Monday, 18 November 2013

ಕೆಲವು ಮೂಢ ವಿಚಾರಗಳು: ಡಾ.ಜಿ.ಕೃಷ್ಣ



 

ಮೂಢ ನಂಬಿಕೆ ವಿರುದ್ಧ ಕಾನೂನು ಎಂದಾಕ್ಷಣ ತಾವು ನಂಬಿದ್ದೆಲ್ಲವನ್ನೂ ಬಿಟ್ಟುಕೊಡಬೇಕಾಗುತ್ತದೆ ಎಂಬ ಭಯ ಕೆಲವರಿಗಿದೆ. ಇವರೇನೂ ಮೂಲಭೂತವಾದಿಗಳಲ್ಲ. ಇವರು ತಮ್ಮ ಬುದ್ಧಿಯನ್ನು ಉಪಯೋಗಿಸಿ ಯೋಚನೆ ಮಾಡಲು ಹಿಂಜರಿಯುವವರು ಅಷ್ಟೆ. ನನ್ನ ಸಹೋದ್ಯೋಗಿಯೊಬ್ಬರು ತಾವು ಧರಿಸಿದ ರುದ್ರಾಕ್ಷಿ ಸರವನ್ನು ತೋರಿಸುತ್ತ ಇನ್ನು ಇಂಥವನ್ನು ಧರಿಸುವುದೂ ಅಪರಾಧವಾಗಿಬಿಡುತ್ತೇನೋ ಅಂತ ಭಯಪಡುತ್ತಿದ್ದುದನ್ನು ನೋಡಿ ನಗು ಬಂತು. ಇನ್ನೊಬ್ಬರಿಗೆ ಮೋಸ ಮಾಡದಂತ, ಮಾನವ ಘನತೆಯನ್ನು ಕುಂದಿಸದಂತ ಆಚರಣೆಗಳನ್ನು ಈ ಕಾನೂನು ಒಳಗೊಳ್ಳುವ ಸಾಧ್ಯತೆ ಇಲ್ಲ. ಮಹಿಳೆಯರನ್ನು ಮತ್ತು ಕೆಳಜಾತಿಯವರನ್ನು ಕೀಳಾಗಿ ನಡೆಸಿಕೊಳ್ಳುವ ಸಂಪ್ರದಾಯಗಳು, ಹಿಂಸೆಯಿಂದ ಕೂಡಿದ ವಿಧಿ ವಿಧಾನಗಳು ಇದರ  ವ್ಯಾಪ್ತಿಗೆ ಬರುತ್ತವೆ. ಕೆಲವು ಆಚರಣೆಗಳು ಸಾರ್ವಜನಿಕವಾಗಿ ಆಚರಿಸಲಷ್ಟೆ ಯೋಗ್ಯವಿರುತ್ತವೆ. ಉದಾಹರಣೆಗೆ ಲಕ್ಮ್ಮೀ ಪೂಜೆ, ಸರಸ್ವತೀ ಪೂಜೆಗಳು, ನಮಾಜು, ಪ್ರಾರ್ಥನೆಗಳು ಸರಕಾರಿ ಕಛೇರಿಗಳನ್ನೋ ಸಾರ್ವಜನಿಕ ಸ್ಥಳಗಳನ್ನೋ ಪ್ರವೇಶಿಸಿದರೆ ಅವುಗಳ ಮೇಲೆ ನಿಷೇಧ ಹೇರಬೇಕಾಗುತ್ತದೆ.
 
ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ತಾವು ಹಣಮಾಡಿಕೊಳ್ಳುವ ಜೋತಿಷ್ಯಗಾರರ, ಮಾಟಗಾರರ ದೊಡ್ಡ ಜಾಲವೇ ಇದೆ. ವೈದ್ಯಕೀಯ ಸಲಹೆ, ಉಪಚಾರಗಳು ಬೇಕಾಗುವ ಎಷ್ಟೋ ತೊಂದರೆಗಳನ್ನು ಅನುಭವಿಸುತ್ತಿರುವ ಜನರು ಇಂತಹ ಸಮಯ ಸಾಧಕರ ಬಲೆಗೆ ಬಿದ್ದು ಪ್ರಾಣಾಪಾಯಕ್ಕೆ ತುತ್ತಾದ ಉದಾಹರಣೆಗಳೂ ಇವೆ. ಈ ಮೋಸಗಾರರು ಪತ್ರಿಕಾ ಮಾಧ್ಯಮಗಳನ್ನೂ, ದೂರದರ್ಶನವನ್ನೂ ಯಾವ ಬೇರೆ ಉದ್ಯಮಕ್ಕೂ ಕಡಿಮೆ ಇಲ್ಲದಂತೆ ಬಳಸಿಕೊಳ್ಳುತ್ತಾರೆ. ಪತ್ರಿಕೆಗಳು ಮೊದಲ ಪುಟಗಳಲ್ಲಿ ವೈಚಾರಿಕ ಲೇಖನಗಳನ್ನೂ, ಜನಪರ ಚರ್ಚೆಗಳನ್ನೂ ಹಾಕಿ ಕೊನೆಯ ಪುಟದಲ್ಲಿ ಇಂತಹ ಭಂಡರ ಜಾಹಿರಾತುಗಳನ್ನು ಯಾವುದೇ ಸಂಕೋಚವಿಲ್ಲದೆ ಪ್ರಕಟಿಸುತ್ತವೆ. ಎಲ್ಲಾ ಪತ್ರಿಕೆಗಳೂ ಕಣ್ಣಿಗೆ ಕಾಣಿಸದಷ್ಟು ಸಣ್ಣ ಅಕ್ಷರದಲ್ಲಿ ಇವೆಲ್ಲವೂ ಪತ್ರಿಕೆಯ ಅಭಿಪ್ರಾಯವಲ್ಲ ಎಂಬ ಪ್ರಕಟಣೆ ಕೊಟ್ಟು ಕೈ ತೊಳೆದುಕೊಳ್ಳುತ್ತವೆ. ಈ ಹೈಟೆಕ್ ಯುಗದಲ್ಲಿ ಜಾಲತಾಣಗಳಲ್ಲೂ ಇಂತಹ ವಂಚಕರ ಜಾಹಿರಾತುಗಳು, ವೆಬ್ ಸೈಟುಗಳು ಕಂಗೊಳಿಸುತ್ತವೆ. ಇದರ ಒಳಹೊಕ್ಕವರಿಗೆ ಎಲ್ಲವೂ ಕೇಂದ್ರೀಕೃತವಾಗಿರುವುದು ದುಡ್ಡಿನ ಮೇಲೆಯೇ ಎನ್ನುವುದು ತಡವಾಗಿಯಾದರೂ ಗೊತ್ತಾಗುತ್ತದೆ.

ರಾಜ್ಯಮಟ್ಟದ ಪ್ರಮುಖ ಪತ್ರಿಕೆಯೊಂದು ವರ್ಗೀಕೃತ ಜಾಹೀರಾತುಗಳ ಒಂದು ಪುಟವನ್ನೇ ವಾರಕ್ಕೊಮ್ಮೆ ಪ್ರಕಟಿಸುತ್ತದೆ. ಅದರಲ್ಲಿ ಪ್ರಕಟವಾದ ಜಾಹೀರಾತಿನ ಸ್ಯಾಂಪಲ್ಲನ್ನು ನೋಡಿ:

೧.    ಅಘೋರಿ ನಾಗ ಸಾಧುಗಳಿಂದ ಸತತ ೨೫ ವರ್ಷಗಳಿಂದ ಕೇರಳದ ಭಗವತಿ ಭದ್ರಕಾಳಿದೇವಿಯ ಯಂತ್ರಮಂತ್ರ ಶಕ್ತಿಗಳನ್ನು ಸಿದ್ಧಿಸಿಕೊಂಡಿರುವ ಪಂಡಿತ್ ನಿರಂಜನ್ ದಾಸ್. ನಿಮ್ಮ ಸಮಸ್ಯೆಗಳೇನೇ ಇರಲಿ, ಎಷ್ಟೇ ಕಠಿಣವಾಗಿರಲಿ ೨೪ ಗಂಟೆಗಳಲ್ಲಿ ೧೦೦% ಶಾಶ್ವತ ಪರಿಹಾರ (ಫೋನ್ ನಂಬರ್ ಇದೆ).

೨.    ವಶೀಕರಣ ಸ್ಪೆಷಲಿಷ್ಟ್, ಸ್ತ್ರೀಯರಿಗೆ ಪುರುಷ ವಶೀಕರಣ, ಪುರುಷರಿಗೆ ಸ್ತ್ರೀ ವಶೀಕರಣ, ಇಷ್ಟ ಪಟ್ಟ ಸ್ತ್ರೀ ಪುರುಷರ ವಶೀಕರಣಗಳಿಗೆ ೭ ಗಂಟೆಗಳಲ್ಲಿ ಪರಿಹಾರ (ಫೋನ್ ನಂಬರ್)

೩.    ಸ್ತ್ರೀಯರಿಗೆ ವಿಶೇಷ ಪರಿಹಾರ, ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಮದುವೆ ದಾಂಪತ್ಯ, ಸಂತಾನ ಇಷ್ಟಪಟ್ಟವರು ನಿಮ್ಮಂತೆಯಾಗಲು೧ ಗಂಟೆಯಲ್ಲಿ ಪರಿಹಾರ(ಫೋನ್ ನಂಬರ್)

ಒಟ್ಟು ಐವತ್ತು ಜಾಹೀರಾತುಗಳಲ್ಲಿ ೨೦ ಜ್ಯೋತಿಷ್ಯಕ್ಕೆ, ವಶೀಕರಣಕ್ಕೆ ಸಂಬಂಧಿಸಿದವು! ಇವರಿಂದ ದಿವಾಳಿಯೇಳುವ ಜನರೆಷ್ಟೋ, ಶೋಷಣೆಗೆ ಒಳಗಾಗುವ ಮಹಿಳೆಯರೆಷ್ಟೋ. ಎಲ್ಲವೂ ವೈಯುಕ್ತಿಕ ಎಂದು ವಾದಿಸುವವರು ಬೇರೆ ಕಾನೂನುಗಳ ವಿಷಯದಲ್ಲೂ ಹೀಗೇ ವಾದಿಸಬಹುದು. ಯಾರೂ ಮೋಸಹೋದಾಗ ಕಾನೂನಿನ ಮೊರೆಹೋಗುವ ಅಗತ್ಯವಾದರೂ ಏನು?

ವೈಜ್ಙಾನಿಕತೆ ಬೆಳೆದಂತೆ ಇಂತಹ ಪೀಡೆಗಳು ಕಡಿಮೆಯಾಗುತ್ತವೆ ಎಂದು ಆಶಿಸಲಾಗಿತ್ತು. ಆದರೆ ಅವು ಅದೇ ವಿಜ್ಞಾನದ ಪ್ರಯೋಜನವನ್ನೇ ಪಡೆದು ಬೇರೆ ಬೇರೆ ಹೊಸರೂಪದಲ್ಲಿ ಜನರನ್ನು ಕಾಡುತ್ತಿವೆ. ಮರದ ಕೆಳಗಿನ ಗಿಳಿಶಾಸ್ತ್ರ ಜಾಲತಾಣದೊಳಗೂ ಪ್ರವೇಶಿಸಿದೆ. ಕಂಪ್ಯೂಟರ್ ಜ್ಯೋತಿಷಿಗಳು ಕವಡೆ ಜೋತಿಷಿಗಳಿಗಿಂತ ಬಿಸಿಯಾಗಿದ್ದಾರೆ.

ಒಟ್ಟಿನಲ್ಲಿ ಇದಕ್ಕೆಲ್ಲ ಕಡಿವಾಣ ಹಾಕುವ ಕಾನೂನಿನ ಭರವಸೆಯಾದರೂ ಸಿಕ್ಕದೆಯಲ್ಲ, ಅದು ಆಶಾದಾಯಕ ಬೆಳವಣಿಗೆ.

 

No comments:

Post a Comment