Friday 15 November 2013

ಕಾವ್ಯ ಕಾರಣ ಕವಿತೆ: ಅಪ್ಪ :ಡಾ.ಜಿ.ಕೃಷ್ಣ






















ನನ್ನಪ್ಪ
ಒಂದು ದಿನವೂ
ಉಪ್ಪಿನ ಮೂಟೆ, ಕೂಸುಮರಿ
ಮಾಡಿ ಆಡಿಸಲಿಲ್ಲ
ಶಾಲೆ ಬಿಡುವ ಹೊತ್ತಿಗೆ
ಕಾದುಕೂತು
ಹೋಟೆಲ್ಲಿನ ದೋಸೆ ತಿನಿಸಲಿಲ್ಲ
ಮಾಸ್ತರರ ಹತ್ತಿರ
ಮಗ ಹೇಗೆ ಎಂದು ವಿಚಾರಿಸಲಿಲ್ಲ
ಮಂಡಿ ಗಾಯಕ್ಕೆ
ಮುಲಾಮು ಹಚ್ಚಿ ಉಫ್ ಅನ್ನಲಿಲ್ಲ
ಅಮ್ಮನ ಕೈಯ ಹೊಡೆತ ತಪ್ಪಿಸಲು
ಬರಲಿಲ್ಲ
ಗಾಳಿಪಟ, ಗೂಡುದೀಪ ಮಾಡುವುದು
ಹೇಳಿಕೊಡಲಿಲ್ಲ


ನನ್ನೊಬ್ಬನ್ನೇ ಕರೆದುಕೊಂಡು
ಅಲ್ಲಿ ಇಲ್ಲಿ ಸುತ್ತಿದ್ದಿಲ್ಲ
 
ಓದಿ
ದೊಡ್ಡವನಾಗಿ
ಮನೆಗೆ ಬಂದಾಗ
ಖುಶಿಯ ಬಚ್ಚಿಡುತ್ತ
ಸರ ಬರ ತಿರುಗಿ
ಬಂದವರೊಡನೆ ಗಟ್ಟಿಯಾಗಿ ಮಾತಾಡಿ
ಯಾರೂ ಇಲ್ಲದ ಹೊತ್ತಲ್ಲಿ
ನನ್ನ ನೋಡುತ್ತಾ ನಿಂತು
ಮೈಮರೆತದ್ದಿಲ್ಲ

ಇಲ್ಲ
ನನ್ನ ಹೆಗಲಿಗೇರಿಸಿ
ಲೋಕದ ಬೆರಗ ತೋರಿಸುವುದರೊಳಗೆ
ನಾಕು ಜನರ ಹೆಗಲೇರಿ
ಸಾಗಿಹೋದ
ನನ್ನಪ್ಪ
ಯಾವುದಕ್ಕೂ ಸಿಗಲಿಲ್ಲ.

1 comment:

  1. ಸಶಕ್ತ ಅಭಿವ್ಯಕ್ತಿ...ಕವಿತೆಗೆ ಸೋಲಿಲ್ಲ.

    ReplyDelete