Tuesday 1 October 2013




ಸಾಲುಗಳು


ರಾತ್ರಿ
ಬಯಲಾಟಕ್ಕೆ ಹೋಗಿದ್ದೆ
ಅಮ್ಮ ಕೊಟ್ಟ
ರುಪಾಯಿಯಲ್ಲಿ
ಶೇಂಗಾ ತಿನ್ನುತ್ತ
ರಾಕ್ಷಸನ ಆರ್ಭಟಕ್ಕೆ
ನಿದ್ರೆಯ
ತೂಕಡಿಕೆಗೆ
ಕೈ ಚೆಲ್ಲಿ
ಒಂದೆರಡು ಕಾಳುಗಳು
ನೆಲ ಕಚ್ಚಿದವು
ಬೆಳಿಗ್ಗೆ
ಶಾಲೆಗೆ ಹೋಗುವಾಗ
ಹರಿದಂಗಿ ರವಿಕೆ
ತೊಟ್ಟ
ಮಂದಿ
ಆಟದ ಗರದ
ಸಂದುಗೊಂದಿಯಲ್ಲಿ
ಬಿದ್ದ ಕಾಳುಗಳಿಗಾಗಿ
ಹುಡುಕಾಟ ನಡೆಸಿದ್ದರು

ಅವತ್ತೇ ಅದು
ಮನಕ್ಕೆ ತಟ್ಟಿತ್ತೇ
ಅಥವಾ ಇವತ್ತೇ?








ಒಂಟಿತನ ಬೇಸರ ತಂದಿತು
ದೀಪ ಹಚ್ಚಿದೆ
ನೆರಳಿನೊಂದಿಗೆ
ಜೊತೆಯಾಯ್ತು.

(ಎರವಲು ತಂದ ದೀಪ!)









ತಂಪು ಹೊತ್ತಲ್ಲಿ
ಮುಂದೆ
ದಾರಿತೋರಿಸುತ್ತ
ನಡೆದ ನೆರಳು
ಸುಡುತಾಪಕ್ಕೆ
ಹೆದರಿ
ಪಾದಗಳಡಿಯಲ್ಲಿ
ಬಚ್ಚಿಟ್ಟುಕೊಂಡಿತು.





ನೆರಳಿಗೆ ಹೆದರಿ
ಆರಿಸಲು ಹೋದವನ
ತಲೆ ಮೇಲೆ
ದೀಪ ಇಟ್ಟು
ಬುದ್ಧ
ನಕ್ಕ.








ಓದಲು
ಶುರುಹಚ್ಚಿದ್ದು
ಹೌದು
ಕನಸಿನಲ್ಲಿ
ಮಧ್ವ, ಬುಧ್ದ ಇಬ್ಬರೂ
ಬಂದು
ಬೆಚ್ಚಿಬೀಳಿಸಿದರು.



ಮರೀಚಿಕೆಗಳ ನೋಡುತ್ತಾ ದಣಿದು ತೂಕಡಿಸಿದ ಕಣ್ಣು
ಮಲೆನಾಡನ್ನು ಕನಸಿತು.




ಈಗಷ್ಟೆ ನೋಡಿದೆ
ಉರುಳುವ ಮಂದಿ
ನಡೆಸಿದ
ತೆವಳುವವರ
ಕುಪ್ಪಳಿಸುವವರ
ಮಾರಣಹೋಮ.

(ಚಿತ್ರ: ಗೂಗಲ್)








ಅಮ್ಮನ
ಕಿರುಬೆರಳು
ಜಾತ್ರೆಯ ಬೆರಗು
ಕಳೆದುಹೋಗುವವರೆಗೆ
ಒಟ್ಟೊಟ್ಟಿಗೇ
ಇದ್ದವು.




ಎಚ್ಚರವಿರಲಿ,
ಶುಭ್ರ ಬಿಳಿ ಹಾಳೆಯ ಮೇಲೆ
ಕಪ್ಪು ಶಾಯಿ
ಅಕ್ಷರಗಳನ್ನು
ಸ್ಫುಟವಾಗಿ ಮೂಡಿಸುತ್ತದೆ.








ಮೈಮರೆತು
ಮಲಗಿ
ಎದ್ದಾಗ ನಾನೇ
ಹೌದೋ
ಅಲ್ಲವೋ
ಎನಿಸಿತು
ಕನ್ನಡಿ ನೋಡಿದೆ
ಹೌದು
ಅವನೇ
ನಾನಾಗಿದ್ದೆ.











ಲೋಕ ಅರಿತುಕೊಳ್ಳಲು
ಸಾಹಿತ್ಯ ಓದು
ಎಂದರು
ಓದಿದೆ
ಸಾಹಿತಿ
ಅರ್ಥವಾದ.

ಚಿತ್ರ: ಗೂಗಲ್


***

No comments:

Post a Comment