Monday, 25 November 2013

ಸಾಲುಗಳು: ಡಾ.ಜಿ.ಕೃಷ್ಣ

1.

ಮಾತಿನ ಭಾರಕ್ಕೆ
ಮೌನ ಹಗುರವಾಗುತ್ತೊ
ಒಳಗಿಳಿಯುತ್ತೊ
ಹೇಳಕ್ಕಾಗೊಲ್ಲ ಗಾಲಿಬ್,
ಹುಟ್ಟೋದಂತೂ ಹುಟ್ಟುತ್ತೆ


 

 
2.
 
ಒಂದು ಹೇಳು ಗಾಲಿಬ್,
ಬೋಳು ಮರ
ರಾಶಿ ಎಲೆಗಳ ಹೊದ್ದ
ನೆನಪು
ಬೇರಿಗೆ
ಒಣಗಿದ ನದಿ ಪಾತ್ರ
ಭೋರ್ಗರೆದಿತ್ತೆಂಬ
ನೆನಪು
ಒಣ ಮರಳಿಗೆ ಇರುವಷ್ಟು
ಜೀವಜಲ ಅಂತ ಬೀಗೋ
ನೀರಿಗಿರುತ್ತಾ?
 
 
 
 
 
3.
 
ಬೇಕಾದಲ್ಲಿ ಗ್ರಹಿಸಲು ಸೋತು
ಇನ್ನೆಲ್ಲೊ ಸರಿಪಡಿಸಿಕೊಂಡ ಹಾಗೆ
ಚಂಡ ಮಾರುತಗಳಿಗಿಟ್ಟ ಹೆಣ್ಣು ಹೆಸರುಗಳು
 




4.

ಒಳಗೋ
ಹೊರಗೋ
ತೆರೆದೇ ಇದೆಯಲ್ಲಯ್ಯ 
ಆದರೆ
ಬಾಗಿಲಲ್ಲಿ
ನಿಲ್ಲಬೇಡ
ಬರೋರಿಗೆ ಹೋಗೋರಿಗೆ
ತೊಂದರೆ.




5.

ಸುಟ್ಟುಕೊಳ್ಳದೆ ನಿತಾಂತ
ಬೆಳಗುತ್ತಾ ಹೋದ ದೀಪ
ಉರಿಯುತ್ತಾ
ನಾಶವಾದ ಬೆಂಕಿಯ ಕಂಡು
ಅಹಂಕಾರಪಟ್ಟಿರಲಿಕ್ಕಿಲ್ಲ ಗಾಲಿಬ್,
ವಿಷಾದದಲ್ಲಿ
ಮುಗುಳ್ನಕ್ಕಿರಬಹುದಷ್ಟೆ

 Photo: ಸುಟ್ಟುಕೊಳ್ಳದೆ ನಿತಾಂತ
ಬೆಳಗುತ್ತಾ ಹೋದ ದೀಪ
ಉರಿಯುತ್ತಾ
ನಾಶವಾದ ಬೆಂಕಿಯ ಕಂಡು
ಅಹಂಕಾರಪಟ್ಟಿರಲಿಕ್ಕಿಲ್ಲ ಗಾಲಿಬ್,
ವಿಷಾದದಲ್ಲಿ
ಮುಗುಳ್ನಕ್ಕಿರಬಹುದಷ್ಟೆ


6.

ಈ ಮಾಗಿಯ ಹನಿ
ಇಡೀ ರಾತ್ರಿಯ
ಶ್ರಮ


 Photo: ಈ ಮಾಗಿಯ ಹನಿ
ಇಡೀ ರಾತ್ರಿಯ
ಶ್ರಮ





7.

ಒಂದಷ್ಟು ಹೆಣ್ಣುಮಕ್ಕಳದ್ದಾದರೂ
ಇದ್ದೇ ಇದೆ ಈ ಬಯಕೆ, ಪ್ರಶ್ನೆ
ಇರಬಾರದೇ ಈ
ಗಂಡಸರು
ರಾತ್ರಿಯಲ್ಲೂ
ಹಗಲಿನಂತೆ...
 



8.

ನನ್ನ 
ನಿದ್ರೆಗಾಗಿ
ಅಮ್ಮ
ಪದಕಟ್ಟಿ ಹಾಡಲಿಲ್ಲ
ಆದರೂ
ಅವಳು
ಕವಿ.

 
 



9.

ನನ್ನ ಮಿದುಳಿಗೆ ಮಿಡಿತವಿಲ್ಲ ಗಾಲಿಬ್, 
ಹೃದಯಕ್ಕೆ ತಲೆಯೂ ಇಲ್ಲ
ಬುದ್ಧಿಯುಪಯೋಗಿಸಿ ಆಡುವ
ಮಾತುಗಳಲ್ಲಿ
ಹಾಗಾಗಿ
ಹೃದಯವಂತಿಕೆ ಇರೋಲ್ಲ
ಎದೆಯಿಂದ ಬಂದ
ಮಾತುಗಳಲ್ಲಿ
ಬುದ್ಧಿ ಇರೋಲ್ಲ.




10.


ನಡು ಚಳಿಗಾಲದ
ಇಳಿಸಂಜೆಯಲ್ಲಿ
ಬೇಗ ಮನೆ ಸೇರಿಕೊಳ್ಳುವ 
ಆತುರ...
ಕತ್ತಲು ಕವಿಯುವುದು
ಬಲು ಬೇಗ ನೋಡಿ...




11.

ತಮಾಷೆ ನೋಡು ಗಾಲಿಬ್,
ಸತ್ಯವಷ್ಟೆ ಇರಲಿ
ಉಳಿದಿದ್ದನ್ನು ತೆಗೆದುಬಿಡು ಅಂದರು 
ಕವಿತೆಯಲ್ಲಿ 
ಏನೂ ಉಳಿಯಲಿಲ್ಲ
ಯಾರೂ ಹೇಳದೇ
ನಿಜವನ್ನಷ್ಟೆ ಕಿತ್ತುಹಾಕಿ ನೋಡಿದೆ
ಆಗಲೂ
ಏನೂ ಉಳಿಯಲಿಲ್ಲ.


 




12.

ಜಾಗಟೆಯ ಸದ್ದು 
ಮುಗಿಲು ಮುಟ್ಟುವಾಗ
ನೆನಪಾಗುತ್ತಿದೆ
ಅದಿಲ್ಲದ ಮನೆಗಳಿಂದ
ಹೊರಡುತ್ತಿದ್ದ
ತಟ್ಟೆ ಬಡಿಯುವ ಸದ್ದು
ದೇವರಿಗೆ
ಎರಡೂ
ಕೇಳಿಸಿರಬಹುದೇ...?





13.

ಯಾವುದನ್ನೂ ಅತಿಗೆ ಒಯ್ಯುವುದು ತಪ್ಪು ಗಾಲಿಬ್,
ಈಗ ನೋಡು, ಕಾಳು ಪಲ್ಯ ತಿನ್ನುವುದೂ ಹಿಂಸೆಯಾಗಿಬಿಟ್ಟಿದೆ...

 




14.

ಕವಿತೆ ಎಂದರೆ
ಸಂತೆ ದಿನ
ಬೆಳ್ಳಂಬೆಳಿಗ್ಗೆ
ಇಟ್ಟುಕೊಂಡಿರುವ
ಎಳೇ
ಕೊತ್ತುಂಬರಿ ಸೊಪ್ಪಿನ ಕಟ್ಟು.




15.
 
ಅಮ್ಮನ ಸೀರೆಯಲ್ಲಿ
ಏನಿತ್ತು ಏನಿರಲಿಲ್ಲ
ಅನ್ನುವ ಹಾಗೆ
ಎಂದೂ ಬೇರೆ ತೊಡದ
ಅಮ್ಮನಿಗೆ
ನಾನು ಹೋಗುವುದರೊಳಗೆ
ನೈಟಿ ಹಾಕಿ ಮಲಗಿಸಿದ್ದರು
ಪಿಳಿ ಪಿಳಿ ಕಣ್ಣು ಬಿಡುತ್ತ
ಮಲಗಿದ
ಅಮ್ಮ
ಒಳಗಿಳಿಯಲು
ಹೊತ್ತು ತೆಗೆದುಕೊಂಡಳು
 
 
 
 
 
 
 
16.
 
ದಪ್ಪ
ಪುಸ್ತಕದಲ್ಲಿರುವುದನ್ನ
ಒಂದೇ ಪುಟದಲ್ಲಿ
ಪುಟವನ್ನು
ಒಂದೇ ವಾಕ್ಯದಲ್ಲಿ
ವಾಕ್ಯದಲ್ಲಿದ್ದುದನ್ನ
ಶಬ್ಧದಲ್ಲಿ ಹೇಳುವ ಸಾಧ್ಯತೆಯನರಸುತ್ತ
ಮಾತು
ಮೌನವಾಯಿತು.
 
 
 



17.

ಹೆದೆಯೇರಿದ ಬಾಣ
ಗಾಯಕ್ಕೆ ಗುರಿಯಿಟ್ಟ ಗಳಿಗೆಯಲಿ
ಆವರಿಸಿದ
ನಿಃಶಕ್ತಿಯೇ
ಗೆಲುವು





18.

ಚಿನ್ನ
ಮಿರ ಮಿರ ಮಿಂಚಿದ ಹೊತ್ತಲ್ಲೆ
ಅದಿರು ತೊಳೆದ ರಾಡಿ
ಎಷ್ಟೊಂದು ಹೊಗೆ
ಇದ್ದಿಲಿನ ಕಪ್ಪು
ಹಾರು ಬೂದಿ
ಕೆಮ್ಮು ಕಫ
ಕುಲುಮೆಯ ನಿಟ್ಟುಸಿರು!
 



19.
 
ಕೇಳಿಸಿತೊ
ಇಲ್ಲವೊ
ಆಡುತ್ತಾ ಹೋದೆ
ಕೇಳಿಸಿತೇ...?
 


No comments:

Post a Comment