Friday, 18 October 2013


ಸಾಲುಗಳು



1.

ನಾವು
ಸರ್ವಧರ್ಮ ಸಹಿಷ್ಣುಗಳು
ಗುರುವಾರ
ರಾಯರ ಮಠ
ಭಾನುವಾರ
ಚರ್ಚು
ಶುಕ್ರವಾರ
ಮಸೀದಿ-

ಮುಂದೆ
ಕೈ ಚಾಚಿ
ಭಿಕ್ಷೆ ಬೇಡುವವರು.

(ನೀಲು ಪ್ರೇರಿತ)





2 .




ಆವರಿಸುವ

ಒಂದೇ ಗುಣ

ಕಾಮ

ಪ್ರೇಮ

ಪ್ರೀತಿ-

ಯಲ್ಲೂ


ಸೇರಿಕೊಂಡಿರುವುದು


ಸೋಜಿಗ-


ವೇ?

 





3.


ಯಶಸ್ಸಿನ ದಾರಿ

ಅದರದ್ದೇ ಇರಬೇಕೆಂದಿಲ್ಲ

ರಕ್ತ ಕಂಡರೆ

ತಲೆತಿರುಗುವವನೂ

ಒಂದುದಿನ

ಸರ್ಜನ್ನಾಗಿ 

ರಕ್ತಸ್ರಾವವೇ ಆಗದಂತೆ

ಕುಯ್ಯುವ ಕಲೆ

ಕರಗತ ಮಾಡಿಕೊಳ್ಳುವುದು

ಅನಿವಾರ್ಯವಾಗಿ
 
ಯಶಸ್ಸು


ಕದ ತಟ್ಟಬಹುದು!





4.


ಹಿಗ್ಗುತ್ತ ಉರಿವಾಗ

ಒಂದು ನೆನಪಿಡು-

ನಾವೇ

ನಿನ್ನುರಿಯ

ಉರುವಲು.


 




5.


ಗುರಿ

ತಪ್ಪದಿರಲಿ

ಬೇಡ


ಹೊಸ ಗಾಯ.




6.


ಗುರಿ ಮುಟ್ಟುವ 

ಓಟದ

ಕೊನೆಯಲ್ಲಿ

ಒಂಟಿತನ-



ಸ್ವಾಗತ.


  


7.


ಪೊರೆ ಕಳಚುವುದೆಂದರೆ

ಒಳಗು

ಹೊರಗಾಗುವುದು

ಮತ್ತೆ

ಮೈ ಕಾಯಿಸಿಕೊಳ್ಳುವುದು

ಕಳಚುವುದು.




8.

ಎಷ್ಟು ವಿಚಿತ್ರ ನೋಡು
 
ಗಾಲಿಬ್,

 
ಕನಸನ್ನಾದರೂ

 
ಕಾಣ್ತೀನೀಂತ

 
ಮಲಗಿದ್ರೆ

 

 
ದುರ್ಭರದಲ್ಲಿ


ನಿದ್ರೆ


ಸತಾಯಿಸುತ್ತೆ


ಎಲ್ಲ ಕನಸಿಗಿಂತ


ಚಂದವಿದ್ದಾಗ


ಕಣ್ಣೆಷ್ಟು


ಎಳೀತಿತ್ತಲ್ಲ!


 



9.

ಇಬ್ಬರಿರುವಾಗ
 
ಭಯವಿಲ್ಲ.


 




10.

ಮರೆಯಲ್ಲಿ
 
ಅವಿತಿದ್ದ ಗೋಡೆ

 
ಕನ್ನಡಿ ಕಳಚಿಟ್ಟ ದಿನ

 
ಬೆಪ್ಪುಗಟ್ಟಿತು

 
ಯಾರ ಮುಖವನ್ನೂ

 
ತದೇಕಚಿತ್ತನಾಗಿ

 
ದಿಟ್ಟಿಸಲಾಗದ


ತನ್ನ


ವಿಮುಖತೆಗೆ


ನಾಚುವ ಭರದಲ್ಲೂ


ಅಭ್ಯಾಸ ಬಲದಿಂದ


ಗಿಂಜುವವರ

ಉದ್ಘಾರಕ್ಕೆ ನಸುನಕ್ಕಿತು


ಕನ್ನಡಿಯ ಕಷ್ಟಕ್ಕೆ


ಮರುಗಿತು.


 



11.

ನನ್ನ ಬಗ್ಗೆ
 
ನಿಮ್ಮ 

 
ಅಭಿಪ್ರಾಯಗಳನ್ನು

 
ಬಲ್ಲೆ

 
ನಿಮ್ಮ ಬಗ್ಗೆ

 
ನನ್ನದನ್ನು ಬಲ್ಲಿರಾ?


 

No comments:

Post a Comment