ನೆಲ್ಸನ್ ಮಂಡೇಲಾ -ದಕ್ಷಿಣ ಆಫ್ರಿಕಾದ ಧ್ರುವತಾರೆ
ಬಿ. ಎಸ್. ಹೃದಯ, ಬೆಳುವಾಯಿ
ಅಸ್ಪ್ರಶ್ಯತೆ ನಮ್ಮ ಸಮಾಜಕ್ಕೆ ಅಂಟಿರುವ ಮಹಾ ಪಿಡುಗು. ಭಗವಾನ್ ಬುದ್ಧನಿಂದ ಆರಂಭವಾಗಿ ಅಣ್ಣ - ಬಸವಣ್ಣ, ಬಿ. ಆರ್ ಅಂಬೇಡ್ಕರ್, ಮಹಾತ್ಮ ಗಾಂಧಿ, ಜ್ಯೋತಿ - ಬಾಪುಲೆ, ತಂದೆ - ಪೆರಿಯಾರ್, ಸಾಹು - ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್, ನಾರಾಯಣಗುರು ಸ್ವಾಮಿ, ಕುದ್ಮುಲ್ ರಂಗರಾವ್ ಮೊದಲಾದ ಮಹಾನ್ ಮಾನವತವಾದಿಗಳೂ ಅಸ್ಪ್ರಶ್ಯತೆಯ ವಿರುದ್ಧದ ಹೋರಾಟದಲ್ಲಿ ತಮ್ಮ ಜೀವಮಾನವನ್ನು ಶ್ರಮಿಸಿದವರು.
ಈ ದೇಶದ ಧಮನಿತರಿಗೆ - ಬಿ.ಆರ್ ಅಂಬೇಡ್ಕರ್ ಎಷ್ಟು ಪ್ರೀತಿ ಪಾತ್ರರೋ, ಈ ನಾಡಿನ ಗಿರಿಜನರಿಗೆ - ಬಿರ್ಸಾ ಮುಂಡಾ ಎಷ್ಟು ಆದರ್ಶನೀಯರೋ, ಈ ಮಣ್ಣಿನ ಕೊರಗರ ಹೋರಾಟಕ್ಕೆ ಸ್ಫೂರ್ತಿಧಾಯಕ ಬಂಧು ಪಿ. ಗೋಕುಲ್ ದಾಸ್ ಎಷ್ಟು ಪ್ರಾಮುಖ್ಯರೋ, ಅಷ್ಟೇ ಗೌರವಾನ್ವಿತ ವ್ಯಕ್ತಿ - ಈ ಪ್ರಪಂಚದಲ್ಲಿರುವ ನಿಗ್ರೋ ಬಂಧುಗಳಿಗೆ - ನೆಲ್ಸನ್ ಮಂಡೇಲಾ!
‘ಸವರ್ಣೀಯರ ಮನ: ಪರಿವರ್ತನೆಯಿಂದ ಅಸ್ಪ್ರಶ್ಯತೆ ಹೋದೀತು’ - ಎಂದು ಮಹಾತ್ಮ ಗಾಂಧಿ ಕನಸು ಕಂಡಿದ್ದರು. ‘ಪರಿವರ್ತನೆಯಿಂದ ಅಲ್ಲ, ದಂಡನೀಯ ಕ್ರಮದಿಂದ ಮಾತ್ರ ಸಾಧ್ಯ’ ಎಂದು ಸಂವಿಧಾನ ಶಿಲ್ಪಿ - ಅಂಬೇಡ್ಕರ್ ಗುಡುಗಿದ್ದರು! ಆದರೆ ಅಸ್ಪ್ರಶ್ಯತೆ ಹೋಗಲಾಡಿಸಲು ಅವೆರಡೂ ಅಸ್ತ್ರಗಳು ಬೇಕು ಎಂದು ಶಾಂತಿಯಿಂದಲೇ ಪ್ರತಿಪಾಧಿಸಿದವರು - ನೆಲ್ಸನ್ ಮಂಡೇಲರು!
‘ಕೆಲವೇ ವರ್ಷಗಳ ಹಿಂದೆ ನಾವು ಯಾವುದನ್ನು ಕನಸಿನಲ್ಲಿ ಎಣಿಸಿರಲಿಲ್ಲವೋ, ಅವುಗಳು ಈಗ ದೈನಂದಿನ ವಾಸ್ತವಗಳಾಗಿವೆ!’ ವಿಶ್ವದ ಕರಿಜನರ ಆಶಾಕಿರಣ, ಸರ್ವೋಚ್ಛ ಬಂಧು - ನೆಲ್ಸನ್ ಮಂಡೇಲರ ಮಾತಿದು ! ದಕ್ಷಿಣ ಆಕಾದ ಕರಿಜನರಿಗೆ - ಸ್ವಾತಂತ್ರ್ಯ, ಸಮಾನತೆ, ಭಾತೃತ್ವಗಳಿಂದು ಕನಸಿನ ಮಾತಾಗಿತ್ತು. ಆದರೆ, ಆ ಕನಸನ್ನು ನನಸಾಗಿಸಿದ ಮಂಡೇಲರ ಅವಿರತ ಪ್ರಯತ್ನದ ಫಲದ ಮಾತಿದು!
1918ಜುಲೈ 18 ರಂದು ನೆಲ್ಸನ್ ಮಂಡೇಲಾ ಅವರು ಕೆವೇನೋ ಗ್ರಾಮದ ಕಾಡು ತಪ್ಪಲಿನ ಪ್ರದೇಶದಲ್ಲಿ ಜನಿಸಿದರು. ಅವರ ಮೂಲ ಹೆಸರು - ರೋಲಿಲ್ಹಾಲ್ಹಾ (Rolihlahla). ಈ ಹೆಸರನ್ನು ಉಚ್ಛರಿಸಲಾಗದೇ, ಈತನ ಇಂಗ್ಲೇಷ್ ಟೀಚರ್ ‘ನೆಲ್ಸನ್’ ಎಂದು ನಾಮಕರಣ ಮಾಡಿದರು. ಇವರ ತಂದೆ ಚತುರ -ಸಂಘಟಕ - ಬಂಟು ಬುಡಕಟ್ಟೂ ಪಂಗಡದ ನಾಯಕ ಹೆನ್ರಿ ಮಂಡೇಲಾ. ಅನ್ಯಾಯದ ವಿರುದ್ಧ ಬಂಡೇಳುವುದೇ ತಂದೆಯಿಂದ ಬಂದ ಬಳುವಳಿ! ವಿದ್ಯಾರ್ಥಿಯಾಗಿದ್ದಾಗ ಅವರ ಮೇಲೆ ಉಂಟು ಮಾಡಿದ ಕರಾಳ ವರ್ಣಭೇದ, ಸಾಮಾಜಿಕ ಅಸಮಾನತೆಗಳೇ ಈತನನ್ನು ಬಂಡಾಯವೇಳುವಂತೆ ಹುರಿದುಂಬಿಸಿತು.
ತನ್ನ ಜನರ ದು:ಖ - ದುಮ್ಮಾನಗಳನ್ನು ಕಂಡು ರೋಸಿ ಹೋಗಿದ್ದ ಯುವಕ ನೆಲ್ಸನ್ ಮಂಡೇಲಾ, ಅದರ ವಿರುದ್ಧ ಹೋರಾಡುವ ಪಣ ತೊಟ್ಟರು. ಈ ಪ್ರಯತ್ನಕ್ಕೆ ಬಂಟು ಬುಡಕಟ್ಟು ಪಂಗಡದ ಬೆಂಬಲ, ತಂದೆಯ ಪ್ರೋತ್ಸಾಹವೂ ದೊರೆಯಿತು. ಮಂಡೇಲಾರನ್ನು ಜನನಾಯಕನನ್ನಾಗಿ ರೂಪಿಸಲು, ಕಾನೂನು ವ್ಯಾಸಾಂಗಕ್ಕಾಗಿ ಪೋರ್ಟ್ ಹೋರ್ ವಿಶ್ವವಿದ್ಯಾನಿಲಯಕ್ಕೆ ಕಳುಹಿಸಲಾಯಿತು. ಅಲ್ಲಿಂದಲೇ ವರ್ಣಬೇಧ ನೀತಿಯ ವಿರುದ್ಧ ಚಳುವಳಿ ಮತ್ತು ಮುಷ್ಕರಗಳನ್ನು
ರೂಪಿಸಿ ವಿದ್ಯಾರ್ಥಿ ನಾಯಕನೆನಿಸಿದರು. ಪರಿಣಾಮವಾಗಿ ಕಾಲೇಜಿನಿಂದಲೇ ಡಿಬಾರ್ ಮಾಡಿ ಅವಮಾನಿಸಲಾಯಿತು.
ಮಂಡೇಲಾ ತನ್ನ ಬಂಧುಗಳು ಅನುಭವಿಸಿದ ಅವಮಾನಗಳನ್ನು ಎಂದೂ ಮರೆಯಲಿಲ್ಲ. ಅವುಗಳನ್ನು ಸವಾಲಾಗಿ ಸ್ವೀಕರಿಸಿದರು. ಜನಾಂಗೀಯ ತಾರತಮ್ಯದ ವಿರುದ್ಧ ಹೋರಾಡಬೇಕಾದರೆ, ಸಂಘಟನೆ ಬಹುಮುಖ್ಯವೆಂದು ಅರಿತ ಅವರು ಸಾವಿರಾರು ಬಂಧುಗಳ ಜತೆಗೂಡಿ 1944ರಲ್ಲಿ ‘ಆಫ್ರಿಕನ್ ನ್ಯಾಷನಲ್ ಕಾಂಗ್ರೇಸ್’ ಸೇರಿಕೊಂಡರು. ‘ಇಂಡಿಯನ್ ನ್ಯಾಷನಲ್ ಕಾಂಗ್ರೇಸ್’ ಹಾಗೂ ಮಹಾತ್ಮಾ ಗಾಂಧೀಜಿಯ ಅಹಿಂಸಾತ್ಮಕ ಹೋರಾಟದಿಂದ ಪ್ರೇರಿತವಾಗಿ,ಸ್ಥಾಪಿತಗೊಂಡ ‘ಆಫ್ರಿಕನ್ ನ್ಯಾಷನಲ್ ಕಾಂಗ್ರೆಸಿ’ಗೆ ನೆಲ್ಸನ್ ಮಂಡೇಲ ನಾಯಕರಾದರು’. ಆಫ್ರಿಕಾದಾದ್ಯಂತ ಶಾಂತಿಯುತ ಹೋರಾಟಗಳನ್ನು ಹಮ್ಮಿಕೊಂಡರು. ಸಾಮಾಜಿಕ ನ್ಯಾಯಕ್ಕಾಗಿ ಅನೇಕ ಜನಾಂದೋಲನಗಳನ್ನು ಆರಂಭಿಸಿದರು. 1960ರಲ್ಲಿ ಇವರ ಪಕ್ಷ ಸಂಘರ್ಷದ ಹಾದಿಯಲ್ಲಿ ಇಬ್ಭಾಗವಾಯಿತು. ಶಾಂತಿ ಹೋರಾಟಗಳು ನಿಷ್ಪ್ರಯೋಜಕವಾದಾಗ ಮಂಡೇಲರು ಉಗ್ರ ಹೋರಾಟದ ಕಡೆ ಹೆಜ್ಜೆ ಇಟ್ಟರು. ‘ಸ್ಪಿಯರ್ ಆಫ್ ದಿ ನೇಷನ್’ ಎಂಬ ಯೋಧರ ಪಡೆಯನ್ನು ಸ್ಥಾಪಿಸಿದರು. ಕರಿಯ ಜನಾಂಗದ ಬಂಧುಗಳಿಗೆ ನಿರ್ಬಂಧ ವಿಧಿಸಿದ ಸರಕಾರಿ ಬ್ಯಾಂಕುಗಳನ್ನು, ಕಚೇರಿಗಳನ್ನು, ರೈಲ್ವೇ ನಿಲ್ದಾಣಗಳನ್ನು ದ್ವಂಸ ಮಾಡಿ ಬಿಳಿಯರ ಸರಕಾರವನ್ನು ನಡುಗಿಸಿದರು. ಈ ಉಗ್ರ ಹೋರಾಟದಲ್ಲಿ ಸಾವಿರಾರು ಕರಿಯ ಬಂಧುಗಳು ಹತರಾದರು.1963ರಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೇಸ್ ಪಾರ್ಟಿಯನ್ನು ಆಗಿನ ಪ್ರಧಾನಿ ಹೆನ್ರಿವೊರ್ಡ್ ನಿಷೇಧಿಸಿ ಮಂಡೇಲಾ ಹಾಗೂ ಅವರ ಸಹಚರರನ್ನು ರಾಷ್ಟ್ರ ದ್ರೋಹದ ಆರೋಪದಡಿ ಬಂಧಿಸಿ ರಾಬಿನ್ ದ್ವೀಪದ ಸೆರೆಮನೆಯಲ್ಲಿ ಇಡಲಾಯಿತು. ಪರಿಣಾಮವಾಗಿ ಭುಗಿಲೆದ್ದ ಕ್ರಾಂತಿಯಲ್ಲಿ ಪ್ರಧಾನಿ ಹೆನ್ರಿ ವೊರ್ಡ್ ನನ್ನು ಹತ್ಯೆಗೈಯ್ಯಲಾಯಿತು.
ಸೆರೆಮನೆಯಲ್ಲಿದ್ದುಕೊಂಡೆ ಮಂಡೇಲರು ವರ್ಣಬೇಧ ನೀತಿಯ ವಿರುದ್ಧ ಹೋರಾಡಿದರು. ತನ್ನ ಬಂಧುಗಳಿಗೆ ನಿರಂತರ ಪ್ರೋತ್ಸಾಹವನ್ನು ನೀಡುತ್ತಿದ್ದರು. ಜನರನ್ನು ಸಂಘಟಿಸುತ್ತಿದ್ದರು. ಅವರ ಚಟುವಟಿಕೆಗಳು ಚೈತನ್ಯ ಪೂರಕವಾಗಿದ್ದವು. ಮಹಾತ್ಮ ಗಾಂಧೀಜಿಯ ಸತ್ಯಾಗ್ರಹ ಚಳುವಳಿಯಿಂದ ಪ್ರಭಾವಿತರಾಗಿ ಮತ್ತೆ ತನ್ನ ಅಹಿಂಸಾತ್ಮಕ ಹೋರಾಟವನ್ನು ಜೈಲಿನಲ್ಲಿಯೇ ಮುಂದುವರಿಸಿದರು. ಇವರ ಹಲವಾರು ವರ್ಷಗಳ ಶಾಂತಿಯುತ ಹೋರಾಟವು ವಿಶ್ವದ ಗಮನ ಸೆಳೆಯಿತು. 1982ರ ಜುಲೈ 18ರಂದು (ಮಂಡೇಲರ 64ನೇ ಜನ್ಮ ದಿನ) ವಿಶ್ವದಾದ್ಯಂತ ಮಂಡೇಲರ ಬಿಡುಗಡೆಗಾಗಿ ಒತ್ತಾಯಿಸಿ ಮಾನವತವಾದಿ ಹೋರಾಟಗಾರರು ಚಳವಳಿಗಳನ್ನು ಹಮ್ಮಿಕೊಂಡರು. ವಿಶ್ವಸಂಸ್ಥೆಯ ಮಹಾಸಭೆಯಲ್ಲಿಯೂ ಮಂಡೇಲರ ಬಿಡುಗಡೆಗಾಗಿ ಚರ್ಚೆಗಳು ನಡೆದವು. ‘ರಿಲೀಸ್ ಮಂಡೇಲಾ’ ಎಂಬ ಘೋಷವಾಕ್ಯಗಳು ವಿಶ್ವದಾದ್ಯಂತ ಮೊಳಗಿದವು.
1989ರಲ್ಲಿ ಆಫ್ರಿಕಾದ ಅಧ್ಯಕ್ಷರಾಗಿ ಅಧಿಕಾರಿ ವಹಿಸಿಕೊಂಡ ಉದಾರ ರಾಷ್ಟ್ರನೀತಿ ತಜ್ಞ, ಮಾನವತವಾದಿ - ಎಫ್. ಡಿ. ಕ್ಲರ್ಕ್, ಫೆಬ್ರವರಿ 1990ರಲ್ಲಿ 300 ಸ್ವಾತಂತ್ಯ ಹೋರಾಟಗಾರರ ಜೊತೆಗೆ ಇಪ್ಪತ್ತೇಳು ವರ್ಷಗಳಿಂದ ಸೆರೆಮನೆಯಲ್ಲಿದ್ದ ನೆಲ್ಸನ್ ಮಂಡೇಲರನ್ನು ಬಂಧಮುಕ್ತಗೊಳಿಸಿದನು. ದೇಶ ಭ್ರಷ್ಟ ಆರೋಪದಡಿ ಗಡಿಪಾರಿಗೊಳಗಾಗಿದ್ದ ಸ್ವಾತಂತ್ರ್ಯ ಹೋರಾಟಗಾರರು ಸ್ವದೇಶಕ್ಕೆ ಮರಳಲು ಅನುಮತಿ ನೀಡಿದನು. ವರ್ಣಬೇಧ ನೀತಿಯನ್ನು ಹಿಂದೆಗೆದುಕೊಂಡನಲ್ಲದೆ, ಶಾಲಾ - ಕಾಲೇಜು, ಸಾರಿಗೆ, ಉಪಕಾರ ಗೃಹ, ಅಂಗಡಿ, ರೈಲ್ವೇ ಎಲ್ಲವನ್ನು ಕರಿಯರಿಗೆ ಮುಕ್ತವಾಗಿ ಪ್ರವೇಶ ನೀಡಿದನು. ಬಿಳಿಯ ಮತ್ತು ಕರಿಯ ಜನಾಂಗಗಳ ಅಂತರ್ ಜನಾಂಗೀಯ ವಿವಾಹಗಳನ್ನು ಕಾನೂನುಬದ್ಧವೆಂದೂ ಘೋಷಿಸಿದನು. ಕರಿಯರಿಗೆ ನಿರ್ಬಂಧ ವಿಧಿಸಿದ್ದ ಎಲ್ಲಾ ಕಾನೂನುಗಳನ್ನು ಶಾಶ್ವತ ಅಮಾನತಿನಲ್ಲಿಟ್ಟು ಆಜ್ಞೆ ಹೊರಡಿಸಿದನು. ಅದೇ ವರ್ಷ ನೆಲ್ಸನ್ ಮಂಡೆಲರು ಆಪ್ರಿಕನ್ ನ್ಯಾಷನಲ್ ಕಾಂಗ್ರೇಸಿನ ಅಧ್ಯಕ್ಷರಾಗಿ ಆಯ್ಕೆಯಾದರು. 1994ರಲ್ಲಿ ಮಂಡೇಲರ ಜತೆಗೂಡಿ ಎಫ್. ಡಿ.ಕ್ಲಾರ್ಕ್ ಬಿಳಿಯರಿಗೂ, ಕರಿಯರಿಗೂ ಎಲ್ಲಾ ರಂಗಗಳಲ್ಲೂ ಸಮಾನ ಅವಕಾಶ ನೀಡುವ ಹೊಸ ಸಂವಿಧಾನವನ್ನು ಜಾರಿಗೆ ತಂದರು. ಸಂವಿಧಾನದ ಮೂಲಕ ಶೋಷಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಶ್ರಮಿಸಿದರು. ಈ ಹಿನ್ನಲೆಯಲ್ಲಿ ಇವರೀರ್ವರಿಗೆ ಡಿಸೆಂಬರ್ 10, 1993ರಂದು ಶಾಂತಿಗಾಗಿ ನೀಡುವ ಸರ್ವೋಚ್ಛ ಪ್ರಶಸ್ತಿ - ನೋಬೆಲ್ ಪಾರಿತೋಷಕವನ್ನು ನೀಡಿ ಗೌರವಿಸಲಾಯಿತು. 1994ರ ಎಪ್ರಿಲ್ ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜಯಗಳಿಸಿದ ಮಂಡೇಲರು, ದಕ್ಷಿಣ ಆಫ್ರಿಕಾದ ಪ್ರಥಮ ಕರಿಯ ಜನಾಂಗದ ಅಧ್ಯಕ್ಷರಾಗಿ ಆಯ್ಕೆಯಾದರು. ಭೂ ರಹಿತರಿಗೆ - ಭೂಮಿ ಹಂಚಿಕೆ ಮಾಡಿದರು. 20 ಲಕ್ಷ ಎಕರೆ ಭೂಮಿಯನ್ನು ನೀಗ್ರೋ ರೈತರಿಗೆ ವಿತರಿಸಲಾಯಿತು. ಎಲ್ಲಾ ಕಡೆ ಆರೋಗ್ಯ ಕೇಂದ್ರ, ಶಾಲಾ - ಕಾಲೇಜುಗಳನ್ನು ತೆರೆಸಿದರು. ಕಾರ್ಮಿಕರಿಗೆ ಅನೇಕ ಸೌಲಭ್ಯಗಳನ್ನು ನೀಡಲಾಯಿತು. ಕಾನೂನು ಹಾಗೂ ಶಾಂತಿ ಪಾಲನೆಗೆ ವಿಶೇಷ ಗಮನ ಹರಿಸಲಾಯಿತು. ದೇಶದಾದ್ಯಾಂತ ಹೆಚ್ಚಿನ ಸೌಹಾರ್ದತೆಯನ್ನು ತರುವಲ್ಲಿ ಮಂಡೇಲರು ಸಫಲರಾದರು. ವರ್ಣಭೇದ ನೀತಿಯ ಅಪರಾಧಿಗಳಿಗೆ ತಕ್ಕ ಶಿಕ್ಷೆಗಳನ್ನು ನೀಡಲಾಯಿತು. 1999ರಲ್ಲಿ ಪದವಿಯಿಂದ ನಿವೃತ್ತರಾದಾಗ ಆಫ್ರಿಕಾದ ಆರ್ಥಿಕತೆ ಸುಭದ್ರಗೊಳ್ಳುತ್ತಾ ಬಂದಿತ್ತು.
1990ರಲ್ಲಿ ಮಂಡೆಲರಿಗೆ ‘ಭಾರತ ರತ್ನ’ ಪ್ರಶಸ್ತಿಯನ್ನು ನೀಡಿ ಭಾರತ ಸರಕಾರ ಗೌರವಿಸಿದೆ. ಅಲ್ಲದೆ ‘ದಕ್ಷಿಣ ಆಫ್ರಿಕಾದ ಗಾಂಧೀ’ ಎಂದೇ ವಿಶ್ವಮನ್ನಣೆ ಪಡೆದಿದ್ದಾರೆ. ‘ಒಂದು ಸರ್ವಶ್ರೇಷ್ಠ ವಿಚಾರಧಾರೆಯನ್ನು ಯಾವುದೇ ಕಾರಾಗೃಹದಲ್ಲಿ ಬಂಧಿಸಿಡಲು ಸಾಧ್ಯವಿಲ್ಲ ಎಂಬುದಕ್ಕೆ ಮಂಡೇಲಾ ಅವರೇ ಜೀವಂತ ಸಾಕ್ಷಿಯಾಗಿದ್ದಾರೆ!’ ಎಂದು ಬಿಳಿ ಜನಾಂಗದ ನ್ಯಾಶನಲ್ ಪಾರ್ಟಿಯ ನಾಯಕ ಷಾಲ್ ಕ್ರೈಕ್ ಮಂಡೇಲರ ಕುರಿತಾಗಿ ಹೇಳಿರುವ ಮನೋಜ್ಞ ಮಾತುಗಳು!
ಹೌದು! ಮಂಡೇಲಾ ಬರಿಯ ವಿಚಾರಧಾರೆಯಲ್ಲ! ಕೋಟ್ಯಾಂತರ ಕರಿಯ ಬಂಧುಗಳ, ಬುಡಕಟ್ಟು ಜನಾಂಗದ ಸರ್ವಶ್ರೇಶ್ಠ ಶಕ್ತಿ ! ಅವರಲ್ಲಿದ್ದದ್ದು - ಗಾಂಧೀಜಿಯ ಅಹಿಂಸಾ ತತ್ವ, ಅಂಬೇಡ್ಕರರ ಹೋರಾಡುವ ಛಲ, ಬಿರ್ಸಾ ಮುಂಡರ ಕೆಚ್ಚೆದೆಯ ಗುಣ! ಇಂತಹ ವಿಚಾರಧಾರೆಗಳನ್ನು ಎಷ್ಟು ವರ್ಷ ಬಂಧಿಸಿಡಬಹುದು? ಅವು ಬಂಧಿಸಿಟ್ಟಷ್ಟೂ ಸೆಟೆದು ನಿಲ್ಲುವ ಜಾತಿಯ ಗುಣಗಳು ! ಅಂತಹ ಹೋರಾಟದ ಮುಂದೆ ನಿರಂಕುಶವಾದಿಗಳ ಹಾರಾಟಗಳೆಲ್ಲವೂ ನಗಣ್ಯ. ಇದು ಐತಿಹಾಸಿಕ ಸತ್ಯ.
ಅಸ್ಪ್ರಶ್ಯತೆಯ ವಿಶಾಲಾರ್ಥವೇ - ವರ್ಣಬೇಧ
No comments:
Post a Comment