ನೀಲು ಕವಿತೆಗಳು
ನನ್ನ ಸಾಲುಗಳು
ಬೆತ್ತಲೆ ಹುಟ್ಟಿ ಅಳುತ್ತ
ಬಂದು
ನನ್ನ ಹೃದಯ ಬೆಚ್ಚಗಾಗಿಸುವ
ಮಗುವೆನ್ನಿಸಿದಾಗ ಮಾತ್ರ
ಜೀವಂತ ಸಾಲುಗಳು.
ಹೂವಿನ ಸುಗಂಧ
ಹಣ್ಣಿನ ಸವಿಯಾಗಿ
ಅದರ ಬೀಜ
ಮರವಾದಂದು
ಆತ್ಮಕ್ಕೆ ತಂಪೆರೆವುದು.
ಪ್ರತಿಯೊಂದು ಕಂದಾಚಾರಿ
ಧರ್ಮವೂ
ಒಂದಾದರೂ ಪ್ರತಿಭಟನೆಯ
ಸುವಾಸನೆಯ ಹೂವಿನ ಬಳ್ಳಿ
ಬೆಳೆಯಲು
ಕಾರಣವಾಗುವುದು.
ನನ್ನ ಬಗ್ಗೆ ನಾನು
ನಿಷ್ಟುರ ಸತ್ಯಗಳ ಹೇಳಬೇಕೆಂದು
ಹೊರಟ ಕ್ಷಣ
ಅಸತ್ಯಗಳ ಹೂಮಾಲೆ ಹಾಕಿ
ಅಪ್ಪಿಕೊಳ್ಳುವವನ
ನಿಷ್ಟೆಯ ಹೇಗೆ ಅಲ್ಲಗಳೆಯಲಿ?
ಡಿಸೆಂಬರ್ ತುಂಬ ಅಂಟಿಕೊಂಡಿದ್ದ ಪ್ರೇಮಿಗಳು
ಮೊನ್ನೆ ಎಪ್ರಿಲ್ ಶಾಖಕ್ಕೆ ಹೊರಬಂದು
ದೂರದಿಂದಲೇ ಮುಗುಳ್ನಕ್ಕಿದ್ದು
ಬಿಡುಗಡೆಯಿಂದಲೋ, ಬೇಸರದಿಂದಲೋ?
ಭೂಮಿ, ಆಕಾಶ ಸಮುದ್ರದ
ಸಹಸ್ರ ಪವಾಡಗಳಲ್ಲಿ
ವಿಸ್ಮಯಕರವಾದದ್ದು
ತಮ್ಮ ಕಠೋರ ನಿಷ್ಟುರತೆಯಲ್ಲೇ
ಜೀವಗಳ ಪೊರೆಯುವ ಕ್ರಿಯೆ.
No comments:
Post a Comment