Tuesday 10 December 2013

ಬುದ್ಧ ಮತ್ತು ನಾನು....
 
 
ಹೇಮಲತಾ ವಸ್ತ್ರದ್
 
 
 

 
 
ಎದೆಯಾಳದ ಕಳವಳಕ್ಕಂಜಿ ಹೊಕ್ಕೆ 
ಸಿದ್ಧ ಅರ್ಥಗಳ ಜಗಕಿತ್ತ ಬುದ್ಧನ ವಿಹಾರವ
ಮಿರಿಮಿರಿ ಮಿಂಚುತ್ತಿರುವ ಕಂಚಿನ ಧ್ಯಾನಸ್ಥ ಪುತ್ತಳಿ
ಅರೆ ತೆರೆದ ಕರುಣಾ ನೇತ್ರಗಳು
ಜಗ ಮೆಚ್ಚಿದ ಕಿರುನಗು
ಗಾಢಮೌನ ಮೊಗದ ಪ್ರಶಾಂತತೆ
ನನಗೋ ಮಹದಚ್ಚರಿ
ಮಹಾನ್ ಸಾಧಕ ನೀನು
ಸಂಬೋಧಿ ಜ್ಞಾನಕ್ಕೆ ಉರುವಿಲ್ವದ ಅಶ್ವತ್ಥಮರ
ಸುಖಜೀವನ ಶೋಧನೆಗೆ ನ್ಯಗ್ರೋಧ ಮರ
ಸಂಸಾರ ದುಃಖ ಸಾಗರ
ಜೀವನ ನಶ್ವರ
ಆಸೆಯೇ ದುಃಖದ ಮೂಲಾಧಾರ..ಹೀಗೆ.. 
ಲುಂಬಿನಿ ವನದಲಿ ಉದಯಿಸಿದರ್ಕ
ಕುಶಿನಾರದ ಸಾಲವನದಲಿ ಅಸ್ತಂಗತ
ನಿನ್ನ ನೆನೆಯುತ್ತ ನೆನೆಯುತ್ತ
ಕಣ್ಮುಚ್ಚಿ ಕುಳಿತೆ ನಿನ್ನೆದುರು
ಧ್ಯಾನಸ್ಥ ಭಂಗಿಯಲಿ
ಗಾಢ ಮೌನದ ಚಿಪ್ಪೊಡೆಯಿತು
ತುಟಿಮೀರದ ಬಿಕ್ಕಳಿಸುವ ಧ್ವನಿ
ಹಸಿಮೈಯ ಬಿಸಿಯಾಸೆಗಳು
ಒಡಲುದ್ದ ಒಲವಿರುವ ಯಶೋಧರೆಯದೆ?
ಕಾಣದ ಕಂದನ ಕ್ರಂದನ ರಾಹುಲನದೆ?
ಕಣ್ಣು ಒದ್ದೆಯಾದ ಅನುಭವ
ಹಸಿಯಾರಿಸಲು ಕೆನ್ನೆಯ ತಾಕಿತು ಕೈಬೆರಳು
ತೇವವಾದದ್ದು ನನ್ನದಲ್ಲ, ನಿನ್ನ
ಮಿರಿಮಿರಿ ಮಿಂಚುವ ಕಂಚಿನ ಕೆನ್ನೆ..

(ಬುದ್ಧ ಪೂರ್ಣಿಮೆಯಂದು ವಿಜಾಪೂರದ ಮಹಿಳಾ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ ಕವಿಗೋಷ್ಠಿಯಲ್ಲಿ ಓದಿದ ಕವಿತೆ.)

1 comment:

  1. A Very appealing poem by Hemalatha Vastrad. yes, buddha has given the light of salvation to the distressed human beings, but was indifferent towards Yashodhara and Rahula.

    ReplyDelete