Tuesday 10 December 2013

ಕೆಲವು ಸಲ


ಬಸವರಾಜ ಸೂಳಿಭಾವಿ


Basavaraj Sulibhavi

 

ಬದುಕು ಹಗಲು ತೆರೆದುಕೊಳ್ಳುತ್ತದೆ
ಕೆಲವು ಸಲ ರಾತ್ರಿಯಲ್ಲಿ..

ಒಮ್ಮೊಮ್ಮೆ ನೋವಿನಲ್ಲಿ ಹುಟ್ಟುತ್ತದೆ
ನಗುವಿನಲ್ಲಿ ಕೊನೆಗಾಣುತ್ತದೆ

ಹೆಸರಿಟ್ಟುಕೊಳದೆ 
ವಿರಾಟ ಜ್ವಾಲೆಯಲಿ ತುಟಿಗೆ ಮಾತು ತುಂಬುತ್ತದೆ
ಮಾಗಿಯ ಚಳಿಗೆ ಮೂಳೆ ಮಾತು ಕಲಿಯುತ್ತವೆ

ಜೀವ ಹೀಗೆ ಕಾಣುತ್ತದೆಂದು ಹೇಗೆ ಹೇಳುವುದು ?
ಹೂವು
ನಗು
ಮತ್ತು
ಪ್ರೇಮ
ಇದರಲಿ ಸಾವಿಗೆ ಯಾವುದೂ ಕಾರಣವಲ್ಲವೆಂದು ಹೇಗೆ ಹೇಳುವುದು ?
ಬೆಂಕಿ
ಬೇನೆ
ನೋವು
ವಿನಾಶದ ಪಟ್ಟಹೊತ್ತು ತಿರುಗುವ ಲೋಕದಲಿ
ಬದುಕು ಬರೆದಿಟ್ಟ ಬರಹದ ಹಾಗಲ್ಲ
ಅನ್ನುವುದೇ ಮರೆತು ಹೋಗುತ್ತದೆ

ನನಗೆ ಹೆಚ್ಚೇನೂ ತಿಳಿದಿಲ್ಲ
ಸಾವಿನ ಭಾಷೆಯನ್ನು ಅನುವಾದಿಸುವವ ಇನ್ನೂ ಸಿಕ್ಕಿಲ್ಲ
ನಾವೇನಿದ್ದರೂ ಬದುಕಿನ ಭಾಷೆಯನ್ನಷ್ಟೆ ಅನುವಾದಿಸುವವರು
ಬಾಯಾರಿ ಕಡಲ ಕೂಡಿದ್ದೇನೆ
ನನಗೀಗ
ಹೊರಬರಬೇಕೆಂದರೆ ಆವಿಯಾಗುವುದೊಂದೇ ದಾರಿ

ಬೆಳಕಾಗುವ ಸುಗಂಧವಾಗುವ ಆಸೆ
ಸುಟ್ಟುಕೊಳ್ಳುವುದೆಂದು ಗೊತ್ತಿದ್ದರೂ ಮೊಳೆಯುತ್ತದೆ
ಖರೆ ಮಾತೆಂದರೆ
ನಶೆಯಿಲ್ಲದ ಬದುಕು ನನ್ನದಂತೂ ಅಲ್ಲ

No comments:

Post a Comment