Thursday, 31 October 2013

ಆ ಪೂಜಿತೆಯರು ನಾವೇ ಇರಬೇಕು..!


ಸುಧಾ ಚಿದಾನಂದಗೌಡ
  Sudha Chidanandgowd


 


ಗಾಳಿ ಬೀಸಿದಾಗೊಮ್ಮೆ
ಸೆರಗು ಸಂಭಾಳಿಸಲು,
ಮಳೆ ಜಿನುಗಿದರೆ ಹನಿ ತಾಕದಿರಲು,
ಒಲೆ ಉರಿಯುವಾಗ ಬೆರಳು ಸುಡದಿರಲು
ನಡೆಸಿದೇವೆ ಅನುಕ್ಷಣದ ಹೋರಾಟ
ನೀವು ಸ್ತುತಿಸುವ ಶಕ್ತಿಸ್ವರೂಪಿಣಿಯರು
ನಾವೇ ಇರಬೇಕು

 
ಎದೆಯ ಉಬ್ಬು ಬಚ್ಚಿಡಲು
ಸೊಂಟ ಬಳುಕದಂತೆ ನಡೆಯಲು
ಚಪ್ಪಲಿಯೊಳಗಿನ ಬೆರಳು
ಯಾರ ಕಣ್ಣನ್ನೂ ಕೋರೈಸದಿರಲಿ
ಎಂದು ಹಾರೈಸಿಕೊಂಡು
ಮೈಗೆ ಮೈಗಾವಲಾಗಿಸಿಕೊಂಡು
ನೂರು ಕಂಗಳ ಕಾವಲಿನ ನಡುವೆ
ಬದುಕುಳಿಯಲು ನಡೆಸಿದೇವೆ
ಅನುಗಾಲ ಯತ್ನ
ನೀವು ಹೇಳುವ
ಕುಚೋನ್ನತೇ ಕುಂಕುಮರಾಗಶೋಭಿತೆ
ಇತ್ಯಾದಿಯರು ನಾವೇ ಇರಬೇಕು

ಶಬ್ದವಾದೊಡನೆ ಬೆಚ್ಚಿಕೊಂಡು,
ಇರುಳಾದೊಡನೆ ನಾಲ್ಕುಗೋಡೆ ನೆಚ್ಚಿಕೊಂಡು
ಹಗಲು ಹರಿದ ಬಟ್ಟೆಯನು ಬಿಗಿಯಾಗಿರಿಸಿ
ಹಿರಿ-ಕಿರಿ ಪರದೆಯಲಿ
ಯಾವಳೋ ಮಾನಗೇಡಿಯ
ಮೈಕುಣಿತಕ್ಕೆ ಹುಚ್ಚೆದ್ದ ಮನಮರ್ಕಟದ
ಮೃಗತೃಷೆಗೆ ಸಮಿತ್ತಾದ
ಪಕ್ಕದ್ಮನೆ ಬಾಲೆ, ಹಿಂದಿನ್ಮನೆ ಅಜ್ಜಿ
ನಾವೇ ಇರಬೇಕು
ನೀವು ಹೇಳುವ
ಪ್ರಚೋದನಕಾರಿ ವೇಷಧಾರಿಣಿಯರು

ಗಿಲೀಟು ಒಡವೆ, ರೇಷ್ಮೆದುಕೂಲ
ಕುದುರೆಸಾರೋಟಿನ ಕನಸಿನಲಿ ಕರಗಿ
ಕಿರುಗೋಣೆಯನೆ ಅರಮನೆಯೆಂದು ಭ್ರಮಿಸಿ
ಕಂಡಕಂಡ ಗಂಡಸರನ್ನು
ಚಿಗಪ್ಪಾ, ದೊಡಪ್ಪಾ, ಅಣ್ಣಾ, ಅಪ್ಪಾ
ಕೂಗಿ ಸಂಬಂಧಗಳ ನೆಟ್ಟಗಿರಿಸಲು ಹೆಣಗಿ
ಚರಂಡಿ ನೀರಿನಲಿ ಬೊಗಸೆಯಾಡಿಸಿ
ಜೀವಜಲ ಹುಡುಕುವವರು
ನೀವು ಹೇಳುವ
ಗಂಗೆ, ಜಮನೆ, ಸಿಂಧು, ಕಾವೇರಿ
ನಾವಲ್ಲದೆ ಇನ್ನು ಯಾರು !?



No comments:

Post a Comment