Wednesday 30 October 2013

ರುಕ್ಮೋದ್ದಿನ್ ತೋಲಾ - ರಾಣೇಶ್ ಪೀರ್ ಸನ್ನಿಧಿಯಲ್ಲಿ...





 Neela K Gulbarga
 ಕೆ. ನೀಲಾ

ಹಿಂಗಾರು ಮಳೆಯು ಉಲ್ಲಾಸದ ಗಿಲಕಿಯಾಡಿಸುತ್ತಿದೆ. ಹೊಲಗಳಲ್ಲಿ ತೊಗರಿಯು ಅರಶಿಣ ಹೂವು ಮುಡಿದು ನಳನಳಿಸುತ್ತಿದೆ. ತೊಗರಿಯ ಕಣಜ ಒಟ್ಟುವ ರೈತರು ಉತ್ತಮ ಬೆಲೆ ಬಂದಲ್ಲಿ ಖಂಡಿತ ಖುಷಿ ಪಟ್ಟಾರು. ನಿಸರ್ಗದ ಈ ನಿರ್ಮಲ ವಾತಾವರಣವನ್ನು ಆಸ್ವಾದಿಸಿ ನಲಿಯಬೇಕಾದ ಮನಸು ಮಾತ್ರ ಒಳ-ಒಳಗೇ ರೋದಿಸುತ್ತಿದೆ. ಈ ನಡುವೆ ಮಂಗಳೂರು, ಬೆಳ್ತಂಗಡಿ, ಮೈಸೂರು ಅಂತೆಲ್ಲ ಸುತ್ತಾಡಿ ಬಂದಿರುವೆನು. ಸೌಜನ್ಯ ಪ್ರಕರಣವು ಇನ್ನಿಲ್ಲದಂತೆ ಕಾಡುತ್ತಿದೆ. ಮಂಡ್ಯ ಜಿಲ್ಲೆಯ ಆಬಲವಾಡಿಯಲ್ಲಿ ತಂದೆಯೇ ಮಗಳನ್ನು ಬಹಿರಂಗವಾಗಿ ನೇಣು ಹಾಕಿದ ಪ್ರಕರಣ ನಡೆದಾಗಲೂ ಹೀಗೇ ಇನ್ನಿಲ್ಲದ ಕಾಡುವಿಕೆಯಲ್ಲಿ ಕುದ್ದು ಹೋಗಿದ್ದೆ. ಆಲೋಚಿಸುತ್ತಿದ್ದಂತೆ ಮೆದುಳಿಗೆ ಹೊಳೆದದ್ದು ಇಷ್ಟು. ಯಾವ ನಾಡಿನಲ್ಲಿ ಕೋಮುವಾದ-ಮೂಲಭೂತವಾದ ಬೆಳೆಯುತ್ತದೆಯೋ ಆ ನಾಡಿನಲ್ಲಿ ಹೆಣ್ಣುಮಕ್ಕಳು ಮತ್ತು ಮಕ್ಕಳು ಸುರಕ್ಷಿತರಾಗಿರುವುದಿಲ್ಲ. ಮತೀಯವಾದ ಬೆಳೆಯುತ್ತಿದ್ದಂತೆ ಜನರ ಹೃದಯದಲ್ಲಿ ಕ್ರೌರ್ಯವೊಂದು ನುಗ್ಗಿ ಇಬ್ಭಾಗಿಸಲು ಹವಣಿಸುತ್ತಿರುತ್ತದೆ. ಕೋಮುದಂಗೆ ನಡೆದಾಗೆಲ್ಲ ಹೆಂಗಸರ ಮೇಲೆ ವ್ಯಾಪಕ ಅತ್ಯಾಚಾರ ನಡೆಯುತ್ತದೆ. ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರಕ್ಕೂ ಕೋಮುವಾದಕ್ಕೂ ನೇರಾ-ನೇರ ಸಂಬಂಧವಿದೆ. ಸಂಸ್ಕೃತಿಯ ಹೆಸರಿನ ಮೇಲೆ ಮಹಿಳೆಯರ ಘನತೆ-ಅಸ್ಮಿತೆಯ ಮೇಲೆ ಧಾಳಿ ನಡೆಯುವುದು ಕೋಮುವಾದ-ಮೂಲಭೂತವಾದ ಬೆಳೆದ ಪ್ರದೇಶಗಳಲ್ಲಿ ಅಧಿಕವಾಗಿರುತ್ತದೆ. ಚರಿತ್ರೆಯು ಮತ್ತೆ-ಮತ್ತೆ ಇದನ್ನು ದಾಖಲುಗೊಳಿಸಿದೆ. ಚರಿತ್ರೆಯಿಂದ ನಮಗೆ ಪಾಠ ಕಲಿಯಲಿಕ್ಕಿದೆ. ಹೃದಯ ಬೆಸುಗೆಯ ಕೋಮುಸಾಮರಸ್ಯ ನೈಜ ಅಭಿವೃದ್ಧಿಯ ಬುನಾದಿಯಾಗಬೇಕಿದೆ. ಇಂಥ ನಡೆಗೆ ಬಹು ದೊಡ್ಡ ಪರಂಪರೆಯೂ ಇರುತ್ತದೆ. ದೇಶದಗಲಕ್ಕೂ ಸಾಮರಸ್ಯದ ಸಾಂಸ್ಕೃತಿಕ ಪರಂಪರೆಯು ಅವಿಚ್ಛಿನ್ನವಾಗಿ ಹರಡಿಕೊಂಡಿದೆ. ಕೋಮುವಾದಿ-ಮೂಲಭೂತವಾದಿಗಳು ಇಂಥ ನೆಲೆಗಳನ್ನು ಹಾಳುಗೆಡವಲು ಹವಣಿಸುತ್ತಿರುವರು. ಅಥವ ಕೈವಶ ಮಾಡಿಕೊಂಡು ಮೂಲ ಸ್ವರೂಪ-ಸಂದೇಶವನ್ನೇ ಅಳಿಸಿ ಹಾಕಿ ಸ್ವಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿರುವರು. ಇದೊಂದು ರೀತಿಯಲ್ಲಿ ಮಾನವೀಯತೆ ಮತ್ತು ಅಮಾನವೀಯ ಕ್ರೌರ್ಯದ ನಡುವಿನ ನಿರಂತರ ಸಂಘರ್ಷ. ಇದು ಸಾಂಸ್ಕೃತಿಕ ಸಂಘರ್ಷವೂ ಹೌದು. 

ನಾಡೆಲ್ಲ ಸುತ್ತಾಡಿ ಬಂದು ಹೀಗೆ ಚಿಂತಿಸುತ್ತ ಒಂದೆಡೆ ಕೂಡಲು ಮನಸು ಒಲ್ಲೆನ್ನತೊಡಗಿತು. ಎಲ್ಲಿಗೆ ಹೊರಡುವುದು? ಅರ್ಧ ಗಂಟೆಯೊಳಗಾಗಿ ರಾಣೇಶ್-ಪೀರ್ ದರ್ಗಾದ ಎಂಬತ್ತರ ಇಳಿವಯಸ್ಸಿನ ಬುರಾನೋದ್ದಿನ್ನ ಮುಂದೆ ಕುಳಿತೆ. ಬಿಳಿಯ ಪೈಜಾಮ-ಅಂಗಿ. ತಲೆಗೆ ಕಸೂತಿಯುಳ್ಳ ಬಿಳಿಯದ್ದೇ ಗೋಲು ಟೋಪಿ. ಬುರಾನೋದ್ದಿನನ ಅಪ್ಪ ಮಷಾಕ್ಸಾಬ್ 1884ರಲ್ಲಿ ಸ್ಥಾಪಿಸಲ್ಪಟ್ಟ ಎಂಎಸ್ಕೆ ಮಿಲ್ಲಿನಲ್ಲಿ ಕಾರ್ಮಿಕನಾಗಿದ್ದ. ಮಕ್ಕಳು ತರಕಾರಿ ಮಾರುವರು. ಕಾರ್ಮಿಕನಾಗಿಯೇ ದುಡಿದವನು ಈಗ ರಾಣೇಶ ಪೀರ್ ದರ್ಗಾದ ಮೆಟ್ಟಿಲುಗಳ ಮೇಲೆ ಕುಳಿತು ದಿನದೂಡುವನು. ಭಕ್ತರು ಕೊಡುವ ಚಿಲ್ಲರೆಕಾಸು ಬೀಡಿ-ಕಾಡಿಗಾಗುವುದಂತೆ. ಇವನಂಥವರು ಮೆಟ್ಟಿಲಿಗೊಬ್ಬರಂತೆ ಕುಳಿತಿದ್ದರು. ಎಲ್ಲರ ನಾಲಿಗೆಯ ಮೇಲೆ ದರ್ಗಾದ ಇತಿಹಾಸವು ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಕತೆಯಾಗಿ ಅರಳಲು ಹವಣಿಸುತ್ತಿತ್ತು. ಎಷ್ಟು ಬಾರಿ ಕೇಳಿಲ್ಲ ಈ ಕತೆ? ಆದರೂ ದರ್ಗಾದ ಪರಿಸರದಲ್ಲಿ ಕುಳಿತು ಮತ್ತೆ-ಮತ್ತೆ ಮನವೊಡ್ಡುವೆನು. ಹೊಸದಾಗಿಯೇ ಕೇಳುವಂತೆ. ಬೊಚ್ಚು ಬಾಯಿಯ ಎಳೆತುಟಿಗಳು ನುಡಿಯುತ್ತಿದ್ದರೆ ಸಂಜೆಗಂಗಳಲ್ಲಿ ಹೊಳಪಿತ್ತು.

 
ಒಳಗೆ ಎರಡು ಮಜಾರ್(ಸಮಾಧಿ) ಇವೆಯಲ್ಲ.. ಹಾಂ ಮೊದಲನೆಯದ್ದು ರುಕ್ಮೋದ್ದಿನ್ನದ್ದು. ಅಂದ್ರೆ ರುಕ್ಮೋದ್ದಿನ್ ತೋಲಾನದ್ದು. ತೋಲಾ ಅಂತ ಹ್ಯಾಂಗ ಹೆಸರು ಬಂತು ಗೊತ್ತೇನು? ರುಕ್ಮೋದ್ದಿನ್ ನಲವತ್ತು ವರ್ಷ ತಪಸ್ಸಿಗೆ ಕೂತಿದ್ದ. ಅಲ್ಹಾನ ನೆನೆಯುತ್ತ ಮಂಡಿಯೂರಿ ಒಂದೇ ಕಡೆ ಕೂತು-ಕೂತು ಕಾಲು-ನೆಲ ಏಕವಾಗಿದ್ದವು. ಮೈಯೆಲ್ಲ ಮಣ್ಣು-ಕಚರಾದಿಂದ ಹುತ್ತೇರಿ ಕಣ್ಣೆರಡು ಮಾತ್ರ ಕಾಣುತ್ತಿದ್ದವು. ಇದೇ ಸಮಯದಲ್ಲಿ ಸುಲ್ತಾನ ತಾಜ್-ಉದ್ದಿನ್ ಫಿರೋಜ್ಷಾನ ಆಮಂತ್ರಣದ ಮೇರೆಗೆ ಗುಲಬರ್ಗ ಕ್ಕೆ ಬಂದು ನೆಲೆಸಿದ್ದ ಖ್ವಾಜ-ಬಂದ-ನವಾಜ್ ಪ್ರಸಿದ್ಧ ಸೂಫಿಯಾಗಿರುತ್ತಾನೆ. ಈತ ಉರ್ದು, ಪರ್ಶಿಯನ್, ಅರೆಬಿಕ್ ಭಾಷೆಗಳಲ್ಲಿ ಸುಮಾರು 195 ಕೃತಿಗಳನ್ನು ರಚಿಸಿರುವನು. ರುಕ್ಮೋದ್ದಿನನ ಮಹಿಮೆಯ ಕಾರಣವಾಗಿ ಸ್ವತಃ ಖ್ವಾಜಾ-ಬಂದಾ-ನವಾಜ್ ಗೇಸುದರಾಜನೇ ರುಕ್ಮೋದ್ದಿನನ ಭೇಟಿಗೆ ಬರುವನು. ನಲವತ್ತು ವರ್ಷ ಅಲ್ಹಾನ ಧ್ಯಾನದಲ್ಲಿದ್ದ ರುಕ್ಮೋದ್ದಿನ್ ಕೈಯೆತ್ತಿ ನಮಸ್ಕರಿಸಿದನಂತೆ. ರುಕ್ಮೋದ್ದಿನನ ವಿಶಾಲ ಹೃದಯಕ್ಕೆ, ಕಠಿಣಸಿದ್ದಿಗೆ ಮೆಚ್ಚಿ 'ರುಕ್ಮೋದ್ದಿನ್ ನೀನು ನನಗಿಂತಲೂ ಒಂದು ತೋಲ ಹೆಚ್ಚು' ಅಂದನಂತೆ. ಅಂದಿನಿಂದ ರುಕ್ಮೋದ್ದಿನ್ತೋಲಾ ಅಂತಲೇ ಹೆಸರು ಬಂತೆಂಬುದು ಪ್ರತೀತಿ. 


 

ಬಾಜುದಲ್ಲಿರುವ ಇನ್ನೊಂದು ಮಜರ್(ಸಮಾಧಿ) ರಾಣೋಜಿಯದ್ದು. ರಾಣೋಜಿ ಜಾತಿಯಿಂದ ಮರಾಠಾ. ಕಾಶಿ ದರ್ಶನಕ್ಕೆಂದು ಈ ಮಾರ್ಗವಾಗಿ ಬರುತ್ತಿರುವಾಗ ರುಕ್ಮೋದ್ದಿನನ ಭೇಟಿಯಾಗುತ್ತದೆ. 'ಕಾಶಿ ಹುಡುಕಿಕೊಂಡು ಅಷ್ಟು ದೂರ ಯಾಕೆ ಹೋಗ್ತಿ? ಇಕೋ ಇಲ್ಲಿದೆ ನೋಡು ಕಾಶಿ' ಅಂತ ರುಕ್ಮೋದ್ದಿನ ಅಂಗೈಯ ಅರಳಿಸಿದನಂತೆ. ರಾಣೋಜಿಗೆ ಅಂಗೈಯಲ್ಲಿ ಕಾಶಿ ಕಂಡಿತಂತೆ. ಭಕ್ತಿಯಿಂದ ಪುನೀತನಾದ ರಾಣೋಜಿಯು ಅಂದಿನಿಂದ ರುಕ್ಮೋದ್ದಿನನ ಗೆಳೆಯನೂ ಶಿಷ್ಯನೂ ಆಗಿ ಇಲ್ಲಿಯೇ ಉಳಿದುಬಿಟ್ಟನು. ಇಬ್ಬರ ಗೆಳೆತನಕ್ಕೆ ಪರಸ್ಪರ ಊಟ, ಆಚರಣೆ, ನಂಬಿಕೆಗಳು ಅಡ್ಡಿಬರಲಿಲ್ಲ. ಗುರು ರುಕ್ಮೋದ್ದಿನನಿಗಾಗಿ ರಾಣೋಜಿಯು ಪ್ರತಿದಿನ ಊರಲ್ಲಿ ಹೋಗಿ ಮಾಂಸಾಹಾರ ತರುತ್ತಿದ್ದನಂತೆ. ಇದನ್ನು ಗಮನಿಸಿದ ಮೇಲ್ಜಾತಿಯವರು ಒಮ್ಮೆ ರಾಣೋಜಿಯನ್ನು ನಡುದಾರಿಯಲ್ಲಿ ತರುಬಿ 'ನೀನು ಮಾಂಸ ತಗೊಂಡು ಹೋಗ್ತಿದ್ದಿ. ಇದರಿಂದ ನಮ್ಮ ಜಾತಿಗೆ ಕಳಂಕವಾಗ್ತದೆ.' ಎಂದು ನಿಂದಿಸಿ ಒತ್ತಾಯದಿಂದ ಜೋಳಿಗೆ ತಪಾಸಣೆ ಮಾಡಲು ಮುಂದಾಗುವರು. ಇಕ್ಕಟ್ಟಿನಲ್ಲಿ ಸಿಕ್ಕಿಬಿದ್ದ ರಾಣೋಜಿಯು ಗುರು ರುಕ್ಮೋದ್ದಿನ್ನನ್ನು ನೆನೆದು 'ಇಲ್ಲ. ನೋಡ್ರಿ ಬೇಕಾದ್ರೆ, ಜೋಳಿಗೆಯಲ್ಲಿ ಹೂವುಗಳಿವೆ' ಎಂದು ಹೇಳುವನಂತೆ. ಜನರು ವ್ಯಗ್ರರಾಗಿ ಜೋಳಿಗೆಯಲ್ಲಿ ಕೈ ಹಾಕುವರು. ಖರೆನೇ ಅಲ್ಲಿ ಗುಲಾಬಿ ಹೂವುಗಳು ನಳನಳಿಸುತ್ತಿದ್ದವಂತೆ. ಬಂದ ಜನರು ಪೆಚ್ಚಾಗಿ ವಾಪಾಸಾಗುವರು. ರಾಣೋಜಿಗೆ ರುಕ್ಮೋದ್ದಿನನ ಮಹಿಮೆಯಿಂದ ಅಭಿಮಾನವಾಗುವುದು. ಆದರೆ ಕತೆ ಇಲ್ಲಿಗೆ ಮುಗಿಯುವುದಿಲ್ಲ. ರಾಣೋಜಿ ಮತ್ತು ರುಕ್ಮೋದ್ದಿನನ ಗೆಳೆತನ ಹೇಗಿತ್ತೆಂದರೆ ಒಬ್ಬರಿಗೊಬ್ಬರು ಗೌರವಿಸಿಕೊಂಡು ಕಾಳಜಿಯಿಂದ ಬದುಕುತ್ತಿದ್ದರು. ಹೀಗಾಗಿ ರುಕ್ಮೋದ್ದಿನ್ ಅಂದಿನಿಂದ ಗೆಳೆಯನಿಗೆ ಸಂಕಟಕ್ಕೀಡು ಮಾಡಿದ ತನ್ನ ಮಾಂಸಾಹಾರವನ್ನೇ ತೊರೆಯುವನು.' ಈ ಕಾರಣವಾಗಿ ದರ್ಗಾಕ್ಕೆ ಬರುವವರು ಮಾಂಸದಡುಗೆ ತರುವುದಿಲ್ಲ. ಬದಲಿಗೆ ಮಾದಲಿ, ಒಗ್ಗರಣೆ ಅನ್ನ, ಸಕ್ಕರೆ, ಟೆಂಗಿನಕಾಯಿ ಮತ್ತು ಹೂವುಗಳೇ ಇಲ್ಲಿ ನೈವೇದ್ಯ
. 
ರುಕ್ಮೋದ್ದಿನ್ ತೋಲಾ ಮತ್ತು ರಾಣೋಜಿ ತಮ್ಮ ಜೀವಿತಾವಧಿಯೆಲ್ಲ ಜೊತೆಯಾಗಿಯೇ ಕಳೆದರು. ಈಗ ಅವರಿಬ್ಬರ ಸಮಾಧಿಗಳು ಅಕ್ಕಪಕ್ಕದಲ್ಲಿವೆ. ಇಬ್ಬರ ಮಜರ್ಗಳು ಹಸಿರು ಚದ್ದರು ಹೊದ್ದುಕೊಂಡಿವೆ. ನವಿಲುಗರಿಗಳ ಗಾಳಿಯು ಮಜರ್ ಸೋಕಿ ಎಲ್ಲೆಡೆ ಪಸರಿಸುತ್ತಿದೆ. ಎರಡೂ ಸಮಾಧಿಗಳನ್ನು ದಾಟಿ ಮುಂದಕ್ಕೆ ಹೋದರೆ, ಹುಣಚೆ ಮರಗಳು, ಕಲ್ಲಿನಿಂದ ಕಟೆದ ದೀಪದ ಸ್ಥಂಭಗಳು ಸಿಗುತ್ತವೆ. ಬರುವ ಭಕ್ತಾದಿಗಳು ಕೊಬ್ಬರಿ ತುಕುಡಿಯನ್ನು ಸಣ್ಣ ಚೀಲದಲ್ಲಿ ಕಟ್ಟಿ ಮರಕ್ಕೆ ನೇತ್ಹಾಕುತ್ತಿದ್ದರು. ಮತ್ತು ಸಣ್ಣ ಚಿಂಪುಗಲ್ಲುಗಳನ್ನು ಒಂದರ ಮೇಲೊಂದು ಪೇರಿಸುತ್ತಿದ್ದರು. ಹರಕೆ ಹೊರುವ ಪರಿಯಿದು. ಬೇಡಿಕೊಂಡಿದ್ದು ಈಡೇರಿದ್ದರೆ ತಾವು ಕಟ್ಟಿದ ಚೀಲ ಬಂದು ಬಿಚ್ಚುವರಂತೆ. ಹೀಗೆ ಹರಕೆಯ ಗಂಟು ಕಟ್ಟುವವರಲ್ಲಿ ಮುಸ್ಲಿಂರು, ಲಿಂಗಾಯತರು, ಕುರುಬ-ಕಬ್ಬಲಿಗರು, ಮರಾಠರು ಹೀಗೆ ಸಕಲೆಂಟು ಜಾತಿಯವರು ಇದ್ದರು. 


ದೂರದ ರಾಯಚೂರಿನಿಂದ ಗಂಡ-ಮಕ್ಕಳೊಂದಿಗೆ ಬಂದಿದ್ದ ಅಮೀನಾಬೇಗಂ ಕೊಬ್ಬರಿ ಒಡೆದು ಸಕ್ಕರೆಯೊಂದಿಗೆ ಬೆರೆಸಿ ಕೊಟ್ಟಳು. ಯಾವಾಗಲೂ ಅಳುವ ಮಗನ ಹಣೆಯನ್ನು ದರ್ಗಾಕ್ಕೆ ಹಚ್ಚಿಸಿ, ಅಳು ನಿಲ್ಲಿಸೆಂದು ಬೇಡಿಕೊಂಡ ಸುಶೀಲಮ್ಮ ಕತೆ ಕೇಳಲು ಬಂದು ಕುಳಿತಳು. ಅವಳೊಂದಿಗೆ ಮಗ. ಯಾರೊಬ್ಬರ ಮನಸಿನಲ್ಲಿಯೂ ಪರಕೀಯತೆಯ ಭಾವ ಹಣಿಕುತ್ತಿಲ್ಲ. ಹದಿಮೂರು-ಹದಿನಾಲ್ಕನೆಯ ಶತಮಾನದ ಹೊತ್ತಿಗೆ ಸೌಹಾರ್ದ ದೀಪವನ್ನು ಬೆಳಗಿಸಿ ಎಂದಿಗೂ ತೀರದ ಎಣ್ಣೆ-ಬತ್ತಿಯಂತೆ ಭಾವೈಕ್ಯ ಪರಂಪರೆಯನ್ನು ಕಟ್ಟಿಕೊಟ್ಟ ರುಕ್ಮೋದ್ದಿನ್ತೋಲಾ-ರಾಣೋಜಿಯರ ಮಜರ್ಗೆ ಹಣೆಮಣಿದೆ.


***

No comments:

Post a Comment