ರಾಮ-ಕೃಷ್ಣ-ಶಿವ
ಕಚ್ಚಿ ರುಚಿ ನೋಡಿದ
ಹಣ್ಣಿಗೆ ತುಟಿ ಹಚ್ಚಿದನಲ್ಲ
ಆ ರಾಮ
ನನಗೆ ಪ್ರಿಯನಾಗಲಿ
ಒಂದಗುಳು
ಅನ್ನವನೆ
ಉಕ್ಕಿಸಿ
ಹಸಿವಿನ ಸೊಕ್ಕಡಗಿಸಿದನಲ್ಲ
ಆ ಕೃಷ್ಣ
ನನಗೆ ಪ್ರಿಯನಾಗಲಿ
ಸತ್ತು ಒರಗಿದ ಸತಿಯ
ಹೊತ್ತು ತಿರುಗಿದನಲ್ಲ
ಅತ್ತು ಸೊರಗಿದನಲ್ಲ
ಆ ಶಿವನು
ನನಗೆ ಪ್ರಿಯನಾಗಲಿ
ಬಂದೂಕು ಹಿಡಿಯದ ಕೈಗಳೇ ಕಣ್ಣೀರು ಒರೆಸಬೇಕು...
ಒಬ್ಬ ಮನುಷ್ಯ ಹಸಿವೆಯಿಂದ
ಎಷ್ಟು ನರಳಬಹುದೋ
ಅಷ್ಟು ದಾರುಣವಾಗಿ ಅವನು ನರಳಿದ್ದ.
ಒಂದು ತುಂಡು ರೊಟ್ಟಿಗಾಗಿ
ಎಷ್ಟು ಹೋರಾಡಬಹುದೋ
ಅಷ್ಟು ತೀವ್ರವಾಗಿ ಅವನು ಹೋರಾಡಿದ್ದ.
ಅವನ ಒಡಲಾಗ್ನಿ ಯಾರನ್ನೂ ಸುಡಲಿಲ್ಲ
ದುಃಖ ದುಮ್ಮಾನಗಳಿಂದ
ಒಬ್ಬ ಮನುಷ್ಯ ಎಷ್ಟು ನೋಯಬಹುದೋ
ಅಷ್ಟೂ ತೀವ್ರವಾಗಿ ಅವನು ನೊಂದಿದ್ದ
ನೋವು ಅವಮಾನಗಳಿಗೀಡಾಗಿ ಜರ್ಝರಿತನಾಗಿದ್ದ.
ಅವನೆದೆ ಕಲ್ಲಂತೆ ಎಂದೂ ಪೆಡಸಾಗಲಿಲ್ಲ.
ಹೌದು...
ಕೋವಿ ಹಿಡಿಯದ ಕೈಗಳೇ
ಕಂಬನಿ ಒರೆಸಬೇಕು!
ಸಾವಿನೊಡನೆ ಸೆಣಸಾಡಿದರೂ
ಘನತೆಯಿಂದ...
ಗೆಳೆಯಾ...
ಕೋವಿ, ಗುಂಡು, ರಕ್ತ, ಚೀತ್ಕಾರ
ಈ ಭುವಿಗೆ ತುಂಬ ಹಳತು.
ಬದುಕ ಬೆಳಗಿಸಲು ಹೊಸ ಅಸ್ತ್ರಗಳೇನಾದರೂ
ನಿನ್ನ ಬಳಿ ಇವೆಯಾ, ಹೇಳು...
(ಸವಿತಾ ನಾಗಭೂಷಣರವರು ಕಾವ್ಯಬೋಧಿ-5 ರ ಕವಿ)
No comments:
Post a Comment