Saturday, 30 November 2013

ಕಾವ್ಯ ಕಾರಣ ಕವಿತೆ




ಈ ರೀತಿ
ಮೈಯ್ಯಂಟಿಸಿ ಕಣ್ಣುಕೀಲಿಸಿ
ಕೆಂಗುಲಾಬಿಗಳಿಗೆ
ಗಿರಾಕಿ ಹುಡುಕಬೇಕಿಲ್ಲ
ಪಳಗಿದ್ದೇನೆ
ಅವರ ಕಣ್ಣಂಚಿನ ಭಾಷೆಗೆ
ಮೈಮರೆಯ ಬೇಕಿಲ್ಲ ಹೀಗೆ
ಸಿಗ್ನಲ್ಲಿನ ಕ್ಷಣಗಣನೆಯ
ಕಡೆಗಣಿಸಿ
ಕಾರಿನ ಚಂದಕ್ಕೆ ಮರುಳಾಗುವ
ಆಸೆಬುರುಕಿಯೂ ನಾನಲ್ಲ
ಹೊರಗಿನ ನಿರ್ದಯ ಚಳಿ
ಹೊಕ್ಕುಳಿಂದ ಹುಟ್ಟಿಸಿದ
ಈ ಬೆಚ್ಚನೆಯ ಆಸೆ
ಹಣಕಾಸಿಗೆ ಸಂಬಂಧಪಟ್ಟಿದ್ದೇ
ಅಲ್ಲ
ಎಂದರೆ ದಯವಿಟ್ಟು ನಂಬಿ
ಹೂಗಳು ಕೈ ಜಾರುವ ಮುನ್ನ
ಗಾಜಿಳಿಸಿ ಬೈಯ್ಯುವ ಮುನ್ನ
ಲಾಟಿಯೇಟು
ಎಚ್ಚರಿಸುವ ಮುನ್ನ
ಕಣ್ತುಂಬಿಕೊಳ್ಳುತ್ತೇನೆ
ಅಮ್ಮನ ಮಡಿಲಲ್ಲಿ
ಬೆಚ್ಚಗೆ ಮಲಗಿದ ಆ
ಮಗುವನ್ನ
ಹೌದು,
ನನ್ನನ್ನ...



***

No comments:

Post a Comment