Saturday, 30 November 2013

ಅಲ್ಲಮಪ್ರಭು ತೋರಿದ ದಾರಿ

ಅಲ್ಲಮಪ್ರಭು ತೋರಿದ ದಾರಿ

ನಟರಾಜ ಬೂದಾಳು


ಕನ್ನಡದ ನಿಜದನಿಯನ್ನು, ಕನ್ನಡದ ಮೀಮಾಂಸೆಯನ್ನು ಕಂಡುಕೊಳ್ಳಲು ಇರುವ ಮಾರ್ಗಗಳಲ್ಲಿ ಅಲ್ಲಮಪ್ರಭುವಿನ ಮಹಾಯಾನವೂ ಒಂದು. ಉತ್ತರದ ಕಾವ್ಯಮಾರ್ಗ, ಉತ್ತರದ ಕಾವ್ಯಮೀಮಾಂಸೆ, ಉತ್ತರದ ಯಜಮಾನಿಕೆಯ ಅಡಿಯಲ್ಲಿಯೇ ಈವರೆಗೆ ಬಾಳುತ್ತಿರುವ ನಾವು ನಮ್ಮನ್ನು ಕಂಡುಕೊಳ್ಳಲು ಈ ಮಾರ್ಗ ವರ್ತಮಾನದ ಅಗತ್ಯವಾಗಿದೆ.
ಅಲ್ಲಮಪ್ರಭು ಕನ್ನಡದ ಸಾರ್ವಕಾಲಿಕ ಎಚ್ಚರದ ಪ್ರತೀಕ. ಅಲ್ಲಮನಿಗಿದ್ದಿರಬಹುದಾದ ಮೂಲಮಾತೃಕೆ ಯಾವುದೆಂಬುದು ವಾಗ್ವಾದಕ್ಕೆ ಆಸ್ಪದ ನೀಡುವಂಥದ್ದು.  ಕನ್ನಡದ ತಾತ್ವಿಕತೆಯನ್ನು ರೂಪಿಸುವಲ್ಲಿ ವಚನ ಪರಂಪರೆಯ ಕೊಡುಗೆ ನಿಸ್ಸಂಶಯವಾಗಿ ಘನವಾದುದು. ಕನ್ನಡ ಮನಸ್ಸು ವ್ವವಹರಿಸುವ ಎತ್ತರವನ್ನು ವಚನಗಳು ಸೂಚಿಸುತ್ತವೆ. ಅಲ್ಲಮ ಪ್ರಭುವಿನ ದರ್ಶನವು ಕನ್ನಡವನ್ನು ವಿಶ್ವದ ಯಾವುದೇ ಭಾಷೆಯ ಜೊತೆಗಿಡಲು ಸಾಧ್ಯವಾಗುವಂತೆ ಮಾಡಿದೆ. ಅಲ್ಲಮಪ್ರಭುವಿನ ವಚನಗಳ ಪಾಂಥಿಕ ವ್ಯಾಖ್ಯಾನಕ್ಕೆ ಕೂಡ ಈ ಸಾಧ್ಯತೆಗಳಿವೆ.

ಕನ್ನಡ ಕಾವ್ಯ ಸಂದರ್ಭವೊಂದರಲ್ಲಿ ನಿಂತು ಅಪೊಲಿಟಿಕಲ್ ಆಗಿ ಮಾತನಾಡುವುದು ಯಾರಿಗಾದರೂ ಸಾಧ್ಯವೆಂದು ನನಗನ್ನಿಸುವುದಿಲ್ಲ. ಯಾಕೆಂದರೆ ಅನುಭಾವ, ಕಾವ್ಯ, ದರ್ಶನ ಮತ್ತು ಮೀಮಾಂಸೆಗಳು ಇಂದಿಗೂ ಅಧಿಕಾರ ಕೇಂದ್ರಗಳನ್ನು ನಿರ್ವಹಿಸುತ್ತಲೇ ಬಂದಿವೆ ಅಥವಾ ಅಧಿಕಾರ ಕೇಂದ್ರಗಳು ಸಮೂಹಗಳನ್ನು ನಿಯಂತ್ರಿಸಲು ಇವುಗಳನ್ನು ಬಳಸಿಕೊಳ್ಳುತ್ತಲೇ ಬಂದಿವೆ
.
ಯಾವ ಕಾವ್ಯ, ದರ್ಶನ, ಮೀಮಾಂಸೆಗಳು ಅಧಿಕಾರ ಕೇಂದ್ರಗಳ ಪರವಾಗಿ  ಉದ್ಯೋಗವನ್ನು ಮಾಡಲಾರವೋ ಅವುಗಳಿಗೆ ಕಾವ್ಯದ ಸ್ಥಾನವನ್ನಾಗಲೀ, ದರ್ಶನದ ಸ್ಥಾನವನ್ನಾಗಲೀ, ಮೀಮಾಂಸೆಯ ಸ್ಥಾನವನ್ನಾಗಲೀ ಈವರೆಗೆ ನೀಡದ ಸಾಂಸ್ಕೃತಿಕ ರಾಜಕಾರಣವೊಂದು  ನಿರಂತರವಾಗಿ ನಡೆಯುತ್ತಲೇ ಬಂದಿದೆ. ಕನ್ನಡದ ಅಸಲಿ ಕಾವ್ಯದನಿಗಳನ್ನು  ಹೊರಗೆ ನಿಲ್ಲಿಸಿ, ಯಾವುದು ಪ್ರಭುತ್ವಕ್ಕೆ ಅಗತ್ಯವಾದ ಒಪ್ಪಿಗೆಯನ್ನು ಆಯಾ ಕಾಲದಲ್ಲಿ ಸಮೂಹದಿಂದ ಉತ್ಪಾದಿಸಿಕೊಡುತ್ತಿತ್ತೋ ಅದಕ್ಕೆ ಕಾವ್ಯದ ಸ್ಥಾನವನ್ನು ಕೊಟ್ಟಿರುವುದು ಕಂಡುಬರುತ್ತದೆ.

ದಿವ್ಯಪ್ರಭುತ್ವವನ್ನು ಮುಂದಿಟ್ಟ ದರ್ಶನಗಳನ್ನು ಮಾತ್ರ ಉಳಿಯಗೊಟ್ಟು ಹಾಗೆ ಮಾಡದ­ವುಗಳನ್ನು ಅಂಚಿಗೆ ತಳ್ಳಲಾಗಿದೆ. ಪ್ರಭುತ್ವವನ್ನು ಸಾರಭೂತ­ಗೊಳಿಸುವ ಚಾಕರಿಯನ್ನು ಕೈಗೊಳ್ಳದ ವಚನಗಳಾಗಲೀ, ಜನಪದ ಕಾವ್ಯಗಳಾಗಲೀ, ತತ್ವಪದಗಳಾಗಲೀ ಕಾವ್ಯವೆಂದು ಪರಿಗಣಿತವಾಗಲೇ ಇಲ್ಲ. ಮೀಮಾಂಸೆಯೂ ಇದಕ್ಕೆ ಹೊರತಲ್ಲ.  ಈ ನೆಲದ ಅಸಲಿ ಬದುಕಿನ ಮೀಮಾಂಸೆಯನ್ನು ಮುಂದಿಟ್ಟ ಬೌದ್ಧ, ಜೈನ, ನಾಥ, ಸಿದ್ಧ, ಕಾಪಾಲಿಕ, ವಚನ ಮುಂತಾದ ಶ್ರಮಣಧಾರೆಗಳ ತಾತ್ವಿಕತೆಯಿಂದ ಪ್ರಣೀತವಾದ ಕಾವ್ಯಮೀಮಾಂಸೆಗೆ ಅಧಿಕಾರ ಕೇಂದ್ರಗಳೆಂದೂ ಮನ್ನಣೆ ನೀಡಿಲ್ಲ.

ಪ್ರಭುವಿನ- ಶರಣರ ಕಾಲ ಸಂಕೀರ್ಣವಾದ ರಾಜಕೀಯ, ಸಾಮಾಜಿಕ ಮತ್ತು ದರ್ಶನಗಳ ಸಂಘಟ್ಟಣೆಗಳ ಸಮಯ. ಬೌದ್ಧ, ನಾಥ, ಜೈನ ತಾತ್ವಿಕತೆಗಳ ಎದುರಿಗೆ ಸೋತು ಸುಣ್ಣವಾಗಿ ಮತ್ತೆ ತನ್ನೆಲ್ಲ ವಿಕಾರಗಳೊಡನೆ ತಲೆಯೆತ್ತಲು ಪ್ರಯತ್ತಿಸುತ್ತಿದ್ದ ವೈದಿಕತೆ ಒಂದು ಕಡೆಗಿದ್ದರೆ, ಅವಸರ್ಪಿಣೀಕಾಲವನ್ನು ನಿರ್ವಹಿಸುವ ಭರದಲ್ಲಿ ಹೇಗಾದರೂ ಅಧಿಕಾರಕೇಂದ್ರಗಳನ್ನು ಓಲೈಸುತ್ತಿದ್ದ ಜೈನ ಧರ್ಮ ಒಂದೆಡೆ ಇತ್ತು.

ಅವೆಲ್ಲಕ್ಕಿಂತ ಮುಖ್ಯವಾಗಿ ಸುಮಾರು ಒಂಬತ್ತನೆಯ ಶತಮಾನದವರೆಗೆ ಬೌದ್ಧ ಮಹಾಯಾನದ ವಿಶ್ವವಿದ್ಯಾಲಯವೊಂದು ಬಳ್ಳಿಗಾವೆಯಲ್ಲಿ ಕೋಢಿಮಠವೆಂಬ ಹೆಸರಿನಿಂದ ಕ್ರಿಯಾಶೀಲವಾಗಿತ್ತು. ಅಲ್ಲಮ ರೂಪುಗೊಂಡ ಬಳ್ಳಿಗಾವೆಯೇ ಕೋಢಿಮಠವೆಂಬ ಬೌದ್ಧ ವಿಶ್ವವಿದ್ಯಾಲಯ.  ಚೀನೀ ಯಾತ್ರಿಕ ಹುಯನ್ ತ್ಸಾಂಗ್ ಬಳ್ಳಿಗಾವೆಗೆ ಭೇಟಿಕೊಟ್ಟು ಸ್ವಲ್ಪ ಕಾಲ ತಂಗಿದ್ದ ಸಂಗತಿ ಅವನ ಪ್ರವಾಸಕಥನದಲ್ಲಿ ದಾಖಲಾಗಿದೆ. ಅದು ೯ನೆಯ ಶತಮಾನದವರೆಗೆ ಬೌದ್ಧ ಮತ್ತು ಇತರ ದರ್ಶನಗಳ ಅಧ್ಯಯನದ ಒಂದು ಅಂತರ್ ಶಿಸ್ತೀಯ ವಿವಿ ಆಗಿತ್ತು ಎಂಬುದು ಚರಿತ್ರೆಯಲ್ಲಿ ದಾಖಲಾಗಿರುವ ಸಂಗತಿ. 
ಅಲ್ಲಮ ಪ್ರಭು ಮಂಡಿಸುತ್ತಿರುವ ತಾತ್ವಿಕತೆಯು ಭಾರತೀಯ ಕಾವ್ಯತತ್ವ, ಭಾರತೀಯ ಕಾವ್ಯಮೀಮಾಂಸೆಗಿಂತ ಭಿನ್ನವೆ? ಯಾವ ಅಂಶಗಳಿಂದ? ಅವುಗಳ ತಾತ್ವಿಕ ಆಕರಗಳು ಯಾವುವು? ಅಲ್ಲಮನ ತಾತ್ವಿಕತೆಯ ಮೂಲಮಾತೃಕೆ ಯಾವುದು? ಎನ್ನುವ ತೀರ್ಮಾನದ ಮೇಲೆ ನಮ್ಮ ಮಾತಿನ ದಿಕ್ಕು ತೀರ್ಮಾನವಾಗುತ್ತದೆ.

ಚರಿತ್ರೆಯಲ್ಲಿ ನಡೆದಿರುವ ಗುದ್ದಾಟಗಳನ್ನು ಗಮನಿಸಿದರೆ ಕನ್ನಡದ ಮನಸ್ಸು ಕೇಡನ್ನು ಮುಂದಿಟ್ಟ ಹಿರಿಯ ದರ್ಶನಗಳನ್ನು ನಿರ್ದಾಕ್ಷಿಣ್ಯವಾಗಿ ದಾಟುತ್ತ ಬಂದಿದೆ. ಕನ್ನಡದ ಜಾಯಮಾನಕ್ಕೆ ಇಂತಹ ಮುಕ್ತ ಗುಣವಿದೆ.

ಕನ್ನಡದಲ್ಲಿ ಅಲ್ಲಮನ ಅನುಸಂಧಾನ ಕಠಿಣ ಎಂಬ ಎಚ್ಚರ ಸಾಧಕ ಸಮೂಹಕ್ಕೂ ಇದೆ, ಬೌದ್ಧಿಕ ಸಮೂಹಕ್ಕೂ ಇದೆ. ಆದರೂ ಅಲ್ಲಮನ ಅನುಸಂಧಾನದ ಪ್ರಸ್ತುತತೆ,  ಸಂಭ್ರಮ ಮತ್ತು ಆಕರ್ಷಣೆ ಎರಡು ಸಮೂಹಗಳಿಗೂ ನಿರಂತರವಾಗಿ ಇದ್ದೇ ಇದೆ. ಅಲ್ಲಮ­ಗುರುವಿನ ಜೊತೆ ಅಷ್ಟು ದೂರ ನಡೆಸುವ ಕಾವ್ಯಮೀಮಾಂಸೆಯ ಯಾನದ ಪ್ರಯತ್ನವನ್ನು ಅವನೂ ಮನ್ನಿಸಿಯಾನು.
ಬಹಳ ದೀರ್ಘ ಕಾಲದಿಂದ -ಸಿಂಗಳದ ಸಿದ್ಧಬಸವರಾಜ ದೇವರಿಂದ ಹಿಡಿದು ಶ್ರೀಸಿದ್ದೇಶ್ವರ ಸ್ವಾಮಿಯವರವರೆಗೆ- ವಚನ ವ್ಯಾಖ್ಯಾನದ ಉದ್ಯೋಗ ನಡೆದಿದೆ.

ಈವರೆಗೆ ಸಮಗ್ರ ವಚನ ತಾತ್ವಿಕತೆಯನ್ನು ಕಾಶ್ಮೀರ ಶೈವದ ಮೂಲಕವೋ, ತಮಿಳಿನ ಶೈವ ಸಿದ್ಧಾಂತದ ಮೂಲಕವೋ ನೋಡಿ ಕಂಡದ್ದನ್ನು ಹೇಳುತ್ತಿದ್ದೇವೆಯೇ ಹೊರತು ನಾಥಪಂಥದ ಮೂಲಕವಾಗಲೀ, ಸಿದ್ಧ ಪಂಥಗಳ ಮೂಲಕವಾಗಲೀ, ಬೌದ್ಧ ತಾತ್ವಿಕತೆಯ ಮೂಲಕವಾಗಲೀ, ಸಹಜಯಾನದ ಮೂಲಕವಾಗಿಯಾಗಲೀ ನೋಡುವ ಪ್ರಯತ್ನಗಳಾಗಿಲ್ಲ.
ಇವೆಲ್ಲ ಹೊರಗಿನಿಂದ ತಂದು ಅನ್ವಯಿಸಿಕೊಳ್ಳಬೇಕಾದ ತಾತ್ವಿಕ ಆಕರಗಳಲ್ಲ. ಬದಲಿಗೆ ವಚನ ತಾತ್ವಿಕತೆಯು ಇವುಗಳ ಒಡನಾಟದಲ್ಲಿ, ಕೊಡು-ಪಡೆಯಲ್ಲಿ ರೂಪುಗೊಂಡದ್ದು. ಈ ಹಿನ್ನೆಲೆಯಲ್ಲಿ ಅಲ್ಲಮಗುರು ಮುಂದಿಟ್ಟ ಕನ್ನಡದ ಕಾವ್ಯಮೀಮಾಂಸೆಯ ಕೆಲವು ನಿಲುವುಗಳನ್ನು  ಮುಂದಿಡಬಹುದು.

ಆಹ್ವಾನ ಮತ್ತು ವಿಸರ್ಜನೆ - ಅಲ್ಲಮಗುರುವು ಮುಂದಿಟ್ಟ ಕಾವ್ಯಮೀಮಾಂಸೆಯ ಒಂದು ನಿಲುವು. ಕಾವ್ಯವಾಗಲೀ, ಕುರುಹುಗಳಾಗಲೀ, ಭಾಷೆಯಾಗಲೀ, ತರ್ಕವಾಗಲೀ - ಇವೆಲ್ಲ ಮಾಡುವುದು ಸಂರಚನೆಯ ಉದ್ಯೋಗ.  ಅವುಗಳ ಈ ಉದ್ಯೋಗಕ್ಕೆ ಅಲ್ಲಮನ ತಕರಾರಿಲ್ಲ.  ಆದರೆ ಇವೆಲ್ಲ ತಮ್ಮ ಕೆಲಸ ಮುಗಿದಾಕ್ಷಣ ವಿಸರ್ಜನೆಗೊಳ್ಳಬೇಕು.
ಹಾಗಾಗದಿದ್ದಾಗ ಅಲ್ಲಮ ಕನಲಿಬಿಡುತ್ತಾನೆ. ಯಾಕೆಂದರೆ ಅಲ್ಲಮಗುರು ಒಬ್ಬ ನಿರಸನವಾದಿ.  ಹಾಗೆ ಕರೆದರೂ ಅವನಿಗೆ ಒಪ್ಪಿಗೆಯಾಗದು.   ನಿರಸನ ನಿಸರ್ಗದ ಸಹಜತತ್ವ.. ಅದು ಈ ನೆಲದಲ್ಲಿ ಜನಿಸುವ ಪ್ರತಿ ಮನುಷ್ಯಜೀವಿಯ ಅಗತ್ಯ. ಏಕೆಂದರೆ ತಮ್ಮ ಕೆಲಸ ಮುಗಿದ ಮೇಲೆ ವಿಸರ್ಜನೆಯಾಗದೆ ಉಳಿದ ಯಾವುದರ ಬೆಳವಣಿಗೆಯೂ ಆರೋಗ್ಯಕರವಲ್ಲ.
ವಿಸರ್ಜನೆಗೊಳ್ಳದೆ ಉಳಿದ ಸಂಕೇತಗಳು, ಕುರುಹುಗಳು, ಪ್ರಮಾಣಗಳು ಇಂದು ಭಾರತದ ಬದುಕನ್ನು ಮೂರಾಬಟ್ಟೆಯಾಗಿಸಿವೆ. ನಿಜದ ಮೇಲೆ ಈಗ ಅದರ ಸಂಕೇತಗಳು ಸವಾರಿ ಮಾಡುತ್ತಿವೆ. ಈ ಸಂಕೇತಗಳನ್ನು ಕಟ್ಟಿಕೊಟ್ಟ ಭಾಷೆ, ಸಂಗೀತ, ಭಕ್ತಿ, ಕಾವ್ಯ, ದೈವ -ಇವೆಲ್ಲ ನಮ್ಮ ತಲೆಯ ಮೇಲೇರಿ ಕೂತಿವೆ.

ಈಚೀಚೆಗಂತೂ ಭಕ್ತಿ-ಭಗವಂತ ಎರಡಿದ್ದರೆ ಸಾಕು ಬಾರಾಖೂನ್ ಮಾಫ್ ಎನ್ನುವಂತೆ ಮಾತನಾಡುವುದನ್ನು ಕೇಳುತ್ತಿದ್ದೇವೆ. ಇವೆಲ್ಲ ನಮಗೆ ಮೆತ್ತಿಕೊಂಡಿವೆ, ಸುತ್ತಿಕೊಂಡಿವೆ. ದಿನಬೆಳಗಾದರೆ ಹೊಸ ಹೊಸ ಕುರುಹುಗಳು, ಪ್ರತಿಮೆಗಳು ಅಕರಾಳ ವಿಕರಾಳವಾಗಿ ವಿಜೃಂಭಿಸುತ್ತಿವೆ.  ಇವುಗಳನ್ನು ತೊಳೆದುಕೊಂಡು ನಿರ್ಲೇಪಿಯಾಗುವುದು ಹೇಗೆ? ಬಸವಣ್ಣನಿಂದ ಇದಾಗಬಹುದಾದರೆ ಅದು ಹೀಗಿರುತ್ತದೆ ಎನ್ನುತ್ತಾನೆ ಅಲ್ಲಮ ಗುರು:

ಗುರು ಸ್ವಾಯತವಾಯಿತ್ತು, ಲಿಂಗ ಸ್ವಾಯತವಾಯಿತ್ತು
ಜಂಗಮ ಸ್ವಾಯತವಾಯಿತ್ತು ಬಸವಣ್ಣನಿಂದಲೆಂದರೆ -
ತನುವಿಲ್ಲದಿರಬೇಕು; ಮನವಿಲ್ಲದಿರಬೇಕು
ಅಱವಱತು ಮಱಹು ನಷ್ಟವಾಗಿರಬೇಕು
ಗೊಹೇಶ್ವರಲಿಂಗದಲ್ಲಿ ನಿರ್ಲೇಪಿಯಾದಲ್ಲದಿಲ್ಲ ಕಾಣ ಮಡಿವಾಳ ಮಾಚಯ್ಯ

ಪ್ರಭು ಸುಮ್ಮನಿರಲು ಹೇಳುತ್ತಿದ್ದಾನೆ! ಪ್ರಭು ಸುಮ್ಮನಿರಲು ಹೇಳಿದುದರ ಬಗೆಗೆ ಮಾತನಾಡುವುದು ಒಂದು ವ್ಯಂಗ್ಯ. ಆದರೂ ಸುಮ್ಮನಿರಿ ಎಂದು ಹೇಳಲಾದರೂ ಶಬ್ದ ಮಾಡಬೇಕಲ್ಲ! ಭಾಷೆಯೆಂಬುದು ಪ್ರಾಣಘಾತಕವೆಂದದ್ದು ಅದಕ್ಕೇ ಇರಬೇಕು. ಅನಗತ್ಯವಾಗಿ ಕುರುಹುಗಳ ಬೆಟ್ಟಗಳನ್ನೇ ಹೊತ್ತು ಓಡಾಡುತ್ತಿರುವವರನ್ನು ಕಂಡು ಪ್ರಭುವಿಗೆ ಕನಿಕರ.
ಒಮ್ಮೆ ಎಲ್ಲವನ್ನೂ ಝಾಡಿಸಿ ಹಗುರಾಗಬಾರದೆ? ಆದರೆ ಸುಮ್ಮನಿರಲು ಹೇಳಿದರೆ  ಜನ ಸಿಟ್ಟಿಗೇಳುತ್ತಾರೆ. ಈಗಂತೂ ನಮ್ಮ ಸುತ್ತ ಎತ್ತ ನೋಡಿದರೂ ಮಾತೋ ಮಾತು! ಅವರನ್ನು ಸುಮ್ಮನಾಗಿಸೋದು ಬಲುಕಷ್ಟ. ಸುಮ್ಮಸುಮ್ಮನೆ ಚೇಳುಕಚ್ಚಿದವರ ಥರಾ ಆಡುತ್ತಾರೆ !

ಊಱದ ಚೇಳಿನ ಏಱದ ಬೇನೆಯಲ್ಲಿ ಮೂಱು ಲೋಕವೆಲ್ಲಾ ನರಳಿತ್ತು
ಹುಟ್ಟದ ಗಿಡುವಿನ ಬಿಟ್ಟ ಎಲೆಯನೆ ತಂದು ಮುಟ್ಟದೆ
ಪೂಸಲು ಮಾಬುದು ಗುಹೇಶ್ವರ

ಚೇಳು ಕಚ್ಚಿಲ್ಲ, ನೋವಾಗಿಲ್ಲ ಆದರೂ ಕಿರುಚಾಡುತಾ ಇದಾರಲ್ಲ! ಇವರಿಗೆ ಹುಟ್ಟದೇ ಇರೋ ಗಿಡದ ಎಲೆಯನ್ನ ಮುಟ್ಟದೆ ತಂದು ಹಚ್ಚಿದರೆ ಸರಿಹೋಗುತ್ತೇ ನೋಡಿ! ಇದು ಅಲ್ಲಮನ ಪರಿಹಾರ! ಸುಮ್ ಸುಮ್ನೇ ಸಂಕಟ ತಂದಿಟ್ಟುಕೊಂಡಿರುವ ಪರಿಗೆ ಇನ್ನೇನು ಪರಿಹಾರ ಇರಲು ಸಾಧ್ಯ? ಕಲ್ಪಿತ ಸಂಕಟಕ್ಕೆ ವಾಸ್ತವ ಪರಿಹಾರವಿರುವುದಿಲ್ಲ.

ಈ ಅರ್ಧ­ಶತಮಾನಕ್ಕೂ ಹೆಚ್ಚಿನ ಭಾರತದ ರಾಜಕಾರಣದ  ನಿರ್ಣಾಯಕ ಸಂಗತಿಗಳಲ್ಲಿ ಈ ಕಲ್ಪಿತ ಸಂಕಟಗಳೇ ನಿರ್ಣಾಯಕವಾಗಿವೆ ಎಂಬುದನ್ನು ಗಮನಿಸಬೇಕು. ಸಂಕಟದ ಕಾರಣ ಮನೋ ಕಲ್ಪಿತವಾದುದು. ಈ ಮನೋಕಲ್ಪಿತವನ್ನು ಅಳಿಸಿಹಾಕಿ ಅಂದರೆ ಅಳಿಸಲು ತಯಾರಿಲ್ಲ. ಅದಕ್ಕೆ ಸುಮ್ಮನಿರುವುದರ ಬಗ್ಗೆ, ಇಲ್ಲವಾಗಿಸಿಕೊಳ್ಳುವುದರ ಬಗೆಗೆ, ಕಳೆದು ಕೊಳ್ಳ­ಬೇಕಾಗಿರು­ವುದರ ಬಗೆಗೆ ಮಾತನಾಡುವುದು ಕಷ್ಟ.  ಏಕೆಂದರೆ ಈವರೆಗೆ ಮಾತನ್ನು ಕಟ್ಟಲು ಮಾತ್ರ  ಬಳಸಿಕೊಂಡಿದ್ದೇವೆ!
ಮಾತನ್ನು ಅಳಿಸಲು ಈಗ ಬಳಸಬೇಕಿರುವುದು ಕೇವಲ ಕಾವ್ಯ ಕಟ್ಟುವ ಚಾಕಚಕ್ಯತೆಗಲ್ಲ, ಬದಲಿಗೆ ನಮ್ಮ ಬದುಕನ್ನು ಸುತ್ತಿಕೊಂಡು ಸಮೂಹವನ್ನು ಉಸಿರುಗಟ್ಟಿಸುತ್ತಿದೆಯಲ್ಲ, ಅದರಿಂದ ಬಯಲಿಗೆ ಹೊರಬರಲು. ಹೊಸ ಗಾಳಿ ಬೆಳಕಿನ ಅನುಭವ ಪಡೆಯಲು ಬಳಸಬೇಕಾಗಿದೆ. ಅದಕ್ಕಾಗಿಯೇ ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ ಎಂದು ಕುವೆಂಪು ನಮ್ಮನ್ನು ಹೊರಗೆ ಕರೆದದ್ದು.

ಈವರೆಗೆ ಹೊತ್ತು ತಂದಿರುವ ಸಂರಚನೆಗಳ ಭಾರವನ್ನು ಕೊಡವಿಕೊಂಡು ಹಗುರಾಗಿರಿ ಎಂಬುದು ಗುರುವಿನ ನಿಲುವು. ಎಲ್ಲವನ್ನೂ ತೊಳೆದುಕೊಂಡವನಿಗಾದರೆ ಇದು ಸರಿ, ಆದರೆ ಸಂಸಾರವಂದಿಗರಿಗೆ? ಅಜ್ಞಾತ ತತ್ವಪದಕಾರನ ಒಂದು ತತ್ವಪದವನ್ನು ಗಮನಿಸಬಹುದು:

ಬಲ್ಲರೆ ಯೋಗಿಯಾಗು ಇನಿ
ತಿಲ್ಲದಿರೆ ಭೋಗಿಯಾಗಿರೈಯ್ಯ
ಎವೆಯಲುಗದೆ ಲಿಂಗವ ನೋಡ ನೋಡದಿರೆ
ನವಯವ್ವನೆಯ ಭಾವವಿರಲಿ ತವೆಯದೆ
ಶಿವ ಮಂತ್ರವ ಕೇಳ ಕೇಳದಿರೆ
ನವರಸ ಲಲ್ಲೆದೈನ್ಯವ ಕೇಳಿರಯ್ಯ
ಅಲಸದೆ ಲಿಂಗಪೂಜೆಯ ಮಾಡಿ ಇಲ್ಲದಿರೆ
ಮೊಲೆಯ ಮೇಲಣ ಕೈಯ ತೆಗೆಯದಿರಿ
ಒಲಿದೊಲಿದು ಲಿಂಗ ಪ್ರಸಾದವ ಕೊಳ್ಳಿ ಕೊಳ್ಳದಿರೆ
ಚಲ್ವೆ ಚಂದುಟಿಯಮೃತವನುಣ್ಣಿರೈಯ್ಯ
ಅಂಗ ಸಂಗ ದೊರಕೊಂಡಿರಲು ಲಲಿ
ತಾಂಗಿಯರ ಹಿಂಗದಲೆ ನೀವು ಸುಖಿಯಾಗಿರಯ್ಯ

ಇಲ್ಲಿಯ ಸಂಗತಿಗಳು ಅವಳಿ ವಿರುದ್ಧಗಳಂತೆ ಕಂಡರೂ, ಗಮನಿಸಿ ನೋಡಿದರೆ,  ಒಂದು ಸಂಕೇತ ಇನ್ನೊಂದು ಸಹಜ. ಅದನ್ನು ಸರಹ ಪಾದ  ಹೀಗೆನ್ನುತ್ತಾನೆ:

ಜಈ ಜಗ ಪೂರಿಅ ಸಹಜಾಣನ್ದೇ
ಣಾಚಹು ಗಾಅಹು ವಿಲಸಹು ಚಂಗೇ||
(ಜಗತ್ತು ಸಹಜಾನಂದದಿಂದ ತುಂಬಿದೆ, ಕುಣಿ, ಹಾಡು ಚೆನ್ನಾಗಿ ವಿಲಾಸ ಮಾಡು)  ಬೌದ್ಧ ಸಿದ್ಧ ಸರಹ ಲೋಕದಲ್ಲಿನ ದು:ಖಕ್ಕೆ ಕಾರಣ ಮನುಷ್ಯರಲ್ಲಿದೆಯೇ ಹೊರತು ಹೊರಗಿನ ಲೋಕದಲ್ಲಿಲ್ಲ ಎನ್ನುತ್ತಿದ್ದಾನೆ. ದಾಟಬೇಕಾದ್ದು ಹೊರಗಿಲ್ಲ. ಒಳಗೇ ಇದೆ.  ಸರಹ ನುಡಿಯುತ್ತಾನೆ:

ನೀನು ಸಾಧಕನೇ ಆದರೆ,  ಕಡೆಹಾಯಿಸುವುದನ್ನು
ದಾಟಿಸುವುದನ್ನು  ತಕ್ಷಣವೆ ದಾಟು.!

ಯಾಕೆಂದರೆ ಯಾವುದು ನಿನ್ನನ್ನು ದಾಟಿಸುತ್ತದೆಯೋ ಅದಕ್ಕೆ ನೀನು ಜೋತುಕೊಂಡರೆ ಅದೇ ಬಂಧನವೂ ಆಗುತ್ತದೆ. ಸಹಜಯಾನಕ್ಕೆ ಎರಡು ನಡೆಗಳಿವೆ.  ಎಲ್ಲರಿಗೂ ಎರಡೂ ದಾರಿ ಅನಿವಾರ್ಯವೆಂದೇನಲ್ಲ.  ಒಂದು ನಡೆ ಹಿಮ್ಮುಖವಾದದ್ದು, ಈವರೆಗಿನ ಎಲ್ಲವನ್ನು ನಿರಸನಗೊಳಿಸುವ, ಖಾಲಿಯಾಗಿಸುವ, ಕಲಿತದ್ದನ್ನು ಬಿಟ್ಟುಬಿಡುವ, ತುಂಬಿಕೊಂಡದ್ದನ್ನು ಚೆಲ್ಲಿಬಿಡುವ. ಮನೋಕೋಶವನ್ನು ಖಾಲಿಯಾಗಿಸಲು ನಡೆಸುವ ನಿರಸನದ ಯಾನ. ಅಲ್ಲಮನ ಪರಿಭಾಷೆಯಲ್ಲಾದರೆ,

ಆದಿ ಅನಾದಿ ಇಲ್ಲದಂದು, ಹಮ್ಮು ಬಿಮ್ಮುಗಳಿಲ್ಲದಂದು,
ಸಚರಾಚರವೆಲ್ಲ ರಚನೆಗೆ ಬಾರದಂದು,
ಗುಹೇಶ್ವರಾ ನಿಮ್ಮ ಶರಣನುದಯಿಸಿನಂದು.

 
  ಕವಿ - ಕಲಾವಿದರನ್ನು ಕಾಡುವ ಕುರುಹುಗಳು:
ಕವಿ-ಕಲಾವಿದರು ಕುರುಹಿನ ಉದ್ಯೋಗದವರು. ಕುರುಹುಗಳನ್ನು ಆಹ್ವಾನಿಸಿದಷ್ಟು ಸುಲಭವಾಗಿ ವಿಸರ್ಜನೆ ಸಾಧ್ಯವಿಲ್ಲ. ಕೆಲವು ಚಿತ್ರಕಲಾವಿದರಿಗೆ ವಿಚಿತ್ರವಾದ ಸಮಸ್ಯೆಯೊಂದು ಕಾಡುತ್ತದೆ. ತಮ್ಮ ವ್ಯಕ್ತಿ-ವಿಶಿಷ್ಟತೆಗಾಗಿ ತಾವೇ ಸೃಷ್ಟಿಸಿಕೊಂಡ ಕುರುಹುಗಳಲ್ಲಿ ಅವರು ಬಂಧಿಗಳಾಗಿಬಿಟ್ಟಿರುತ್ತಾರೆ. ಅವುಗಳಿಂದ ಬಿಡುಗಡೆ ಪಡೆಯುವುದು ಸಾಧಾರಣ ಸಾಧನೆಯಲ್ಲ.
ತಮ್ಮದೊಂದು ವಿಶಿಷ್ಟವಾದ ಸ್ಟ್ಯಾಂಪನ್ನು ಒತ್ತುವ ಮೂಲಕ ಪ್ರಾರಂಭವಾಗಿ ಕಡೆಗೆ ಅದರಲ್ಲೇ ಬಂಧಿಯಾಗಿಬಿಡುತ್ತಾರೆ. ಈ ಸಂಗತಿಯನ್ನು ಇಂದಿನ ಅನೇಕ ಕಲಾವಿದರಲ್ಲಿ ಕಾಣಬಹುದು.  ತಾವೇ ಸೃಜಿಸಿದ ಸಂಕೇತಗಳನ್ನು ನಿರಸನಗೊಳಿಸುತ್ತ ಸಾಗುವ ಕಲಾವಿದರು ತುಂಬಾ ಕಡಿಮೆ.   ತಾವೇ ಸೃಷ್ಟಿಸಿದ  ಮುದ್ರೆ ನಂತರ ಬೃಹತ್ತಾಗಿ ಬೆಳೆದು ತಾವೇ ಅದರಲ್ಲಿ ಬಂಧಿಯಾಗಿ ಹೊರಬರಲಾರದೆ ... ತೆರಣಿಯ ಹುಳು ತನ್ನ ಸ್ನೇಹಕ್ಕೆ ತಾನೆ ಮನೆಯ ಮಾಡಿ ಸುತ್ತಿ ಸುತ್ತಿ ಸಾವಂತೆ... ಬರಬರುತ್ತಾ ಆ ಮುದ್ರೆ ಮಾತ್ರ ಉಳಿದು ಕಲಾವಿದನೇ ನಾಪತ್ತೆಯಾಗುತ್ತಾನೆ.

ಅದನ್ನು ದಾಟಲಾರದೆ ಅದಕ್ಕೆ ಶರಣಾಗಿರುವ ಅನೇಕ ಕಲಾವಿದರನ್ನು ನೋಡಬಹುದು. ಅಲ್ಲಮನಿಗೆ ಕುರುಹುಗಳ ಅಂದರೆ ಸಂಕೇತಗಳು ಸ್ಥಾಪನೆಗೊಂಡು ಸಂಸ್ಥೆಯಾಗುವ ಬಗೆಗೆ ತೀವ್ರವಾದ ಆತಂಕವಿದೆ. ಅದು ಭಾಷೆಯ ಸಂಕೇತಗಳ ಬಗೆಗೂ ನಿಜ, ಧಾರ್ಮಿಕ ಸಂಕೇತಗಳ ಬಗೆಗೂ ನಿಜ. ಕರುಹಿನ ವಿಸರ್ಜನೆ ಕುರುಹಿನ ನಿರ್ಮಾಣದಷ್ಟು ಸರಳವಲ್ಲ. ಒಮ್ಮೆ ಕುರುಹನ್ನು ನಿರ್ಮಿಸಿಕೊಂಡ ಮೇಲೆ ಅದಕ್ಕೇ ಅಂಟಿಕೂತುಬಿಡುತ್ತೇವೆ. ಆಕಾರದಿಂದ ನಿರಾಕಾರದೆಡೆಗೆ ಸಾಗಿ ಕಡೆಗೆ ಎರಡನ್ನೂ ದಾಟುವುದು, ಕುರುಹ ಹಿಡಿದು ಕುರುಹ ದಾಟುವುದು ಉದ್ದೇಶವಾದರೂ ಹೀಗೆ ದಾಟುವ ಪ್ರಯತ್ನದಲ್ಲಿರುವವರನ್ನು, ಪ್ರಯತ್ನದಲ್ಲಿಯೇ ಇರುವವರನ್ನು ಕಂಡು ಅಲ್ಲಮ ಕೆರಳುವುದೂ ಉಂಟು.

ಸಿಡಿಲೊಡನೆ ಕಾದುವಂಗೆ ಕೊಡೆಯೊಂದು ಮರೆಯೆ?
ಪರ್ವತವ ಹೊರುವವಂಗೆ ಸಿಂಬೆಯೊಂದು ಸಹಾಯವೆ?
ಸಕ್ಕರೆಯ ಸವಿವುದಕ್ಕೆ ಬೇವೊಂದು ಪದಾರ್ಥವೆ?
ಗೊಗೇಶ್ವರನನರಿವುದಕ್ಕೆ ಕುರುಹು ಮುನ್ನೇಕೆ?

ಅಷ್ಟೇ ಅಲ್ಲದೆ ಗುಹೇಶ್ವರನೆಂಬ ಶಬ್ದ ಸಿನೆಬಂಜೆಯಾಯಿತ್ತು ಎನ್ನುತ್ತಾನೆ. ಆ ಶಾಬ್ದಿಕ ಕುರುಹು ಕೂಡ ಅಲ್ಲಮನನ್ನು ಆತಂಕಿತನನ್ನಾಗಿ ಮಾಡುತ್ತದೆ. ಗೊಹೇಶ್ವರನೆಂಬ ಕುರುಹು ಬೆಸಲೆಯಾದರಂತೂ ದೊಡ್ಡದೊಂದು ಸಂಸ್ಥೆಯೇ ಅಸ್ತಿತ್ವಕ್ಕೆ ಬಂದುಬಿಡುವುದರಿಂದ ಅದನ್ನು ಮೊದಲು ಸಿನೆಬಂಜೆಯಾಗಿಸುತ್ತಾನೆ. ಅವುಗಳ ನಡುನೆತ್ತಿಯ ಮೇಲೆ ಉಳಿಯಿಟ್ಟು ಹೊಡೆಯುತ್ತಾನೆ.

ಪೃಥ್ವಿಗೆ ಹುಟ್ಟಿದ ಶಿಲೆ, ಕಲ್ಲುಕುಟಿಕಂಗೆ ಹುಟ್ಟಿದ ಮೂರುತಿ
ಮಂತ್ರಕ್ಕೆ ಲಿಂಗವಾಯಿತ್ತಲ್ಲಾ!
ಈ ಮೂವರಿಗೆ ಹುಟ್ಟಿದ  ಮಗನ ಲಿಂಗವೆಂದು
ಕೈವಿಡಿವ ಅಚ್ಚವ್ರತಗೇಡಿಗಳನೇನೆಂಬೆ, ಗುಹೇಶ್ವರ.

ಹೊನ್ನತೂಗಿದ ತ್ರಾಸುಕಟ್ಟಳೆ ಹೊನ್ನಿಂಗೆ ಸರಿಯಪ್ಪುದೆ? ಚಿನ್ನವನ್ನು ತೂಗಿದ ಗುಲಗಂಜಿ, ಗುಲಗಂಜಿ ಮಾತ್ರವೆ. ಮತ್ತೂ ಒಂದು ಅದ್ಭುತಪ್ರತಿಮೆಯನ್ನು ಅಲ್ಲಮ ಮುಂದಿಡುತ್ತಾನೆ.

ಕನ್ನದಲ್ಲಿ ಸವೆದ ಕಬ್ಬುನದಂತೆ ಮುನ್ನ ಹೋದ ಹಿರಿಯರು
ಲಿಂಗದ ಸುದ್ದಿಯನರಿಯರು - ಇನ್ನಾರು ಬಲ್ಲರು ಹೇಳಾ ಗುಹೇಶ್ವರಾ

ಕನ್ನವಿಕ್ಕುವ ಕೆಲಸದಲ್ಲಿ ತಾನೇ ಮುಂದಿದ್ದು ಎಷ್ಟು ಸವೆದರೂ ಕಬ್ಬಿಣವೆಂದೂ ಸಂಪತ್ತನ್ನು ಪಡೆಯಲಾರದು. ಕುರುಹೂ ಅಷ್ಟೇ ತಾನೇ ನಿಜವಾಗದು. ಅದರ ಬದಲಿಗೆ,

ಕ್ಷಣವಾದಡೆಯೂ ಆಗಲಿ ನಿಜದ ನೆನಹೇ ಸಾಕು
ಕ್ಷಣಾರ್ಧವಾದಡೆಯೂ ಆಗಲಿ ನಿಜದ ನೆನಹೇ ಸಾಕು
ಬೆಂಕಿಯೊಳಗುಳ್ಳ ಗುಣ ಬಿಸಿನೀರಲುಂಟೇ ಗುಹೇಶ್ವರ.

ಕುರುಹು ಪದದ ವ್ಯಾಪ್ತಿಯನ್ನು ಸ್ವಲ್ಪ ಹಿಗ್ಗಲಿಸಿ ಗಮನಿಸಿದರೆ ವಿಶ್ವದ ಇತಿಹಾಸದಲ್ಲಿ ಇದರಿಂದಾಗಿರುವ ಅನಾಹುತಗಳು ಅಷ್ಟಿಷ್ಟಲ್ಲ. ತಾವು ಕಟ್ಟಿಕೊಂಡ ಕುರುಹನ್ನು ಭಂಜನೆಗೊಳಿಸಲು ಯಾವುದೇ ಸಮೂಹ ಸಿದ್ಧವಿರುವುದಿಲ್ಲ. ಅದರ ಬಗೆಗೆ ವಿಚಿತ್ರ ಶಠತ್ವವನ್ನು ಬೆಳೆಸಿಕೊಂದು ಕುರುಹು ಕಾಲ್ಪನಿಕವಾಗಿರಲೀ ಮೂರ್ತರೂಪದ್ದಾಗಿರಲೀ ಅದನ್ನು ಶಾಶ್ವತವಾಗಿಸುವ ಹಠಕ್ಕೆ ಬೀಳುತ್ತವೆ. ಕುರುಹು ಯಾವ ಸತ್ಯಕ್ಕೆ ಸಂಕೇತವಾಗಿರುತ್ತದೆಯೋ ಆ ಸತ್ಯವೇ ಮರೆಯಾಗಿಬಿಡುತ್ತದೆ. ಸಾಮರಸ್ಯದ ಸಂಕೇತಗಳು ವಿಶ್ವವನ್ನೇ ಛಿದ್ರಗೊಳಿಸುವ ಸ್ಫೋಟಕಗಳಾಗುತ್ತವೆ. ತಾವು ಕಾಣಿಸಿಕೊಡಬೇಕಾದ ಸತ್ಯವನ್ನು ಮುಚ್ಚುವ ಪರದೆಗಳಾಗುತ್ತವೆ.

ಹಾಗಾಗಿ ಅಲ್ಲಮ ತಾನು ಎದುರಾಗುವ ಯಾವ ಪ್ರತಿಮೆಯನ್ನೂ, ಯಾವ ಕುರುಹನ್ನೂ ವಿಸರ್ಜಿಸದೇ ಬಿಡುವುದಿಲ್ಲ. ತಾನು ನಡೆದ ದಾರಿಯನ್ನು ಅಳಿಸಿ ಹೋಗುತ್ತಾನೆ. ಹೀಗೆ ಸೃಜಿಸುವ ಮತ್ತು ವಿಸರ್ಜಿಸುವ ಕ್ರಮವೇ ಕನ್ನಡ ಕಾವ್ಯ ಮೀಮಾಂಸೆಯ  ದಾರಿಯೆಂಬ ಸೂಚನೆಯನ್ನು ಅಲ್ಲಮ ನೀಡುತ್ತಾನೆ.

ಭಕ್ತಂಗೆ ಉತ್ಪತ್ತಿಯಿಲ್ಲಾಗಿ ಸ್ಥಿತಿಯಿಲ್ಲ
ಸ್ಥಿತಿಯಿಲ್ಲಾಗಿ ಲಯವಿಲ್ಲ
ಲಯವಿಲ್ಲಾಗಿ ದೇಹನಾಮಪ್ರವರ್ತನೆಯಿಲ್ಲ
ಇವಾವೂ ಇಲ್ಲದ ಕಾರಣ ನಿಮ್ಮ ಶರಣನಂಗ
ಬಚ್ಚ ಬರಿಯ ಬಯಲ ಗುಹೇಶ್ವರ.

ಲೋಕವನ್ನು ಸರಿಯಾಗಿ ಕಾಣಿಸಿಕೊಡುವ ಮತ್ತು ಆ ಮೂಲಕ ಲೋಕ ಸಂಬಂಧದ ಸಾಮರಸ್ಯವನ್ನು ಕಾಪಾಡುವ ಉದ್ಯೋಗ ಹಿಡಿದ ಕಾವ್ಯ ಕಲೆಗಳು ಒಂದು ಕಾಲಕ್ಕೆ ತಾವು ಒದಗಿಸಿಕೊಟ್ಟ ಪರಿಹಾರಗಳೇ ಕುರುಹುಗಳಾಗಿ ನಂತರ ದೊಡ್ಡ ಸಂಸ್ಥೆಗಳಾಗಿ ತಾವೇ ಲೋಕಕಂಟಕವಾಗುವುದನ್ನು ಕಂಡು ತಲ್ಲಣಗೊಳ್ಳುತ್ತವೆ.  ಸೂಕ್ಷ್ಮವಾದ ಕವಿಗೆ, ದಾರ್ಶನಿಕನಿಗೆ ಕಲಾವಿದನಿಗೆ ಇಂತಹ ಆತಂಕ ಸದಾ ಕಾಡುತ್ತಿರುತ್ತದೆ. ತನ್ನನ್ನು ನಿರಸನಗೊಳಿಸಿಕೊಳ್ಳಲು ತಾನು ನಡೆದ ದಾರಿಯನ್ನು ಅಳಿಸಲು ಅವುಗಳ ಮೇಲೆ ಸದಾ ಪ್ರಹರಿಸುತ್ತಿರುತ್ತಾನೆ. ಈ ನಿಲುವು ಪ್ರಭುವಿನ ಪ್ರಿಯ ಶಿಷ್ಯ ಮಾದಾರ ಧೂಳಯ್ಯನಲ್ಲಿ ಹೀಗೆ ವ್ಯಕ್ತವಾಗಿದೆ. 
ಒಂದು ಧನುವಿಂಗೆ ಮೂರಂಬ ಹಿಡಿದೆ.

ಒಂದು ಬಾಣವ ಬಿಡಲಾಗಿ ಪದ್ಮೋದ್ಭವನ ಸೃಷ್ಟಿಯ ಕಟ್ಟಿತ್ತು.
ಮತ್ತೊಂದು ಬಾಣವ ಬಿಡಲಾಗಿ ಪದ್ಮನಾಭನ ಹೆಡಗಯ್ಯ ಕಟ್ಟಿತ್ತು
ಕಡೆಯ ಬಾಣ ರುದ್ರನ ಹಣೆಯನೊಡೆದು
ಅಲಗು ಮುರಿಯಿತ್ತು; ಗರಿ ಜಾರಿತ್ತು;
ನಾರಿಯ ಹೂಡುವ ಹಿಳುಕು ಹೋಳಾಯಿತ್ತು
ಗೊಹೇಶ್ವರನ ಶರಣ ಅಲ್ಲಮ ಹಿಡಿದ ಬಿಲ್ಲು ಮುರಿಯಿತ್ತು.

ಲೋಕದ ನಡೆಯನ್ನು ಬಂಧಿಸಲು ಹವಣಿಸುವ ಸೃಷ್ಟಿ, ಸ್ಥಿತಿ ಮತ್ತು ಲಯದ ಈ ಆದಿ ಕುರುಹುಗಳನ್ನು ಭಂಜಿಸದ ಹೊರತು ತಮ್ಮ ಯಾನ ಚಲಿಸದೆಂಬ ಎಚ್ಚರ ಇವರಿಂದ ಇಂತಹ ವಚನಗಳನ್ನು ನುಡಿಸುತ್ತಿದೆ. ಮತ್ತೂ ವಿಶೇಷವೆಂದರೆ ಈ ವಿಸರ್ಜನೆಗೆ ಅವರು ಆಧರಿಸಿರುವ ಅಲ್ಲಮಮಾರ್ಗವೂ ತನ್ನ ಉದ್ಯೋಗ ಮುಗಿದ ಆ ಕ್ಷಣವೇ ವಿಸರ್ಜನೆಗೊಳ್ಳಬೇಕು. ಕ್ಷಣಮಾತ್ರ ಅದು ಉಳಿದರೂ ತಮ್ಮ ಆಹ್ವಾನ-ವಿಸರ್ಜನೆಯ ಮಹಾಯಾನ ನಿಂತು ಹೋದೀತೆಂಬ ಆರೋಗ್ಯಕರ ಆತಂಕ ಅವರನ್ನು ಹೀಗೆ ನಿಗಿ ನಿಗಿ ಎಚ್ಚರದಲ್ಲಿಟ್ಟಿದೆ.

ಎರಡೆಂಬರಯ್ಯ ಕರಣದ ಕಂಗಳಲ್ಲಿ ನೋಡಿದವರು
ಎರಡುವನತಿಗಳೆದು ಒಂದೆಂಬರಯ್ಯ!
ಒಂದೂ ಇಲ್ಲದ ನಿರಾಳವ ಕಾಮಿಸುವವರಾಗಿ
ಕಲ್ಪಿಸುವುದಿಲ್ಲ, ಭಾವಿಸುವುದಿಲ್ಲ, ಬಯಸುವುದಿಲ್ಲ ಗೊಗೇಶ್ವರನೆಂಬುದಿಲ್ಲಾಗಿ ಬಯಲೆಂಬುದಿಲ್ಲ.

ಕೃಪೆ: ಪ್ರಜಾವಾಣಿ

***

No comments:

Post a Comment