ಕವಿತೆ:
ಬಸವರಾಜ ಸೂಳಿಭಾವಿ
ನಿಃಶ್ಶಬ್ಧ ರಾತ್ರಿ
1
ನಿಶಬ್ಧ ರಾತ್ರಿ
ಕೊನೆಯ ಜಾವ ಮಳೆ ಮಿಡಿತ
ನಿಶಾಚರ ವಾಹನ ಗೌಜಿನ ಸ್ವಪ್ನ
ಕೋಣೆಯೊಳಗಿನ ಗಾದಿಗಂಟಿದ ತಂಪು
ಏದುಸಿರ ಜಾರು
ಪ್ರವಾಹ; ಬೆಳಕ ಸ್ಫೋಟ
ನೀರ ಬಿಂದುಗಳ ಗರಿಕೆ ಎಸಳು
ಪೂರ್ವ ಚೆಲ್ಲುವ ಕಿರಣ
ಬೆವರ ಬೆನ್ನ ಹಾದಿ
ಅಲುಗುವ ಎಲೆಯೆವೆ
ಎಲ್ಲ ಮುಟ್ಟಿಬಿಡುವ ಪಯಣ
ದಣಿವಿಗೆ ನಿಂತು ಕೂತು
ಮತ್ತೆ ಸರಾಗ
ಹಾದಿಯುದ್ದ ಏರು ಇಳಿವು
ಬಯಲಲ್ಲಿ ಜುಳುಜುಳು
ತಗ್ಗಿನೆಡೆ ಜಲಪಾತ
ಕಡಲ ಕೂಟ
ಅಬ್ಬರದಲೆಗಳ ದಂಡೆ
2
ಹೆಜ್ಜೆಮೂಡಿದಂಗಳದ ಬಾಗಿಲಿಗೆ
ಬಂದು ನಿಂತಿದೆ ಒಂಟಿತನದ ರಾತ್ರಿ
ಮಳೆಯಿಲ್ಲದ ನೆಲ ನದಿ ದಡಗಳ ಬಿಕ್ಕು
ಸುಖದ ಹಳೆಯ ಮನೆ; ದುಃಖ ನಿವಾಸಿ
ನೋಯುವ ಅಂಗದೆಡೆ ಹೊರಳುವ ಬೆರಳು
ಕಾಲದಾಟ ನನ್ನೊಂದಿಗೆ ನೂರಾರು ತಲೆಮಾರು.
***
No comments:
Post a Comment