ನೀಲು ಕವಿತೆಗಳು
ಕಾಳಿದಾಸ ಸುಂದರಿಯ ವರ್ಣಿಸುವಾಗ
ತನ್ನ ವರ್ಣನೆಯನ್ನೇ ಹೆಚ್ಚು ಪ್ರೀತಿಸಿದ
ಅನ್ನಿಸುತ್ತೆ, ಕ್ಷಮಿಸಿ.
ಪ್ರಿಯಾ, ನಿನ್ನೆಯ ನಿನ್ನ ತತ್ತ್ವ
ಇಂದಿನ ಪ್ರೇಮ
ಎಲ್ಲದರ ಹುಸಿಯನ್ನರಿಯುವ
ಧೈರ್ಯ ನಿನಗೆ ಬಂದ ದಿನ
ನೀನು ದಿಟದ ಇನಿಯ.
ಗಿಡ ಬೆಳೆಸುವ ನಾನು
ಹೂ ಅರಳಿಸಲಾರೆ
ಎನ್ನುವುದು
ನನ್ನ ಅಸಹಾಯಕತೆ
ನನ್ನ ಕವನದ ಪಾತ್ರವಗಿದ್ದ
ನನ್ನ ಇನಿಯ
ನನ್ನತ್ತ ನಡೆದುಬರುವುದ
ಕಂಡು
ಬೆಚ್ಚಿಬಿದ್ದು ಅಳತೊಡಗಿದೆ.
ನಿಜವಾದ ಕವಿ
ಹೊಂಗೆಯ ಚಿಗುರನ್ನು ಕೂಡ
ಮಾನವ ಕುಲ
ಮೊಟ್ಟಮೊದಲಿಗೆ ಕಂಡಂತೆ
ಕಾಣುವುದು
ಮನುಕುಲಕ್ಕಿರುವ ಭರವಸೆ.
ಈಗ ತಾನೆ ರೆಕ್ಕೆ ಪಡೆದ ಹಕ್ಕಿಯಂತೆ,
ಈಗ ಅರಳಿದ ಹೂವಿನಂತೆ,
ಈಗ ಬೆಳಗಿದ ಹಗಲಿನಂತೆ
ಎಂದು ನನ್ನ ಪ್ರೇಮದ ಕುರಿತು ವರ್ಣಿಸಲೆತ್ನಿಸಿ
ಹೋಲಿಕೆಗಳ ಬಲೆಗೆ ನಾಚಿ
ನನ್ನವನ ಅಪ್ಪಿಕೊಂಡು ಕಣ್ಣುಮುಚ್ಚುವೆ.
ಪ್ರಕೃತಿ ನಿಯಮಗಳ ಪ್ರಕಾರವೇ
ಬದುಕುವ ಶಪಥ ಮಾಡಬೇಡ:
ಯಾಕೆಂದರೆ,
ಮನುಷ್ಯ ಪ್ರಕೃತಿಗೆ ಅದು
ಪೂರ್ಣ ಹೊಂದುವುದಿಲ್ಲ.
No comments:
Post a Comment