Tuesday, 5 November 2013

ವಿದ್ಯಾ ಕುಂದರ್ಗಿ ಕವಿತೆ



ಸಾಬರಮತಿಯಲ್ಲೀಗ... 



 

 
















ಗಾಂಧೀ ಎದೆಯೊಳಗೆ 
ಅಂತರ್ಗಾಮಿಯಾಗಿದ್ದ
ಸಾಬರಮತಿಯೀಗ ಸ್ಥಾವರ .
ಜುಳುಜುಳು ಹರಿಯುವುದಿಲ್ಲ 
ಅಹಿಂಸೆಯ ವಿಚಾರಧಾರೆ…..
ನಿಂತೇ ಕತ್ತಿ ಮಸೆಯುತ್ತಿದೆ
ತಿಳಿಯಾಗಿದ್ದ ಹೃದಯವೀಗ
ತಿಪ್ಪೆಯಾಗಿದೆ ಮೇಲೆತ್ತದಂತೆ


ಕೈಕೋಲು,ಕನ್ನಡಕ
ತಟ್ಟೆ,ತಂಬಿಗೆಗಳು
ಶೋಕೇಸ್ನ ಅಟ್ಟ ಏರಿವೆ,
ಸೊಂಟದ ತಾಳಬಡಿತ
ಎಣಿಸುತ್ತಿದ್ದ ಟಿಕ್ ಟಿಕ್….
ಮುಳ್ಳಿನ ಕಾಲಲ್ಲಿ ನೆಗ್ಗಿಲ ಮುಳ್ಳು 
ನಂಜು ಕಾರಿದೆ,
ಹೃದಯ ಬಡಿತ ನಿಂತು ಹೋಗಿದೆ
ಆತ್ಮಕತೆಗಳು……ಮಾತ್ರ
ಮಾರಾಟವಾಗುತ್ತಿವೆ.

ಏನೇ ಆದರೂ 
ಬೋಳು ಭಿತ್ತಿಯ ಕಸ್ತೂರಬಾ 
ಕೋಣೆ,ಕಪಾಟುಗಳು ಮಾತ್ರ
ಒಂಚೂರೂ ಕಸ,ಕಡ್ಡಿ 
ಇಲ್ಲದಂತೆ ಶುಭ್ರವಾಗಿವೆ…..

ಸತ್ಯದೊಂದಿಗಿನ ಪ್ರಯೋಗ ….
ನಿಸ್ಸಂದೇಹ ಸಜೀವವಾದಂತಿದೆ.



***

No comments:

Post a Comment