ಹರಕೆಯ ಕುರಿ
ಹುಟ್ಟದ ಯೋನಿಗಳಿಲ್ಲವೆಂಬ
ಸತ್ಯ ಸಾಕ್ಷಾತ್ಕಾರ, ವಿಜ್ಞಾನದ ಹೊಳಹು ಕಂಡ ಕನಕ
ಚಾತುರ್ವರ್ಣ್ಯಂ ಮಯಾ ಸೃಷ್ಟಂ ಎಂದ
ದೇವರಿಗೆ ಒಲಿದದ್ದು ಒಂದನೆಯ ಒಗಟು
ಬಚ್ಚಲು ಮನೆಯಲ್ಲಿ ವಿಪ್ರರು ಬಾಳುಹಣ್ಣು ತಿಂದರು
ದೇವರಿಲ್ಲದ ಜಾಗವನ್ನು ಕಾಣದ ಕನಕ
ತಿನ್ನಲಾಗದೆ ಗುರುವಿಗೆ ಹಿಂದುರುಗಿಸಿ
ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ
ಎಂದು ಬೇಡಿಕೊಂಡ; ಅದು ಎರಡನೆಯ ಒಗಟು
ರಾಗಿಯನ್ನು ಬಿತ್ತಿ ರಾಗಿಯನ್ನೆ ಬೆಳೆದು
ಮೃಷ್ಟಾನ್ನದ ನೈವೇದ್ಯ ಮಾಡಲು ಹೋಗಿ ಸೋತನೆ
ಬಾರುಕೋಲಿನ ಏಟಿಗೆ ಏದುಸಿರು ಬಿಡುತ್ತಾ
ಹರಿಯ ಮೊರೆಹೊಕ್ಕು ಕಂಬದಿಂದ ಸಿಡಿ ಎಂದನೆ ನರಸಿಂಹನ
ಅವನವ್ವಳೇನು ಸಿಂಹದ ಬೆರಣಿ ಆಯಲು ಹೋಗಿ ಸಂಗವ ಮಾಡಿದಳೇ?
ಇದೆಲ್ಲ ಒಗಟು... ಗೊಂದಲಗಳ ಗಂಟು
ಅವರು ದೇವಸ್ಥಾನದ ಬಾಗಿಲನ್ನು ತೆರೆಯಲಿಲ್ಲ
ದೇವರನ್ನೆ ತಿರುಗಿಸಿದರು, ಕಿಂಡಿ ಕೊರೆದರು
ಭಕ್ತಿ ಹೊರಗೇ ಉಳಿಯಿತು
***
No comments:
Post a Comment