Thursday 12 December 2013

ಮುಂದಿನ ತೆಯ್ಯಮ್ ವರೆಗೆ...

ಡಾ. ಜಿ. ಕೃಷ್ಣ

Indian culture Theyyam performer applies make up in front of mirror2 300x199 Theyyam – A Ritual Older Than Time 

ಇದು ತೆಯ್ಯಮ್
ವೆಂಕಟೇಶ್ವರ ಮಹೇಶ್ವರ
ಪಾರ್ವತಿ ಪದ್ಮಾವತಿಯರ
ಲಾಸ್ಯ ಇದಲ್ಲ
ಶಂಕ ಚಕ್ರ ಗದಾ ಪದ್ಮಧಾರಿಗಳು
ಇಕ್ಷುಚಾಪ ಹಿಡಿದವರು
ದೂರ ನಿಂತೇ ದರ್ಶನ ನೀಡಿ
ಆಶೀರ್ವದಿಸಿ ಕಳಿಸುವ
ತಂತ್ರ ಇದಲ್ಲ

ಪೊರೆದೇ ಪೊರೆವೆನೆಂಬ
ಅಭಯದ ದಿಗಿಣ
ಕಣ್ಣರಳಿಸಿ ಗದರುವ
ತಾಯಿಗುಣದ ವಾಗ್ದಾನ

ಇಲ್ಲಿ ಮೇಲು ಕೀಳಿಲ್ಲ
ಕೀಳೇ ಮೇಲು
ಸಪಾದ ಭಕ್ಷ, ಪಂಚಕಜ್ಜಾಯಗಳಲ್ಲ
ಹಸಿ ಮಾಂಸ ಬಿಸಿರಕ್ತದೋಕುಳಿಯೆ
ನೈವೇದ್ಯ

ದಿನದ ಕೀಳು ಜೀವ
ಮೈದುಂಬಿದಾಗ
ಎತ್ತರೆತ್ತರಕ್ಕೆ ಏರಿ
ದೈವವೇ ಆಗಿ
ಜನಿವಾರಿಗಳನ್ನು
ಆಳುವವರನ್ನು, ಕೀಳುವವರನ್ನು
ಕಾಲಡಿಗೆ ಬೀಳಿಸಿಕೊಳ್ಳುತ್ತದೆ

ತೆಯ್ಯಮ್ ಮುಗಿದ ಬೆಳಿಗ್ಗೆ
ಬೇಲಿಯಾಚೆಯ ಮರದಡಿ
ಕುಳಿತಿರುತ್ತಾನೆ
ದೇವತಾ ಮನುಷ್ಯ
ತಾನು ಅಭಯ ಕೊಟ್ಟವರ
ಅಂಗಳಕ್ಕೂ ಕಾಲಿಡುವ ಹಕ್ಕಿಲ್ಲದೆ
ಮಾಮೂಲಿನಂತೆ
ಮುಂದಿನ ತೆಯ್ಯಮ್ ವರೆಗೆ...

***
 

No comments:

Post a Comment