Monday, 30 December 2013


'ಮಠದ ಹೋರಿ' :ಗ್ರಾಮೀಣ ಕತೆಗಳ ಹಂದರದಲ್ಲಿ ಹೊಸ ಕನಸು

ನಾಗರಾಜ ಹರಪನಹಳ್ಳಿ 

 

 

 

 



'ಕತ್ತಲಗರ್ಭದ ಮಿಂಚು' ಕಥಾ ಸಂಕಲನ, 'ಕೆಂಗುಲಾಬಿ' ಕಾದಂಬರಿ ಮೂಲಕ ಕನ್ನಡ ಸಾಹಿತ್ಯದಲ್ಲಿ ಹೆಜ್ಜೆ ಗುರುತು ಮೂಡಿಸಿದ ಕತೆಗಾರ ಹನುಮಂತ ಹಾಲಗೇರಿ ಇದೀಗ ತಮ್ಮ ಎರಡನೇ ಕಥಾ ಸಂಕಲನ ‘ಮಠದ ಹೋರಿ ಮತ್ತು ಇತರ ಕತೆ’ಗಳನ್ನು  ಪ್ರಕಟಿಸಿದ್ದಾರೆ. ಬಳ್ಳಾರಿಯ ಸಂಸ್ಕೃತಿ ಪ್ರಕಾಶನ ಈ ಕಥಾ ಸಂಕಲನವನ್ನು ಹೊರತಂದಿದೆ.

ಹಾಲಗೇರಿ ಅವರು ಬರೆದ ಹತ್ತು ಕತೆಗಳು ಈ ಸಂಕಲನದಲ್ಲಿವೆ. ಕತೆಗಾರನೊಬ್ಬನ ಎರಡನೇ ಸಂಕಲನ ಆತನ ಚಿಂತನಾ ಕ್ರಮ ಮತ್ತು ಬದುಕನ್ನು ನೋಡುವ ಬಗೆಯನ್ನು ಕಟ್ಟಿಕೊಡುತ್ತದೆ ಎಂಬುದನ್ನು ಈ ಸಂಕಲನದಲ್ಲಿ ಕಾಣಬಹುದು. ಕತೆಗಾರ ಸಮಾಜದ ಸ್ಥಗಿತತೆಯನ್ನು ಪ್ರಶ್ನಿಸುತ್ತಲೇ ಬದಲಾವಣೆಯನ್ನು ಬಯಸುತ್ತಾನೆ ಎಂಬ ಸ್ಪಷ್ಟ ಸುಳಿವು ಈ ಸಂಕಲನದಲ್ಲಿದೆ.

ಮನುಷ್ಯನೋರ್ವನಲ್ಲಿ ಕತೆಗಾರ ಬೆಳೆದಂತೆ ಆತ ಹೆಚ್ಚು ಮಾನವೀಯನಾಗುತ್ತಾನೆ. ಜೊತೆಗೆ ಬದುಕು ಬದಲಾಗಬೇಕು. ಅಸಹನೆ, ಬಡತನ ಇಲ್ಲವಾಗಬೇಕು. ಜಾತೀಯತೆ ಅಳಿಸ ಬೇಕು ಎಂಬ ಕನಸುಕಾಣುತ್ತಾನೆ. ದೇವರು ಧರ್ಮದ ಹೆಸರಲ್ಲಿ, ಜಾತಿಯ ಹೆಸರಲ್ಲಿ ,ಅಭಿವೃದ್ಧಿ ರಾಜಕೀಯದ ಹೆಸರಲ್ಲಿ  ನಡೆಯುವ ಅನ್ಯಾಯ, ಅಕ್ರಮಗಳನ್ನು ವಿರೋಧಿಸುವ ಕ್ರಮ ಪ್ರಗತಿಪರ ಮನಸ್ಸಿನ ಯುವಕರಲ್ಲಿ ಸಹಜವಾಗಿ ಬೆಳೆದುಬಂದಿರುತ್ತದೆ. ಸಮಾಜ ಬದಲಾಗಬೇಕು ಎಂಬ ಆಶಯದಿಂದಲೇ ಬದುಕನ್ನು ನೋಡುತ್ತಾನೆ. ಆದರೆ ಅದಕ್ಕೆ ವಿಪರ್ಯಾಸದ ಸಂಗತಿಗಳು ಕಣ್ಮುಂದೆ ನಡೆದರೆ ಪ್ರತಿಭಟಿಸುವ ಮನಸ್ಸು ಒಳಗೊಳಗೇ ರೂಪಗೊಳ್ಳುತ್ತದೆ.

ಬರವಣಿಗೆಯನ್ನು ಆಯ್ಕೆ ಮಾಡಿಕೊಂಡ ಚಲನಶೀಲ ಮನಸ್ಸಿನ ಯುವಕ ಸಮಾಜದ ಚಲನೆಯ ಪ್ರತಿಘಟ್ಟಗಳನ್ನು ಕತೆ ಮಾಡುವ ಬಗೆ ಮತ್ತು ತಾನು ನಂಬಿಕೊಂಡು ಬಂದ ಬದುಕಿನ ಧೋರಣೆಯನ್ನು ಹೇಳಲು ಕತೆಯ ವಸ್ತುವೊಂದಕ್ಕೆ ತಂತ್ರಗಾರಿಕೆ ರೂಪಿಸಿಕೊಳ್ಳುವ ಬಗೆ ಸಹ ಕತೆಗಾರನ ಪ್ರತಿಭೆಗೆ ಒಡ್ಡಿದ ಸವಾಲು ಆಗಿರುತ್ತದೆ. ಈ ಮಾತಿಗೆ ಪುಷ್ಠಿ ಒದಗಿಸುತ್ತವೆ ‘ಮೂಕ ದ್ಯಾವ್ರು’ ಮತ್ತು ‘ಮಠದ ಹೋರಿ’ ಕತೆಗಳು. ಬಹುಶಃ ಕನ್ನಡ ಕಥಾಲೋಕದಲ್ಲಿ ‘ಮಠದ ಹೋರಿ’ ಕತೆ ಚರ್ಚೆಗೆ ನಾಂದಿ ಹಾಡಬಹುದಾದ ಕತೆ. ಮಠದ ವ್ಯವಸ್ಥೆಯನ್ನು ಅಲ್ಲಿ ಸ್ವಾಮಿಗಳಾದವರ ಮನಸ್ಥಿತಿಯನ್ನು ಮೂಕ ಪ್ರಾಣಿ ಜೊತೆ ನಡೆಯುವ ಸಂಭಾಷಣೆಯ ಮೂಲಕ ಕತೆಗಾರ ಕಟ್ಟಿಕೊಡುವ ಬಗೆ ಮಾನವೀಯವಾದುದು. ಸ್ವಾಮಿ ಆಗುವ ಸಂಕಟಗಳಿಗೆ ಕತೆಗಾರ ಧ್ವನಿಯಾಗಿರುವುದು ಹೆಚ್ಚು ಅರ್ಥಪೂರ್ಣ.

ಮೂಕ ಪ್ರಾಣಿ ಮಠದ ಹೋರಿಯೇ ತನ್ನ ಕತೆ ಹೇಳುವ ಮೂಲಕ ಹೊಸ ಜಗತ್ತನ್ನು ತೆರದಿಡುತ್ತದೆ. ಈ ಕತೆಯಲ್ಲಿನ ಒಂದು ಸಾಲು ಹೀಗಿದೆ....“ಪಾಪ ಸ್ವಾಮಿಗೋಳ ಪರಿಸ್ಥಿತಿ ಮಠದಾಗ ಇದ್ದ ಬಂದಿರೋ ನಮ್ಮಂಥವರಿಗೆ ಮಾತ್ರ ಗೊತ್ತು. ದಿನ ರಾತ್ರಿ ಅವರು ಬಂದು ನನ್ನ ಕೊರಳ ಹಿಡಕೊಂಡು ಮೂಕ ಭಾಷೆಯೊಳಗ ತಮ್ಮ ಕಷ್ಟ ಎಲ್ಲ ಹೇಳಕೋತಿದ್ರು. ಕಟುಕರ ಬಾಯಾಗ ಹೋಗಿದ್ರೂ ಪರವಾಗಿಲ್ಲ. ನಿನ್ನಂಗ ನಾನು ಹೋರಿ ಆಗಿ ಹುಟ್ಟಬೇಕಿತ್ತು, ಈ  ಕಾವಿ ಅರಬಿ ತೆಗದೊಗೆದು ಎಲ್ಲಾದ್ರೂ ದೂರ ಓಡಿ ಹೋಗಿಬಿಡಬೇಕು ಅಂತ ಒಮ್ಮೊಮ್ಮಿ ಅನಸತೈತಿ. ಆದ್ರ ಎಲ ಕಡೆ ಭಕ್ತರಿರೋದ್ರಿಂದ ಎಲ್ಲಿ ಹೋಗಬೇಕು ಅಂತಾನೆ ತಿಳಿವೊಲ್ಲದು....”

ಕತೆಗಾರ ಬಯಸುವ ಕ್ರಾಂತಿಯ ಬೀಜಗಳು ಸಹ ಇಲ್ಲಿವೆ. ಮೂಕ ಪ್ರಾಣಿ ಮತ್ತು ಮಠದ ಸ್ವಾಮಿಜೀಯನ್ನು ಮುಖಾಮುಖಿಯಾಗಿಸುವ ಮೂಲಕ ಕತೆಗಾರನ ಒಳಗಣ್ಣಿನ ಬಂಡಾಯ ತೆರೆದುಕೊಳ್ಳುತ್ತದೆ. ವ್ಯವಸ್ಥೆಯೊಂದನ್ನು ಮೌನವಾಗಿ ಬೀಳಿಸಿ, ಹೊಸದನ್ನು ಕಟ್ಟುವ ಆ ಮೂಲಕ ಪ್ರತಿಭಟನೆಯೊಂದನ್ನು ದಾಖಲಿಸುವ ಬಗೆಯನ್ನು ಇಲ್ಲಿ ಕಾಣಬಹುದು. ‘ಮೂಕ ದ್ಯಾವ್ರು’ ಕತೆ ಸಹ ಜಾತಿ ವ್ಯವಸ್ಥೆಯನ್ನು ಪ್ರತಿಭಟಿಸಲು ತುಳಿತಕ್ಕೆ ಒಳಗಾದ ವರ್ಗದ ದಾಸರ ಶೇಷಪ್ಪ ಹಾಕುವ ವೇಷ, ಮೌಢ್ಯವನ್ನೇ ಅಸ್ತ್ರವಾಗಿಸಿಕೊಳ್ಳುವ ತಂತ್ರ ಮತ್ತು ಕೊನೆಗೆ ಗ್ರಾಮೀಣ ಬದುಕಿನ ವರ್ಣ ಸಂಘರ್ಷ ತೆಗೆದುಕೊಳ್ಳುವ ತಿರುವು ಕತೆಯಲ್ಲಿ ಸೊಗಸಾಗಿ ಪಡಮೂಡಿದೆ. ಕತೆಯ ಅಂತ್ಯ ಕೃತಕ ಎನಿಸಿದರೂ, ದೇವರನ್ನು ತಿರಸ್ಕರಿಸಿ, ಅಕ್ಷರದ ಬೆಳಕಿಗೆ ಹಂಬಲಿಸುವ ಶ್ರಮಿಕ ವರ್ಗದ ಮಾತು, ಬದಲಾವಣೆ ಬಯಸುವ ಸಮಾಜದ ಆಶಯವೇ ಆಗಿದೆ. 


ಬಯಲು ಸೀಮೆಯ ಅದರಲ್ಲೂ ಬಾಗಲಕೋಟೆ ಸುತ್ತಮುತ್ತ ನಡೆಯುವ ಮನುಷ್ಯ ಬದುಕಿನ ಕಷ್ಟಕೋಟಲೆಗಳು , ಆ ಪ್ರದೇಶದ ಗ್ರಾಮೀಣ ಸೊಗಡಿನ ಭಾಷೆಯನ್ನು ದುಡಿಸಿಕೊಂಡು ಕತೆ ಕಟ್ಟುವಲ್ಲಿ ಹಾಲಗೇರಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ‘ಹಾದರ ಕಾಯಕದ ಪುಣ್ಯಸ್ತ್ರೀ’ ಎಂಬ ಕತೆ ಬಾಗಲಕೋಟೆಯ ಕೆಳ ವರ್ಗದ ರೈತನ ಬದುಕು ಮತ್ತು ಆತನ ಮಗಳು ಮುಂಬಯಿ ವೇಶ್ಯಾ ಜಗತ್ತಿಗೆ ಹೋಗಿ ಅಲ್ಲಿ ಕತೆಗಾರನಿಗೆ ಸಿಗುವ, ಮಾತನಾಡುವ ಕತೆ ಹೆಚ್ಚು ಮಾನವೀಯ ಅನ್ನಿಸುವಂತೆ ಮೂಡಿ ಬಂದಿದೆ. ರೈತ ತಿಪ್ಪ ಮತ್ತು ಆತನ ಮಗಳು ಅವ್ವಕ್ಕಳ ಸುತ್ತ ಸುತ್ತುವ ಕತೆ ಹಳ್ಳಿ ಬದುಕಿನ ಕೆಳ ಜಾತಿಯವರ ದುರಂತ ಬದುಕನ್ನು ಬಿಚ್ಚಿಡುತ್ತದೆ. ಕತೆ ಹೆಣೆದ ಶೈಲಿ ಸಹ ಹೊಸದಲ್ಲವಾದರೂ, ಬಾಗಲಕೋಟೆಯ ಭಾಷೆ ಮತ್ತು ರೈತ ಬದುಕಿನ ಶಬ್ದಗಳ ಹಂದರ ಸೊಗಸಾಗಿದೆ. ‘ಕಾರ ಹುಣ್ಣಿಮಿ ಸುತ್ತ ಮಾಗಿ ಮಡಿಕೆ ಹೊಡೆದು ಭೂಮಿ ತಾಯಿಗೆ ಬಿಸಲು  ತಿನಿಸಿ, ಚಕ್ಕಡಿಗಟ್ಟಲೆ ತಿಪ್ಪಿಗೊಬ್ಬರ ಹೇರಿ, ಮತ್ತೊಮ್ಮೆ ಹರಗಿ, ಅಮ್ಯಾಲ ಕೋಲಿ ಆರಿಸಿ ಬಿಟ್ಟರ ಹೊಲ ಗರತ್ಯಾರ ಗಲ್ಲದ ಗತೆ ಮೆತ್ತಗಾಗಿ ಹದಕ್ಕೆ ಬರುತ್ತಿತ್ತು. ಮುಂದೆ ರೋಣಿ ಮಳಿ ಬಿದ್ದಾಗ ಹದ ನೋಡ್ಕೊಂಡು ಜೋಳ ಬಿತ್ತಲಾಗುತ್ತಿತ್ತು....’ ಹೀಗೆ ಪ್ರಾದೇಶಿಕ ಭಾಷೆಯ ಸೊಗಡು ಹಾಲಗೇರಿ ಕತೆಗಳಲ್ಲಿ ಎಲ್ಲೆಡೆ ಕಾಣಸಿಗುತ್ತದೆ. 


‘ಡೈರಿ ಹಾಲಿಗೆ ಹುಳಿ ಬಿತ್ತು’ ಕತೆ ವರ್ಣ ಸಂಘರ್ಷವನ್ನೇ ಕಟ್ಟಿಕೊಡುವಂತಹದ್ದು. ಲಿಂಗಾಯತರ ಕೇರಿಯಲ್ಲಿ ಪ್ರಾರಂಭವಾದ ಹಾಲಿನ ಡೈರಿ ನಾಯಕರ ಕೇರಿಯಲ್ಲಿ ಪ್ರಾರಂಭಿಸಬೇಕೆಂದು ಕೆಳವರ್ಗದ ಯುವಕರು ಹಠ ಹಿಡಿಯುವಲ್ಲಿ ಪ್ರಾರಂಭವಾಗುವ ಘರ್ಷಣೆ ಲಿಂಗಾಯತರ ಕೇರಿಯ ಹಾಲಿನ ಡೈರಿ ಪಾಯಿಂಟ್ ಮನೆಯ ಹುಡುಗಿಯನ್ನ ಪ್ರೀತಿಸಿ ಓಡಿ ಹೋಗುವ ಕತೆಯ ಅಚಾನಕ್ ತಿರುವು ಸಹ ಹೊಸತನ್ನು ಹೇಳಲು ಬಯಸುತ್ತದೆ. ಅಂತರ್ಜಾತಿ ವಿವಾಹದ ಪ್ರಸ್ತುತತೆಯನ್ನು ಮಿಂಚಿನಂತೆ ಸುಳಿದು ಹೋಗಿಬಿಡುತ್ತದೆ. 


 ‘ಬೆಂಕಿ ಉಗುಳುವ ಪಂಕಾ’ ಮತ್ತು ‘ಕಾಂಕ್ರೀಟ್ ಹಕ್ಕಿಯ ಮೊಟ್ಟೆಗಳು’ ಕತೆಗಳು ಅಭಿವೃದ್ಧಿ ರಾಜಕಾರಣ ಗ್ರಾಮೀಣ ಬದುಕನ್ನು ನಾಶ ಮಾಡುವ ಬಗೆಯನ್ನು ದಾಖಲಿಸುತ್ತವೆ. ಕತೆಗಾರ ಸಮಾಜದಲ್ಲಿನ ನಾನಾ ಸ್ತರದ ಪಾತ್ರಗಳ ಮನಸ್ಸಿನ ಒಯ್ದಾಟವನ್ನು ದಾಖಲಿಸುವ ತಂತ್ರ ಒಲಿದಿರುವುದನ್ನು ಕಾಣಬಹುದು. ‘ಕೇರಿಯ ಗಾಯಕ್ಕೆ ಕೆಂಡದ ಮುಲಾಮು’ ಕತೆ ಜಾತಿ ಸಂಘರ್ಷವನ್ನು ಹಾಗೂ ಸಮಯ ಸಾಧಕ ಹೋರಾಟಗಾರರ ಮುಖವಾಡವನ್ನು ಕಳಚುವ ಕತೆಯಾಗಿ ವರ್ತಮಾನವನ್ನು ಹಿಡಿದಿಡುತ್ತದೆ. 
ವರ್ಗ ಮತ್ತು ವರ್ಣ ಸಂಘರ್ಷಗಳನ್ನು ಇಲ್ಲಿ ಬರುವ  ಕತೆಗಳಲ್ಲಿ ಸೂಕ್ಷ್ಮವಾಗಿ ಕಾಣಬಹುದು. ಮನುಷ್ಯನಲ್ಲಿ ಕಾಮ, ಪ್ರಣಯ, ಹಗರಣಗಳನ್ನು ಕಟ್ಟಿಕೊಡುವ ಕತೆಗಳು ಇಲ್ಲಿವೆ. ‘ಗೆಲ್ಲುವೆನೆಂಬುದು ಸೋಲುವ ಮಾತು’ ಮತ್ತು ‘ ಭಾಗವ್ವ’ ಕತೆಗಳು ಈ ಸಾಲಿನಲ್ಲಿ ನಿಲ್ಲುವಂತಹವು.

‘ಸಂವಿಧಾನ ಮತ್ತು ರಣಹದ್ದು’ ಕತೆ ಸಹ ಪ್ರಸ್ತುತ ರಾಜಕಾರಣ ಹಳ್ಳಿಯ ಮುಗ್ಧ ಹುಡುಗನನ್ನು ಮತ್ತ ಆತನ ಬಡತನವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವ ರೀತಿ ಹಾಗೂ ಜಾನಪದ ಹಾಡುಗಾರಿಕೆಯನ್ನು ಸಹ ರಾಜಕಾರಣ ಮಲೀನಗೊಳಿಸಿರುವ ಸ್ವರೂಪವನ್ನು ಕಟ್ಟಿಕೊಡುತ್ತದೆ. ‘ಕುಂಟ ಭೀಮ್ಯಾ ತನ್ನ ಮುರುಕಲು ಮನೆಯ ಮುಂದೆ ಪಾನ್ ಅಂಗಡಿಯೊಂದನ್ನು ಇಟ್ಟುಕೊಂಡಿದ್ದಾನೆ. ಈಗಲೂ ಭೀಮ್ಯಾ ಪಾನ್ ಕಟ್ಟುತ್ತಾ ಚನ್ನಪ್ಪ ಚನ್ನಗೌಡ’ ಎಂಬ ಹಾಡು ಗುನಗುಣಿಸುತ್ತಿರುತ್ತಾನೆ. ಅಂಗಡಿ ಹಿಂದಿನ ಮುರುಕಲ ಮನೆಯಲ್ಲಿ ಮುದುಕಿ ಯಲ್ಲವ್ವ ‘ನಮ್ಮ ಭೀಮ್ಯಾನ ಹಣೆ ಬರಹ ಚಲೋ ಇಲ್ರೋ ಯಪ್ಪಾ. ಇಲ್ಲಂದ್ರ ಇಷ್ಟೊತ್ತಿಗೆ ಭೀಮ್ಯಾ ಮಿಲಟರಿ ಸೇರಕೊಂಡ ಕೈ ತುಂಬಾ ಪಗಾರ ತರತಿದ್ದ ಎಂದು ಹಳಹಳಿಸುತ್ತ ಬಿದ್ದುಕೊಂಡಿರುತ್ತಾಳೆ.’ ಎಂಬ ಮಾತು ಗ್ರಾಮೀಣ ಬದುಕಿನಲ್ಲಿ ಬಡವರು  ರಾಜಕಾರಣಕ್ಕೆ ಬಳಕೆಯಾಗುವುದರ ಸಂಕೇತದಂತಿದೆ.
ಕತೆಗಳಿಗೆ ಅರ್ಥಪೂರ್ಣ ಚಿತ್ರ ಬಿಡಿಸಿದ ಡಾ.ಕೃಷ್ಣ ಗಿಳಿಯಾರ್, ಕತೆಗಳಿಗೆ ಶೀರ್ಷಿಕೆ ನೀಡಿದ ಕವಿ ಬಸವರಾಜ್ ಹೂಗಾರ್  ಅವರ ಪ್ರಗತಿಪರ ಮನಸ್ಸು ಸಹ ಇದೆ. ಮುಂದೆಯೂ  ಸಮಾಜದ ನಡೆಗೆ ಕತೆಗಾರ ಹನುಮಂತ ಹಾಲಗೇರಿ ತಮ್ಮ ಬರಹದ ಮೂಲಕ ಕ್ರಿಯಾತ್ಮಕ ಪ್ರತಿಭಟನೆಯ ಧ್ವನಿಯನ್ನು ಮುಂದುವರಿಸಲಿ

Saturday, 28 December 2013

ಸಂಶೋಧನಾ ವ್ಯಾಸಂಗದ ಶವ ಪರೀಕ್ಷೆ ಮತ್ತು ಸಮೃದ್ಧ ಜನ ಬದುಕು.
ನೀಲಾ. ಕೆ ಗುಲಬರ್ಗಾ
 Neela K Gulbarga
ಸಂಶೋಧನೆಯೆನ್ನುವುದು ಕೇವಲ ಇತಿಹಾಸದ ಶೋಧವಲ್ಲ. ಸುಳ್ಳು ಇತಿಹಾಸವನ್ನು ಮುಂದು ಮಾಡಿಕೊಂಡು ವರ್ತಮಾನವನ್ನು ದುರುಪಯೋಗ ಮಾಡಿಕೊಳ್ಳುವವರೊಂದಿಗೆ ನಡೆಸುವ ಹೋರಾಟವಾಗಿದೆ
-ಡಾ. ಎಂ.ಎಂ. ಕಲಬುರ್ಗಿ

ಚಳಿಯು ಮೆಲ್ಲ-ಮೆಲ್ಲಗೆ ಹೆಜ್ಜೆಯೂರಿ ಹಣಿಕುತ್ತಿತ್ತು. ಗುಲಬರ್ಗಾದಿಂದ ಬೀದರಿಗೆ ಹೋಗುವ ಹಾದಿಯಲ್ಲಿ ಸಣ್ಣ ಹಳ್ಳಿಖೇಡ ಎಂಬ ದೊಡ್ಡ ಗ್ರಾಮದ ಮುಂದಿರುವ ಕೆರೆಯು ತಣ್ಣನೆ ಗಾಳಿ ಸೋಕಿಸಿತು. ಥಟ್ಟನೆ ಬೀದರೆಂಬ ಕೆಂಪುಧರಿ ನಾಡಿಗೆ ಕಾಲಿಟ್ಟ ಅನುಭವ. 50-60 ಕೀಲೋಮೀಟರ್ ಅಂತರದಲ್ಲಿಯೇ ಎಂಥಹ ವ್ಯತ್ಯಾಸ?! ಗುಲಬರ್ಗಾದಲ್ಲಿ ಕೆಂಡದಂಥ ಬಿಸಿಲು. ಬೀದರ ನೆಲದಲ್ಲಿ ನೆತ್ತಿ ತಂಪಾಗಿಸುವ ಹೂಬಿಸಿಲು. ನಾನು ಸಣ್ಣವಳಿದ್ದಾಗ ದಕ್ಷಿಣ ಕರ್ನಾಟಕದವರ ಮಾತು ಕೇಳಿ ಬೆರಗಾಗುತ್ತಿದ್ದರು ನಮ್ಮ ಜನ. ಅವರದೆಂಥ ಚೆಂದದ ಭಾಷೆಯೆಂದು, ಮನದಲ್ಲಿ ತಮ್ಮ ಭಾಷೆಯ ಬಗ್ಗೆ ಸಣ್ಣತನ ಅನುಭವಿಸುತ್ತಿದ್ದರು. ಈ ನೆಲದಲ್ಲಿಯೇ ಹುಟ್ಟಿದ ದಖ್ಖನಿಉರ್ದು ಮತ್ತು ಪಕ್ಕದ ಮರಾಠಿ ಭಾಷೆಗಳ ಸಖ್ಯದೊಂದಿಗೆ ಬರೋಬ್ಬರಿ ಜವಾರಿ ಭಾಷೆಯಾಗಿ ಅರಳಿದ್ದ ನಮ್ಮ ಭಾಷೆಗಿರುವ ತಾಖತ್ತು ಸುಮ್ಮನೇನಲ್ಲ. ಆದರೆ ಸುಮ್ಮ-ಸುಮ್ಮನೇ ನಮ್ಮ ಒಡಲಿನಿಂದ ಉರ್ದುವನ್ನು ಪರಕೀಯಗೊಳಿಸಿದ ಮತೀಯ ರಾಜಕಾರಣ ನೆನೆದು ಚಿಂತಿತಳಾದೆ. ಹೇಗೆ ದಕ್ಷಿಣ ಕರ್ನಾಟಕದಲ್ಲಿ ತುಳು ಕೊಂಕಣಿ ಬೆಳೆದು ಬಂದಿದೆಯೋ ಹಾಗೆ ನಮ್ಮ ಕನ್ನಡವು ಕರುಳ ಭಾಷೆಯಾಗಿಯೂ, ಉರ್ದು ಹೃದಯ ಭಾಷೆಯಾಗಿಯೂ ಅರಳಬೇಕಾಗಿತ್ತು. ಕುಸುರಿಯ ಲಿಪಿ, ಶ್ರೀಮಂತ ಸಾಹಿತ್ಯವನ್ನು ಒಡಲೊಳಗಿಟ್ಟುಕೊಂಡ ಉರ್ದು, ಗಜಲೆಂಬ ಸೂಫಿ ಕಾವ್ಯದ ಮೊಹಬ್ಬತ್ತಿನ ಲೋಕದೊಂದಿಗೆ ನಮ್ಮ ಬದುಕು-ಭಾವ ಬೆಸೆದದ್ದು ಹೇಗೆ ಮರೆಯುವುದು? ಆದರೀಗ ಅದು ಹೇಗೆ ಪರಕೀಯವಾಯಿತು? ಸಂಶೋಧನೆಯಾಗಬೇಕಾದ ಸಂಗತಿ. ರಾಜ್ಯದ ಮುಕುಟದಂತಿರುವ ಬೀದರಿನ ನೆಲದಲ್ಲಿ ಹೀಗೆ ಸಂಶೋಧನೆಯ ತೆಕ್ಕೆಗೆ ಬರಲೇಬೇಕಾದ ಸಂಗತಿಗಳು ಕಣ್ಣ ಮುಂದೆ ಸಾಲುಗಟ್ಟಿದವು. 
 

ಕಳೆದು ಹೋದದ್ದನ್ನು ಅಕ್ಷರ ಲೋಕಕ್ಕೆ ದಕ್ಕಿಸುವ ಹಪಾಹಪಿಗೆ ಮನಸು ವಾಲತೊಡಗಿದಂತೆಯೇ ಅಲ್ಲಮ ನೆನಪಾಗುವನು. ಅಕ್ಷರದಲ್ಲಭ್ಯಾಸವ ಮಾಡಿ ಬರೆವ ತೊಡೆವ ಪರಿ ಇನ್ನೆಂತೋ..ಆದಿ ನಿರಾಳ, ಮಧ್ಯ ನಿರಾಳ, ಊರ್ಧ್ವ ನಿರಾಳ ಗುಹೇಶ್ವರ. ಹೀಗೆ ಎಲ್ಲ ಹಮ್ಮುಗಳನ್ನು ಮೀರಿ, ಎಂಥ ಸಂಕಟದಲ್ಲಿಯೂ ಮಾನವೀಯ ಎಳೆಯ ಬಂಧ ಬಿಡಿಸಿಕೊಳ್ಳದಂಥ ಅದ್ಭುತ ಸಂಸ್ಕೃತಿ ಕಟ್ಟಿಕೊಟ್ಟ ಪರಂಪರೆ ನಮ್ಮದು. ಕೊಲುವೆನೆಂಬ ಭಾಷೆ ದೇವನದಾದರೆ ಗೆಲುವೆನೆಂಬ ಭಾಷೆ ಭಕ್ತನದು. ದೇವರಿಗೆ ಸವಾಲೆಸೆದು, ಸಮಾಜದ ಎಲ್ಲ ರೀತಿಯ ತಾರತಮ್ಯದ ವಿರುದ್ಧ ಪ್ರಜ್ಞಾಪೂರ್ವಕ ಸಂಘಟಿತ ಸಮರ ಸಾರಿದ ಧೀರ ನಡೆಯದು. ಹನ್ನೆರಡನೆಯ ಶತಮಾನದ ವಿಪ್ಲವದ ನಂತರ ಏನಾಯಿತು? ಮೌನ ಹೇರಿದ ಶಕ್ತಿಗಳ್ಯಾವು? ಅಥವ ಮೌನ ಮುರಿವ ಗಳಿಗೆಗಳೆಲ್ಲ ಮರದೊಳಗಣ ಕಿಚ್ಚಂತೆ ಪ್ರವಹಿಸುತ್ತಿದ್ದವೇ? 

ಬೀದರ ಜಿಲ್ಲೆಯು ಹೇಗೆ ವಚನಕಾರರ ನೆಲವೋ ಹಾಗೆ ಬುದ್ದನ ನೆಲವೂ. ಸೂಫಿ-ಸಂತರು, ತತ್ವಪದಕಾರರ ಗಮಲು, ನಾಥ ಪರಂಪರೆಯ ತೊಟ್ಟಿಲು, ಅವಧೂತರ ಆಡುಂಬೊಲ ಹೀಗೆ ಬಹುಮುಖಿ ನೆಲೆಯ ಪರಂಪರೆಯು ವೈಶಿಷ್ಟ್ಯವಾಗಿ ಮತ್ತು ಘನವಾಗಿ ನಮ್ಮ ಬದುಕಿಗಂಟಿಕೊಂಡು ಬಂದಿದೆ. ಪ್ರಭುತ್ವದ ತಿಕ್ಕಾಟವಾಗಿದ್ದ ರಜಾಕಾರ ಚಳುವಳಿಯ ಹೊತ್ತಿನಲ್ಲಿ ಸಾಮಾನ್ಯ ಹಿಂದೂ ಮುಸ್ಲಿಂರಿಬ್ಬರೂ ಪರಸ್ಪರ ರಕ್ಷಿಸಿಕೊಂಡು ಅದಮ್ಯ ಮಾನವೀಯತೆ ಮೆರೆದ ನಾಡಿದು. ಹಿರಿಯ ತಲೆಮಾರಿನವರಿಗೆ ಮಾತಾಡಿಸಿದಾಗ ದೊರಕುವ ಘಟನಾವಳಿಗಳಿಗೆ ಕಥೆಗಳ ಎರಕ ಹೊಯ್ದರೆ ಎಷ್ಟೊಂದು 'ಸಾದತ್ ಹಸನ್ ಮಂಟೋ' ಇಲ್ಲಿ ಸೃಷ್ಟಿಯಾಗುವರು. ಮತೀಯ ದ್ವೇಷದ ಬೀಜಗಳನ್ನು ಬಿತ್ತಲು ಹೊರಟವರಿಗೆ ಇಲ್ಲಿ ನಿರಾಶೆಯೇ ಕಾದಿದೆ. ಹೀಗೆಂದು ಸಾರಿ ಹೇಳಲು ಅಷ್ಟೂರಿನ ಅಲ್ಲಮಪ್ರಭು ದರ್ಗಾ, ಸರ್ವಮತಾಚಾರ್ಯ ಕೇಂದ್ರ ಮಾಣಿಕಪ್ರಭು, ರಾಜಾಬಾಗ್ಸವಾರ್ ಸಿದ್ದವಾಗಿಯೇ ನಿಂತಿರುವರು. ಈ ಪರಂಪರೆಯ ಎಳೆಯು ದೂರದ ಮೈಸೂರಿನ ಮಲೆಮಹಾದೇಶ್ವರ ಮಂಟೇಸ್ವಾಮಿ ಪರಂಪರೆಯೊಂದಿಗೆ ಹೆಣೆದುಕೊಳ್ಳುವುದು. ಇಲ್ಲಿಯ ಹವಾಮಾನ, ಭಾಷೆ, ಸಾಂಸ್ಕೃತಿಕ ಭಾವೈಕ್ಯ ಪರಂಪರೆ, ಪ್ರಭುತ್ವ ಮತ್ತು ಉಳ್ಳವರ ಒತ್ತಡದಲ್ಲಿ ಒದ್ದಾಡಿದ ಮೌನದ ಶತಮಾನಗಳು, ಬೈಗಳುಗಳೊಂದಿಗೆ ಬೆರೆತು ಬರುವ ಅದಮ್ಯ ಪ್ರೀತಿಯ ಧಾರೆ, ಯಾವ ಪ್ರಗತಿ ಮಾಡಿಲ್ಲವೆಂದರೂ ಬಹುದೊಡ್ಡ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ನಿಜಾಮನ ಸಂದರ್ಭದ ಕೆರೆ-ಬಾವಿಗಳು ಹೀಗೆ ಎಲ್ಲವೂ ಸಂಶೋಧನೆಗೆ ಒದಗುವಂಥ ಬಹುಮುಖ್ಯ ಸಂಗತಿಗಳು. ದಕ್ಷಿಣ ಕರ್ನಾಟಕದಲ್ಲಿ ನವೋದಯ ಸಾಹಿತ್ಯ ರಚನೆಯಾಗುತ್ತಿದ್ದರೆ, ಉತ್ತರ ಕರ್ನಾಟಕವು ಸಾಹಿತ್ಯವೆಂದರೇನೆಂದು ಗೊತ್ತಿಲ್ಲದ ನಾಡಾಗಿತ್ತೆಂಬ ಅವಾಸ್ತವಿಕ ಸಂಗತಿಯೊಂದು ಪ್ರಚಲಿತದಲ್ಲಿದೆ. ಆದ್ದರಿಂದಲೇ ಲಂಕೇಶರು ಮತ್ತು ಬುದ್ದಣ್ಣ ಹಿಂಗಮಿರೆಯವರು ಸಂಪಾದಿಸಲ್ಪಟ್ಟ ಪ್ರಾತಿನಿಧಿಕ ಕವನ ಸಂಕಲನಗಳಲ್ಲಿ ಹೈದರಾಬಾದ ಕರ್ನಾಕದ ಒಬ್ಬರೇ ಒಬ್ಬ ಕವಿಯ ಕಾವ್ಯ ಸೇರಿಸಿರಲಿಲ್ಲ. ಶಾಂತರಸರು ಈ ತಪ್ಪಭಿಪ್ರಾಯದ(ತಾರತಮ್ಯದ) ವಿರುದ್ಧವೇ ದನಿಯೆತ್ತಿ ಪ್ರತಿಯಾಗಿ (1972ರಲ್ಲಿ)'ಬೆನ್ನ ಹಿಂದಿನ ಬೆಳಕು' ಕವನ ಸಂಕಲನವೊಂದನ್ನು ಸಂಪಾದಿಸಿದ್ದು ಇತಿಹಾಸ. ಆದರೆ ಅಕ್ಷರ ಲೋಕಕ್ಕೆ ದಕ್ಕಿದ ಸಾಹಿತ್ಯವನ್ನು ಮಾತ್ರ ಪರಿಗಣಿಸುವ ಪರಿಪಾಠ ಎಷ್ಟು ಸರಿ? ಬೀದರ ಜಿಲ್ಲೆಯಲ್ಲಿ 17-18-19ನೇ ಶತಮಾನದಲ್ಲಿಯೇ ಭಜನೆ, ಭುಲಾಯಿ, ಗೀಗೀಪದ, ತತ್ಪಪದ, ಮೊಹರಂಪದ, ಆಣಿಪೀಣಿ, ಜೋಕುಮಾರ-ಜೋಗತಿ-ಗೌರಿ-ಸೀಗಿ-ಹಂತಿ ಮತ್ತು ಚೌಡಕಿ ಪದಗಳು, ಚಾಜದ ಪದಗಳು, ದಪ್ಪಿನಾಟ, ದೊಡ್ಡಾಟ-ಸಣ್ಣಾಟಗಳು ನಿರಂತರ ರಚನೆಯಾಗುತ್ತಿದ್ದವು. ಅವಜ್ಞೆಗೀಡಾದ ಈ ಸಾಹಿತ್ಯವನ್ನು ಪರಿಗಣಿಸದೇ ಕಾಲಗರ್ಭದಲ್ಲಿ ಹೂತು ಹೋದದ್ದೇ ಜಾಸ್ತಿ. ದಕ್ಕಿದ್ದು ಬಹಳ ಕಡಿಮೆ. ತತ್ಪರಿಣಾಮವೆಂದರೆ ನವೋದಯ ಪ್ರಗತಿಶೀಲ ಸಂದರ್ಭದಲ್ಲಿ ಹೈದರಾಬಾದ ಕರ್ನಾಟಕದ ಕೊಡುಗೆ ಅತ್ಯಲ್ಪ ಎಂದು ಭಾವಿಸುವಂತಾಯಿತು. ಆದರೆ ಹೀಗೆ ಹೂತು ಹೋಗಿರಬಹುದಾದ ಸಾಹಿತ್ಯವನ್ನು ಹೆಕ್ಕಿ ತೆಗೆವ ಮೂಲಕ ಕನ್ನಡ ಸಾಹಿತ್ಯ ಚರಿತ್ರೆಯನ್ನು ಮುರಿದು ಕಟ್ಟಬೇಕಿದೆ. ಈ ನಾಡಿನೊಡಲಲ್ಲಿ ಹುದುಗಿರುವ ರೋಮಾಂಚನಕಾರಿ ವಿದ್ಯಮಾನಗಳನ್ನು, ಮುಚ್ಚಿ ಹೋದ ಚರಿತ್ರೆಯನ್ನು ಬಗೆದು ಬಯಲಿಗಿಡಬೇಕಾದ ಹೊಣೆಗಾರಿಕೆ ಅಕ್ಷರ ದಕ್ಕಿಸಿಕೊಂಡ ಯುವಪೀಳಿಗೆಯದ್ದು ಹೌದಲ್ಲವೇ? ಏಕಸಂಸ್ಕೃತಿಯ ಹೇರುವಿಕೆಯಿಂದ ತಲ್ಲಣಿಸುತ್ತಿರುವ ಜನಬದುಕಿಗೆ ಬಹುಸಂಸ್ಕೃತಿಯ ನೆಲೆಗಳಲ್ಲಡಗಿರುವ ಕಲೆ-ಸಾಹಿತ್ಯ-ಸಂಸ್ಕೃತಿಯನ್ನು ಸಂಶೋಧಿಸಬೇಕಾದ ಜವಾಬ್ದಾರಿ ಅರಿಯಬೇಕಲ್ಲವೇ? 
 
ಆದರೆ ಇತ್ತೀಚೆಗಿನ ಘಾಸಿಗೊಳಿಸುವಂಥ ಪ್ರಕರಣಗಳು ಚಿಂತೆಗೀಡಾಗಿಸುತ್ತಿವೆ. ಸಂಶೋಧನಾ ವಿದ್ಯಾರ್ಥಿಗಳಾದರೋ ಸುಲಭದಲ್ಲಿ ಡಿಗ್ರಿ ಪಡೆಯಲು ಬೇಕಾದಂಥ ವಿಷಯ ಹುಡುಕುವರು. ಕ್ಷೇತ್ರಕಾರ್ಯದೊಂದಿಗೆ ಸತ್ಯವನ್ನು ಹುಡುಕಾಡಿ ಅನಾವರಣಗೊಳಿಸಬೇಕಾದ ಮುಖ್ಯ ಹೊಣೆಗಾರಿಕೆಯು ಇಲ್ಲವಾಗುತ್ತಿದೆ. ಎಷ್ಟೊ ಸಾರಿ ಕಟ್-ಪೇಸ್ಟ್ನಲ್ಲಿ ಸಂಶೋಧನೆಯು ವ್ಯಸ್ತವಾಗುತ್ತಿದೆ. ವಿಷಯಕ್ಕೆ ಅಗತ್ಯವಿರುವ ಓದು ಮತ್ತು ಕ್ಷೇತ್ರಕಾರ್ಯದ ವ್ಯಾಪ್ತಿಗೆ ಒಗ್ಗಿಸಿಕೊಳ್ಳಲು ಸಿದ್ದವಿಲ್ಲದ ಮನಸು ವಿದ್ಯಾರ್ಥಿಗಳಲ್ಲಿ ಮೊಳೆಯುತ್ತಿದೆ.

ಇದೇ ಹೊತ್ತಿನಲ್ಲಿ ಕನ್ನಡವನ್ನು, ಕನ್ನಡದ ಜನಬದುಕನ್ನು ಅರಿತು ನೈಜ ಅಭಿವೃದ್ದಿಯತ್ತ ಸಮಾಜವನ್ನು ಕೊಂಡೊಯ್ಯಲು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕಾದ ಅನೇಕ ವಿಧ್ವಾಂಸರುಗಳು ಪ್ರಜ್ಞಾವಂತರೆಲ್ಲ ತಲೆತಗ್ಗಿಸುವಂಥ ವಿದ್ಯಮಾನಗಳಲ್ಲಿ ತೊಡಗಿರುವರು. ಈಚೆಗೆ ನಡೆದ ಗುಲಬರ್ಗಾ ವಿವಿಯಲ್ಲಿನ (ಹಿಂದೆ ಮೈಸೂರು ವಿವಿಯಲ್ಲಿನದ್ದೂ)ಲೈಂಗಿಕ ಹಗರಣವು ಇಂಥವುಗಳ ನಾಚಿಗ್ಗೇಡಿ ಝಲಕ್ಕೊಂದು ಬಯಲಿಗೆ ಬಿದ್ದಿದೆ. ಮುಚ್ಚಿ ಹೋದ ಪ್ರಕರಣಗಳೆಷ್ಟೊ...! ವಿಪರೀತ ಭ್ರಷ್ಟಾಚಾರವು ಮಾರ್ಗದರ್ಶಕರಿಗೆ ಶೋಭೆ ತರುವುದೆ? ಸಂಶೋಧನಾ ಪ್ರಬಂಧವು ಪೂರ್ಣಗೊಂಡ ಮೇಲೆ ಮಾರ್ಗದರ್ಶಕರು ಪ್ರಬಂಧವನ್ನು ದೃಢೀಕರಿಸಬೇಕು. ಇದಕ್ಕಾಗಿಯೂ ಹಣ ಕೇಳು(ಕೀಳು)ವ ಪ್ರವೃತ್ತಿಗಳು ಅಕ್ಷಮ್ಯ. ವಿದ್ಯಾರ್ಥಿಗಳಿಂದ ಮನೆಗೆಲಸ ಮಾಡಿಸಿಕೊಳ್ಳುವುದು, ಸ್ವಾರ್ಥಕ್ಕಾಗಿ ವಿದ್ಯಾರ್ಥಿಗಳ ದುರ್ಬಳಕೆ ಮಾಡುವುದು ಸಾಮಾನ್ಯವಾಗಿದೆ. ಇನ್ನು ಜಾತಿಯ ಲಾಬಿಯಂತೂ ಘನಚಕ್ರದಂತೆ ಸುತ್ತುವರಿಯುತ್ತಿದೆ. ಮಾರ್ಗದರ್ಶಕರು ತಮ್ಮದೇ ಜಾತಿಯ ವಿದ್ಯಾರ್ಥಿಗಳನ್ನು ಆರಿಸಿಕೊಳ್ಳುವುದು, ಸ್ವಜಾತಿಯಲ್ಲದವರೊಂದಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವುದು ರೋಗದಂತೆ ಹಬ್ಬುತ್ತಿದೆ. ತುಮಕೂರು ವಿಶ್ವಿವಿದ್ಯಾಲಯದಲ್ಲಿ ಎಂಟೇ ತಿಂಗಳಲ್ಲಿ ಆರು ಮಂದಿ ಸ್ವಜಾತಿಯವರಿಗೆ ಪಿಹೆಚ್ಡಿ ಪ್ರಧಾನ ಮಾಡಲಾಗಿದೆಯಂತೆ. ಈ ಪ್ರವೃತ್ತಿಗಳು ಅನಾರೋಗ್ಯಕರ ಮನಸ್ಥಿತಿ ರೂಪಿಸುತ್ತಿರುವ ದ್ರೋಹದ ಕೃತ್ಯಗಳಲ್ಲವೇ? 

ಇತ್ತೀಚೆಗಿನ ಸಂಶೋಧನಾ ಪ್ರಬಂಧಗಳ ಕುರಿತಂತೆ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿದೆ. ಸಂಶೋಧನಾ ವ್ಯಾಸಂಗಗಳ ಗುಣಮಟ್ಟ ಕುಸಿಯುತ್ತಿರುವುದಕ್ಕೆ ಮತ್ತು ಸಂಶೋಧನಾ ವಲಯಗಳಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯಗಳ ಕುರಿತಂತೆ ವೆಗ್ಗಳವಾಗಿ ಚರ್ಚೆ ನಡೆಯುತ್ತಿವೆ. ದುರಂತವೆಂದರೆ ಈ ಪ್ರಯತ್ನಗಳಾವುವು ಸಂಶೋಧನಾ ಕ್ಷೇತ್ರವನ್ನು ಶುದ್ಧೀಕರಿಸುವುದಕ್ಕೆ ಒದಗಿ ಬರುತ್ತಿಲ್ಲ. ಆಶ್ಚರ್ಯದ ಸಂಗತಿಯೆಂದರೆ ಸಂಶೋಧನೆಯಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿ ಮತ್ತು ಅವರನ್ನು ಕೈ ಹಿಡಿದು ನಡೆಸಬೇಕಿರುವ ವಿಧ್ವಾಂಸರು ಇಬ್ಬರಿಂದಲೂ ಈ ವಲಯವನ್ನು ಭ್ರಷ್ಟಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಆದ್ದರಿಂದ ಈ ಚರ್ಚೆಗಳು ಜನಸಮೂಹದ ಕಾಳಜಿಗಳಾಗಿ ಉಳಿಯುತ್ತಿವೆಯೇ ಹೊರತು ಅದನ್ನು ಭ್ರಷ್ಟಗೊಳಿಸುತ್ತಿರುವ ಆತ್ಮವಿಮರ್ಶೆಯಾಗಿ ನಾಟುತ್ತಲೇ ಇಲ್ಲ. ಒಂದೆಡೆ ಆಧುನಿಕೋತ್ತರವಾದದ ಅರಾಜಕತೆ, ಇನ್ನೊಂದೆಡೆ ವ್ಯಕ್ತಿವಾದ, ಮತ್ತೊಂದೆಡೆ ಜಾಗತೀಕರಣದ ಮಾರುಕಟ್ಟೆ ವ್ಯವಸ್ಥೆಯ ಹಣಗಳಿಕೆಯ ಮಾರ್ಗೋಪಾಯಗಳು ಎಲ್ಲವೂ ಕಲಸುಮೇಲೋಗರವಾಗುತ್ತಿವೆ. ಪರಿಣಾಮವೆಂದರೆ ನಾಡಿನ ಸಮಗ್ರ ಅಭಿವೃದ್ಧಿ ಮತ್ತು ಕೊನೆಯ ಮಾನವರ ನೆಮ್ಮದಿಗೆ ವೇದಿಕೆಗಳಾಗಬೇಕಿದ್ದ ಸಂಶೋಧನೆಯೆಂಬ ವಿದ್ಯಮಾನವು ತನ್ನ ಮೂಲಭೂತ ಆಶೆ ಮತ್ತು ಧೋರಣೆ ಕಳೆದುಕೊಂಡು ಮಾರುಕಟ್ಟೆಯ ಸರಕಾಗಿ ಬಿಟ್ಟಿದೆ. ಇದರೊಡನೆ ಅಭಿವೃದ್ಧಿ ಹೊಂದಿದ ದೇಶಗಳ ಒಡೆದು ಆಳುವ ನೀತಿಗೆ ಇವೆಲ್ಲವೂ ಕೂಡ ಅನುಕೂಲಕರವಾಗುತ್ತಿವೆ. ಹೀಗಾಗಿಯೇ ಬಹಳಷ್ಟು ಸಂಶೋಧನಾ ಫಲಿತಗಳು ಉಳ್ಳವರಿಗೆ ಪೂರಕವಾಗಿ ಪರ್ಯಾವಸಾನವಾಗುತ್ತಿವೆ. ಇಲ್ಲವೆ ಶುದ್ಧ 'ಭೂಸಾ' ಕೃತಿಗಳಾಗಿ ಕಾಲದ ಕಸದ ಬುಟ್ಟಿಗೆ ಸೇರುತ್ತಿವೆ. ದೂರದೃಷ್ಠಿಯ ದುಷ್ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವ ಕ್ಷಮತೆ ವಿಶ್ವವಿದ್ಯಾಲಯದ ವಿಧ್ವಾಂಸರಿಗೆ ಮತ್ತು ಪದವಿಬಾಕರಿಗೆ ಬರುವುದೇ?
 
***
ನಾಳೆ ಕುವೆಂಪು ಜನ್ಮ ದಿನ. 
 

ಕುವೆಂಪು ಹೇಳುತ್ತಾರೆ:
ನಾನು ಮೂವತ್ತು ಮೂವತ್ತೈದು ವರ್ಷಗಳ ಹಿಂದೆಯೇ ಮನುಧರ್ಮಶಾಸ್ತ್ರದ ವಿಚಾರವನ್ನು ಒಂದು ಪದ್ಯದಲ್ಲಿ ಹೇಳಿದೆ. ಪದ್ಯದಲ್ಲಿ ಬರೆದೆ. ಅದು ಚಿನ್ನದ ಖಡ್ಗ ಇದ್ದಹಾಗೆ ಎಂದು ತೋರುತ್ತದೆ. ಏನೂ ಕೆಲ್ಸಾನೆ ಮಾಡೊಲ್ಲ ಅಂತ ಕಾಣ್ಸುತ್ತೆ. ಗದ್ಯದಲ್ಲಿ ಬರೆದು ಒರಟಾಗಿ ಹೇಳಿದರೆ ಏನಾದರೂ ಕೇಳ್ತಾರೊ ಏನೋ. ಪದ್ಯದಲ್ಲಿ ಆದಕೂಡಲೆ ಒಳ್ಳೆ ಸೊಗಸಾಗಿ ಹಾಡಿಬಿಟ್ಟು ಅದನ್ನು ಅನುಸರಿಸೋದೆ ಇಲ್ಲ! ಮೂವತ್ತೈದು ವರ್ಷಗಳ ಹಿಂದೆ:

"ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
ಎಂದೊ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು?"


ಅವನ ಕಾಲಕ್ಕೆ ಏನಿತ್ತೋ ಅದನ್ನು ಅವನು ಬರೆದಿಟ್ಟ. ಅದನ್ನು ಈ ಹೊತ್ತು "Law" ಅಂತ ತೆಗೆದುಕೊಂಡರೆ ನಾವು ಶುದ್ಧ ಅವಿವೇಕಿಗಳಷ್ಟೆ.

ನಿನ್ನೆದೆಯ ದನಿಯೆ ಋಷಿ! ಮನು ನಿನಗೆ ನೀನು!

ನೀರಡಿಸಿ ಬಂದ ಸೋದರಗೆ ನೀರನು ಕೊಡಲು
ಮನುಧರ್ಮಶಾಸ್ತ್ರವೆನಗೊರೆಯಬೇಕೇನು?
ನೊಂದವರ ಕಂಬನಿಯನೊರಸಿ ಸಂತೈಸುವೊಡೆ
ಶಾಸ್ತ್ರ ಪ್ರಮಾಣವದಕಿರಲೆಬೇಕೇನು?

ಪಂಚಮರ ಶಿಶುವೊಂದು ಕೆರೆಯಲಿ ಮುಳುಗುತಿರೆ
ದಡದಲ್ಲಿ ಮೀಯುತ್ತ ನಿಂತಿರುವ ನಾನು
ಮುಟ್ಟಿದರೆ ಬ್ರಹ್ಮತ್ವ ಕೆಟ್ಟುಹೋಗುವುದೆಂದು
ಸುಮ್ಮನಿದ್ದರೆ ಶಾಸ್ತ್ರಸಮ್ಮತವದೇನು?

ಅಂತು ಮನು ತಾನು ಹೇಳಿರಲಾರನಯ್ಯಯ್ಯೊ!

ಅಂತ ಆವೊತ್ತು ಬರೆದಿದ್ದೆ ನಾನು. ಆಗ ಮನುಧರ್ಮಶಾಸ್ತ್ರ ಓದಿರಲಿಲ್ಲ. ಮನು ಹೇಳಿದ್ದಾನೆ ಹಾಗೆ. ಅದಕ್ಕಿಂತಲೂ ಭಯಂಕರ ಹೇಳಿದ್ದಾನೆ! ಆಗ ನಾನು ಬರೆದಾಗ ಮನುಧರ್ಮಶಾಸ್ತ್ರವನ್ನು ಓದಿರಲಿಲ್ಲ. ಮನು ದೊಡ್ಡವನೆಂದು ಹೇಳುತ್ತಾರೆ. ಹೀಗೆ ಬರೆದಿರಲಾರ ಅಂತ ಊಹಿಸಿದ್ದೆ. ಆದರೆ ಮನು ಅದಕ್ಕಿಂತ ಭಯಂಕರವಾಗಿ ಏನನ್ನೆಲ್ಲಾ ಬರೆದಿದ್ದಾನೆ.

ಅಂತು ಮನು ತಾನು ಹೇಳಿರಲಾರನಯ್ಯಯ್ಯೊ!
ಹೇಳಿದ್ದರವನನೂ ಶಾಸ್ತ್ರದೊಳೆ ಸುತ್ತಿ
ಸ್ವರ್ಗ ಹೋಗಲಿ ಮತ್ತೆ ನರಕ ಬಂದರು ಬರಲಿ
ಎದೆಯ ಧೈರ್ಯವ ಮಾಡಿ ಬಿಸಾಡಾಚೆಗೆತ್ತಿ!


ಮನುಧರ್ಮಶಾಸ್ತ್ರ ಅವನ್ನೆಲ್ಲಾ ಅತ್ತ ಕಟ್ಟಿಡಿ. ಯಾರೋ ಒಬ್ಬರು ಪಟಗಳನ್ನೆಲ್ಲಾ ಎಸೆಯಿರಿ ಅಂದಿದ್ದಕ್ಕೆ ದೊಡ್ಡ ಗಲಾಟೆ ಎಬ್ಬಿಸಿದರು. ಅದಕ್ಕಿಂತ ಇದು ಬಲವಾದದ್ದೆ ಅಂತ ಇಟ್ಟುಕೊಳ್ಳಿ.

ಸ್ವರ್ಗ ಹೋಗುವುದಿಲ್ಲ; ನರಕ ಬರುವುದು ಇಲ್ಲ;
ಸ್ವರ್ಗನರಕಗಳೇನು ಶಾಸ್ತ್ರಸ್ಥವಲ್ಲ.
ಎದೆಯ ದನಿ ಧರ್ಮನಿಧಿ! ಕರ್ತವ್ಯವದುವೆ ವಿಧಿ!
ನಂಬದನು: ಅದನುಳಿದು ಋಷಿಯು ಬೇರಿಲ್ಲ!

ಹಿಂದಿನಾ ಋಷಿಗಳೂ ಮಾನವರೆ ನಮ್ಮಂತೆ,
ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ,
ಕಾಲಕ್ಕೆ ತಕ್ಕಂತೆ ದೇಶಕ್ಕೆ ತಕ್ಕಂತೆ
ನಮ್ಮ ಹೃದಯವೆ ನಮಗೆ ಶ್ರೀಧರ್ಮಸೂತ್ರ.


ಈ ವಿಚಾರಪೂರ್ವಕವಾದ ಭಾವಗಳನ್ನು ನಮ್ಮ ತರುಣರ ಎದೆಯಲ್ಲಿ ನೀವು ಬಿತ್ತಬೇಕು. ಪದ್ಯಗಳಲ್ಲಿಯೆ ಬಿತ್ತಿ; ಆದರೆ ನವ್ಯ ಬರಿತೀವಿ ಅಂತ ಹೇಳಿಬಿಟ್ಟು ಒಬ್ಬರಿಗೂ ಅರ್ಥವಾಗದ್ದನ್ನೆಲ್ಲಾ ತಂದುಹಾಕಿ, ಒಬ್ಬರೂ ಓದಬಾರದು, ಆ ತರಾ ಮಾಡಬೇಡಿ. ಎಲ್ಲರಿಗೂ ಅರ್ಥವಾಗುವಂತೆ, ನವ್ಯವೋ ಪದ್ಯವೋ ಎಲ್ಲರಿಗೂ ಅರ್ಥವಾಗಿ ಅದರಿಂದ ಪರಿಣಾಮಕಾರಿಯಾಗುವಂತೆ ಬರೆಯಿರಿ. ಏನೊ Symbolism ಅಂತ ಹೇಳಿಬಿಟ್ಟು ಒಂದೂ ಅರ್ಥವಾಗಬಾರದು, ಹಾಗೆ ಮಾಡಬೇಡಿ.


 KS Harshakumar Kugwe

-ಹರ್ಷಕುಮಾರ್ ಕುಗ್ವೆಯವರ ಗೋಡೆಯಿಂದ
ಸಾಲುಗಳು

ಡಾ. ಜಿ. ಕೃಷ್ಣ



1
ನಿಶ್ಚೇಷ್ಟಿತ ಆನಂದಕ್ಕಿಂತ
ಮಿಸುಕುವ ನೋವು
ಸಹ್ಯ
ಎಂದರೆ
ನಿರಾಕರಣೆ ಇರಲಾರದು



2
ನರಭಕ್ಷಕ ಹುಲಿಯನ್ನು
ಗುಂಡಿಕ್ಕಿ ಕೊಲ್ಲುವುದು
ಹಿಂಸೆಯ ಅಹಿಂಸೆ



3
ಎಂತಹ ಗಹನ ಅನುಭಾವದ ಮಾತೂ
ಎರಡನೆಯ ಅರ್ಥಕ್ಕೆ
ಹೊರಳಿ
ನಗು ಬರಿಸುತ್ತವಲ್ಲ ಗಾಲಿಬ್!



4
ಚಳಿಗಾಲದ ಕೊಳಲಿನ ಗದ್ಗದ ಕೇಳಲಾರದೆ
ಬೇಸಿಗೆವರೆಗೆ ಕಾಯಲು ಹೇಳಿದಳಲ್ಲ



5
ದಿನವೂ
ಬಿಂಬ ಅದೇ
ಪ್ರತಿಬಿಂಬ ಅಲ್ಲ
ಅದೇ ನದಿ
ನೀರಲ್ಲ


 




6
ನಿಶ್ಚಲ
ಬಿಂಬ ಪ್ರತಿಬಿಂಬ-
ಗಳು ಅರ್ಥವಾಗುತ್ತವೆ ಗಾಲಿಬ್
ಬಿಂಬದ ಜೊತೆ
ಪ್ರತಿಬಿಂಬವೂ
ಯಾಕೆ ಚಲಿಸುತ್ತೆ
ಅರ್ಥವಾಗೋದಿಲ್ಲ ನೋಡು

 



7
ತೂಕಡಿಸಲಾಗದ ಲೋಕದಲ್ಲಿ
ಕಾಣಲಾಗುವುದು
ಕನಸಿನ ಕನಸಷ್ಟೇ!



8
ಮೊಳೆಯುವ ಭಯಕ್ಕೆ
ಯಾತನೆಯ ಬೀಜಗಳನ್ನು ಹುರಿದಿಟ್ಟೆ
ಈಗ
ವಸಂತ



9
ಇದರ ಅರ್ಥ ಏನು ಗಾಲಿಬ್
ನೋವಿನ ಸಾಲುಗಳಿಗೆ ಬರುವ ಮೆಚ್ಚುಗೆಯೇ ಹೆಚ್ಚಲ್ಲ



10
ಅವರು ಕಲ್ಲೆಸೆದ ಮೇಲೆ ಕಾದಿದ್ದು ಒಳ್ಳೆಯದೇ ಆಯಿತು
ನನ್ನ ಅಂತರಾಳದ ಕೊಳೆ ಕಂಡುಕೊಳ್ಳಲು ದಾರಿಯಾಯಿತು
  


11
ಮಾಗಿಯ ಮಬ್ಬು ಬೆಳಗಲ್ಲಿ
ಟೀ ಮಾಡುವಾಗ ಚೆಲ್ಲಿದ
ಅರೆಚಮಚೆ ಹಾಲುಪುಡಿ
ಮೂಸುತ್ತ ಬಂದ ಒಂದಿರುವೆ
ಈಗಷ್ಟೆ ಹುಟ್ಟಿದ
ಎರಡು ಹೆಣ್ಣಿನ ಮೇಲಿನ
ಗಂಡು
ಎರಡೂ ಇಲ್ಲ ನೋಡಿ
ಈ ಹೊತ್ತಿಗೆ
ಖಾಲಿ ಖಾಲಿ
ಬೆಸೆಯಲಾಗುತ್ತಿಲ್ಲ ಎರಡನ್ನೂ
ಕಷ್ಟಪಟ್ಟು ಹತ್ತಿರ ಸೇರಿಸುತ್ತಿದ್ದೇನೆ
ಖಾಲಿಯ
ಬೆರಗುಗಣ್ಣಿಂದ ದಿಟ್ಟಿಸುತ್ತಿದ್ದೇನೆ




12
ಎಲೆ ಹದ್ದೇ,
ತೊರೆದ ಒಂದು ಗರಿಯಿಂದ
ನಿನ್ನ
ಹದ್ದುತನ
ರವಷ್ಟು ಕಡಿಮೆಯಾಯಿತೇ
ಅಥವಾ
ಹೆಚ್ಚಿತೇ?

 




13
ನೀರಿನ ಗುಣ ನೋಡು ಗಾಲಿಬ್,
ಏಟು ಬಿದ್ದ ಜಾಗಕ್ಕೂ
ಶೃಂಗಾರ!







14
ಹೂವರಳಿದಾಗ
ಸದ್ದೇ ಆಗಲಿಲ್ಲ ಗಾಲಿಬ್,
ಚಿಕಿತನಾದೆ
ತೊಟ್ಟು ಕಳಚಿದಾಗ
ಮತ್ತಷ್ಟು!



15
ವರು ಯಾರನರಸಿ ಹೊರಟಿದ್ದರೋ
ಅವನೇ ನಾನಾಗಿಬಿಟ್ಟೆ
ಇಬ್ಬರದೂ
ನೀಗಿತು!



16
ನಿಶ್ಶಬ್ಧದಲ್ಲಿ ಕವಿತೆ ಹುಟ್ಟುವ ತನಕ
ಶಬ್ಧಗಳ ಹಂಗಿತ್ತು
ಈಗ
ನಿಶ್ಶಬ್ಧದ ಮುಲಾಜು



17
ದಾಟಬೇಕಿರುವ ಹೊಳೆ ಬಂತು
ಸೇತುವೆ ಕಟ್ಟಿದ್ದಾರೆ
ಚಕ್ರಗಳುರುಳುತ್ತಿವೆ
ಮುಗಿಯುತ್ತಿಲ್ಲ
ಆಚೆ ದಡ ಕಾಣುತ್ತಿಲ್ಲ...



18
ಬಾಗಿದವನ ಆತ್ಮ
ಮಾಗಿದರೆ
ಸದ್ದಿಲ್ಲದೆ
ನೆಟ್ಟಗಾಗುವನು


 

19
ತಾಪದಲ್ಲಿ
ಬೊಗಸೆ ಅದ್ದಿದಾಗ
ಯಕ್ಷನ ಕೊಳದಲ್ಲಿ ಕರಗಿದ
ಚಂದ್ರ ಬಿಂಬ
ಬೊಗಸೆ ನೀರಲ್ಲಿ
ಪ್ರತ್ಯಕ್ಷ
ಕುಡಿದು ಬಿಟ್ಟೆ
ಈಗ
ಮೈಯೆಲ್ಲ ತಂಪು



20
ಮುಗ್ಧತೆ ಇಲ್ಲದೆ ಒಳ್ಳೇ ಕವನ ಹುಟ್ಟೋದಿಲ್ಲ ಅನ್ನೋದು
ಅದನ್ನ ಕಳಕೊಂಡ ಮೇಲೆ ಅಲ್ವಾ ಗಾಲಿಬ್, ಹೊಳೆಯೋದು?


***


 

Friday, 27 December 2013

ಕೋಗಿಲೆ ಕೂಗುವುದಿಲ್ಲ

ಜಿ ಎಸ್ ಅವಧಾನಿ

 






















ನನಗೆ ಧಿಗಿಲಾದದ್ದು
ಈ ಮನೆಯೊಳಗೆ
ಗಾಳಿಬೆಳಕು ಇಲ್ಲದ್ದಕ್ಕಲ್ಲ
ಸಿಟಿಬಸ್ಸಿಗೆ ಗಂಟೆಗಟ್ಟಲೆ
ಕಾದು ಪೇಟೆ ದವಾಖಾನೆ
ಅಥವಾ ಬಸ್ ನಿಲ್ದಾಣಗಳಿಗೆ
ಹೋಗಬೇಕು ಎಂಬುದಕ್ಕಲ್ಲ

ಅಕ್ಕಪಕ್ಕದ ಮಂದಿ
ಕಂಡೂ ಕಾಣದವರಂತೆ
ಮೊಗಂ ಆಗಿ ಇರುವುದಕ್ಕಲ್ಲ
ಮಲೆನಾಡಿನ ಹೆಪ್ಪುಗಟ್ಟುವ
ಚಳಿಗೆ ಒಂದಿಲ್ಲೊಂದು
ಅಲವರಿಕೆಯಲ್ಲಿ ಅಸ್ವಸ್ಥರಾಗುವುದಕ್ಕಲ್ಲ

ಮುಂಜಾನೆ ಹಾಸಿಗೆಯಲ್ಲೇ
ಕಣ್ಣುತೆರೆದು ಬಳಿಗೆ ಕರೆದು
'ಅಜ್ಜಾ, ಹೊನ್ನಾವರಕ್ಕೆ ಹೋಪ'
ಎಂದು ತೊದಲಿದ ಎರಡು ವರ್ಷದ
ಮುದ್ದು ಮಗುವನೆತ್ತಿಕೊಂಡು ಕೇಳಿದೆ
'ಯಾಕೆ?'
ಅವಳು ತಟ್ಟನೆ
'ಇಲ್ಲಿ ಕೋಗಿಲೆ ಕೂಗ್ತೇ ಇಲ್ಲ'
ಎಂದು ಹೇಳಿದ್ದಕ್ಕೆ!

***

Wednesday, 25 December 2013




ಜಿ ಎಸ್ ಎಸ್ ಶ್ರದ್ಧಾಂಜಲಿ

ಚಂದ್ರಶೇಖರ ವಸ್ತ್ರದ್

ಎದೆತುಂಬಿ ಹಾಡುವ ಹಕ್ಕಿಹಾಡನು ಹಿಡಿದು
ರೆಕ್ಕೆಯಕ್ಕರ ಕಟ್ಟಿ ಹಾರಿಬಿಟ್ಟವರು
ಲೋಕದಕ್ಕರೆಯನ್ನು ಲೆಕ್ಕಣಿಕೆಯಲಿ ತುಂಬಿ
ಕವಿತೆಯಾಗಿಸಿ ಜಗದ ಕೈಗೆ ಕೊಟ್ಟವರು

ಮಲೆನಾಡಿನುತ್ತುಂಗ ಸಹ್ಯಾದ್ರಿ ಗಿರಿಶೃಂಗ
ಮೌನಚೆಲುವಿಗೂ ಸಲುವ ಮಾತು ಕೊಟ್ಟವರು
ಇಹದ ಧೂಳಿಯ ಕೊಳೆಯ ಕಾವ್ಯತೀರ್ಥದಿ ತೊಳೆದು
ನಂಜಿನೆದೆ ಹದ ಮಾಡಿ ನಲುಮೆ ಸಸಿ ನೆಟ್ಟವರು

 The ‘link poet’ is no more

ಗುರು ಹಾರಿದಗಲಕ್ಕೆ ಹಾರಿದವರು
ಗುರುವೇರಿದೆತ್ತರಕೆ ಏರಿದವರು
ಮಾತಿನ ಹಣತೆಯಲಿ ಪ್ರೀತಿ ತೈಲವನೆರೆದು
‘ದೀಪದ ಹೆಜ್ಜೆ’ಯನು ತೋರಿದವರು

ಏನು ಹೇಳಲಿ ಇವರ ಬರಹದರಿವಿನ ಪರಿಯ
ಸಹೃದಯ ಹೃದಯಕ್ಕೆ ಬೆಳಕಿನಭ್ಯಂಜನ
ಕರುನಾಡ ಸಿರಿದೇವಿ ವರ ಪಾದ ಪಂಕಜದಿ
ಗದ್ಯ ಪದ್ಯಗಳೆರಡು ನೀಲಾಂಜನ
 

 ***

Tuesday, 24 December 2013


ಡಾ.ಸಿ ರವೀಂದ್ರನಾಥ್ ಬಳ್ಳಾರಿ ವೈದ್ಯಕೀಯ ಕಾಲೇಜಿನಲ್ಲಿ ನನ್ನ ಸಹಪಾಠಿ.  ಆಪ್ತ ಗೆಳೆಯ. ಹಾಯ್ಕುಗಳ ಹುಚ್ಚು ಹಿಡಿಸಿಕೊಂಡವನು. ಈಗ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೂಕ್ಷ್ಮಾಣುಜೀವಿ ಶಾಸ್ತ್ರಜ್ಞ. ಇದಕ್ಕೂ ಇವನು ಸೂಕ್ಷ್ಮವಾದ ಹಾಯ್ಕುಗಳನ್ನು ಬರೆಯುತ್ತಿರುವುದಕ್ಕೂ ಸಂಬಂಧವಿರಲಾರದು! ಕೆಲವೇ ಶಬ್ಧದಲ್ಲಿ ದೊಡ್ಡದು ಹೊಳೆದಾಗಿನ ಖುಶಿಯೇ ಬೇರೆ. ಅದನ್ನು ಹೊಳೆಯಿಸುವ ಕಲೆ ರವೀಂದ್ರನಾಥ್ ಗೆ ಸಿದ್ಧಿಸಿದೆ. ರವಿ ಮೂರು ಹಾಯ್ಕು ಸಂಕಲನಗಳನ್ನು ತಂದಿದ್ದಾನೆ. ಈ ಮೂರು ಹಾಯ್ಕುಗಳನ್ನು 'ಮೂರು ಸಾಲು ಮರ' ದಿಂದ ಆಯ್ದುಕೊಂಡಿದ್ದೇನೆ. ಇನ್ನೆರಡು ಸಂಕಲನಗಳ ಹೆಸರು 'ಒಂದು ಹನಿ ಬೆಳಕು' ಮತ್ತು 'ಕೊಡೆಯಡಿ ಒಂದು ಚಿತ್ರ'.


*
ಚಿಮ್ಮಿದ ಖುಶಿಯಲ್ಲಿ
ಕಳೆದುಹೋಗಿದೆ
ಅನಾಥ ಬಿರಟೆ

 

*
ಹರಿದ ಶಾಂಪೇನ್
ಬರಿದಾದ ಬಾಟಲಿ
ಮೂಲೆ ಸೇರಿದ ಬಿರಟೆ

*
ಬಾಟಲಿಯ ಚೂರುಗಳು
ಶಾಂಪೇನಿನ ಮತ್ತಲ್ಲಿ
ಖುಶಿಯಾಗಿವೆ






Monday, 23 December 2013

ಯಾವ ಹಾಡ ಹಾಡಲಿ?

ಜಿ.ಎಸ್ ಶಿವರುದ್ರಪ್ಪ 









ಯಾವ ಹಾಡ ಹಾಡಲಿ
ಯಾವ ಹಾಡಿನಿಂದ ನಿಮಗೆ
ನೆಮ್ಮದಿಯನು ನೀಡಲಿ ?

ಸುತ್ತ ಮುತ್ತ ಮನೆ ಮಠಗಳು
ಹೊತ್ತಿಕೊಂಡು ಉರಿಯುವಲ್ಲಿ
ಸೋತು ಮೂಕವಾದ ಬದುಕು
ನಿಟ್ಟುಸಿರೊಳು ತೇಲುವಲ್ಲಿ
ಯಾವ ಹಾಡ ಹಾಡಲಿ ?

ಬರಿ ಮಾತಿನ ಜಾಲದಲ್ಲಿ
ಶೋಷಣೆಗಳ ಶೂಲದಲ್ಲಿ
ವಂಚನೆಗಳ ಸಂಚಿನಲ್ಲಿ
ಹಸಿದ ಹೊಟ್ಟೆ ನರಳುವಲ್ಲಿ
ಯಾವ ಹಾಡ ಹಾಡಲಿ ?

ಉರಿವ ಕಣ್ಣ ಚಿತೆಗಳಲ್ಲಿ
ಇರುವ ಕನಸು ಸೀಯುವಲ್ಲಿ
ಎದೆ ಎದೆಗಳ ಜ್ವಾಲಾಮುಖಿ
ಹೊಗೆ ಬೆಂಕಿಯ ಕಾರುವಲ್ಲಿ
ಯಾವ ಹಾಡ ಹಾಡಲಿ ?

ಬೆಳಕಿಲ್ಲದ ದಾರಿಯಲ್ಲಿ
ಪಾಳುಗುಡಿಯ ಸಾಲಿನಲ್ಲಿ
ಬಿರುಗಾಳಿಯ ಬೀಡಿನಲ್ಲಿ
ಕುರುಡು ಪಯಣ ಸಾಗುವಲ್ಲಿ
ಯಾವ ಹಾಡ ಹಾಡಲಿ ?



***

Sunday, 22 December 2013

ತಿಳಿಯಲಿಲ್ಲ 

ಸಂವರ್ತ 'ಸಾಹಿಲ್'

 Samvartha 'Sahil' 

   

 















ಮಲ ಹೊರುವ ತಲೆಯ ಮೇಲೆ
ಸಂಜೆಯಾಟದಲ್ಲಿ ಒಂದು
ಗರಿ ಸಿಕ್ಕಿಸಿಕೊಂಡಾಗ
ಹ್ಯಾಟ್ ತೊಟ್ಟವರೆಲ್ಲ
ಅಣಕಿಸಿದ್ಯಾಕೋ ತಿಳಿಯಲಿಲ್ಲ!

ಅಕ್ಷರ ಬೆಳೆಯದ ನೆಲದ ಮೇಲೆ ನಿಂತು
ಬರೆದ ಎರಡು ಸಾಲು ಕಾವ್ಯ
ಪ್ರಶಂಸೆಯನ್ನು ಕಾದಿದ್ಯಾಕೋ
ತಿಳಿಯಲಿಲ್ಲ!
ನಿಮ್ಮ ಪ್ರಶಂಸೆಗೆ
ತುಸು ಬೀಗಿದಾಗ
ಅಕ್ಷರ ಲೋಕಕ್ಕೆ
ಅಸಹ್ಯವೆನಿಸಿದ್ಯಾಕೋ ತಿಳಿಯಲಿಲ್ಲ!

ಬೆವರು ಸುರಿಸಿ
ಬೆವರ ವಾಸನೆ ತಪ್ಪಿಸಲು
ಪೌಡರ್ ಖರೀದಿಸಿ
ಕಂಕುಳದಲ್ಲೊಂದಿಷ್ಟು ಹಾಕಿಕೊಂಡ ಹೊತ್ತು
ಸೆಂಟಿನ ಜೀವಗಳು
ತಮಾಷೆ ಮಾಡಿದ್ಯಾಕೋ, ತಿಳಿಯಲಿಲ್ಲ!

ವ್ಯವಸ್ಥೆಯ ಬಗ್ಗೆ ಸಿಟ್ಟಾಗಿ
ಬಯ್ಯುವ ಹೊತ್ತು
'ಸಾಟ' ಎಂದಾಗ

ಒಂದೇ ಒಂದು ಪದ
ಸಿಟ್ಟನ್ನೆಲ್ಲಾ ಮರೆಮಾಚಿ
ಜನರನ್ನು ನಗಿಸಿದ್ದು ಹೇಗೋ, ತಿಳಿಯಲಿಲ್ಲ!

***


Friday, 20 December 2013


ದೀಕ್ಷೆ ಮಾರಾಟಕ್ಕಿದೆ


ನಾಗರಾಜ ಹರಪನಹಳ್ಳಿ

Nagaraj Harapanahalli 


















ಸೂರ್‍ಯ ಇಲ್ಲವಾದ ದಿನ
ಕುಕ್ಕೆಯಲಿ ಮಡೆಸ್ನಾನ
ಸಂಪ್ರದಾಯದ ಉರುಳ ಕಂಡು
ಅ ಆ ಇ ಈ ಕಾಣದ ಜೀವಗಳು
ಬದುಕಿಗಾಗಿ ಕೈ ಜೋಡಿಸಿ ನಿಂತಿರಲು
ಕಲ್ಲುನಾಗರಕ್ಕೆ ಕಣ್ಣಿಲ್ಲ ಹೃದಯವಿಲ್ಲ
ಕೂದಲೆಳೆಯಲಿ ನೇಣು ಹಾಕುವ
ಸಾಲು ಸಾಲು ಮಠಗಳು

ಒಬ್ಬ ವೈಷ್ಣವ ದೀಕ್ಷೆ ದೀಕ್ಷೆ ಕೊಡ್ತೇನೆ ಅಂತ
ಇನ್ನೊಬ್ಬ ಗೀತಾ ಗೀತಾ ಪಾರಾಯಣ ಅಂತ
ಮತ್ತೊಬ್ಬ ರಾಮ ಕಥಾ ಕಥಾ ಅಂತ
ಸ್ಪರ್ಧೆಗೆ ನಿಂತಿದ್ದಾರೆ ಧರ್ಮೋದ್ಧಾರಕರು

ಸಾಸಿವೆ ಕೈಯಲ್ಲಿ ಹಿಡಿದ ಸೂರ್‍ಯ
ನಗುತ್ತಿದ್ದಾನೆ

ಹುಸೇನಣ್ಣನ ಗೂಡಂಗಡಿಗೆ
ಬೆನ್ನು ಕೊಟ್ಟು ಮೋಟು ಬೀಡಿ ಬೆಂಕಿಯಲ್ಲಿ
ಕನಸು ಕಂಡಿದ್ದಾನೆ ಆತ
ಸಿನಿಮಾ ಟಾಕೀಜಿನ ಗಲ್ಲಿಗಳಲ್ಲಿ
ಕೇರಿಯ ಮಗಳು
ಹೂ ಮುಡಿದು ನಕ್ಕಿದ್ದಾಳೆ
ಕೇರಿಯ ಮಕ್ಕಳು ಪಾಟೀಚೀಲ ಹಿಡಿದು
ಶಾಲೆಗೆ ಹೆಜ್ಜೆಯಿಟ್ಟು ಅಕ್ಷರ ಅಕ್ಷರ
ಅಂದ್ರೆ
ಖಾವಿಯೊಂದು ದೀಕ್ಷೆ ದೀಕ್ಷೆಯ ಜಪದಿ ಮುಳುಗಿರಲು

ಕನಕನ ಕಿಂಡಿಯಲ್ಲಿರುವ
ಸಾಸಿವೆಯ ಕಾಳು ಯಾಕೋ
ಯಾರಿಗೂ ಕಾಣಿಸುವುದಿಲ್ಲ ........


***

(ಜನನುಡಿಯಲ್ಲಿ ಓದಿದ ಕವಿತೆ)

Thursday, 19 December 2013

ಡಿಸೆಂಬರ್ 19, ಗೋವಾ ವಿಮೋಚನಾ ದಿನ 


ವಿಶ್ವನಾಥ ರೆಡ್ಡಿ

 


ಗೋವಾದಲ್ಲಿ ಪ್ರತಿವರ್ಷ ಡಿಸೆಂಬರ್ 19 ರಂದು "ಗೋವಾ ವಿಮೋಚನಾ ದಿವಸ" ಆಚರಿಸಲಾಗುತ್ತದೆ. 19.12.1961ರಂದು ನಾಲ್ಕುನೂರುವರೆ ವರ್ಷಗಳ ದೀರ್ಘವಾದ ದಾಸ್ಯದ ಹಿಂಸೆಯಿಂದ ಗೋವಾ ಮುಕ್ತವಾಯಿತು.

ಬ್ರಿಟಿಷ್, ಡಚ್, ಫ್ರೆಂಚ್ ಇತ್ಯಾದಿ ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿ ರಾಷ್ಟ್ರಗಳ ತುಲನೆಯಲ್ಲಿ ಪೋರ್ತುಗಾಲವು ೨೨.೫.೧೪೯೮ರಂದು ವಾಸ್ಕೊ-ದ-ಗಾಮಾ ಇವನ ರೂಪದಲ್ಲಿ ಭಾರತದಲ್ಲಿ ಎಲ್ಲರಿಗಿಂತ ಮೊದಲು ಕಾಲಿಟ್ಟತು. ಕ್ರಿ.ಶ. ೧೯೬೧ರಲ್ಲಿ ಮರಳಿಹೋದ ವಸಾಹತಶಾಹಿಗಳ ಪರಾಭವದ ನಿಜವಾದ ಶಿಲ್ಪಕಾರ - ಹಿರಿಯ ರಾಷ್ಟ್ರಭಕ್ತ ಡಾ. ರಾಮಮನೊಹರ ಲೋಹಿಯಾ! ಪೋರ್ತುಗಾಲದಲ್ಲಿಯೇ ‘ಫ್ಯಾಸಿಸ್ಟ’ ರಾಜ್ಯಾಡಳಿತ ನಡೆಸುವ ಡಾ. ಸಾಲಾಝಾರನ ರಾಜ್ಯದಲ್ಲಿ ವಾಕ್ಸ್ವಾತಂತ್ರ್ಯ, ವಿಚಾರಸ್ವಾತಂತ್ರ್ಯ, ಸಂಘಟನೆಯ ಸ್ವಾತಂತ್ರ್ಯ, ವರ್ತಮಾನಪತ್ರಿಕೆಯ ಸ್ವಾತಂತ್ರ್ಯ ಇತ್ಯಾದಿಗಳ ಜೀವನಾವಶ್ಯಕ ಮಾನವೀಯ ಮೌಲ್ಯಗಳಿಗೆ ಎಳ್ಳಷ್ಟೂ ಬೆಲೆಯಿರಲಿಲ್ಲ. ಆ ಸಮಯದಲ್ಲಿ ಗೋವಾವನ್ನು ತನ್ನ ರಾಷ್ಟ್ರದ ಭಾಗ ಎಂದು ಪರಿಗಣಿಸುತ್ತಿದ್ದ ಆ ಫ್ಯಾಸಿಸ್ಟಗಳಿಂದ ಗೋವಾದಲ್ಲಿ ಬೇರೆ ಯಾವ ಸ್ಥಿತಿಯನ್ನು ನಿರೀಕ್ಷಿಸಬಹುದಿತ್ತು ? ಅಮಾನುಷ ದಬ್ಬಾಳಿಕೆಯು ಅವರ ರಾಜ್ಯಭಾರದ ವಿಶೇಷ ಗುಣವಾಗಿತ್ತು! ಇಂತಹ ಪರಿಸ್ಥಿತಿಯಲ್ಲಿ ಪೋರ್ತುಗಿಜ್ ದಾಸ್ಯದ ಸರಪಳಿಗಳನ್ನು ಕಡಿಯಲು ಅನೇಕರು ಅವಿರತವಾಗಿ ಪ್ರಯತ್ನಗಳನ್ನು ಮಾಡಿದರು. ಅದರಲ್ಲಿ ಎಷ್ಟೋ ಗೋಮಾಂತಕೀಯ ಸುಪುತ್ರರನ್ನು ಕೊಂದು ಹಾಕಿದರು, ಗಲ್ಲಿಗೇರಿಸಿದರು ಅಥವಾ ಆಫ್ರಿಕೆಗೆ ಗಡಿಪಾರು ಮಾಡಲಾಯಿತು. ಆದರೂ ಗೋವಾ ಮುಕ್ತಿಯ ಪ್ರಯತ್ನಗಳು ನಡೆದಿದ್ದವು; ಆದರೆ ಈ ಪ್ರಯತ್ನದಲ್ಲಿ ನಿಜವಾದ ಅರ್ಥದಿಂದ ಪ್ರಾಣ ಮತ್ತು ಚೈತನ್ಯ ತಂದವರು ಡಾ. ಲೋಹಿಯಾ !


 File:Ram Manohar Lohia.jpg

‘ಸಾಲಾಝಾರ'ನ ‘ಫ್ಯಾಸಿಸ್ಟ’ ಅಧಿಕಾರವಿದ್ದರೂ ಏನಾಯಿತು? ಗೋಮಂತಕ ಭಾರತ ಭಾಗ! ಭಾರತದ ಸ್ವಾತಂತ್ರ್ಯದೊಂದಿಗೆ ಗೋವಾ ಮುಕ್ತವಾಗಲೇಬೇಕು’ ಎಂಬ ಬಲವಾದ ನಂಬಿಕೆ ಇದ್ದ ಡಾ. ಲೋಹಿಯಾ, ತನ್ನ ಭಾಷಣ ಪ್ರಾರಂಭ ಮಾಡಿದಾಗಲೇ ಅಲ್ಲಿ ಉಪಸ್ಥಿತವಿದ್ದ ಅಧಿಕಾರಿ ಕ್ಯಾಪ್ಟನ್ ಮಿರಾಂಡಾ ಅವರನ್ನು ತಡೆಗಟ್ಟಿ ಸ್ಪಷ್ಟವಾಗಿ 'ಗೋವಾದಲ್ಲಿ ಭಾಷಣ ಮಾಡಲು ನಿರ್ಬಂಧವಿದೆ’ ಎಂದು ಹೇಳಿದನು. ಆಗ ದೇಶಭಕ್ತಿಯಿಂದ ತುಂಬಿ ತುಳುಕುವ ಡಾ. ಲೋಹಿಯಾ ಇವರು 'ಭಾಷಣ ಮಾಡುವುದು ನಮ್ಮ ಮೂಲಭೂತ ಅಧಿಕಾgವಿದ್ದು' ತಾವು ಅಹಿಂಸೆಯ ಮಾರ್ಗದಿಂದ ಸಭೆ ನಡೆಸುವುದಾಗಿ ಹೇಳಿ ನಿರ್ಭಯವಾಗಿ ತಮ್ಮ ಭಾಷಣವನ್ನು ನಡೆಸಿದ್ದರು. ಅದನ್ನು ನೋಡಿ ಸಿಟ್ಟಿಗೆದ್ದ ಕ್ಯಾಪ್ಟನ್ ಮಿರಾಂಡಾ ಪಿಸ್ತೂಲು ತೆಗೆದನು ಮತ್ತು ಲೋಹಿಯಾ ಮೇಲೆ ಗರ್ಜಿಸಿ “ಭಾಷಣ ನಿಲ್ಲಿಸು. ಇಲ್ಲದಿದ್ದರೆ ಗುಂಡು ಹಾರಿಸುವೆ!" ಆದರೆ ದೇಶಭಕ್ತ, ರೋಮರೋಮದಲ್ಲಿ ದೇಶಪ್ರೇಮ ಸಂಚರಿಸುವ ಡಾ. ಲೋಹಿಯಾಗೆ ಕ್ಯಾಪ್ಟನ್ ಮಿರಾಂಡಾನ ಪಿಸ್ತೂಲಿನ ಭಯ ಏಕಿರಬೇಕು? ಅವರು ನಿರಾಯಾಸವಾಗಿ ನೊಣವನ್ನು ದೂರ ಮಾಡುವಂತೆ ಮಿರಾಂಡಾನ ಪಿಸ್ತೂಲು ಹಿಡಿದ ಕೈಯನ್ನು ತನ್ನ ಎಡಕೈಯಿಂದ ಬದಿಗೆ ಸರಿಸಿದರು! ಪುನಃ ಇಡೀ ಸಭೆಯು ‘ರಾಮಮನೋಹರ ಲೋಹಿಯಾ ಕೀ ಜೈ’ಎಂದು ಗರ್ಜಿಸಿತು. ಕೊನೆಗೆ ಮಿರಾಂಡಾ ಡಾ. ಲೋಹಿಯಾರನ್ನು ಬಂಧಿಸಿದನು; ಆದರೆ ಅವರು ಹೊತ್ತಿಸಿದ ಕ್ರಾಂತಿಯ ಕಿಡಿ ಮಾತ್ರ ನಂದಿಸಿಲು ಮಿರಾಂಡಾನ ಕ್ಷಮತೆಗೆ ಮೀರಿತ್ತು. ಕೊನೆಗೆ ಅದೇ ಕಿಡಿ ಹೊತ್ತಿ ಉರಿದು ಮಿರಾಂಡಾ ಮತ್ತು ಪೋರ್ತುಗೀಜರನ್ನು ಗೋಮಂತ ಭೂಮಿಯಿಂದ ಹೊರಗಟ್ಟಿಯೇ ಶಮನವಾಯಿತು.

ಡಾ. ಲೋಹಿಯಾ ಬಂಧನದ ನಂತರ ಉಪಸ್ಥಿತ ಜನಸಮುದಾಯದಲ್ಲಿ ಅವರ ಭಾಷಣದ ಪ್ರತಿಗಳನ್ನು ಹಂಚಲಾಯಿತು. ಇದರಿಂದ ಪ್ರೇರಿತರಾದ ಜನರು ತಮ್ಮತಮ್ಮ ಭಾಗಗಳಲ್ಲಿ ಇನ್ನಷ್ಟು ಜನರನ್ನು ಮುಕ್ತಿ ಚಳುವಳಿಯಲ್ಲಿ ಭಾಗವಹಿಸಲು ಪ್ರೆರೇಪಿಸಿ ಒಂದು ರೀತಿಯಲ್ಲಿ ಪೋರ್ತುಗೀಜ ಅಧಿಕಾರಕ್ಕೆ ಲಗ್ಗಮು ಹಾಕಿದರು. ಮುಂದೆ ಈ ಚಳುವಳಿಯು ಬೃಹತ್ ರೂಪ ಧರಿಸಿತು ಮತ್ತು ಗೋವಾ ಮುಕ್ತಿಗಾಗಿ ಎಲ್ಲ ಸ್ತರಗಳಲ್ಲಿ ಪ್ರಯತ್ನಗಳು ಆರಂಭವಾದವು. ಇದರಲ್ಲಿ ಗೋಮಂತಕೀಯರಂತೆ ಭಾರತದ ಇತರ ರಾಜ್ಯಗಳ ದೇಶಭಕ್ತರೂ ದೊಡ್ಡ ಪ್ರಮಾಣದಲ್ಲಿ ಪಾಲ್ಗೊಂಡಿದ್ದರು. ೧೫.೮.೧೯೫೫ರಂದು ಪಾತ್ರಾದೇವಿ ಚೆಕ್ ನಾಕಾದಲ್ಲಿ ನಡೆದ ಸತ್ಯಾಗ್ರಹ ಅವೀಸ್ಮರಣೀಯವಾಯಿತು. ‘ಚಲೊ-ಚಲೊ ಗೋವಾ ಚಲೊ’, ‘ಲಾಠಿ-ಗೋಲಿ ಖಾಯೆಂಗೆ, ಫಿರ ಭಿ ಗೋವಾ ಜಾಯೆಂಗೆ’ ಎಂಬ ಜೈಕಾರ ಮಾಡುತ್ತಾ ಭಾರತದ ವಿವಿಧ ಭಾಗಗಳಿಂದ ಪ್ರಚಂಡ ಸಂಖ್ಯೆಯಲ್ಲಿ ಬಂದಿದ ನಿಶ್ಶಸ್ತ್ರ ಸತ್ಯಾಗ್ರಹಿಗಳ ಮೇಲೆ ಕ್ರೂರ ಪೋರ್ತುಗೀಜರು ಗುಂಡು ಹಾರಿಸಿದರು. ಅವರ ಈ ಅಮಾನುಷ ಕೃತ್ಯಕ್ಕೆ ಅನೇಕ ಸತ್ಯಾಗ್ರಹಿಗಳು ಬಲಿಯಾದರು, ಹುತಾತ್ಮಾರಾದರು; ಆದರೆ ಅ ಘಟನೆಯ ನಂತರ ಮಾತ್ರ ‘ಗೋವಾ ವಿಮೋಚನ ಸಮಿತಿ'ಯು ಸತ್ಯಾಗ್ರಹ ಪದ್ಧತಿಯನ್ನು ಹಿಂಪಡೆಯಿತು ಮತ್ತು ಅನೇಕ ತರುಣರು ‘ಮುಯ್ಯಿಗೆ ಮುಯ್ಯಿ’ ‘ಏಟಿಗೆ ಏಟು’ ಎಂದು ನಿರ್ಧರಿಸಿ ಕೈಯಲ್ಲಿ ರೈಫಲ್, ಕೈಬಾಂಬ್, ಮಶೀನ ಗನ್ ಹಿಡಿದುಕೊಂಡು ಪೋಲಿಸ ಠಾಣೆಗಳನ್ನು ದೋಚಿದರು. 

 File:Liberation cheer.jpg

ಕೊನೆಗೆ ಭಾರತ ಸರಕಾರವು ಸೈನ್ಯವನ್ನು ಕಳುಹಿಸಿ ಗೋವಾವನ್ನು ಮುಕ್ತಗೊಳಿಸಲು ನಿರ್ಧರಿಸಿತು. ಅದಕ್ಕನುಸಾರ ‘ಆಪರೇಶನ್ ವಿಜಯ’ ಅಂತರ್ಗತ ಭಾರತೀಯ ಸೈನ್ಯವು ಗೋವಾದ ಗಡಿಯ ಬೆಳಗಾವಿಗೆ ಬಂತು. ಅಲ್ಲಿರುವ ಸಾಂಬರಾ ವಿಮಾನ ನಿಲ್ದಾಣದಲ್ಲಿ ಯುದ್ಧ ವಿಮಾನಗಳು ಸಜ್ಜುಗೊಂಡಿದ್ದವು. ಮತ್ತೊಂದು ಬದಿಯಿಂದ ಕಾರವಾರದ ಮಾಜಾಳಿ ಭಾಗದಲ್ಲಿ ಸೈನ್ಯ ನಿಂತಿತು ಮತ್ತು ಪಶ್ಚಿಮ ಸಾಗರದಲ್ಲಿ ಭಾರತೀಯ ನೌಕಾಪಡೆಯು ನೆಲೆಯೂರಿತು. ೧೮.೧೨. ೧೯೬೧ರಂದು ಭಾರತೀಯ ಸೈನ್ಯವು ಗೋವಾ ಮೇಲೆ ಆಕ್ರಮಣ ಮಾಡಿತು ಮತ್ತು ಪೋರ್ತುಗೀಜರನ್ನು ಆವರಿಸಿ ಅವರಿಗೆ ಅಡುಗಿ ಕುಳಿತುಕೊಳ್ಳಲು ಕೂಡ ಜಾಗ ಇಡಲಿಲ್ಲ! ಗೋವಾದ ವಿಮಾನ ನಿಲ್ದಾಣವನ್ನು ಸ್ಫೋಟದಿಂದ ನಾಶಗೊಳಿಸಲಾಯಿತು. ಪೋರ್ತುಗಾಲದಿಂದ ಬಂದಿದ್ದ ಅಲ್ಬುಕರ್ಕ ಎಂಬ ಯುದ್ಧ ನೌಕೆಯನ್ನು ಮುಳುಗಿಸಿಲಾಯಿತು. ಸೈನ್ಯವು ಬಿರುಗಾಳಿಯಂತೆ ಬಂದು ಮರುದಿನವೇ ಗೋವಾವನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಪೋರ್ತುಗಾಲನ ಗೋವಾದ ಸೈನ್ಯಾಧಿಕಾರಿ ಜನರಲ್ ಮಾನ್ಯುಅಲ್ ಆಂತಾನಿಯೂ ಸಿಲ್ವ್ ಭಾರತೀಯ ಸೈನ್ಯದ ಬ್ರಿಗೆಡಿಯರ್ ಕೆ. ಎಸ್. ಧಿಲ್ಲನ್ ಇವರ ಮುಂದೆ ಶರಣಾಗತಿ ಪತ್ರ ಬರೆದು ಅರ್ಪಿಸಿದನು ಮತ್ತು ಅದೇ ಕ್ಷಣದಲ್ಲಿ ನಾಲ್ಕುನೂರುವರೆ ವರ್ಷಗಳ ದೀರ್ಘಕಾಲದ ಪೋರ್ತುಗೀಜ ದಾಸ್ಯವು ಮುಗಿದು ಗೋವಾ ಮುಕ್ತವಾಯಿತು. ಈ ರೀತಿಯಲ್ಲಿ ಡಾ. ಲೋಹಿಯಾರವರ ಕ್ರಾಂತಿಯು ಫಲ ನೀಡಿತು. 

ಆಧಾರ : ದೈನಿಕ ‘ಪುಢಾರಿ’ 18.6.1999
ಮಾಹಿತಿ- ಅಂತರ್ಜಾಲದಿಂದ ಸಂಗ್ರಹಿಸಿದ್ದು.