Wednesday, 2 October 2013

ಗಾಂಧಿ ಮತ್ತು ಪದ್ಯ..

 

ಮಲಯಾಳಮ್:  ಕೆ. ಸಚ್ಚಿದಾನಂದನ್
ಅನುವಾದ: ಕುಮಾರ್ ಎಸ್






ಒಂದು ದಿನ ಸಣ್ಣ ಪದ್ಯವೊಂದು ಗಾಂಧಿ ಆಶ್ರಮಕ್ಕೆ ಬಂತು;
ಗಾಂಧಿಯನ್ನು ನೋಡಬೇಕಿತ್ತು ಅದಕ್ಕೆ.
ಗಾಂಧಿಯ ಕೈಯಲ್ಲಿ ನೂಲಿತ್ತು, ಬಾಯಲ್ಲಿ ರಾಮನಾಮ.
ಬಾಗಿಲಲ್ಲಿ ನಿಂತಿದ್ದ ಪದ್ಯವನ್ನು ಅವರು ನೋಡಲೇ ಇಲ್ಲ.

ನಾನೊಂದು ಭಜನೆಯಾದರೂ
ಆಗಬೇಕಿತ್ತು ಅಂದುಕೊಂಡಿತು ಪದ್ಯ,
ಗಂಟಲು ಸರಿ ಮಾಡಿಕೊಂಡಿತು. ಗಾಂಧಿ ಬೀರಿದರು ಓರೆ ನೋಟ,
ನರಕವನ್ನೇ ಕಂಡ ತಮ್ಮ ಕನ್ನಡಕದ ಮೂಲಕ.
'ಎಂದಾದರೂ ನೂಲುವ ಕೆಲಸ ಮಾಡಿದ್ದೀಯಾ?'
'ಎಂದಾದರೂ ಜಾಡಮಾಲಿಯ ಕೈಗಾಡಿ ಎಳೆದಿದ್ದೀಯಾ?'
'ಹೊಗೆ ತುಂಬಿದ ಅಡುಗೆ ಮನೆಗೆ
ಯಾವ ಬೆಳಗಿನಲ್ಲಾದರೂ ಹೋಗಿದ್ದೀಯಾ?'
ಪದ್ಯ ಹೇಳಿತು; 'ನಾನು ಹುಟ್ಟಿದ್ದು ಕಾಡಿನಲ್ಲಿ, ಬೇಟೆಗಾರನ ಬಾಯಲ್ಲಿ
ಬೆಳೆದಿದ್ದು ಮೀನುಗಾರನ ಪುಟ್ಟ ಗುಡಿಸಲಲ್ಲಿ
ಆದರೂ ನನಗೇನೂ ಬರದು. ಗೊತ್ತಿರುವುದೊಂದೇ ಹಾಡುವುದು.
ಆಸ್ಥಾನಗಳಲ್ಲಿ ಹಾಡಿದೆ. ಆಮೇಲೆ ಮೆದುವಾದೆ, ಸುರೂಪಿಯಾದೆ
ಆದರೀಗ ಅರೆ ಹಸಿದು ಬೀದಿಯಲ್ಲಿದ್ದೇನೆ..'
ಒಳ್ಳೆಯದು, ನಿಗೂಢ ನಗೆ ಸೂಸಿ ಗಾಂಧಿ ಹೇಳಿದರು,
'ಯಾವಾಗಲೂ ಸಂಸ್ಕೃತದಲ್ಲಿ ಮಾತನಾಡುವುದ ಬಿಡು.
ಹೋಗು ಹೊಲಗಳಿಗೆ; ರೈತರಾಡುವ ಮಾತು ಕೇಳು.'

ಪದ್ಯ ಬೀಜವಾಗಿ ನೆಲಕ್ಕೆ ಬಿತ್ತು.
ಹೊಸ ಮಳೆಗೆ ನೆನೆಯಲು ಕಾಯುತ್ತಿತ್ತು.


***

No comments:

Post a Comment