Monday 9 December 2013


ಸಾಮಾಜಿಕ ಮಾಧ್ಯಮವೋ - ಸಮೂಹ ಸನ್ನಿಯೋ?

 

ಬಿ. ರಾಜೇಶ್

 

 Rajesh Basavanna


ಈ ಹಿಂದೆ ಅಂದರೆ ಸುಮಾರು ಹದಿನೈದು ವರುಶಗಳ ಹಿಂದೆ ಸಾಮಾನ್ಯವಾಗಿ 
ಮದುವೆಗೆ ಹೆಣ್ಣು ಅಥವ ಗಂಡು ತೋರಿಸಿದಾಗ ಅವರ ಗುಣಗಳ ಬಗ್ಗೆ ತಿಳಿಯಲು ಅವರಿಗೆ ಸಂಬಂದಿಗಳ ಅಥವ ಅವರ ಸ್ನೇಹಿತರಲ್ಲಿ ವಿಚಾರಿಸಿ ಅಥವ ಅದೇ ಊರಿನ ಇತರರನ್ನು ಕೇಳಿತಿಳಿದು ಕೊಳ್ಳುವುದು ಸಹಜ ಸಾಮಾನ್ಯವಾಗಿತ್ತು. ಸುದ್ದಿಗಳಿಗಾಗಿ ದಿನಪತ್ರಿಕೆಗಳ ಮರೆ ಹೋಗಬೇಕಾಗಿತ್ತು ಅಷ್ಟೆ ಅಲ್ಲ ಎಲ್ಲಾದರು ಖಾಸಗಿ ಕೆಲಸಕ್ಕೆ ಸಿಗಬೇಕಾದರೆ ಯಾರದ್ದಾದ್ರು ಶೀವಾರಸ್ಸು ಅಥವ ಪ್ರಭಾವಿಗಳ ಸಂಪರ್ಕವಿರಬೇಕಿತ್ತು. ಆದರೆ ಇಂದು ಯುವಜನಾಂಗ ಇವೆಲ್ಲವನ್ನು ಯಾವುದೇ ಅಡೆತಡೆಗಳಿಲ್ಲದೇ ತಮಗೆ ತಾವೆ ಪಡೆದುಕೊಳ್ಳಲು ಸಾಧ್ಯಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಈ ಸಮೂಹ ಮಾದ್ಯಮಗಳು. ಇಂದಿನ ಯುವಜನಾಂಗ ತಮ್ಮ ತಮ್ಮ ಸಂಗಾತಿಗಳ ಬಗ್ಗೆ ತಿಳಿದುಕೊಳ್ಳಲು ಫೇಸ್ಬುಕ್(facebook) ಮೋರೆಹೊಗುತಿದ್ದಾರೆ. ಫೇಕ್ ಅಕೌಂಟ್ಗಳ ಮೂಲಕ ತಮ್ಮ ಸಂಗಾತಿಯ ಚಾರಿತ್ರವನ್ನು ಪರೀಕ್ಷಿಸುತ್ತಾರೆ. ಅಷ್ಟೇ ಅಲ್ಲ ಇಂದಿನ ಖಸಾಗಿ ಕಂಪನಿಗಳು ಕೂಡ ತಾಮ್ಮ ಸಿಬ್ಬಂದಿವರ್ಗದವರ ಚಲನವಲನಗಳನ್ನು ಅವರುಗಳ ಫೇಸ್ಬುಕ್ ಅಕೌಟ್ಗಳ ಸಹಾಯದಿಂದ ಗಮನಿಸುತ್ತಾರೆ ಅಷ್ಟೆ ಅಲ್ಲ ಹೊಸದಾಗಿ ಕೆಲಸಕ್ಕೆ ಸೇರಬಯಸುವ ಅಭ್ಯರ್ಥಿಗಳ ವಿವರಗಳನ್ನು ಕೆದಕಿ ಅವರ ಗುಣಗಳನ್ನು ಅಳೆಯುತಿದ್ದಾರೆ. 

ಕೇವಲ ಗೆಳೆಯರೊಂದಿಗಿನ ಫೋಟೋ ಹಾಗೂ ಇತರ ಮಾಹಿತಿಗಳನ್ನು ಹಂಚಿಕೊಳ್ಳಲು ಹುಟ್ಟುಕೊಂಡ ಈ ತಾಣಗಳೇ ಕ್ರಮೇಣ ಸಾಮಾಜಿಕ ತಣಗಳಾಗಿ ಒಂದು ಉದ್ಯಮವಾಗಿ ಇಂದು ಇನ್ನಿತರ ಸಾಂಪ್ರದಾಯಿಕ ಮಾದ್ಯಮಗಳಾದ ಪತ್ರಕೊಂದ್ಯಮ ಹಾಗು ಟೆಲಿವಿಷನ್ ಮಾದ್ಯಮವನ್ನು ಮೀರಿ ನಿಂತಿದೆ. ಒಂದು ಕ್ಷಣದಲ್ಲಿ ನೋರಾರು ಕೋಟಿ ಜನರಿಗೆ ಮುಟ್ಟಲು ಸದ್ಯವಿರುವ ಈ ಮಾದ್ಯಮ ಕೇವಲ ನಗರಗಳಲ್ಲಷ್ಟೇ ಅಲ್ಲ ಇಂದು ಹಳ್ಳಿಗಳಲ್ಲಿಯೂ ತನ್ನ ಬೇರನ್ನು ಭದ್ರಪಡಿಸಿಕೊಳ್ಳುತ್ತಿದೆ. 

 Facebook I Want My Friends Back

ಒಸಮ ಬಿನ್ ಲಾಡೇನ್ ಅನ್ನು ಹಿಡಿದ ಸುದ್ದಿ ಮೋದಲಿಗೆ ಹೊರಬಂದದ್ದು ಟ್ವಿಟರ್(twitter) ಮೂಲಕ, ಅಮೇರಿಕಾದ ಪಡೆಗಳು ಪಾಕಿಸ್ತಾನದಲ್ಲಿ ಓಸಮಾ ಮೇಲೆ ದಾಳಿ ಮಾಡಿದಾಗ ಹತ್ತಿರದಲ್ಲೆ ಇದ್ದ ಒಬ್ಬ ಇದನ್ನು ತನ್ನ ಟ್ವಿಟರ್ ಅಕೌಂಟ್ ಮುಖಾಂತರ ಸಾಮಾಜಿಕ ತಾಣಗಳಿಗೆ ಹರಿದುಬಿಟ್ಟ ಅಷ್ಟೆ ಅಲ್ಲ ಅದರ ನಿರಂತರ ಮಾಹಿತಿಯನ್ನು ಹರಿದುಬಿಡುತ್ತಲೇ ಇದ್ದ. ನಂತರ ಮುಂಜಾನೆ ಅಮೇರಿಕಾದ ಅಧ್ಯಕ್ಷ ಒಬಾಮ ಇಡೀ ಜಗತ್ತಿಗೆ ಒಸಮ ಬನ್ ಲಾಡೆಲ್ ಮೇಲಿ ದಾಳಿಯನ್ನು ತಿಳಿಸಿದ್ದ. ಆದರೆ ಅದಕ್ಕೆ ಮುಂಚೆಯೇ ಈ ಸುದ್ದಿ ಸಾಮಾಜಿಕ ತಾಣಗಳಲ್ಲಿ ಪ್ರಸಾರವಾಗಿತ್ತು. 

ಇನ್ನು ಲಿಂಕ್ಡ್ಇನ್(Linked Inn) ಎಂಬ ಸಮಾಜಿಕ ತಾಣ ವೃತ್ತಿನಿರತರ ಸಾಮಾಜಿಕ ಮಾಧ್ಯಮ ಇಲ್ಲಿ ಅವರ ಕೆಲಸಕ್ಕೆ ಬೇಕಾದ ವಿದ್ಯಾಬ್ಯಾಸ, ಅನುಭವದ ಬಗ್ಗೆಯ ಸಂಪೂರ್ಣ ಮಾಹಿತಿ, ಉನ್ನತ ಹುದ್ದೆಯಲ್ಲಿರುವವರ ಮಾಹಿತಿ ಹಾಗು ಅವರೊಂದಿಗೆ ಸಂಪರ್ಕ ಸಾಧಿಸಲು ಅನುಕೂಲ ಕಲ್ಪಿಸಿಕೊಡುತ್ತದೆ. ಈ ಮಾದ್ಯಮದ ಮೂಲಕ ಪ್ರಭಾವಿಗಳ ಸಂಪರ್ಕ ಸಾಧಿಸಿ ಕೆಲಸ ಗಿಟ್ಟಿಸಿಕೊಳ್ಳಬಹುದಾಗಿದೆ. ಹೀಗೆ ಅಂತರ್ಜಾಲದಲ್ಲಿ ಗೂಗಲ್ ಪ್ಲಸ್, ಯಾಹೂ ಹೀಗೆ ಹಲವಾರು ರೀತಿಯ ಸಮೂಹ ಮಾಧ್ಯಮಗಳು ಅಂತಜರ್ಜಾಲದಲ್ಲಿ ಸಿಗುತ್ತವೆ. ಅಷ್ಟೇ ಅಲ್ಲ ಈ ಎಲ್ಲ ಸಮೂಹ ಮಾದ್ಯಮಗಳ ಆಪ್ ಎಲ್ಲಾ ರೀತಿಯ ಮೋಬೈಲ್ ಗಳಲ್ಲು ಲಭ್ಯವಿದ್ದು, ಅತ್ಯಂತ ವೇಗವಾಗಿ ಯುವಕರನ್ನು ವಶಮಾಡಿಕೊಳ್ಳುತ್ತಿದೆ. ಅಷ್ಟೇ ಏಕೆ ಇಂದು ಕೇವಲ ರೂ.4000 ಕ್ಕೆ ನಿಮಗೆ ಒಂದು ಅಂಡ್ಯ್ರಾಡ್ ಮೊಬೈಲ್ ಸಿಗಲಿದೆ. ಇತ್ತೀಚೆಗೆ ಬಂದ ವರದಿಗಳ ಪ್ರಕಾರ ಯುವಜನತೆ ಸಮೂಹ ಮಾಧ್ಯಮಗಳನ್ನು ಬಳಸಲೆಂದೆ ಅಂಡ್ಯ್ರಾಡ್ ಮೊಬೈಲ್ ಹಾಗೂ ಟ್ಯಬ್ಲಟ್ ಗಳನ್ನು ಖರೀದಿಸುತ್ತಿದ್ದಾರಂತೆ. ಇಂದು ಎಲ್ಲ ಖಾಸಗಿ ಕಂಪನಿಗಳು ಹಾಗು ಸರಕಾರಿ ಸಂಸ್ಥೆಗಳೂ ಕೂಡ ಈ ಎಲ್ಲ ಸಮೂಹ ಮಾಧ್ಯಮಗಳಲ್ಲಿ ತಮ್ಮ ಅಕೌಂಟ್ ಇಟ್ಟುಕೊಂಡು ಆ ಮೂಲಕವೂ ಕೂಡ ಯುವಜನರನ್ನು ತಲುಪಲು ಪ್ರಯತ್ನಿಸುತ್ತಿವೆ. ಒಟ್ಟಿನಲ್ಲಿ ಹೇಳಬೇಕೆಂದರೆ ಇಂದು ಸಮೂಹ ಮಾಧ್ಯಮಗಳಲ್ಲಿ ಚರ್ಚೆಯಾಗದ ವಿಷಯಗಳೇ ಇಲ್ಲ. 
 
ಈ ಮೊದಲು ಕೆಲವೇ ಕೆಲವು ಸಾಫ್ಟ್ ವೇರ್ ಉದ್ಯಮದ ಮಂದಿಗಳು ಮಾತ್ರ ಸಮೂಹ ಮಾಧ್ಯಮಗಳಲ್ಲಿ ತಮ್ಮ ಅಕೌಂಟ್ಗಳನ್ನು ಹೊಂದಿದ್ದರು. ಯಾಕೆಂದರೆ ಎಲ್ಲರಿಗೂ ಅಂತರ್ಜಾಲದ ಸೌಲಭ್ಯವಿರಲಿಲ್ಲ. ಆದರೆ ಇಂದಿನ 3ಜಿ ಮತ್ತು 4ಜಿ ತಂತ್ರಜ್ಞಾನ ಮತ್ತು ಸ್ಮಾರ್ಟ್ ಫೋನ್ ಕ್ರಾಂತಿ ಎಲ್ಲಾ ವಿಭಾಗದ ಜನರನ್ನು ಒಳಗೊಂಡಿದೆ, ಅಷ್ಟೇ ಅಲ್ಲ ಅತ್ಯಂತ ವೇಗವಾಗಿ ವಿದ್ಯಾರ್ಥಿ ಸಮೂಹ ಈ ಸಮಾಹ ಮಾಧ್ಯಮಗಳಲ್ಲಿ ಸೇರುತಿದ್ದಾರೆ. ಇದಕ್ಕೆ ಸಾಮಾಜಿಕ ತಾಣಗಳಿಗೆ ಸೇರಲು ಯಾವುದೇ ಜಾತಿ, ಧರ್ಮಗಳ ಮಾನದಂಡವಿಲ್ಲ. ಓದು ಬರಹ ತಿಳಿಯದವರು ಕೂಡ ಇದನ್ನು ಬಳಸಬಹುದಾಗಿದೆ. ಇದೂ ಕೂಡ ಬಳಕೆದಾರ ಸಂಸ್ಕೃತಿಯ ಮತ್ತೊಂದು ಆಯಾಮ. ಇಲ್ಲಿ ಅದನ್ನ ಎಷ್ಟು ಹೆಚ್ಚು ಜನ ಬಳಸುತ್ತಾರೋ ಅಷ್ಟು ಹಣ ಈ ಸಾಮಾಜಿಕ ತಾಣಗಳ ಮಾಲೀಕರಿಗೆ ಸಲ್ಲುತ್ತದೆ. ಇದನ್ನರಿತೆ ಇಂದು ಜಾಹಿರಾತುದಾರರು ತಮ್ಮ ಕಂಪನಿಯ ಜಾಹೀರಾತುಗಳನ್ನು ಈ ಸಾಮಾಜಿಕ ತಾಣಗಳಲ್ಲಿ ಹರಿದುಬಿಡುತಿದ್ದಾರೆ. ವೃತ್ತ ಪತ್ರಿಕೆಗಳಲ್ಲಿ ಕಾಣಸಿಗದ ಎಷ್ಟೋ ಬಳಕೆಯ ವಸ್ತುಗಳ ಜಾಹಿರಾತುಗಳನ್ನು ಇಂದು ಯುವಜನತೆ ತಮ್ಮ ಮೊಬೈಲ್ ಮೂಲಕ ಖರೀದಿಸುತಿದ್ದಾರೆ. ಅಷ್ಟೇ ಅಲ್ಲ ಕಳೆದ ವರ್ಷದ ಫೇಸ್ಮುಕ್ ಕಂಪನಿ ಜಾಹೀರಾತಿನಿಂದ ಬಂದ ಆದಾಯ ಅಮೇರಿಕಾದ ಎಲ್ಲ ಪ್ರಿಂಟ್ ಮೀಡಿಯಾ ಜಾಹೀರಾತು ಆದಯಕ್ಕಿಂತ ಹೆಚ್ಚಾಗಿತ್ತು. ಇಂದು ಸಮೂಹ ಮಾಧ್ಯಮದ ಮೂಲಕ ಕಂಪನಿಗಳು ಹಾಗೂ ಜಾಹಿರಾತಿನ ಮೂಲಕ ಸಾಮಾಜಿಕ ತಾಣಗಳು ಸಾವಿರಾರು ಕೋಟಿ ಹಣ ಗಳಿಸುತಿದ್ದಾವೆ. ಇಂದು ಪ್ರಚಾರಕ್ಕೂ ಸಮೂಹ ಮಾಧ್ಯಮಗಳಿಗೆ ಮೊದಲ ಪ್ರಶಾಸ್ತ್ಯ ನೀಡಲಾಗುತ್ತಿದೆ. ಇಂದು ಬಹುತೇಕ ಎಲ್ಲ ಭಾಷೆಗಳ ಸಿನೆಮಾದ ಟ್ರೈಲರ್ಗಳನ್ನು ಮೊದಲು ಯು ಟ್ಯೂಬ್(YouTube)  ಮೂಲಕ ಬಿಡುಗಡೆ ಮಾಡಲಾಗುತ್ತಿದೆ. ನಂತರ ಅದು ಟಿವಿ ಚಾನಲ್ಗಳಲ್ಲಿ ಪ್ರಸಾರವಾಗುತ್ತದೆ. 

ಮೇಲುನೋಟಕ್ಕೆ ಸಮೂಹ ಮಾದ್ಯಮ ಯುವಜನರನ್ನು ಅತ್ಯಂತ ಬೇಗ ಹಾಗು ಪರಿಣಮಕಾರಿಯಾಗಿ ಮುಟ್ಟಲು ಸಾಧ್ಯವಿರುವ ಮಾಧ್ಯಮವಾಗಿ ಕಾಣುತ್ತಿದ್ದರೂ, ಅದು ಇಂದು ಸಾಮಾಜಿಕವಾಗಿ, ರಾಜಕೀಯವಾಗಿ, ಮನುಷ್ಯನ ಮೂಲಭೂತ ಮಾನವೀಯ ಮೌಲ್ಯಗಳನ್ನು ಹಾಳುಗೆಡುವುತ್ತಿರುವುದನ್ನು ನೋಡುತಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ ಸಾರ್ವಜನಿಕ ಅಭಿಪ್ರಾಯ ಮೂಡಿಸುವಲ್ಲಿ ಈ ಸಮಾಜಿಕ ತಾಣಗಳು ಮಹತ್ವದ ಪಾತ್ರವಹಿಸುತ್ತಿವೆ. ಇದೇ ಇಂದು ಅತಿ ಹೆಚ್ಚು ಅಪಾಯಕಾರಿ ಆಗುತ್ತಿರುವ ಅಂಶ. ಇಂದು ಸಮಾಜಘಾತುಕ ಶಕ್ತಿಗಳು ಹಾಗೂ ದೇಶದ ಅಖಂಡತೆಗೆ ಧಕ್ಕೆ ತರುವ ಜನರು ಕೂಡ ಈ ಸಮೂಹ ಮಾಧ್ಯಮದ ಮುಖಾಂತರ ಯುನಜನತೆಯಲ್ಲಿ ಸುಳ್ಳು ಸುದ್ದಿ ಹಬ್ಬಿಸುತಿದ್ದಾರೆ. ಇಂದು ನರೆಂದ್ರ ಮೋದಿಯಂತ ವ್ಯಕ್ತಿ ಇಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿರುವುದು ಹಾಗೂ ನಮಗೆ ತಿಳಿಯದೆ ನಮ್ಮ ಮನೆಯವರನ್ನು, ಮಕ್ಕಳನ್ನು ತನ್ನ ಅಭಿಮಾನಿಗಳನ್ನಾಗಿ ಮಾಡಿಕೊಳ್ಳುತ್ತಿರುವುದಕ್ಕೆಲ್ಲ ಕಾರಣ ಈ ಸಮೂಹ ಮಾಧ್ಯಮಗಳೇ. ಇಂದಿನ ಯುವಜನರು ಅತಿ ಹೆಚ್ಚು ಸಮಯ ಫೇಸ್ಮುಕ್ ನಲ್ಲಿ ಕಳೆಯುವುದಷ್ಟೇ ಅಲ್ಲ, ಅದು ಅವರ ಮನಸಲ್ಲಿ ಉಂಟು ಮಾಡುವ ಭ್ರಮೆ ಅವರನ್ನು ಮಾನಸಿಕವಾಗಿ ದುರ್ಬಲರನ್ನಾಗಿ ಮಾಡುತ್ತಿದೆ. ಅವರನ್ನು ಬಳಕೆದಾರ ಸಂಸ್ಕೃತಿಯತ್ತ ಒಯ್ಯುತ್ತ ಅವರ ಸರಳತನ ಹಾಗೂ ಮುಗ್ದತೆಯನ್ನು ಕಸಿದುಕೊಂಡು ಅವರನ್ನು ಆಸೆ ಆಕಾಂಕ್ಷೆಗಳ ಗೂಡನ್ನಾಗಿ ಪರಿವರ್ತಿಸುತ್ತಿದೆ. ಇಂದಿನ ಯುವಜನತೆ ಪತ್ರಿಕೆಗಳ ಓದುತ್ತಿಲ್ಲ, ಆಟವಾಡುತ್ತಿಲ್ಲ, ಪಕ್ಕದ ಮನೆಯವರ ಜೊತೆ ಮಾತನಾಡುವುದಿಲ್ಲ, ಅಷ್ಟೇ ಏಕೆ ಆಕಾಶದಲ್ಲಿ ಕಾಣುವ ಸೂರ್ಯ, ಚಂದ್ರ ನಕ್ಷತ್ರಗಳನ್ನು ನೋಡುವುದಿಲ್ಲ. ಸಿಕ್ಕ ಕೆಲ ಸಮಯದಲ್ಲೂ ಮೊಬೈಲ್ನೊಂದಿಗೆ ಕಳೆಯುತ್ತ ತಮಗೆ ತಿಳಿಯದೇ ಸಮೂಹ ಮಾಧ್ಯಮಗಳಲ್ಲಿ ಕಳೆದುಹೋಗುತಿದ್ದಾರೆ. 

Facebook Cartoons #6 

ಫೇಸ್ಬುಕ್ ನಲ್ಲಿ ಕೆಲವರಂತು ತಮ್ಮ ಸ್ಟೇಟಸ್ ಗಳಿಗೆ ಲೈಕ್ ಮಾಡದಿದ್ರೆ ಪೋನ್ ಮಾಡಿ ಯಾಕೆ ಲೈಕ್ ಮಾಡಿಲ್ಲ ಎಂದು ಕೇಳುವವರಿದ್ದಾರೆ. ಅಲ್ಲಿ ತಮ್ಮ ಸುಪ್ತ ಆಲೋಚನೆಗಳನ್ನು ಹರಿಬಿಟ್ಟು ಎಲ್ಲರಿಂದ ಬೆಂಬಲ ಮತ್ತು ಮೆಚ್ಚುಗೆ ಗಿಟ್ಟಿಸಿ ಬೀಗುವವರಿದ್ದಾರೆ. ಕೆಲವರಂತು ದಿನಕ್ಕೆ ನಾಲ್ಕೈದು ಬಾರಿ ಪ್ರೊಫೈಲ್ ಫೋಟೋ ಬದಲಿಸಿ ಮಾಡೆಲ್ಗಳಂತೆ ಪೋಸು ನೀಡುತ್ತ ವಾಸ್ತವವಾಗಿ ಸಾಧ್ಯವಾಗದ ಮನದ ಬಯಕೆಗಳನ್ನು ಈಡೇರಿಸಿಕೊಳ್ಳುತಿದ್ದಾರೆ. ತಮ್ಮ ಬಗ್ಗೆ ಅತಿಯಾಗಿ ಹೇಳಿಕೊಳ್ಳುವ  ಆತ್ಮರತಿ ಮನಸ್ಥಿತಿಯುಳ್ಳ ಜನಗಳಿದ್ದರೆ ಇನ್ನು ಕೆಲವರಿಗೆ ಒಂಟಿತನ ದೂರ ಮಾಡುವ, ತಮ್ಮ ಬಗ್ಗೆ ಇನ್ನೊಬ್ಬರಿಂದ ಸಿಂಪತಿ ಗಿಟ್ಟಿಸಿಕೊಳ್ಳುವ, ತಮ್ಮ ತಮ್ಮ ಅಜೆಂಡಾಗಳನ್ನು ಪ್ರತಿಪಾದಿಸಲು ಹಾಗೆ ಜನರನ್ನು ಮೋಸಗೊಳಿಸಲು ತಮ್ಮ ಅನೇಕಾನೇಕ ವೇಷಭೂಷಣ ಹಾಗು ಮಾತುಗಾರಿಗೆಗಳನ್ನೆಲ್ಲ ಬಳಸುವ ಎಲ್ಲ ತರದ ಜನರಿದ್ದಾರೆ. ಸಮೂಹ ಮಾಧ್ಯಮವನ್ನು ಬಳಸಿಕೊಂಡು ಅಪರಾಧದ ಕೃತ್ಯಗಳನ್ನು ನಡೆಸುತ್ತಿರುವ ಘಟನೆಗಳನ್ನು ನಾವು ಈಗಾಗಲೇ ಟಿ.ವಿ. ಚಾನಲ್ಗಳಲ್ಲಿ ನೋಡುತಿದ್ದೇವೆ. ಕೆಲವರಂತು ಅಷ್ಟೆಲ್ಲ ವಾಚಾಳಿತನ ತೋರಿಸಿ ಸಿಕ್ಕಾಗ ಮಂಕಾಗಿ ಮಾತನಾಡದೆ ದಂಗಾಗಿರುತ್ತಾರೆ. ನನಗೆ ಒಮ್ಮೊಮ್ಮೆ ಅನ್ನಿಸೋದು ಮುಂದೊಂದು ದಿನ ಪ್ರತಿಯೊಬ್ಬನೂ ಫೇಸ್ಮುಕ್  ಬಳಸಲು ವಾರ್ಷಿಕವಾಗಿ ಒಂದು ಡಾಲರ್ ನೀಡಬೇಕೆಂದು ಕಡ್ಡಾಯ ಮಾಡಿದರೆ ಕಣ್ಣು ಮುಚ್ಚಿ ನೀಡಲು ಜನ ತಯಾರಿದ್ದಾರೆ. ಏನಾದರು ಫೇಸ್ಮುಕ್ ತಾಂತ್ರಿಕ ಕಾರಣಗಳಿಂದ ಒಂದೆರಡು ದಿನ ನಿಂತು ಹೋದರೆ ಸಾವಿರಾರು ಮಂದಿ ಆತ್ಮಹತ್ಯ ಮಾಡಿಕೊಂಡಾರು. ಅಷ್ಟು ಕೆಟ್ಟ ಚಟವಾಗಿ ಇಂದು ಈ ಸಮೂಹ ಮಾಧ್ಯಮಗಳೂ ಯುವಜನರನ್ನು ಆವರಿಸಿವೆ. ಇದನ್ನರಿತೆ ಇಂದು ಎಲ್ಲ ಖಾಸಗೀ ಕಂಪನಿಗಳು, ಸರ್ಕಾರಿ ಸಂಸ್ಥೆಗಳು, ವೃತ್ತಪತ್ರಿಕೆಗಳು, ಟಿ.ವಿ.ಚಾನೆಲ್, ರಾಜಕೀಯ ವ್ಯಕ್ತಿಗಳು, ಲೇಖಕರು ಹಾಗು ಸಿನೆಮಾ ತಾರೆಗಳು  ಕೂಡ ಸಮೂಹ ಮಧ್ಯಮಗಳ ಮೂಲಕ ಯುವಜನರನ್ನು ಸೆಳೆಯಲು ಪ್ರಯತ್ನಿಸುತ್ತಿವೆ. 

ಇಂದು ಯುವಜನರನ್ನು ಸೆಳೆಯುವ ಹಾಗು ಉಚಿತವಾಗಿ ಪ್ರಚಾರಕ್ಕೆ ಬಳಸಿಕೊಳ್ಳುವ ಏಕೈಕ ಮಾಧ್ಯಮ ಇದಾಗಿದೆ. ಇಲ್ಲಿ ಇತರ ಖ್ಯಾತ ಪತ್ರಿಕೆಗಳ ಹಾಗು ಟಿ.ವಿ ಚಾನೆಲ್ ಗಳ ಸುದ್ದಿಗಳ ಜೊತೆಗೆ. ಸುಳ್ಳು ಸುದ್ದಿಗಳು ಯಥೇಚ್ಚವಾಗಿ ಹರಿದಾಡುತ್ತವೆ. ಏಕೆಂದರೆ ಇಲ್ಲಿ ಯಾವುದೇ ರೀತಿಯ ಸೆನ್ಸಾರ್ಶಿಪ್ ಇರೋದಿಲ್ಲ. ಪತ್ರಿಕೆಗಳಲ್ಲಿ ಹಾಗು ಟಿ.ವಿ ಚಾನೆಲ್ ಗಳಿಗಾದರು ತಾವು ಸುದ್ದಿ ಎಂದು ಪ್ರಸಾರ ಮಾಢುವವುಗಳ  ಜವಾಬ್ದಾರಿಯನ್ನು ಒಪ್ಪಿಕೊಳ್ಳಲು ಸಂಪಾದಕನಿರುತ್ತಾನೆ. ಆದರೆ ಸಮೂಹ ಮಾಧ್ಯಮದಲ್ಲಿ ಹರಿದಾಡುವ ಎಷ್ಟೋ ಸುದ್ದಿಗಳಿಗೆ ಅಪ್ಪ ಅಮ್ಮ ಇರೋದಿಲ್ಲ. ಅದು ವೈರಸ್ನ ರೀತಿ ಒಬ್ಬರಿಂದ ಒಬ್ಬರಿಗೆ ಹರಿಸಲ್ಪಡುತ್ತದೆ. ಇದರಿಂದ ತಪ್ಪು ಭಾವನೆ ಅಷ್ಟೆ ಅಲ್ಲ ಸಮುದಾಯಗಳ ನಡುವೆ ದ್ವೇಷ ಭಾವನೆಯನ್ನು ಬಹಳ ಬೇಗ ಹರಡಬಹುದಾಗಿದೆ. ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ಕೋಮುಗಲಭೆಯೆ ಇದಕ್ಕೆ ಸಾಕ್ಷಿ. ಈ ಹಿಂದೆಯೂ ಕೂಡ ಈರೀತಿಯ ಘಟನೆಗಳು ನಡೆದಿವೆ ಹಾಗು ಇಂದು ಕೂಡ ನಡೆಯುತ್ತಿವೆ. ಈ ಎಲ್ಲಾ ಕಾರಣಗಳಿಂದಲೇ ಇಂದು ಇಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳಿಗೆ ಮನ್ನಣೆ ನೀಡಬಾರದು. ಈ ಸಾಮಾಜಿಕ ತಾಣಗಳಲ್ಲಿ ಮೂಡಿಸಲೆತ್ನಿಸುವ ಸಾರ್ನಜನಿಕ ಅಭಿಪ್ರಾಯಕ್ಕಂತು ಕವಡೆ ಕಿಮ್ಮತ್ತು ನೀಡಬಾರದು. ಇದೊಂದು ಸರಕು ಸಂಸ್ಕೃತಿಯ ಬೆಂಬಲಿಸುವ ಹಾಗು ಮಾರುಕಟ್ಟೆ ಉದ್ದೇಶವುಳ್ಳ ಮಾಧ್ಯಮ ಇದಕ್ಕೆ ಯಾವುದೇ ತತ್ತ್ವ ಸಿದ್ದಾಂತಗಳಿರುವುದಿಲ್ಲ.

ಇಂದು ಇದೇ ಸಮುದಾಯ ಮಾಧ್ಯಮ ದುಷ್ಪರಿಣಾಮ ಮಕ್ಕಳ ಮೇಲೆ ಕಾಣಬಹುದು. ಅತಿ ಹೆಚ್ಚು ಮೊಬೈಲ್ ಬಳಕೆ, ವಿಡೀಯೋ ಗೇಮ್ ಚಟ, ರಾತ್ರಿಯಿಡೀ ನಿದ್ದೆಗೆಟ್ಟು ಚಾಟ್ ಮಾಡುವುದು ಮತ್ತು ಏಕಾಗ್ರತೆಯ ಕೊರತೆ ಮತ್ತು ಖಿನ್ನತೆ ಇಂದು ಬಹುತೇಕ ಯುವಜನರನ್ನು ಕಾಡುತ್ತಿರುವುದು. ಆದರೆ ತಮ್ಮ ಈ ಸಮಸ್ಸೆಯನ್ನು ಅವರು ಹೊರಗಡೆ ಹುಡುಕುತಿದ್ದಾರೆ. ಕೇವಲ 15 ವರ್ಷಗಳ ಹಿಂದೆ ಇವುಗಳ ಸಹವಾಸವಿಲ್ಲದೇ ಅವರ ತಂದೆ ತಯಿಗಳು ಎಷ್ಟು ಆರೋಗ್ಯಪೂರ್ಣವಾಗಿ ಬದುಕಿದ್ದರು ಎಂಬುವುದನ್ನು ಅರಿಯುತ್ತಿಲ್ಲ. ಇಂದು ಎಲ್ಲರ ಮನೆಯಲ್ಲಿ ಮೊಬೈಲ್ಗಳಿವೆ. ಅದರಲ್ಲಿ ಮಕ್ಕಳು ಮಾತ್ರ ಫೇಸ್ಬುಕ್ ಬಳಸುತಿದ್ದರೆ ಅವರ ಪೋಷಕರು ಬರೆ ದೂರವಾಣಿಗೆಂದು ಬಳಸುತಿರುತ್ತಾರೆ. ಅವರ ಮಕ್ಕಳು ಈ ಸಮೂಹ ಮಾಧ್ಯಮಗಳಲ್ಲಿ ಏನು ಮಾಡುತ್ತಿರುತ್ತಾರೆ ಅಂತ ಅವರಿಗೆ ತಿಳಿಯುವುದಿಲ್ಲ. ಮುಂದೊಂದು ದಿನ ತಿಳಿಯುವ ಹೊತ್ತಿಗೆ ಮಕ್ಕಳು ಅದರ ಚಟ ಹತ್ತಿಸಿಕೊಂಡಿರುತ್ತಾರೆ. ಧೂಮಪಾನ ಹಾಗು ಮದ್ಯಪಾನ ದೇಹವನ್ನು ಹಾಳುಗೆಡವಿದರೆ ಸಮೂಹ ಮಾಧ್ಯಮಗಳು ಮನಸ್ಸನ್ನು ಹಾಳು ಮಾಡುತ್ತವೆ.

ಹಾಗಾದರೆ ಸಮೂಹ ಮಾಧ್ಯಮಗಳಿಂದ ಕೇವಲ ಕೆಡುಕು ಮಾತ್ರ ಆಗುತ್ತಿದಿಯಾ? ಅದರಿಂದ ಒಳ್ಳೆಯದಾಗುತ್ತಿಲ್ಲವಾ? ಅನ್ನುವ ಪ್ರಶ್ಣೆಗೆ ಅತಿಯಾದರೆ ಅಮೃತವೂ ವಿಷವಾಗುತ್ತೆ ಎನ್ನುವ ಹಿರಿಯರ ಮಾತಿನಲ್ಲೇ ಉತ್ತರವಿದೆ. ನಮ್ಮ ಕುತೂಹಲ ಕರಗಿಸುವ ಕನಸನ್ನು ಕಸಿವ ಹಕ್ಕನ್ನ ಈ ಸಮೂಹ ಮಾಧ್ಯಮಗಳಿಗೆ ನೀಡದಿದ್ದರೆ ಸಾಕು. ಇಂದು ಈ ಸಮೂಹ ಮಾಧ್ಯಮಗಳಲ್ಲಿರುವ ನಮ್ಮ ಫೋಟೋ ಮತ್ತು ಖಾಸಗೀ ಮಾಹಿತಿಗಳನ್ನು ಯಾರು ಬೇಕಾದರೂ ನೋಡಬಹುದಾಗಿದೆ ಮತ್ತು ಪಡೆಯಬಹುದಾಗಿದೆ. ಇವುಗಳ ಮೇಲಿನ ನಿರ್ಬಂಧ ಇನ್ನೂ ಕೂಡ ಸಾಧ್ಯವಾಗಿಲ್ಲ ಆದುದರಿಂದ ನಮ್ಮ ಖಾಸಗೀ ಮಾಹಿತಿಯನ್ನು ಹಂಚಿಕೊಳ್ಳದೇ ಕೇವಲ ಮಾಹಿತಿಗೆ ಬಳಸುವುದಾದರೆ ಚಿಂತೆ ಇಲ್ಲ. ಸಾಮಾಜಿಕ ತಾಣಗಳು ನಮ್ಮ ದಾಸರಾಗಬೇಕೆ ಹೊರತು ನಾವು ಅದರ ದಾಸರಾಗಬಾರದು. ಅಲ್ಲಿ ಸಿಗುವುದು ಕೇವಲ ಮಾಹಿತಿಯ ಕಸವೇ ಹೊರು ಜ್ಞಾನವಲ್ಲ. ಇವು ನಮ್ಮ ಅವಶ್ಯಕತೆಯೂ ಅಲ್ಲ ಅನಿವಾರ್ಯತೆಯೂ ಅಲ್ಲ.

ಹದಿನೈದು ವರುಷಗಳ ಹಿಂದೆ ನಾನು ಜಮೀನಿಗೆ ನೀರು ಹಾಯಿಸಲೆಂದು ಹೊಲಕ್ಕೆ ಹೋದಾಗ ರಾತ್ರಿಯಿಡಿ ನೀರು ಹಾಯಿಸಿ ಹಾಗೆ ಏರಿ ಮೇಲೆ ಮಲಗಿ ನಕ್ಷತ್ರಗಳ ಎಣಿಸುತ್ತಾ ನನ್ನದೇ ಕಲ್ಪನಾಲೋಕದಲ್ಲಿ ವಿಹರಿಸುತ್ತಾ ಎಲ್ಲೋ ದೂರದಿಂದ ಕೇಳಿ ಬರುತ್ತಿದ್ದ ಸಿನೆಮಾ ಹಾಡುಗಳನ್ನು ಕೇಳುತ್ತ ಮಲಗಿರುತಿದ್ದೆ. ನನಗೇ ತಿಳಿಯದ ಹಾಗೆ ನಿದ್ದೆ ಬಂದು ಎಚ್ಚರವಾಗುತಿತ್ತು. ಅದೊಂದು ಏಕಾಂತ ಅನುಭವಿಸುವ ಕ್ಷಣ. ಇಂದು ಆ ಏಕಾಂತ ಇಲ್ಲವಾಗಿದೆ. ಯಾಕೆಂದರೆ ಇಂದು ನಮ್ಮನ್ನು ಏಕಾಂತದಲ್ಲಿರಲು ಈ ಸಮೂಹ ಮಾಧ್ಯಮಗಳು ಬಿಡುತ್ತಿಲ್ಲ. ಏಕೆಂದರೆ ಇದು ಸಾವಿರಾರು ಕೋಟಿ ಡಾಲರ್ಗಳ ಉದ್ಯಮ!


-ಸಮಾಜವಾದಿ ಮಾಸಿಕ ಹೊಸಮನುಷ್ಯ,  ಡಿಸೆಂಬರ್ 2013 ಸಂಚಿಕೆಯಲ್ಲಿ ಪ್ರಕಟವಾದ  ಲೇಖನ

-ಬಿ. ರಾಜೇಶ್, ದಿ ಹಿಂದೂ ದಿನಪತ್ರಿಕೆಯ ಹಿರಿಯ ಜಾಹಿರಾತು ಅಧಿಕಾರಿ

No comments:

Post a Comment