Thursday 21 November 2013

ಲಲ್ಲೇಶ್ವರಿಯ ಒಂದು ವಾಕ್

ಅನುವಾದ: ಗಿರಿಜಾ ಶಾಸ್ತ್ರಿ
 




















ಅರಳೆಯ ಹೂವಾಗಿ ಅರಳಲೆಂದೆ
ನಾನು ಲಲ್ಲಾ
ಈ ಬಣ್ಣದ ಲೋಕದೊಳಗೆ ಬಂದೆ

ಆದರೆ ಅಷ್ಟರಲ್ಲೇ ಮಾಲಿ ಬಂದ
ಹಿಂಜಿ ಹರಿದು ಕೊಳೆ ಬಿಡಿಸಿದ
ನೂಲುವವ ಬಂದ
ಬಿಲ್ಲಿಗೆ ಹೆದೆ ಕಟ್ಟಿ ಎಡೆಬಿಡದೆ ಹೊಡೆದ

ತಕಲಿ ಹಿಡಿದ ಹೆಂಗಸು ಬಂದಳು
ಗರ ಗರ ತಿರುಗಿಸಿದಳು
ನಾರು ನಾರು ಎಳೆದಳು

ಅಸಹಾಯಕಿ ಬಿದ್ದು ನೇತಾಡಿದೆ ಮಗ್ಗದ ಮೇಲೆ
ಪೊರಕೆ ಝಾಡಿಸಿದ ನೇಕಾರ ನನ್ನ ಮೇಲೆ

ಇದೀಗ ಅರಿವೆಯಾದೆ
ಅಗಸ ಎತ್ತಿ ಬಡಿದ
ಬಂಡೆ ಕಲ್ಲಿಗೆ ಬೀಸಿ ಒಗೆದ
ಸಾಬೂನು ಗಸ ಗಸ ತಿಕ್ಕಿ
ಕಾಲ ಕೆಳಗೆ ನಿರ್ದಯ ಹೊಸಕಿದ
ಬಲವೆಲ್ಲ ಬಿಟ್ಟು ಕುಕ್ಕಿದ ಮುಕ್ಕರಿದು ಹಿಂಡಿದ

ಈಗ ನನ್ನ ಮೈತುಂಬಾ ಓಡಾಡುತ್ತಿದೆ
ಸಿಂಪಿಗನ ಕತ್ತರಿ
ಹರಿದು ತುಂಡಾಗಿದ್ದೇನೆ
ತರಾವರಿ
ನಾನು, ಲಲ್ಲಾ
ಕೊನೆಗೂ ಹೀಗೆ
ನನ್ನ ಅಭೀಷ್ಟ ಪದ ಸೇರಿದ್ದೇನೆ


***

 

ಕಾಶ್ಮೀರದ ಅನುಭಾವಿ ಕವಯಿತ್ರಿ ಲಲ್ಲೇಶ್ವರಿ ಹದಿಮೂರನೆಯ ಶತಮಾನದ ಉತ್ತರಾರ್ಧದಲ್ಲಿ ಇದ್ದವಳು. ಅವಳ ವಾಖ್(ವಚನ)ಗಳು ಚಿಕ್ಕ ಚೊಕ್ಕ ಚಿನ್ನದ ಕಿರಿ ರೂಪದ ಹಿರಿಯರ್ಥ ಧ್ವನಿಸುವ ನಾಣ್ಣುಡಿಗಳಾಗಿ ಇಂದಿಗೂ ಅಲ್ಲಿ ಬಳಕೆಯಲ್ಲಿವೆ. ಕಾಶ್ಮೀರದಲ್ಲಿ ಈ ಶೈವ ಯೋಗಿನಿಯನ್ನು ಕಂಡರೆ ಕಾಶ್ಮೀರಿಗಳಿಗೆ ಅಪಾರ ಗೌರವ. ಹಿಂದೂಗಳೂ, ಮುಸ್ಲಿಮರೂ ಸಮಾನವಾಗಿ ಆದರಿಸುತ್ತ, ಲಲ್ಲಾ ವೂಜ್ (ತಾಯಿ), ಲಲ್ಲಾ ಡೇಡ್ (ಅಜ್ಜಿ), ಲಲ್ಲಾ ಮಟ್ಶ್ (ಹುಚ್ಚಿ), ಲಲ್ಲಾ ದೇವಿ- ಎಂದೆಲ್ಲಾ ಇವಳನ್ನು ಕರೆಯುತ್ತಾರೆ. ದೇವರ ಧ್ಯಾನದಲ್ಲಿ ಸದಾ ಮಗ್ನಳಾಗಿದ್ದುದರಿಂದ ಲಲ್ಲ ಅರೀಫಾ ಎಂದು ಅವಳ ಮುಸ್ಲಿಂ ಅನುಯಾಯಿಗಳು ಕರೆದರು. ದೇವರ ಪ್ರೇಮದಲ್ಲಿ ಅವಳು ಉನ್ಮತ್ತಳು ಎಂಬುದನ್ನು ಸೂಚಿಸಲು, ಅವಳ ಅಭಿಮಾನಿ ಬಾಬಾ ದಾವೂದ್ ಮಿಶ್ಕಾತಿ ಎಂಬ ಸೂಫೀ ಸಂತ ಅವಳನ್ನು ಮಜನೂ-ಇ-ಅಕಿಲಾ ಎಂದೂ ಕರೆದನು.

No comments:

Post a Comment