Friday, 6 December 2013

ಸಾಲುಗಳು: ಡಾ.ಜಿ.ಕೃಷ್ಣ

ಕಾವ್ಯ ಕಾರಣ ಕವಿತೆ

ದಿನಾ
ನನ್ನೊಡನೆ ನನ್ನ ಜಗಳ
ಏರುದಾರಿಯಲ್ಲಿ ಹೆಜ್ಜೆ ಭಾರ-
ವಾಗುತ್ತಾ ಬೆವರು ಕಿತ್ತು-
ಕೊಳ್ಳುತ್ತಾ
ಏದುಸಿರು ಬಿಡುತ್ತಾ
ಸಾಗುವಾಗ 
ತಕರಾರು ನನ್ನಿಂದಲೇ
ಸ್ವಲ್ಪ ಕೂರು
ಸುಧಾರಿಸಿಕೊ,
ಎದೆಯೊಡೆದರೆ ಗತಿಯೇನು
ಹಿಂದಿರುಗಿಯೇ ಬಿಡು
ಆದರೂ ತ್ರಿವಿಕ್ರಮನಂತಾ
ನನ್ನೊಳಗಿನ ನಾನು
ಇದೇ ದಾರಿಯಲ್ಲಿ ಹಕ್ಕಿಯಂತೆ
ಹಗುರವಾಗಿ
ವಾಪಾಸು ಬರುವ
ಸುಖವ
ನೆನಪಿಸುತ್ತಾನೆ
ಬಾಯಿ ಮುಚ್ಚಿಸಿ
ಜಗಳ ಗೆದ್ದು
ನಡಿಗೆ ಚುರುಕಾಗಿಸುತ್ತಾನೆ
 
 

 Photo: ಕಾವ್ಯ ಕಾರಣ ಕವಿತೆ

ದಿನಾ
ನನ್ನೊಡನೆ ನನ್ನ ಜಗಳ
ಏರುದಾರಿಯಲ್ಲಿ ಹೆಜ್ಜೆ ಭಾರ-
ವಾಗುತ್ತಾ ಬೆವರು ಕಿತ್ತು-
ಕೊಳ್ಳುತ್ತಾ
ಏದುಸಿರು ಬಿಡುತ್ತಾ
ಸಾಗುವಾಗ 
ತಕರಾರು ನನ್ನಿಂದಲೇ
ಸ್ವಲ್ಪ ಕೂರು
ಸುಧಾರಿಸಿಕೊ,
ಎದೆಯೊಡೆದರೆ ಗತಿಯೇನು
ಹಿಂದಿರುಗಿಯೇ ಬಿಡು
ಆದರೂ ತ್ರಿವಿಕ್ರಮನಂತಾ
ನನ್ನೊಳಗಿನ ನಾನು
ಇದೇ ದಾರಿಯಲ್ಲಿ ಹಕ್ಕಿಯಂತೆ
ಹಗುರವಾಗಿ
ವಾಪಾಸು ಬರುವ
ಸುಖವ
ನೆನಪಿಸುತ್ತಾನೆ
ಬಾಯಿ ಮುಚ್ಚಿಸಿ
ಜಗಳ ಗೆದ್ದು
ನಡಿಗೆ ಚುರುಕಾಗಿಸುತ್ತಾನೆ

*
ಪಂಚ ಭಕ್ಷ ಪರಮಾನ್ನ
ಬೆಳಗಾಗುವುದರಲ್ಲಿ
ಮೂಗುಮುಚ್ಚುವ ಅಮೇಧ್ಯ-
ವಾಗುವುದ
ಕಂಡೂ
ಮತ್ತೆ
ಹಪಹಪಿಸುವ 
ಮನುಷ್ಯನ
ಜೀವನ ಪ್ರೀತಿಗೆ
ಸಾಟಿಯುಂಟೇ ಗಾಲಿಬ್?


*
ಬೀಳಿಸಿ ಹಾರಿಹೋದೆಯಲ್ಲ
ಪುಟ್ಟ ಹಕ್ಕಿಯೇ
ಈ ಕಡು ಚಳಿಗಾಲದಲ್ಲಿ
ಒಂದು ಗರಿಯೂ
ತುಟ್ಟಿಯೇ


*
ಪ್ರಜಾಪ್ರಭುತ್ತ್ವವೆಂಬ ಮಾಂತ್ರಿಕ ಶಕ್ತಿಗೆ
ಬೆರಗಾಗದೆ ಹೇಗಿರಲಿ ಗಾಲಿಬ್,
ಜಯಾಪಜಯಗಳನ್ನು ಪೆಟ್ಟಿಗೆಯಲ್ಲಿ ತುಂಬಿ 
ವಾರಗಟ್ಟಲೆ ಕೋಣೆಯೊಳಗಿಟ್ಟು
ಬೀಗ ಹಾಕಿ
ಕಾವಲಿಟ್ಟ ಮೇಲೆ
 
 
 
 
 
*
ಬೆಚ್ಚಗಿನ ಸ್ಪರ್ಶಕ್ಕೆ ಎಷ್ಟು ಮೈಮರೆವು ನೋಡು ಗಾಲಿಬ್,
ಪಡೆದಿದ್ದು ಕೊಟ್ಟಿದ್ದು ಎರಡೂ ಬಿಸಿಇರಲು ಸಾಧ್ಯವಿಲ್ಲ ಅನ್ನುತ್ತಲ್ಲ ವಿಜ್ಞಾನ!
 
*
ಅಹಂಕಾರವೇ ತಪ್ಪಿಗಿಂತ ದೊಡ್ಡದಾಯಿತು ಗಾಲಿಬ್,
ತಪ್ಪು ಮಾಡದವರಷ್ಟೆ ಬನ್ನಿ
ನನ್ನತ್ತ ಬೊಟ್ಟು ಮಾಡಿ ಎಂದೆ
 
*
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ ಎಂಬುದನ್ನು
ಬಾಗಿಲು ನೋಡಿ ಹೇಳಲಾಗದು ಗಾಲಿಬ್,
ಕಿವಿಕೊಟ್ಟು ಆಲಿಸಬೇಕು
 
*
ಭಾರ ಹೆಚ್ಚಾಯಿತು ಗಾಲಿಬ್,
ಅಕ್ಷರದ ಹೊರೆ ಇಳಿಸಿ
ಹಗುರಾಗಬೇಕಿದೆ
 
*
ನಿನ್ನದಲ್ಲವೆಂದು ಹೇಳಲು
ಹಣ್ಣು ಕೀಳಲು ಹೊರಟ ಕೈಯ
ಗಿಡ ಸ್ವಲ್ಪ ದೂರ
ಹಿಂಬಾಲಿಸುತ್ತದೆ,
ಸೋಲುತ್ತದೆ.
 
 
 
 
 
ಈ ಸಕ್ಕರೆ ಕಾಯಿಲೆಯ ವೈರುಧ್ಯ ನೋಡು ಗಾಲಿಬ್,
ರಕ್ತದ ಸಿಹಿಸಮೃದ್ಧಿಯ ನಡುವೆ
ಜೀವಕೋಶಗಳ ಉಪವಾಸವಂತೆ!
 
 


  
ಎಳಸಲ್ಲಿ
ಬೆಳಕು ಹಾಯುತ್ತೆ ಗಾಲಿಬ್,
ಬೆಳೆದಂತೆಲ್ಲ
ಅಪಾರದರ್ಶಕ
 
 
 
 
 
 
ಶಿಕಾರಿಯ ಬಲೆ
ನವಿರಾದಷ್ಟೂ
ಇಬ್ಬನಿಯೂ
ಸಿಕ್ಕಿಕೊಂಡು ಒದ್ದಾಡುವುದು.

 
 
 
 
 
 *
ಮಾತು ಭಾರವಾದರೆ ಮೌನ
ಮೌನ ಭಾರವಾದರೆ ಮಾತು
ಒಟ್ಟಿನಲ್ಲಿ ಸುಮ್ಮನಿರೋದು ಕಷ್ಟ ಗಾಲಿಬ್...
 
*
ಬುದ್ಧ ಎಲ್ಲಾದರೂ ಕಾಣಿಸಿದರೆ
ಕೊಂದುಬಿಡು
ಎನ್ನುವುದು
ದೊಡ್ಡ ಅನುಭಾವದ ಮಾತು
ಅಂದುಕೊಂಡಿದ್ದೆ ಗಾಲಿಬ್,
ಈಗೀಗ ತಿಳಿಯುತ್ತಿದೆ
ಅದವನಿಗೆ
ದಯಾಮರಣ!
 
 
 
 
 
*
ದಿನಾಲೂ ಸ್ಕ್ಯಾನಿಂಗ್ ಮಾಡುತ್ತೇನೆ
ಮೊದಲನೇದು, ಎರಡನೇದು, ಮೂರನೇದು 
ಮದುವೆಯಾದ ಮೇಲೆ ಮುಟ್ಟೇ ಆಗದವರದು 
ಮದುವೆಯೇ ಆಗದವರದು 
ಒಳಗೆ 
ಮಿಸುಕುವ ಜೀವ 
ಹೊರಗೆ ಬಿಡುಗಣ್ಣ ಜೀವ 
ಹಿಂದೆ ನಿಂತು 
ನೋಡುತ್ತಿರುತ್ತದೆ 
ಇನ್ನೊಂದು ಜೀವ 
ಮದುವೆಯಾಗಿ
ವರ್ಷಗಳೇ ಕಳೆದರೂ
ಒಳಗೆ ಚಿಗುರದೆ ಸೋತ
ಜೀವ
ನನ್ನ ಬೆನ್ನು
ನಿಟ್ಟುಸಿರಿನ ಬಿಸಿಗೆ  
ಕರಗುತ್ತದೆ.


No comments:

Post a Comment