Friday, 6 December 2013

ಅರಬ್ ಜಗತ್ತಿನ ಹೆಣ್ಣುಮಕ್ಕಳ ಕವಿತೆಗಳು
 
ಹಬೀಬಾ ಮುಹಮ್ಮದಿಯ ಕವನಗಳು 
 
ಅನುವಾದ: ಎಮ್ ಆರ್ ಕಮಲಾ
 
 
 Metikurke Ramaswamy Kamala


ಬಿಳುಪು, 
ನಿನ್ನ ಎದೆಯ ಗುಟ್ಟು. 
ಗಂಡಸೆಂಬ ನಿನ್ನೊಳಗಿನ ಬಂಡೆ 
ಈ ಹಾಳೆಗಿಂತಲೂ ಬಿಳುಪು
ಅಪ್ಪಿಕೊಳ್ಳುವ ಆಸೆ 
ಆತ್ಮಕ್ಕಿಂತಲೂ ಬಿಳುಪು 
ತಾಜಾ ಹಾಲಿಗಿಂತಲೂ...
ಮೆಕ್ಕಾ ಬೀದಿಯಿಂದ
ಅಬು ಬಕ್ರ್ ಸಿದ್ದಿಕ್ ವರೆಗೂ 
ಸುರಿವ ಬಿಳುಪಿನ ಚಿತ್ರಗಳು 
ಪ್ರೀತಿಯನ್ನು ಪೂರ್ಣಗೊಳಿಸಲಾರವೆ? 
ನಿನ್ನ ಮರಗಳಡಿ 
ನನ್ನ ಸಣ್ಣ ನಿದ್ದೆ..
ಮೋಸದ ಹಣ್ಣುಗಳನ್ನು 
ಪ್ರೀತಿ ಮರ 
ಬಿಡಲಾರದೆಂಬ ಭರವಸೆಯಲ್ಲಿ! 
 
 
 
 
ರಾತ್ರಿ ದಿಂಬಿಗೊರಗಿ 
ಮಲಗ ಹೊರಟರೆ ನಿನ್ನ ಕನಸಿನ ಕಾಟ 
ನನ್ನ ಹೆಣ್ತನದ 
ಋತುಮಾನಗಳನ್ನು ಮುಟ್ಟಿ 
ಎಚ್ಚರಗೊಳಿಸುವಾಗ 
ಸಿಹಿ ಬಾಲ್ಯದ ಜೇನು ಹೀರಿ 
ಹೋದ ಒಣ ಭಾವ 
 
 
 
 
 

ದೂರದ ನನ್ನ ಕೋಣೆಯಲ್ಲಿ 
ಸತ್ತ ಹಾಳೆಯ ನೆನಪು. 
ಬರಡು ಜಾಗದಲ್ಲೂ 
ಒಂಟಿತನ ಪ್ರೀತಿಯ ಪದಗಳನ್ನು 
ಉಸುರುತ್ತದೆ 
ಕಾಗದದ ದೋಣಿಯೊಳಗೆ ಕೂತ 
ಬೆಳಕು ದೂರವನ್ನು ಕ್ರಮಿಸುತ್ತದೆ


No comments:

Post a Comment