ಬೇಲಿ
ಕಾಜೂರು ಸತೀಶ್
-೧-
ಅಪ್ಪನಪ್ಪನಪ್ಪ ಹೊಲಕ್ಕೆ ನೆಟ್ಟ ಕಳ್ಳಿ ಬೇಲಿ
ಎಷ್ಟೊಂದು ಮರಿಮಕ್ಕಳನ್ನು ಹಡೆದಿದೆ.
ಕರುಳ ಬಳ್ಳಿಯಂತಿರುವ ಕಳ್ಳಿ ಬೇಲಿ,
ಅವನ ಗೋರಿಗೆ ಕಾವಲಿರುವ ಹೂಗಿಡಗಳಂಥ ಬೇಲಿ.
ಮೊನ್ನೆ ಬಲವಂತವಾಗಿ ಸಂತಾನಹರಣ ಚಿಕಿತ್ಸೆ ನಡೆದಿದೆ
ಬೇಲಿಗೆ.
ಬುಲ್ಡೋಜರ್ರಿನಲ್ಲಿ ಬಂದಿಳಿದ ಕೋಟು ಧರಿಸಿದ ಮಂದಿ
ಒಕ್ಕಲೆಬ್ಬಿಸಿದ್ದಾರೆ ಬೇರೂ ಕೂಡ ಉಳಿಯದ ಹಾಗೆ.
ಚಕ್ರ ಹಾರಿಸಿದ ಧೂಳಿಗೆ ಅಸ್ತಮಾ ಹಿಡಿದಿದೆ ಅಪ್ಪನಪ್ಪನಪ್ಪನ ಗೋರಿಗೆ!
ನಾಶಪಡಿಸಲಾಗಿದೆ-
ಬೇಲಿಯೊಳಗಿದ್ದ ಎತ್ತು, ಕಪ್ಪೆ, ಹಾವು,
ಎರೆಹುಳು, ಕೊಕ್ಕರೆಗಳ ಬೆರಳಚ್ಚುಗಳನ್ನು.
ಹನಿಮಳೆಯ ತಲೆ ಟೈಲ್ಸ್ ನೆಲದ ಮೇಲೆ ಚಚ್ಚಿ
ಹುಚ್ಚು ಬಂದ ಹಾಗೆ
ಕಳೆದುಹೋದ ದನಗಳ ಹುಡುಕುವ ಹಾಗೆ
ಕಡಲ ಬೆನ್ನಟ್ಟಿದೆ.
ಅತ್ತಿತ್ತ ಕಪ್ಪುಬಿದ್ದ ರಸ್ತೆ ಕ್ರಿಮಿಗಳಂತೆ ಹರಿಯುವ ಚಕ್ರಗಳಿಗೆ
ಶಬ್ದವನ್ನುಣಿಸುತ್ತಿದೆ ಫೀಡ್ ಬಾಟಲಿಗಳಲ್ಲಿ.
ಬೇಲಿ ಮೇಯ್ದ ಜಾಗದಲ್ಲಿ
ಕಾಂಪೌಂಡು ಗುತ್ತಿಗಳು.
ಒಳಗೆ ಬಂಜರುಬಿದ್ದ ಕಾಂಕ್ರೀಟು ಅವ್ವ.
ಹಸಿದು ಅತ್ತರೆ ಬೆಂಕಿಯಂಥ ಮಳೆ.
ಎಷ್ಟು ಪ್ರಾಣಗಳ ನೆಕ್ಕಿನೋಡಿದರೂ
ಚಿಗುರಲಾಗುತ್ತಿಲ್ಲ.
-೨-
ಬೇಲಿ-
ಬಂಧಿಸಿಬಿಡುತ್ತದೆ ಕಾಲಿಟ್ಟಾಗಲೆಲ್ಲ
ಬಿಗಿದು ಹೆಬ್ಬಾವಿನಂತೆ.
ಇತಿಹಾಸದ ಪುಟಕ್ಕಾಗ ಸೈಜುಗಲ್ಲಿನ ತೂಕ!
ಬೇಲಿ ಬಿಗಿದಷ್ಟೂ
ಲೋಕವೊಂದು ಬೆಂಕಿಪೆಟ್ಟಿಗೆ,
ಬಾಂಬಿನ ಒಳಮೈ.
ಬೇಲಿ ಕಟ್ಟಿ ಬಂದೂಕು ಕೊಟ್ಟು
ತುಂಬಿಟ್ಟ ಉಗ್ರಾಣಕ್ಕೆ
ಬೂಸ್ಟು,ನುಸಿಗಳ ಕಾವಲು.
ರಣಹದ್ದುಗಳ ಬಾಯಲ್ಲಿ ಹಸಿದವರ ಹಾಡು.
-೩-
ಸೂರ್ಯನೇ ಬಾ..
ಮೇಯ್ದುಕೊಂಡಿರು ಬೇಲಿಗಳನ್ನು
ಕಣ್ಣೀರ ಬದಲಿಗೆ!
***
No comments:
Post a Comment