Saturday, 19 October 2013


ಈ ಬಾರಿಯ ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ನನ್ನ 

ಮಡದಿ ಡಾ.ಅನುಪಮಾ ಮೂರನೇ ಬಹುಮಾನ, ನಮ್ಮ ಮಗಳು ಪೃಥ್ವಿ  ವಿದ್ಯಾರ್ಥಿ ವಿಭಾಗದ

ಬಹುಮಾನ ಪಡೆದಿರುವುದು  ತುಂಬಾ ಖುಶಿಯ ಸಂಗತಿ.  ಪೃಥ್ವಿ ಬೆಳಗಾವಿಯ ಬಿಮ್ಸ್ ನಲ್ಲಿ ಎರಡನೇಯ ವರ್ಷದ 

ವೈದ್ಯಕೀಯ ವಿದ್ಯಾರ್ಥಿನಿ. ಅನುಪಮಾ ಬರೆದ ಕವನವನ್ನಷ್ಟೆ ಇಲ್ಲಿ ಕೊಡಲಾಗಿದೆ.




ಲೋಕವೇ ತಾನಾದ ಬಳಿಕ..





ಅನಾದಿ ಗುಹೆ
ಅದರಳೊಗೊಂದು ಅನಾದಿ ಕರಡಿ
ಮೊಲೆಮುಡಿಯ ಜೀವಗಳ ಎತ್ತಿಕೊಂಡೊಯ್ದು
ಒಮ್ಮೆ ಜಾಗರವಾಡುವ ನವಿಲಾಗಿ
ಮಗದೊಮ್ಮೆ ಸಾವಿರ ಹೆಡೆಯ ಸರ್ಪವಾಗಿ
ಸಾವಿರ ರೂಪ ಸಾವಿರ ಅವತಾರ ತಳೆವ ಕರಡಿ

ಹಣ್ಣು ಹೂವು ತಾಜಾ ಜೇನು
ಹಾಡುಹಕ್ಕಿ ಆಡಲು ಅಳಿಲ ತರುವ
ಮೈಯೆಲ್ಲ ನಾಲಿಗೆಯ ಹುಚ್ಚು ಕರಡಿ
ಹೆಬ್ಬಂಡೆಯ ಎಲ್ಲಿಂದಲೋ ಎಳತಂದಿಟ್ಟು
ನೆಲವನೂ ನಿದಾನವನೂ ಕಾಯ್ದು ಹೈರಾಣಾಗುವ ಕರಡಿ
ಅದರ ಗುಹೆಯ ಬಾಯಿಗಡ್ಡ ದೊಡ್ಡ ಕಲ್ಲುಬಂಡೆ..

ಉಣ್ಣದ ಊಟವನುಂಡು ಬಸವಳಿವ ಕರಡಿಗೆ
ತೂತಿರದ ಮಣಿಗಳ ಪವಣಿಸುವ ಉನ್ಮಾದ
ಅದರ ಮುಳ್ಳು ನಾಲಿಗೆಗೆ ನೆತ್ತರು ಸವಿ
ನೆಕ್ಕೀನೆಕ್ಕೀ ನೆಕ್ಕುವ ಕರಡಿ ಪ್ರೀತಿಗೆ
ಅವಳ ಅಂಗೈ ರಕುತ ಚಿಲುಮೆಯಾಗಿ ಚಿಮ್ಮಬೇಕು
ಶಥಪಥ ತುಳಿದ ಪಾದ ರಕುತ ನದಿ ಹರಿಸಬೇಕು
ಪುಟ್ಟ ಅಂಗೈ ಅಂಗಾಲುಗಳಿಗೆ
ಮಾಯುವ ಮತ್ತೆ ಗಾಯಗೊಳುವ ಅನುದಿನದ ಐಭೋಗ

ರತ್ತೋರತ್ತೋ ರಾಯನ ಮಗಳೇ
ಬಿತ್ತೋಬಿತ್ತೋ ಭೀಮನ ಮಗಳೇ
ಬೈಟುಗುಬ್ಬಿ ಬಾಳೆಕಂಬ
ಕುಕ್ಕುರು ಬಸವಿ ಕೂರು ಬಸವೀ..

ಆ ಗುಹೆಯ ಬಾಯಿಗಡ್ಡ ದೊಡ್ಡ ಕಲ್ಲುಬಂಡೆ..

ಅಂಥದೇ ಒಂದು ಗುಹೆಯಲ್ಲಿ ನೊಂದುಬೇಯುವ ಅಮ್ಮ
ಕರಡಿ ಕತೆಯ ಹಾಡ್ಯಾಡಿ ಅತ್ತರೂ ಕೇಳಿಸಿರಲಿಲ್ಲ
‘ಎಮ್ಮಿಯಾ ಮೇಯುಸ್ಕೊಂಡು ಸುಮ್ಮಾನೆ ನಾನಿದ್ದೆ
ಹಾಳಾದೋವೆರೆಡು ಮೊಲೆ ಬಂದೊ..
ಹೂವ ತರದೆ ಹುಲ್ಲ ತರಬೇಡವೆಂದು
ಕೊಟ್ಟಮನೆಯೆಂದು ಕರೆತಂದು ಬಿಟ್ಟರು
ನಾನೀಗ ಗುಹಾವಾಸಿ

ಆ ಗುಹೆಯ ಬಾಯಿಗಡ್ಡ ದೊಡ್ಡ ಕಲ್ಲು ಬಂಡೆ..

ಸುತ್ತ ಹಬ್ಬಿರುವ ಬೆಟ್ಟಗಳು
ಎಲ್ಲ ಗದ್ದಲ ನುಂಗಿ ಮೌನ ಹರಡುವಾಗ
ಯಾವ ಕಿರಿಚಾಟವೂ ಕೇಕೆ ಕಲರವವೂ ಅಲ್ಲಿ ಸದ್ದಾಗಲಿಲ್ಲ
ಹಸಿವು ನಿದ್ರೆ ಮೈಥುನಗಳು ಆತ್ಮವನ್ನು
ಕಣಿವೆಯಲ್ಲಿ ತಣ್ಣಗೆ ಹರಿವ ನದಿ ಕಾಲವನ್ನು
ದಿಕ್ಕೆಟ್ಟು ತುಳಿದ ನೆರಳಿರದ ಹಾದಿ ಕನಸುಗಳನ್ನು ನುಂಗಿದವು
ಬೆಟ್ಟಗಳ ನಡುವಿನ ಗುಹೆ
ಮುಗಿಯದ ಮುಸ್ಸಂಜೆಯಲಿ ಮುಳುಗಿತು
ಸದ್ದಿಲ್ಲದೆ ಉರುಳುವ ಕಣ್ಣ ಹನಿಯ ಜೊತೆಗೆ
ಬೆಟ್ಟದಂಥಾ ಮೌನ ಬೆಟ್ಟವನೇ ನುಂಗಿ ಬೆಳೆಯಿತು
ಒಂದಾಗಿ ಒಳಗೊಳುವೆನೆಂದು ಬಾಹುಗಳ ಅಗಲಿಸಿದೆ
ಗುಹೆಯ ಖಾಲಿತನವಷ್ಟೇ ಎದೆಗಿಳಿಯಿತು.

ಎದೆಯಲ್ಲಿ ಪರ್ವತಗಳೆದ್ದವು
ನದಿ ಹರಿದು ಉಕ್ಕಿ ಒಣಗಿದವು
ಬಯಲೊಣಗಿ ಬಾಯ್ಬಿರಿದು ಬಂಜರಾಯ್ತು
ಹಾಡು ಮರೆತೆ ಚನ್ನೇಮಣೆಯಾಟ ಮರೆತೆ
ಒಡಲುರಿಯ ಮಾತುಗಳ ಭಾಷೆ ಮರೆತೆ
ಮಡಿಲ ಸುಖ ಮರೆತೆ ಒಡಲ ಬಳ್ಳಿಯ ಬೇರು ಮರೆತೆ
ಮರೆತೆ ದೇಹದೊಳಗೊಂದು ಮನಸಿದೆಯೆಂಬ ನಿಜ
ಎಲ್ಲ ಮರೆಸಿದ ಮರವೆಗಿಂತ ಯಾವ ನೆನಹು ಘನವೆನ್ನಲಿ?

ಗುಹೆಯ ಬಾಯಿಗಡ್ಡ ದೊಡ್ಡ ಕಲ್ಲುಬಂಡೆ..

ಖಾಲಿ ಹಣತೆಯಲಿಷ್ಟು ಚಿಕ್ಕೆಗಳನಿಟ್ಟೆ
ಕತ್ತಲ ಗುಹೆಯಲಿ ಬೆಂಕಿಯಾಗಿ ಬೆಳಕಾಗಿ
ಬೂದಿಯುಳಿಸದ ಕರ್ಪೂರವಾಗಿ ಉರಿಯತೊಡಗಿದೆ..

ನೆನಪುಗಳೇ, ಬೀಜವಾಗಿ ಒಳ ನುಸುಳಬೇಡಿ
ಕನಸುಗಳೇ, ಭ್ರೂಣವಾಗಿ ಬೆಳೆಯಬೇಡಿ
ಬಯಕೆಗಳೇ, ಮತ್ತೆಮತ್ತೆ ಗರ್ಭ ತುಂಬಬೇಡಿ
ನಾನಿನ್ನು ಹೆರಲಾರೆ.

ಕನಸುಗಳ ಕಾದುಕೊಳುವುದೆಂದರೆ
ಕಾಲಕ್ಕೆ ಬೆನ್ನುಹಾಕಿ ನಡೆಯಬೇಕು
ಹುಚ್ಚಳಾಗದೆ ಬದುಕಬೇಕೆಂದರೆ
ಮಾತಿಗೆ ಮದ್ದಿಟ್ಟು ಸಿಡಿಸಿ ಮೌನ ಒಲಿಸಿಕೊಳ್ಳಬೇಕು
ಸೋಲು ಒಳನುಸುಳಲು ಹೆಬ್ಬಾಗಿಲೇ ತೆರೆಯಬೇಕಿಲ್ಲ
ಒಂದೇ ಒಂದು ಪುಟ್ಟ ಬಿರುಕು ಸಾಕು
ಅಂಗೈಯ ರಕುತ ನದಿ ಅಂಗಾಲಿಂದ ಹೊರಬಂದು
ಗುಹೆ ಬಾಯ ಬಂಡೆ ದಾಟಿ ಹರಿಯಬೇಕು..

ಎಲ್ಲ ಕದನಗಳ ಗುರಿ ಶಾಂತಿಯೇ ಇರಬಹುದು
ಕದನವೇ ಇರದ ಕಡೆ ಶಾಂತಿ ಮಾತಿಲ್ಲ
ಯುದ್ಧವಿರದ ರಣರಂಗದಿ ಕೊನೆಗೊಂದು ಆಸ್ಫೋಟ
ಬಯಲುಗೊಳದೆ ಬೇರೆ ದಾರಿಯಿಲ್ಲ
ಬೆಟ್ಟದ ಗುಹೆ ಮೆಟ್ಟಿ ಲೋಕ ತಾನಾದೆ
ಕಾಯಗೊಂಡ ಅಂಗಾಂಗ ಕಳಚಿ ನಿಂತೆ
ನಿಜವನರಿತೆ ನಿಶ್ಚಿಂತಳಾದೆ ಬೆಳಗನುಟ್ಟೆ ಲಜ್ಜೆಗೆಟ್ಟೆ

ತಾ ಮುಳುಗಿದ್ದ ಬಾವಿಯನೆ ಆಳಾಳ ತೋಡಿದ ಕರಡಿ
ನೀರೊಳಗಿದ್ದು ಬಾಯಾರಿ ಬಿಂಬ ನೋಡಿತ್ತು
ಹೊಯ್ದಾಡುವ ನೆರಳಾಗಿ ಕಾಯದ ಹುಸಿ ಕಂಡಿತ್ತು
ಕಂಪಿಸುವ ದೇಹದಲಿ ರೂಪದ ಹುಸಿ ಅರಿವಾಗಿ
ಬೆತ್ತಲೆಯೆ ನಿಚ್ಚಣಿಕೆಯೆಂದು ನಿಚ್ಚಳಾಯ್ತು
ಪಶುವಿನೊಳಗೂ ಮನಸು ಮೂಡತೊಡಗಿತ್ತು..

ಈಗ ಗಾಯಕ್ಕೆ ವಿರಾಮ
ಮತ್ತೆ ಮಾಯುವ ರೋಗಕ್ಕೆ ವಿರಾಮ
ಪಶುವಿಗೆ ವಿರಾಮ
ದುಃಖಕ್ಕೂ ವಿರಾಮ..


















ಲೋಕವೇ,
ಕಾಣಲು ಕಣ್ಣೇ ಬೇಕೆಂದಾದರೆ ನನಗೆ ಕುರುಡು
ಕೇಳಲು ಕಿವಿಯೇ ಇರಬೇಕೆಂದರೆ ನನಗೆ ಕಿವುಡು
ನಡೆಯಲು ಕಾಲು
ಮುಟ್ಟಲು ಕೈ
ಮಿಡಿಯಲು ಎದೆ
ಸೆಟಗೊಳಲು ಬೆನ್ನುಹುರಿಯೇ ಬೇಕೆಂದಾದರೆ
ಕ್ಷಮಿಸು,
ನಾ ಅಂಗಹೀನ.

ನಾನೀಗ ಅವನೆದೆಯೊಳಗಿರುವ ರೆಕ್ಕೆಯಿರದೆ ಹಾರುವ ಹಕ್ಕಿ
ನಿದ್ರೆ ಸ್ವಪ್ನ ಜಾಗರಗಳೇ ಇರದ ಏಕಕೋಶ ಜೀವಿ...



***



ಬೀಳದ ನಕ್ಷತ್ರ























(ಕವನವನ್ನು ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಓದಿರಿ).


4 comments:

  1. * ಅನುಪಮಾ ಅವರ ಕವಿತೆ- ಕಥನ ಕವನ ಮಾದರಿಯದ್ದು. ಮನುಷ್ಯ ವಿಕಾಸದ ಜೊತೆ ಭೂಮಿ, ಹೆಣ್ಣು, ನದಿ ಹುಟ್ಟು, ಬೆಳವಣಿಗೆ, ಕನಸು.ಬದುಕು, ಶೋಷಣೆಯ ಇತಿಹಾಸವನ್ನು ಸೂಕ್ಷ್ಮವಾಗಿ ಬಿಡಿಸಿಟ್ಟಿದೆ. ಅಲ್ಲಲ್ಲಿ ಸುಳಿವ ರೂಪಕಗಳಲ್ಲಿ ಅಲ್ಲಮನ ಪ್ರಭಾವ ನುಸುಳಿದೆ. ಹೆಣ್ಣಿನ ಇವತ್ತಿನ ಬದುಕು ಕಥನ ಕವನದಲ್ಲಿ ತೆರೆದುಕೊಂಡಿದೆ.

    * ಇನ್ನು ಪೃಥ್ವಿಯ ಬೀಳದ ನಕ್ಷತ್ರ ಕನವ ಸಹ ಕಥನ ಕವನ ಮಾದರಿಯದ್ದೆ. ಚೆಂದ ಇದೆ ಆಕೆಯ ಕನಸು. ಬಹುಮಾನ ಪಡೆದದ್ದಕ್ಕೆ ಇಬ್ಬರಿಗೂ ಅಭಿನಂದನೆಗಳು.

    ReplyDelete