Monday 23 December 2013

ಯಾವ ಹಾಡ ಹಾಡಲಿ?

ಜಿ.ಎಸ್ ಶಿವರುದ್ರಪ್ಪ 









ಯಾವ ಹಾಡ ಹಾಡಲಿ
ಯಾವ ಹಾಡಿನಿಂದ ನಿಮಗೆ
ನೆಮ್ಮದಿಯನು ನೀಡಲಿ ?

ಸುತ್ತ ಮುತ್ತ ಮನೆ ಮಠಗಳು
ಹೊತ್ತಿಕೊಂಡು ಉರಿಯುವಲ್ಲಿ
ಸೋತು ಮೂಕವಾದ ಬದುಕು
ನಿಟ್ಟುಸಿರೊಳು ತೇಲುವಲ್ಲಿ
ಯಾವ ಹಾಡ ಹಾಡಲಿ ?

ಬರಿ ಮಾತಿನ ಜಾಲದಲ್ಲಿ
ಶೋಷಣೆಗಳ ಶೂಲದಲ್ಲಿ
ವಂಚನೆಗಳ ಸಂಚಿನಲ್ಲಿ
ಹಸಿದ ಹೊಟ್ಟೆ ನರಳುವಲ್ಲಿ
ಯಾವ ಹಾಡ ಹಾಡಲಿ ?

ಉರಿವ ಕಣ್ಣ ಚಿತೆಗಳಲ್ಲಿ
ಇರುವ ಕನಸು ಸೀಯುವಲ್ಲಿ
ಎದೆ ಎದೆಗಳ ಜ್ವಾಲಾಮುಖಿ
ಹೊಗೆ ಬೆಂಕಿಯ ಕಾರುವಲ್ಲಿ
ಯಾವ ಹಾಡ ಹಾಡಲಿ ?

ಬೆಳಕಿಲ್ಲದ ದಾರಿಯಲ್ಲಿ
ಪಾಳುಗುಡಿಯ ಸಾಲಿನಲ್ಲಿ
ಬಿರುಗಾಳಿಯ ಬೀಡಿನಲ್ಲಿ
ಕುರುಡು ಪಯಣ ಸಾಗುವಲ್ಲಿ
ಯಾವ ಹಾಡ ಹಾಡಲಿ ?



***

1 comment:

  1. ಇವತ್ತು ಗಮನಿಸುತ್ತಾ ಇದ್ದೀನಿ. ಯಾರು ನೆನಪಿಸಿಕೊಳ್ಳದ ಕವಿತೆಯನ್ನು ನೀವು ಸ್ಮರಿಸಿಕೊಂಡಿದ್ದೀರಿ...ಇವತ್ತಿನ ದಿನಮಾನಗಳಲ್ಲಿ ನೆನಪಿಸಿಕೊಳ್ಳಬೇಕಾದ ಕವಿತೆ ಇದು.

    ReplyDelete