ಕಗ್ಗಂಟು
ರಾಜೇಂದ್ರ ಬಿ. ಶೆಟ್ಟಿ
ಮಗನ ಹುಟ್ಟು ಹಬ್ಬ. ಹೆಂಡತಿ ಹಬ್ಬ ಆಚರಿಸೋಣ ಅನ್ನುತ್ತಿದ್ದಾಳೆ. ನಾನು ಬೇಡ ಅನ್ನುತ್ತಿದ್ದೇನೆ.
ನನಗೆ ನಾಚಿಗೆ – ನನ್ನ ಮಗ ನಡೆಯಲಾರ. ಹುಟ್ಟಿದಾಗಿನಿಂದ ಒಂದು ದಿನವೂ ನಡೆದಿಲ್ಲ. ಪರರ ಕನಿಕರ ನನ್ನನ್ನು ಚುಚ್ಚುತ್ತದೆ.
ಕೊನೆಗೂ ವಾಡಿಕೆಯಂತೆ ಹೆಂಡತಿಯೇ ಗೆದ್ದಳು.
*
ನಮ್ಮದು ಮಧ್ಯಮ ವರ್ಗದ ಸಂಸಾರ. ನನ್ನ ಸಂಪಾದನೆಯಲ್ಲಿ ಜೀವನ ಸಾಗುತ್ತಿದೆ. ಹೆಂಡತಿ ಮನೆಯಲ್ಲೇ – ಮಗನ ಆರೈಕೆ ಮಾಡುತ್ತ. ಕೆಲಸ ಮಾಡುವಲ್ಲೂ ನನ್ನದು ಮಧ್ಯಮ ವರ್ಗ.
ಒಂದು ದಿನ
ನಮ್ಮ ಮ್ಯಾನೇಜರ್ ನ ಪಾರ್ಟಿ. ಕಾರಣ ಆತನಿಗೆ ಪ್ರಮೋಶನ್ (ನಾನು ಅದೇ ಜಾಗದಲ್ಲಿ – ಮಾಮೂಲು). ಪ್ರಥಮ ಭಾರಿಗೆ ಸರಾಯಿ ಕುಡಿದೆ. ಅಥವಾ ಕುಡಿಸಿದರು. ಮೊದಲ ತುತ್ತು(?) ವಾಕರಿಕೆ ಬರುವ ಅನುಭವ. ಉಗುಳಲು ಮನಸ್ಸಾಗಲಿಲ್ಲ. ಪುನಹ ಇನ್ನೊಂದು ಸಿಪ್. (ಕುಡಿದಿದ್ದೇನೆ – ಹಾಗಾಗಿ ಇಂಗ್ಲೀಷ್). ನಶೆ ಏರುತ್ತಿದ್ದಂತೆ ವಾಕರಿಕೆ ಬರುವ ಕಹಿ ಸರಾಯಿ ಇಷ್ಟವಾಯಿತು. ಅದೃಷ್ಟ ಚೆನ್ನಾಗಿತ್ತು – ಯಾವುದೇ ಕೆಟ್ಟ ಅನುಭವ ಆಗಲಿಲ್ಲ. ಅದೇ ನನ್ನ ಜೀವನದಲ್ಲಿ ಆದ ದೊಡ್ಡ ತಪ್ಪು.
ಮುಂದಿನ ವಾರ, ನನ್ನ ಸಹೋದ್ಯೋಗಿ ಹೋಟೇಲಿಗೆ ಕರೆದ. ಅರೆ ಮನಸ್ಸಿನಿಂದ ಹೋದೆ. ಇನ್ನಿಬ್ಬರು ಸಹೋದ್ಯೋಗಿಗಳೂ ಬಂದಿದ್ದರು. ಪುನಹ ಸರಾಯಿಯ ಸರಬರಾಜು. ನಾವೆಲ್ಲಾ ಮ್ಯಾನೇಜರ್ಗೆ ಬೈದೆವು – ಮನಸ್ಸು ಒಂದು ಹದಕ್ಕೆ ಬಂತು. ನಮ್ಮ ಅತೃಪ್ತಿಯನ್ನು ಈ ರೀತಿ ಹೊರ ಹಾಕಿದೆವು.
ಮರು ದಿನ ಇನ್ನೊಬ್ಬ ಕರೆದ.
ಇನ್ನೊಂದು ದಿನ ಮತ್ತೊಬ್ಬ. ಸಾಗಿತು ಸರಾಯಿಯ ಸೇವನೆ.
ಇಷ್ಟೊಂದು ಜನ ನನಗೆ ಪುಕ್ಕಟೆ ಸರಾಯಿ ಕೊಡುವಾಗ, ನಾನು ಸುಮ್ಮನೆ ಇರುವುದು ಸರಿಯೇ? ಹಾಗೆ ಮಾಡುವುದು ಸರಾಯಿಗೆ ಅಪಮಾನ. ಒಂದು ದಿನ ಅವರೆಲ್ಲರಿಗೂ ನಾನೂ ಪಾರ್ಟಿ ಕೊಡ ಬೇಕಾಯಿತು. ಕಿಸೆ ತೂತಾಯಿತು. ತಿಂಗಳ ಕೊನೆಯಲ್ಲಿ ಪ್ರಥಮ ಭಾರಿಗೆ ಸಾಲ ಮಾಡಿದೆ.
ಹೆಂಡತಿಯ ಕಿರಿ ಕಿರಿ ಆರಂಭವಾಯಿತು. ಮಗನ ಆರೈಕೆಗೆ ಹಣ ಸಾಕಾಗಲಿಲ್ಲ. ಸರಾಯಿ ಇಲ್ಲದೆ ನನಗಿರಲು ಅಸಾಧ್ಯವಾಯಿತು. ಹೆಂಡತಿಯ ಒತ್ತಾಯಕ್ಕೆ ಮಣಿದು ಒಂದು ದಿನ ಕುಡಿಯಲಿಲ್ಲ.
ಕೈ ನಡುಗತೊಡಗಿತು. ತಳಮಳ. ದಿನ ದಿನವೂ ಕುಡಿಯುವುದನ್ನು ಕಡಿಮೆ ಮಾಡುವೆ. ಇನ್ನು ಹೋಟೇಲಿಗೆ ಹೋಗುವುದಿಲ್ಲ ಎಂದು ಚಿಕ್ಕ ಬಾಟಲಿ ಮನೆಗೆ ತಂದೆ. ಸ್ವಲ್ಪ ಕುಡಿದೆ. ಹೆಂಡತಿಗೆ ಸಮಾಧಾನ. ಇನ್ನಾದರೂ ಸ್ವಲ್ಪ ಹಣ ಉಳಿದೀತು ಅನ್ನುವ ಆಸೆ ಆಕೆಗೆ. ರಾತ್ರಿ, ಆಕೆಗೆ ಗೊತ್ತಾಗದಂತೆ ಇನ್ನೊಂದು ಪೆಗ್ ಕುಡಿದೆ.
ನನ್ನ ಹೊಸ ಗೆಳೆಯರಿಗೆ ಗೊತ್ತಾಯಿತು – ನನ್ನ ಮನೆ ಬಾರ್ ಆಗಿದೆ ಎಂದು. ಮೆಲ್ಲ ಮೆಲ್ಲನೆ ಒಂದಿಬ್ಬರು, ಮಗನ ಆರೋಗ್ಯ ವಿಚಾರಿಸಲು ಮನೆಗೆ ಬಂದರು. ಪುಕ್ಕಟೆ ಸಲಹೆ ಕೊಟ್ಟರು. ತಮ್ಮ ಕಿಸೆಯಿಂದ ಬಾಟಲಿ ಹೊರ ತೆಗೆದರು…..
*
ಪುನಹ ಕುಡಿಯಲು ಹೊರ ಹೋಗುತ್ತಿದ್ದೇನೆ. ಕಿಸೆಯ ತೂತು ದೊಡ್ಡದಾಗುತ್ತಾ ಹೋಗುತ್ತಿದೆ. ಗೆಳೆಯರ ಗುಂಪು ಸಹ ದೊಡ್ಡದಾಗುತ್ತಿದೆ. ಅವರ ಮಧ್ಯದಲ್ಲಿ ನಾನು ಒಬ್ಬ ಹೀರೋ. ಅವರ ಆಪ್ತ – ಹೆಂಡತಿಯೊಂದಿಗೆ ಆದ ಜಗಳ ಹೇಳಿ ಕೊಳ್ಳುವಷ್ಟು ಆಪ್ತ.
ಸುಖವಾಗಿ ಇದ್ದವ ಈಗ ದಿನ ದಿನವೂ ಅಳುತ್ತಿದ್ದೇನೆ. ಮನೆ ರಣರಂಗವಾಗಿದೆ. ಸಂಸಾರದ ಕಷ್ಟ ಹೊರಲಾರದಂತಾಗಿದೆ. ಹೆಂಡತಿ ಶತ್ರು ಆಗಿದ್ದಾಳೆ. ಕೈಯಲ್ಲಿ ಹಣ ಇರುವಾಗ ಮಾತ್ರ ಹೆಂಡತಿ, ಮಕ್ಕಳು ಎಲ್ಲಾ.
*
ಈ ದಿನ ಕುಡಿದದ್ದು ಹೆಚ್ಚಾಗಿದೆ. ಸರಾಯಿಯ ಬಗೆಗೆ ಗೆಳೆಯರೊಬ್ಬರು ಹೇಳಿದ್ದು ನೆನಪಾಯಿತು
ಈ ಮಧುವಿಗೆ
ನಿಜಕ್ಕೆಂದರೆ
ರುಚಿಯೇ ಇಲ್ಲ
ನೋವು
ಬೆರೆಸಿ ಕುಡಿದರೆ
ನೋವಿನದೇ ರುಚಿ
ನಲಿವು
ಬೆರೆಸಿ ಕುಡಿದರೆ
ನಲಿವಿನ ರುಚಿ
ಆದರೂ ...
ಹೆಚ್ಚು ರುಚಿಸಿದ್ದು
ನೋವಿನ ಜೊತೆಯಲ್ಲೇ
ಎಂಬುದು ನಿರ್ವಿವಾದ
(ಶಂಕರ ದೇವಾಡಿಗ)
ಯಾಕೋ ಅತ್ತು ಬಿಡುತ್ತೇನೆ. ಸರಾಯಿ ಮಿತ್ರರು ನನ್ನನ್ನು ಸಮಾಧಾನ ಮಾಡುತ್ತಾರೆ. ಮನೆಗೆ ಹೋಗುತ್ತೇನೆ.
ಮನೆಯಲ್ಲಿ ಹೆಂಡತಿ ಮತ್ತು ಮಗ ಇಬ್ಬರೇ. ಮನೆಯಲ್ಲಿ ಬಣ್ಣ ಬಣ್ಣದ ಕಾಗದ. ಕೆಲವು ಆಟದ ಸಾಮಾನುಗಳು. ನೆನಪಾಗುತ್ತದೆ – ನನ್ನ ಮಗನ ಬರ್ತ್ ಡೇ. ಮರೆತ್ತಿದ್ದೆ. ತೊದಲುತ್ತಾ, “ಹ್ಯಾಪ್ಪಿ ಬರ್ತ್ ಡೇ…”
ಮಗ ನಗುತ್ತಾನೆ. “ ಪಪ್ಪ ಹೀಗೆ…” ಅನ್ನುತ್ತಾ ಕುಳಿತಲ್ಲೇ,ತೂರಾಡುತ್ತಾನೆ ಮತ್ತು ಜೋರಾಗಿ ನಗುತ್ತಾನೆ. ಹೆಂಡತಿ, “ಸಾಕೇ…?” ಅನ್ನುತ್ತಾಳೆ. ಸಿಟ್ಟು ಬರುತ್ತದೆ. ನಡೆಯಲು ಆಗದೆ ಕುಳಿತ ಮಗನಿಗೆ ಹೊಡೆಯುತ್ತೇನೆ, ಒದೆಯುತ್ತೇನೆ.
***
No comments:
Post a Comment