Saturday 28 December 2013

ಸಂಶೋಧನಾ ವ್ಯಾಸಂಗದ ಶವ ಪರೀಕ್ಷೆ ಮತ್ತು ಸಮೃದ್ಧ ಜನ ಬದುಕು.
ನೀಲಾ. ಕೆ ಗುಲಬರ್ಗಾ
 Neela K Gulbarga
ಸಂಶೋಧನೆಯೆನ್ನುವುದು ಕೇವಲ ಇತಿಹಾಸದ ಶೋಧವಲ್ಲ. ಸುಳ್ಳು ಇತಿಹಾಸವನ್ನು ಮುಂದು ಮಾಡಿಕೊಂಡು ವರ್ತಮಾನವನ್ನು ದುರುಪಯೋಗ ಮಾಡಿಕೊಳ್ಳುವವರೊಂದಿಗೆ ನಡೆಸುವ ಹೋರಾಟವಾಗಿದೆ
-ಡಾ. ಎಂ.ಎಂ. ಕಲಬುರ್ಗಿ

ಚಳಿಯು ಮೆಲ್ಲ-ಮೆಲ್ಲಗೆ ಹೆಜ್ಜೆಯೂರಿ ಹಣಿಕುತ್ತಿತ್ತು. ಗುಲಬರ್ಗಾದಿಂದ ಬೀದರಿಗೆ ಹೋಗುವ ಹಾದಿಯಲ್ಲಿ ಸಣ್ಣ ಹಳ್ಳಿಖೇಡ ಎಂಬ ದೊಡ್ಡ ಗ್ರಾಮದ ಮುಂದಿರುವ ಕೆರೆಯು ತಣ್ಣನೆ ಗಾಳಿ ಸೋಕಿಸಿತು. ಥಟ್ಟನೆ ಬೀದರೆಂಬ ಕೆಂಪುಧರಿ ನಾಡಿಗೆ ಕಾಲಿಟ್ಟ ಅನುಭವ. 50-60 ಕೀಲೋಮೀಟರ್ ಅಂತರದಲ್ಲಿಯೇ ಎಂಥಹ ವ್ಯತ್ಯಾಸ?! ಗುಲಬರ್ಗಾದಲ್ಲಿ ಕೆಂಡದಂಥ ಬಿಸಿಲು. ಬೀದರ ನೆಲದಲ್ಲಿ ನೆತ್ತಿ ತಂಪಾಗಿಸುವ ಹೂಬಿಸಿಲು. ನಾನು ಸಣ್ಣವಳಿದ್ದಾಗ ದಕ್ಷಿಣ ಕರ್ನಾಟಕದವರ ಮಾತು ಕೇಳಿ ಬೆರಗಾಗುತ್ತಿದ್ದರು ನಮ್ಮ ಜನ. ಅವರದೆಂಥ ಚೆಂದದ ಭಾಷೆಯೆಂದು, ಮನದಲ್ಲಿ ತಮ್ಮ ಭಾಷೆಯ ಬಗ್ಗೆ ಸಣ್ಣತನ ಅನುಭವಿಸುತ್ತಿದ್ದರು. ಈ ನೆಲದಲ್ಲಿಯೇ ಹುಟ್ಟಿದ ದಖ್ಖನಿಉರ್ದು ಮತ್ತು ಪಕ್ಕದ ಮರಾಠಿ ಭಾಷೆಗಳ ಸಖ್ಯದೊಂದಿಗೆ ಬರೋಬ್ಬರಿ ಜವಾರಿ ಭಾಷೆಯಾಗಿ ಅರಳಿದ್ದ ನಮ್ಮ ಭಾಷೆಗಿರುವ ತಾಖತ್ತು ಸುಮ್ಮನೇನಲ್ಲ. ಆದರೆ ಸುಮ್ಮ-ಸುಮ್ಮನೇ ನಮ್ಮ ಒಡಲಿನಿಂದ ಉರ್ದುವನ್ನು ಪರಕೀಯಗೊಳಿಸಿದ ಮತೀಯ ರಾಜಕಾರಣ ನೆನೆದು ಚಿಂತಿತಳಾದೆ. ಹೇಗೆ ದಕ್ಷಿಣ ಕರ್ನಾಟಕದಲ್ಲಿ ತುಳು ಕೊಂಕಣಿ ಬೆಳೆದು ಬಂದಿದೆಯೋ ಹಾಗೆ ನಮ್ಮ ಕನ್ನಡವು ಕರುಳ ಭಾಷೆಯಾಗಿಯೂ, ಉರ್ದು ಹೃದಯ ಭಾಷೆಯಾಗಿಯೂ ಅರಳಬೇಕಾಗಿತ್ತು. ಕುಸುರಿಯ ಲಿಪಿ, ಶ್ರೀಮಂತ ಸಾಹಿತ್ಯವನ್ನು ಒಡಲೊಳಗಿಟ್ಟುಕೊಂಡ ಉರ್ದು, ಗಜಲೆಂಬ ಸೂಫಿ ಕಾವ್ಯದ ಮೊಹಬ್ಬತ್ತಿನ ಲೋಕದೊಂದಿಗೆ ನಮ್ಮ ಬದುಕು-ಭಾವ ಬೆಸೆದದ್ದು ಹೇಗೆ ಮರೆಯುವುದು? ಆದರೀಗ ಅದು ಹೇಗೆ ಪರಕೀಯವಾಯಿತು? ಸಂಶೋಧನೆಯಾಗಬೇಕಾದ ಸಂಗತಿ. ರಾಜ್ಯದ ಮುಕುಟದಂತಿರುವ ಬೀದರಿನ ನೆಲದಲ್ಲಿ ಹೀಗೆ ಸಂಶೋಧನೆಯ ತೆಕ್ಕೆಗೆ ಬರಲೇಬೇಕಾದ ಸಂಗತಿಗಳು ಕಣ್ಣ ಮುಂದೆ ಸಾಲುಗಟ್ಟಿದವು. 
 

ಕಳೆದು ಹೋದದ್ದನ್ನು ಅಕ್ಷರ ಲೋಕಕ್ಕೆ ದಕ್ಕಿಸುವ ಹಪಾಹಪಿಗೆ ಮನಸು ವಾಲತೊಡಗಿದಂತೆಯೇ ಅಲ್ಲಮ ನೆನಪಾಗುವನು. ಅಕ್ಷರದಲ್ಲಭ್ಯಾಸವ ಮಾಡಿ ಬರೆವ ತೊಡೆವ ಪರಿ ಇನ್ನೆಂತೋ..ಆದಿ ನಿರಾಳ, ಮಧ್ಯ ನಿರಾಳ, ಊರ್ಧ್ವ ನಿರಾಳ ಗುಹೇಶ್ವರ. ಹೀಗೆ ಎಲ್ಲ ಹಮ್ಮುಗಳನ್ನು ಮೀರಿ, ಎಂಥ ಸಂಕಟದಲ್ಲಿಯೂ ಮಾನವೀಯ ಎಳೆಯ ಬಂಧ ಬಿಡಿಸಿಕೊಳ್ಳದಂಥ ಅದ್ಭುತ ಸಂಸ್ಕೃತಿ ಕಟ್ಟಿಕೊಟ್ಟ ಪರಂಪರೆ ನಮ್ಮದು. ಕೊಲುವೆನೆಂಬ ಭಾಷೆ ದೇವನದಾದರೆ ಗೆಲುವೆನೆಂಬ ಭಾಷೆ ಭಕ್ತನದು. ದೇವರಿಗೆ ಸವಾಲೆಸೆದು, ಸಮಾಜದ ಎಲ್ಲ ರೀತಿಯ ತಾರತಮ್ಯದ ವಿರುದ್ಧ ಪ್ರಜ್ಞಾಪೂರ್ವಕ ಸಂಘಟಿತ ಸಮರ ಸಾರಿದ ಧೀರ ನಡೆಯದು. ಹನ್ನೆರಡನೆಯ ಶತಮಾನದ ವಿಪ್ಲವದ ನಂತರ ಏನಾಯಿತು? ಮೌನ ಹೇರಿದ ಶಕ್ತಿಗಳ್ಯಾವು? ಅಥವ ಮೌನ ಮುರಿವ ಗಳಿಗೆಗಳೆಲ್ಲ ಮರದೊಳಗಣ ಕಿಚ್ಚಂತೆ ಪ್ರವಹಿಸುತ್ತಿದ್ದವೇ? 

ಬೀದರ ಜಿಲ್ಲೆಯು ಹೇಗೆ ವಚನಕಾರರ ನೆಲವೋ ಹಾಗೆ ಬುದ್ದನ ನೆಲವೂ. ಸೂಫಿ-ಸಂತರು, ತತ್ವಪದಕಾರರ ಗಮಲು, ನಾಥ ಪರಂಪರೆಯ ತೊಟ್ಟಿಲು, ಅವಧೂತರ ಆಡುಂಬೊಲ ಹೀಗೆ ಬಹುಮುಖಿ ನೆಲೆಯ ಪರಂಪರೆಯು ವೈಶಿಷ್ಟ್ಯವಾಗಿ ಮತ್ತು ಘನವಾಗಿ ನಮ್ಮ ಬದುಕಿಗಂಟಿಕೊಂಡು ಬಂದಿದೆ. ಪ್ರಭುತ್ವದ ತಿಕ್ಕಾಟವಾಗಿದ್ದ ರಜಾಕಾರ ಚಳುವಳಿಯ ಹೊತ್ತಿನಲ್ಲಿ ಸಾಮಾನ್ಯ ಹಿಂದೂ ಮುಸ್ಲಿಂರಿಬ್ಬರೂ ಪರಸ್ಪರ ರಕ್ಷಿಸಿಕೊಂಡು ಅದಮ್ಯ ಮಾನವೀಯತೆ ಮೆರೆದ ನಾಡಿದು. ಹಿರಿಯ ತಲೆಮಾರಿನವರಿಗೆ ಮಾತಾಡಿಸಿದಾಗ ದೊರಕುವ ಘಟನಾವಳಿಗಳಿಗೆ ಕಥೆಗಳ ಎರಕ ಹೊಯ್ದರೆ ಎಷ್ಟೊಂದು 'ಸಾದತ್ ಹಸನ್ ಮಂಟೋ' ಇಲ್ಲಿ ಸೃಷ್ಟಿಯಾಗುವರು. ಮತೀಯ ದ್ವೇಷದ ಬೀಜಗಳನ್ನು ಬಿತ್ತಲು ಹೊರಟವರಿಗೆ ಇಲ್ಲಿ ನಿರಾಶೆಯೇ ಕಾದಿದೆ. ಹೀಗೆಂದು ಸಾರಿ ಹೇಳಲು ಅಷ್ಟೂರಿನ ಅಲ್ಲಮಪ್ರಭು ದರ್ಗಾ, ಸರ್ವಮತಾಚಾರ್ಯ ಕೇಂದ್ರ ಮಾಣಿಕಪ್ರಭು, ರಾಜಾಬಾಗ್ಸವಾರ್ ಸಿದ್ದವಾಗಿಯೇ ನಿಂತಿರುವರು. ಈ ಪರಂಪರೆಯ ಎಳೆಯು ದೂರದ ಮೈಸೂರಿನ ಮಲೆಮಹಾದೇಶ್ವರ ಮಂಟೇಸ್ವಾಮಿ ಪರಂಪರೆಯೊಂದಿಗೆ ಹೆಣೆದುಕೊಳ್ಳುವುದು. ಇಲ್ಲಿಯ ಹವಾಮಾನ, ಭಾಷೆ, ಸಾಂಸ್ಕೃತಿಕ ಭಾವೈಕ್ಯ ಪರಂಪರೆ, ಪ್ರಭುತ್ವ ಮತ್ತು ಉಳ್ಳವರ ಒತ್ತಡದಲ್ಲಿ ಒದ್ದಾಡಿದ ಮೌನದ ಶತಮಾನಗಳು, ಬೈಗಳುಗಳೊಂದಿಗೆ ಬೆರೆತು ಬರುವ ಅದಮ್ಯ ಪ್ರೀತಿಯ ಧಾರೆ, ಯಾವ ಪ್ರಗತಿ ಮಾಡಿಲ್ಲವೆಂದರೂ ಬಹುದೊಡ್ಡ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ನಿಜಾಮನ ಸಂದರ್ಭದ ಕೆರೆ-ಬಾವಿಗಳು ಹೀಗೆ ಎಲ್ಲವೂ ಸಂಶೋಧನೆಗೆ ಒದಗುವಂಥ ಬಹುಮುಖ್ಯ ಸಂಗತಿಗಳು. ದಕ್ಷಿಣ ಕರ್ನಾಟಕದಲ್ಲಿ ನವೋದಯ ಸಾಹಿತ್ಯ ರಚನೆಯಾಗುತ್ತಿದ್ದರೆ, ಉತ್ತರ ಕರ್ನಾಟಕವು ಸಾಹಿತ್ಯವೆಂದರೇನೆಂದು ಗೊತ್ತಿಲ್ಲದ ನಾಡಾಗಿತ್ತೆಂಬ ಅವಾಸ್ತವಿಕ ಸಂಗತಿಯೊಂದು ಪ್ರಚಲಿತದಲ್ಲಿದೆ. ಆದ್ದರಿಂದಲೇ ಲಂಕೇಶರು ಮತ್ತು ಬುದ್ದಣ್ಣ ಹಿಂಗಮಿರೆಯವರು ಸಂಪಾದಿಸಲ್ಪಟ್ಟ ಪ್ರಾತಿನಿಧಿಕ ಕವನ ಸಂಕಲನಗಳಲ್ಲಿ ಹೈದರಾಬಾದ ಕರ್ನಾಕದ ಒಬ್ಬರೇ ಒಬ್ಬ ಕವಿಯ ಕಾವ್ಯ ಸೇರಿಸಿರಲಿಲ್ಲ. ಶಾಂತರಸರು ಈ ತಪ್ಪಭಿಪ್ರಾಯದ(ತಾರತಮ್ಯದ) ವಿರುದ್ಧವೇ ದನಿಯೆತ್ತಿ ಪ್ರತಿಯಾಗಿ (1972ರಲ್ಲಿ)'ಬೆನ್ನ ಹಿಂದಿನ ಬೆಳಕು' ಕವನ ಸಂಕಲನವೊಂದನ್ನು ಸಂಪಾದಿಸಿದ್ದು ಇತಿಹಾಸ. ಆದರೆ ಅಕ್ಷರ ಲೋಕಕ್ಕೆ ದಕ್ಕಿದ ಸಾಹಿತ್ಯವನ್ನು ಮಾತ್ರ ಪರಿಗಣಿಸುವ ಪರಿಪಾಠ ಎಷ್ಟು ಸರಿ? ಬೀದರ ಜಿಲ್ಲೆಯಲ್ಲಿ 17-18-19ನೇ ಶತಮಾನದಲ್ಲಿಯೇ ಭಜನೆ, ಭುಲಾಯಿ, ಗೀಗೀಪದ, ತತ್ಪಪದ, ಮೊಹರಂಪದ, ಆಣಿಪೀಣಿ, ಜೋಕುಮಾರ-ಜೋಗತಿ-ಗೌರಿ-ಸೀಗಿ-ಹಂತಿ ಮತ್ತು ಚೌಡಕಿ ಪದಗಳು, ಚಾಜದ ಪದಗಳು, ದಪ್ಪಿನಾಟ, ದೊಡ್ಡಾಟ-ಸಣ್ಣಾಟಗಳು ನಿರಂತರ ರಚನೆಯಾಗುತ್ತಿದ್ದವು. ಅವಜ್ಞೆಗೀಡಾದ ಈ ಸಾಹಿತ್ಯವನ್ನು ಪರಿಗಣಿಸದೇ ಕಾಲಗರ್ಭದಲ್ಲಿ ಹೂತು ಹೋದದ್ದೇ ಜಾಸ್ತಿ. ದಕ್ಕಿದ್ದು ಬಹಳ ಕಡಿಮೆ. ತತ್ಪರಿಣಾಮವೆಂದರೆ ನವೋದಯ ಪ್ರಗತಿಶೀಲ ಸಂದರ್ಭದಲ್ಲಿ ಹೈದರಾಬಾದ ಕರ್ನಾಟಕದ ಕೊಡುಗೆ ಅತ್ಯಲ್ಪ ಎಂದು ಭಾವಿಸುವಂತಾಯಿತು. ಆದರೆ ಹೀಗೆ ಹೂತು ಹೋಗಿರಬಹುದಾದ ಸಾಹಿತ್ಯವನ್ನು ಹೆಕ್ಕಿ ತೆಗೆವ ಮೂಲಕ ಕನ್ನಡ ಸಾಹಿತ್ಯ ಚರಿತ್ರೆಯನ್ನು ಮುರಿದು ಕಟ್ಟಬೇಕಿದೆ. ಈ ನಾಡಿನೊಡಲಲ್ಲಿ ಹುದುಗಿರುವ ರೋಮಾಂಚನಕಾರಿ ವಿದ್ಯಮಾನಗಳನ್ನು, ಮುಚ್ಚಿ ಹೋದ ಚರಿತ್ರೆಯನ್ನು ಬಗೆದು ಬಯಲಿಗಿಡಬೇಕಾದ ಹೊಣೆಗಾರಿಕೆ ಅಕ್ಷರ ದಕ್ಕಿಸಿಕೊಂಡ ಯುವಪೀಳಿಗೆಯದ್ದು ಹೌದಲ್ಲವೇ? ಏಕಸಂಸ್ಕೃತಿಯ ಹೇರುವಿಕೆಯಿಂದ ತಲ್ಲಣಿಸುತ್ತಿರುವ ಜನಬದುಕಿಗೆ ಬಹುಸಂಸ್ಕೃತಿಯ ನೆಲೆಗಳಲ್ಲಡಗಿರುವ ಕಲೆ-ಸಾಹಿತ್ಯ-ಸಂಸ್ಕೃತಿಯನ್ನು ಸಂಶೋಧಿಸಬೇಕಾದ ಜವಾಬ್ದಾರಿ ಅರಿಯಬೇಕಲ್ಲವೇ? 
 
ಆದರೆ ಇತ್ತೀಚೆಗಿನ ಘಾಸಿಗೊಳಿಸುವಂಥ ಪ್ರಕರಣಗಳು ಚಿಂತೆಗೀಡಾಗಿಸುತ್ತಿವೆ. ಸಂಶೋಧನಾ ವಿದ್ಯಾರ್ಥಿಗಳಾದರೋ ಸುಲಭದಲ್ಲಿ ಡಿಗ್ರಿ ಪಡೆಯಲು ಬೇಕಾದಂಥ ವಿಷಯ ಹುಡುಕುವರು. ಕ್ಷೇತ್ರಕಾರ್ಯದೊಂದಿಗೆ ಸತ್ಯವನ್ನು ಹುಡುಕಾಡಿ ಅನಾವರಣಗೊಳಿಸಬೇಕಾದ ಮುಖ್ಯ ಹೊಣೆಗಾರಿಕೆಯು ಇಲ್ಲವಾಗುತ್ತಿದೆ. ಎಷ್ಟೊ ಸಾರಿ ಕಟ್-ಪೇಸ್ಟ್ನಲ್ಲಿ ಸಂಶೋಧನೆಯು ವ್ಯಸ್ತವಾಗುತ್ತಿದೆ. ವಿಷಯಕ್ಕೆ ಅಗತ್ಯವಿರುವ ಓದು ಮತ್ತು ಕ್ಷೇತ್ರಕಾರ್ಯದ ವ್ಯಾಪ್ತಿಗೆ ಒಗ್ಗಿಸಿಕೊಳ್ಳಲು ಸಿದ್ದವಿಲ್ಲದ ಮನಸು ವಿದ್ಯಾರ್ಥಿಗಳಲ್ಲಿ ಮೊಳೆಯುತ್ತಿದೆ.

ಇದೇ ಹೊತ್ತಿನಲ್ಲಿ ಕನ್ನಡವನ್ನು, ಕನ್ನಡದ ಜನಬದುಕನ್ನು ಅರಿತು ನೈಜ ಅಭಿವೃದ್ದಿಯತ್ತ ಸಮಾಜವನ್ನು ಕೊಂಡೊಯ್ಯಲು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕಾದ ಅನೇಕ ವಿಧ್ವಾಂಸರುಗಳು ಪ್ರಜ್ಞಾವಂತರೆಲ್ಲ ತಲೆತಗ್ಗಿಸುವಂಥ ವಿದ್ಯಮಾನಗಳಲ್ಲಿ ತೊಡಗಿರುವರು. ಈಚೆಗೆ ನಡೆದ ಗುಲಬರ್ಗಾ ವಿವಿಯಲ್ಲಿನ (ಹಿಂದೆ ಮೈಸೂರು ವಿವಿಯಲ್ಲಿನದ್ದೂ)ಲೈಂಗಿಕ ಹಗರಣವು ಇಂಥವುಗಳ ನಾಚಿಗ್ಗೇಡಿ ಝಲಕ್ಕೊಂದು ಬಯಲಿಗೆ ಬಿದ್ದಿದೆ. ಮುಚ್ಚಿ ಹೋದ ಪ್ರಕರಣಗಳೆಷ್ಟೊ...! ವಿಪರೀತ ಭ್ರಷ್ಟಾಚಾರವು ಮಾರ್ಗದರ್ಶಕರಿಗೆ ಶೋಭೆ ತರುವುದೆ? ಸಂಶೋಧನಾ ಪ್ರಬಂಧವು ಪೂರ್ಣಗೊಂಡ ಮೇಲೆ ಮಾರ್ಗದರ್ಶಕರು ಪ್ರಬಂಧವನ್ನು ದೃಢೀಕರಿಸಬೇಕು. ಇದಕ್ಕಾಗಿಯೂ ಹಣ ಕೇಳು(ಕೀಳು)ವ ಪ್ರವೃತ್ತಿಗಳು ಅಕ್ಷಮ್ಯ. ವಿದ್ಯಾರ್ಥಿಗಳಿಂದ ಮನೆಗೆಲಸ ಮಾಡಿಸಿಕೊಳ್ಳುವುದು, ಸ್ವಾರ್ಥಕ್ಕಾಗಿ ವಿದ್ಯಾರ್ಥಿಗಳ ದುರ್ಬಳಕೆ ಮಾಡುವುದು ಸಾಮಾನ್ಯವಾಗಿದೆ. ಇನ್ನು ಜಾತಿಯ ಲಾಬಿಯಂತೂ ಘನಚಕ್ರದಂತೆ ಸುತ್ತುವರಿಯುತ್ತಿದೆ. ಮಾರ್ಗದರ್ಶಕರು ತಮ್ಮದೇ ಜಾತಿಯ ವಿದ್ಯಾರ್ಥಿಗಳನ್ನು ಆರಿಸಿಕೊಳ್ಳುವುದು, ಸ್ವಜಾತಿಯಲ್ಲದವರೊಂದಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವುದು ರೋಗದಂತೆ ಹಬ್ಬುತ್ತಿದೆ. ತುಮಕೂರು ವಿಶ್ವಿವಿದ್ಯಾಲಯದಲ್ಲಿ ಎಂಟೇ ತಿಂಗಳಲ್ಲಿ ಆರು ಮಂದಿ ಸ್ವಜಾತಿಯವರಿಗೆ ಪಿಹೆಚ್ಡಿ ಪ್ರಧಾನ ಮಾಡಲಾಗಿದೆಯಂತೆ. ಈ ಪ್ರವೃತ್ತಿಗಳು ಅನಾರೋಗ್ಯಕರ ಮನಸ್ಥಿತಿ ರೂಪಿಸುತ್ತಿರುವ ದ್ರೋಹದ ಕೃತ್ಯಗಳಲ್ಲವೇ? 

ಇತ್ತೀಚೆಗಿನ ಸಂಶೋಧನಾ ಪ್ರಬಂಧಗಳ ಕುರಿತಂತೆ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿದೆ. ಸಂಶೋಧನಾ ವ್ಯಾಸಂಗಗಳ ಗುಣಮಟ್ಟ ಕುಸಿಯುತ್ತಿರುವುದಕ್ಕೆ ಮತ್ತು ಸಂಶೋಧನಾ ವಲಯಗಳಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯಗಳ ಕುರಿತಂತೆ ವೆಗ್ಗಳವಾಗಿ ಚರ್ಚೆ ನಡೆಯುತ್ತಿವೆ. ದುರಂತವೆಂದರೆ ಈ ಪ್ರಯತ್ನಗಳಾವುವು ಸಂಶೋಧನಾ ಕ್ಷೇತ್ರವನ್ನು ಶುದ್ಧೀಕರಿಸುವುದಕ್ಕೆ ಒದಗಿ ಬರುತ್ತಿಲ್ಲ. ಆಶ್ಚರ್ಯದ ಸಂಗತಿಯೆಂದರೆ ಸಂಶೋಧನೆಯಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿ ಮತ್ತು ಅವರನ್ನು ಕೈ ಹಿಡಿದು ನಡೆಸಬೇಕಿರುವ ವಿಧ್ವಾಂಸರು ಇಬ್ಬರಿಂದಲೂ ಈ ವಲಯವನ್ನು ಭ್ರಷ್ಟಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಆದ್ದರಿಂದ ಈ ಚರ್ಚೆಗಳು ಜನಸಮೂಹದ ಕಾಳಜಿಗಳಾಗಿ ಉಳಿಯುತ್ತಿವೆಯೇ ಹೊರತು ಅದನ್ನು ಭ್ರಷ್ಟಗೊಳಿಸುತ್ತಿರುವ ಆತ್ಮವಿಮರ್ಶೆಯಾಗಿ ನಾಟುತ್ತಲೇ ಇಲ್ಲ. ಒಂದೆಡೆ ಆಧುನಿಕೋತ್ತರವಾದದ ಅರಾಜಕತೆ, ಇನ್ನೊಂದೆಡೆ ವ್ಯಕ್ತಿವಾದ, ಮತ್ತೊಂದೆಡೆ ಜಾಗತೀಕರಣದ ಮಾರುಕಟ್ಟೆ ವ್ಯವಸ್ಥೆಯ ಹಣಗಳಿಕೆಯ ಮಾರ್ಗೋಪಾಯಗಳು ಎಲ್ಲವೂ ಕಲಸುಮೇಲೋಗರವಾಗುತ್ತಿವೆ. ಪರಿಣಾಮವೆಂದರೆ ನಾಡಿನ ಸಮಗ್ರ ಅಭಿವೃದ್ಧಿ ಮತ್ತು ಕೊನೆಯ ಮಾನವರ ನೆಮ್ಮದಿಗೆ ವೇದಿಕೆಗಳಾಗಬೇಕಿದ್ದ ಸಂಶೋಧನೆಯೆಂಬ ವಿದ್ಯಮಾನವು ತನ್ನ ಮೂಲಭೂತ ಆಶೆ ಮತ್ತು ಧೋರಣೆ ಕಳೆದುಕೊಂಡು ಮಾರುಕಟ್ಟೆಯ ಸರಕಾಗಿ ಬಿಟ್ಟಿದೆ. ಇದರೊಡನೆ ಅಭಿವೃದ್ಧಿ ಹೊಂದಿದ ದೇಶಗಳ ಒಡೆದು ಆಳುವ ನೀತಿಗೆ ಇವೆಲ್ಲವೂ ಕೂಡ ಅನುಕೂಲಕರವಾಗುತ್ತಿವೆ. ಹೀಗಾಗಿಯೇ ಬಹಳಷ್ಟು ಸಂಶೋಧನಾ ಫಲಿತಗಳು ಉಳ್ಳವರಿಗೆ ಪೂರಕವಾಗಿ ಪರ್ಯಾವಸಾನವಾಗುತ್ತಿವೆ. ಇಲ್ಲವೆ ಶುದ್ಧ 'ಭೂಸಾ' ಕೃತಿಗಳಾಗಿ ಕಾಲದ ಕಸದ ಬುಟ್ಟಿಗೆ ಸೇರುತ್ತಿವೆ. ದೂರದೃಷ್ಠಿಯ ದುಷ್ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವ ಕ್ಷಮತೆ ವಿಶ್ವವಿದ್ಯಾಲಯದ ವಿಧ್ವಾಂಸರಿಗೆ ಮತ್ತು ಪದವಿಬಾಕರಿಗೆ ಬರುವುದೇ?
 
***

No comments:

Post a Comment