ಶಿಶು ದನಿ
ನನ್ನ ಮಗ ದನಿ ಎತ್ತಿ ಹಾಡಿದರೆ
ಲೋಕದ ಮುದ್ದು ಮಕ್ಕಳೆಲ್ಲಾ
ಒಟ್ಟಿಗೆ ಅತ್ತಂತೆ
ಅವನು-
ಅಮಾವಾಸ್ಯೆ-ಹುಣ್ಣಿಮೆಗಳ
ಹಂಗಿಲ್ಲದ ಚಂದ್ರಮ…
ಇರುಳಲೂ ಸಾಯದ ಸೂರ್ಯ!
ಕವಿತೆಗಳೆಲ್ಲ ಬಂದು ನೋಡಿ
ಹೋಗುತಿವೆ ಅವನ ಜೀವ ಪ್ರೀತಿಯಾ…
ಹಡೆಯುವುದರಿಂದ
ಭೂಮಿಗೆ ಅವನು ಕೊಟ್ಟ
ವಿಶ್ರಾಂತಿಯೇ ಮರುಭೂಮಿ…
ಹಾಳುಮನುಷ್ಯನ ದಾಹದಿಂದ
ನದಿಗಳ ಮುಚ್ಚಿಡಲು
ಕಡಲೆಂಬ ಬಟ್ಟಲಿಟ್ಟ…
ಸಾವಿನ ಸ್ಫರ್ಧೆಯಲಿ
ಸೋಲುವ ಮನುಷ್ಯನ
ಸಂತೈಸಲು
ಧರ್ಮಗಳನು ಛೂ ಬಿಟ್ಟ…
ಯುದ್ಧಗಳನೆಲ್ಲ ಚಟವಾಗಿಸಿಕೊಂಡ
ಮೆದುಳೊಳಗೆ
ಪ್ರೀತಿ ಎಂಬ ‘ಮರೆವ’ನ್ನಿಟ್ಟ!
ಮಾತುಗಳ ನ್ಯಾಯಾಲಯದ
ವಾದಕ್ಕೆ
ಮೌನದ
ತೀರ್ಪುಗಳನು ಕೊಟ್ಟ…
ಅಳತೆಗಳಿಲ್ಲದ ಆತ್ಮಗಳಿಗೆ
ತೊಗಲು ಹೊಲಿಯುವ ದರ್ಜಿ ಅವನು…
ಹೆಜ್ಜೆಗುರುತೂ ನೆಲದಮೇಲೆ
ಬೀಳದಂತಾ ಚಪ್ಪಲಿ ಹೊಲೆಯುವ ಚಮ್ಮಾರ…
ಶಿಲುಬೆಗಳನ್ನಷ್ಟೆ ಕೆತ್ತುವ ಬಡಗಿ…
ಜಿಂಕೆ ಕಂಡರೂ ನಗುವ
ಕಾಡಹುಲಿಯ
ತೃಪ್ತಿ ಇವನು…
ಹಸಿವ ನೀಡಬೇಡಿರಪ್ಪಾ,
ಹುಲಿಗೆ ಮನುಕುಲದ
ಬೇಟೆ
ನೆನಪಾದೀತು…
ಸದ್ಯ-ಮನಶಾಸ್ತ್ರದ ಆಚೆಯ ದಡದಲ್ಲಿ
ಮಲಗಿದ್ದಾನೆ, ನಕ್ಷತ್ರಗಳ
ದಿಂಬಾಗಿಸಿಕೊಂಡು…
ಅವನಿನ್ನೂ ಮಲಗಿದ್ದಾನೆ…
ಕಟ್ಟಬೇಡಿರಪ್ಪ ಗೋರಿ…
ಹೋಗಲಿ
ಗೋರಿಯಾದರೂ ಕಟ್ಟಿಕೊಳ್ಳಿರಿ,
ಲಕ್ಷ, ಕೋಟಿ-ಹೆಸರುಗಳ
ಕೆತ್ತಬ್ಯಾಡಿರಿ, ಅದರ ಮೇಲೆ
ನನ್ನ ಮಗನಿಗಿನ್ನೂ
ನಾನು ಹೆಸರೇ ಇಟ್ಟಿಲ್ಲ…
***
Samakaaleens manushyane, ee jeevanada papagala mochenegsginu hora bekada silibeyanoo helslagadashu novugalinda sluvs ee msnushysne ivara maga.
ReplyDelete