Friday 29 November 2013

ಮಗಳು ಬರುತ್ತಿದ್ದಾಳೆ!

ಮೂಲ: ಎಲಿಸ್ ವಾಕರ್

ಅನುವಾದ: ಎಂ ಆರ್ ಕಮಲಾ




 
 



ಮಗಳು ಮನೆಗೆ ಬರುತ್ತಿದ್ದಾಳೆ! 
ಅವಳಿಗಾಗಿ ಮೆತ್ತೆಯನ್ನು
ಆರಾಮ ಖುರ್ಚಿಯನ್ನು
ನಿಲುವುಗನ್ನಡಿಯನ್ನು 
ಟೇಬಲ್ ಲ್ಯಾಂಪನ್ನು 
ಪುಟ್ಟ ಮೇಜನ್ನು ಕೊಂಡು ತಂದೆ 
ಅವಳಿಗೀಗ ಎಲ್ಲವೂ ಸಿಧ್ಧವಾಗಿದೆ
ಹರಿದಿರುವ ಕಿಟಕಿಯ 
ಪರದೆಗಳ ಹೊರತಾಗಿ
ಚಂದದ ಕಸೂತಿ ಪರದೆ ತರಲು 
ನನಗೀಗ ಬಿಡುವಿಲ್ಲ
ಹಾಗಾಗಿ ತರುತ್ತಿಲ್ಲ

ಮೊದಲು ನಾನೊಂದು ಭಾಷಣ
ಸಿಧ್ಧಪಡಿಸಬೇಕಿದೆ 
ಗಂಟಲು ತೊಂದರೆಗೆ ವೈದ್ಯರ 
ಬಳಿ ಹೋಗಬೇಕಿದೆ
ಈಗಾಗಲೇ ಎಲ್ಲಕ್ಕೂ ಸಮಯ ಮೀರಿದೆ 
ಭಾಷಣ ಸಿಧ್ಧಪಡಿಸಲೇಬೇಕಿದೆ 
ಕವಿಗೋಷ್ಠಿಯಲ್ಲಿ ಭಾಗವಹಿಸಬೇಕಿದೆ

ಹಾಗೆಯೇ ವಾಶಿಂಗ್ ಟನ್ ಡಿ ಸಿ ಯಿಂದ 
ಅಪ್ಪನಿಂದ ಮಗಳನ್ನು ವಿಮೋಚಿಸಿ 
ಸಿಧ್ಧಪಡಿಸಿದ ಈ ಕೋಣೆಯ 
ಕಾಣಿಕೆ ನೀಡಲೇಬೇಕಿದೆ


ಮಗಳು ಮನೆಗೆ ಬರುತ್ತಿದ್ದಾಳೆ!
ಆಕೆಯ ಕುರ್ಚಿ, ಆಕೆಯ ಮೇಜು 
ಆಕೆಯ ಕನ್ನಡಿ-ದೀಪ 
ಅವಳಿಗಿಷ್ಟವಾಗುತ್ತದೆಯೇ?
ಅಥವಾ ಅವಳು ಬರಿಯ 
ಹರಿದ ಪರದೆಗಳನ್ನಷ್ಟೇ
ಕಾಣುತ್ತಾಳೆಯೇ?


***
 Alice Malsenior Walker(1944-present) ಆಫ್ರೋ ಅಮೇರಿಕನ್ ಕವಯಿತ್ರಿ, ಕಾದಂಬರಿಗಾರ್ತಿ, ಸ್ತ್ರೀಪರ ಚಿಂತಕಿ ಮತ್ತು ಹೋರಾಟಗಾರ್ತಿ.
ಜಾರ್ಜಿಯಾದ ಬಡ ಕುಟುಂಬವೊಂದರಲ್ಲಿ ಹುಟ್ಟಿದ ಇವರು ಕರಿಯರಿಗೆ ವಿದ್ಯಾಭ್ಯಾಸವೇ ಕಷ್ಟವಾಗಿದ್ದ ಕಾಲದಲ್ಲಿ ತಾಯಿಯ ಬೆಂಬಲದಿಂದ ಶಾಲೆಗೆ ಸೇರಿ ಕಲಿಯುವಂತಾಯಿತು. ಚಿಕ್ಕಂದಿನಲ್ಲಿ ಅಫಘಾತವೊಂದರಲ್ಲಿ ಒಂದು ಕಣ್ಣನ್ನು ಕಳೆದುಕೊಂಡ ಕೀಳರಿಮೆಯನ್ನು ಗೆಲ್ಲುವ ಉಪಾಯವಾಗಿ ಬರೆಯಲು ಪ್ರಾರಂಭಿಸಿದ ಎಲಿಸ್ ಕಾಲೇಜು ದಿನಗಳಲ್ಲಿ ಮಾರ್ಟಿನ್ ಲೂಥರ್ ಕಿಂಗ್-ಜ್ಯೂ.ರ ಸಂಪರ್ಕಕ್ಕೂ ಬಂದರು.

ಅವರ ಕಾದಂಬರಿ 'ದಿ ಕಲರ್ ಪರ್ಪಲ್'ಗೆ ಪುಲಿಟ್ಙರ್ ಮತ್ತು ನ್ಯಾಶನಲ್ ಬುಕ್ ಬಹುಮಾನಗಳು ಬಂದಿವೆ.

No comments:

Post a Comment