ಪ್ರಣಯ, ಹಗರಣಗಳನ್ನು ಕಟ್ಟಿಕೊಡುವ ಕತೆಗಳು ಇಲ್ಲಿವೆ. ‘ಗೆಲ್ಲುವೆನೆಂಬುದು ಸೋಲುವ ಮಾತು’ ಮತ್ತು ‘ ಭಾಗವ್ವ’ ಕತೆಗಳು ಈ ಸಾಲಿನಲ್ಲಿ ನಿಲ್ಲುವಂತಹವು.

‘ಸಂವಿಧಾನ ಮತ್ತು ರಣಹದ್ದು’ ಕತೆ ಸಹ ಪ್ರಸ್ತುತ ರಾಜಕಾರಣ ಹಳ್ಳಿಯ ಮುಗ್ಧ ಹುಡುಗನನ್ನು ಮತ್ತ ಆತನ ಬಡತನವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವ ರೀತಿ ಹಾಗೂ ಜಾನಪದ ಹಾಡುಗಾರಿಕೆಯನ್ನು ಸಹ ರಾಜಕಾರಣ ಮಲೀನಗೊಳಿಸಿರುವ ಸ್ವರೂಪವನ್ನು ಕಟ್ಟಿಕೊಡುತ್ತದೆ. ‘ಕುಂಟ ಭೀಮ್ಯಾ ತನ್ನ ಮುರುಕಲು ಮನೆಯ ಮುಂದೆ ಪಾನ್ ಅಂಗಡಿಯೊಂದನ್ನು ಇಟ್ಟುಕೊಂಡಿದ್ದಾನೆ. ಈಗಲೂ ಭೀಮ್ಯಾ ಪಾನ್ ಕಟ್ಟುತ್ತಾ ಚನ್ನಪ್ಪ ಚನ್ನಗೌಡ’ ಎಂಬ ಹಾಡು ಗುನಗುಣಿಸುತ್ತಿರುತ್ತಾನೆ. ಅಂಗಡಿ ಹಿಂದಿನ ಮುರುಕಲ ಮನೆಯಲ್ಲಿ ಮುದುಕಿ ಯಲ್ಲವ್ವ ‘ನಮ್ಮ ಭೀಮ್ಯಾನ ಹಣೆ ಬರಹ ಚಲೋ ಇಲ್ರೋ ಯಪ್ಪಾ. ಇಲ್ಲಂದ್ರ ಇಷ್ಟೊತ್ತಿಗೆ ಭೀಮ್ಯಾ ಮಿಲಟರಿ ಸೇರಕೊಂಡ ಕೈ ತುಂಬಾ ಪಗಾರ ತರತಿದ್ದ ಎಂದು ಹಳಹಳಿಸುತ್ತ ಬಿದ್ದುಕೊಂಡಿರುತ್ತಾಳೆ.’ ಎಂಬ ಮಾತು ಗ್ರಾಮೀಣ ಬದುಕಿನಲ್ಲಿ ಬಡವರು  ರಾಜಕಾರಣಕ್ಕೆ ಬಳಕೆಯಾಗುವುದರ ಸಂಕೇತದಂತಿದೆ.
ಕತೆಗಳಿಗೆ ಅರ್ಥಪೂರ್ಣ ಚಿತ್ರ ಬಿಡಿಸಿದ ಡಾ.ಕೃಷ್ಣ ಗಿಳಿಯಾರ್, ಕತೆಗಳಿಗೆ ಶೀರ್ಷಿಕೆ ನೀಡಿದ ಕವಿ ಬಸವರಾಜ್ ಹೂಗಾರ್  ಅವರ ಪ್ರಗತಿಪರ ಮನಸ್ಸು ಸಹ ಇದೆ. ಮುಂದೆಯೂ  ಸಮಾಜದ ನಡೆಗೆ ಕತೆಗಾರ ಹನುಮಂತ ಹಾಲಗೇರಿ ತಮ್ಮ ಬರಹದ ಮೂಲಕ ಕ್ರಿಯಾತ್ಮಕ ಪ್ರತಿಭಟನೆಯ ಧ್ವನಿಯನ್ನು ಮುಂದುವರಿಸಲಿ

No comments:

Post a Comment