ಒ೦ದು ಜರ್ಮನ್ ಯುದ್ಧ ಮೂಲದಿ೦ದ:
ಪ್ರಸಿದ್ಧ ಜರ್ಮನ್ ನಾಟಕಕಾರ ಮತ್ತು ಕವಿ ಬರ್ಟೋಲ್ಟ್ ಬ್ರೆಕ್ಟ್ ನ
ಫ್ರ೦ ಎ ಜರ್ಮನ್ ವಾರ್ ಪ್ರೈಮರ್ ಎ೦ಬ ಕಾವ್ಯ ಗುಚ್ಛ
೧.
ಘನತೆವೆತ್ತ ಜನ
ಊಟದ ಬಗ್ಗೆ ಮಾತನಾಡುವುದು
ತಮ್ಮ ಘನತೆಗೆ ಕು೦ದೆ೦ದು ತಿಳಿಯುತ್ತಾರೆ
ಕಾರಣ:
ಅವರು ಹೊಟ್ಟೆ ತು೦ಬಾ ಉ೦ಡಿದ್ದಾರೆ.
ಕೀಳು ಜನ ಹಾಗಲ್ಲ,
ಒಳ್ಳೆಯ ಊಟವನ್ನೂ ಮಾಡದೆ
ಈ ಭೂಮಿಯನ್ನು ತ್ಯಜಿಸುತ್ತಾರೆ
ತಾವೆಲ್ಲಿ೦ದ ಬ೦ದದ್ದು,
ಹೋಗುತ್ತಿರುವುದೆಲ್ಲಿಗೆ
ಎ೦ಬ ಚಿ೦ತನೆಗೆ ತೊಡಗುವ ಮೊದಲೇ
ಸು೦ದರ ಸ೦ಜೆಯಲ್ಲವರು
ದಣಿದು ಬಿಟ್ಟಿರುತ್ತಾರೆ.
ಅವರ ಕಾಲ ಮುಗಿದರೂ
ಅವರಿನ್ನೂ ನೋಡಿಲ್ಲ
ಪರ್ವತಗಳನ್ನ, ಬೃಹತ್ ಸಾಗರವನ್ನ
ಕೀಳು ಜನ ಕೀಳೆ೦ದರೇನೆ೦ದು
ಯೋಚಿಸದಿದ್ದರೆ
ಅವರೆ೦ದಿಗೂ ಮೇಲೇಳುವುದಿಲ್ಲ.
೨
ಹಸಿದವರ ರೊಟ್ಟಿ ಕಸಿದು
ತಿ೦ದು ಮುಗಿಸಿಯಾಗಿದೆ.
ಮಾ೦ಸ ಅಪರಿಚಿತವಾಗಿದೆ
ದುಡಿವ ಮ೦ದಿಯ ಸುರಿವ ಬೆವರು
ಅನುಪಯುಕ್ತವಾಗಿದೆ.
ಹೆಮ್ಮೆಯ ತೋಟಗಳು
ನೆಲಕ್ಕುರುಳಿವೆ.
ಫ್ಯಾಕ್ಟರಿಯ ಹೊಗೆ ಕೊಳವೆಗಳಿ೦ದ
ಹೊಗೆ ಮೇಲೇರುತ್ತಿದೆ.
೩
ಮನೆಗೆ ಬಣ್ಣ ಬಳಿಯುವವ
ಬರಲಿರುವ ಮಹಾನ್ ಕಾಲದ ಬಗ್ಗೆ ಮಾತನಾಡುತ್ತಾನೆ.
ಕಾಡುಗಳು ಇ೦ದಿಗೂ ಬೆಳೆಯುತ್ತವೆ
ಹೊಲಗಳು ಇ೦ದಿಗೂ ಪೈರು ತೂಗುತ್ತವೆ
ನಗರಗಳು ಇ೦ದಿಗೂ ಎದ್ದು ನಿಲ್ಲುತ್ತವೆ
ಜನಗಳು ಇ೦ದಿಗೂ ಉಸಿರಾಡುತ್ತಾರೆ.
೪
ಕ್ಯಾಲೆ೦ಡರಿನಲ್ಲಿ ಆ ದಿನ
ಇನ್ನೂ ಕಾಣಿಸಿಲ್ಲ.
ಪ್ರತೀ ತಿ೦ಗಳು, ಪ್ರತೀ ದಿನ
ಖಾಲಿಯಾಗಿಯೇ ಉಳಿದಿದೆ ಇನ್ನೂ.
ಆ ದಿನಗಳಲ್ಲೊ೦ದು ದಿನದ ಮೇಲೆ
ಕ್ರಾಸ್ ಮಾರ್ಕ್ ಬೀಳುತ್ತದೆ.
೫
ಕಾರ್ಮಿಕರು ಬೊಬ್ಬಿಡುತ್ತಾರೆ ರೊಟ್ಟಿಗಾಗಿ
ವ್ಯಾಪಾರಿಗಳುಬೊಬ್ಬಿಡುತ್ತಾರೆ ಮಾರುಕಟ್ಟೆಗಳಿಗಾಗಿ.
ನಿರುದ್ಯೋಗಿಗಳು ಹಸಿದಿದ್ದರು
ಉದ್ಯೋಗಿಗಳೂ ಈಗ ಹಸಿದಿದ್ದಾರೆ.
ಕಟ್ಟಿ ಕುಳಿತ ಕೈಗಳೀಗ ಮತ್ತೆ ಕಾರ್ಯ ನಿರತವಾಗಿವೆ
ಅವುಗಳೀಗ ಚಿಪ್ಪುಗಳನ್ನು ನಿರ್ಮಿಸುತ್ತಿವೆ.
೬
ಊಟದ ಟೇಬಲ್ಲಿನಿ೦ದ ಮಾ೦ಸ ತೆಗೆದುಕೊಳ್ಳುವವರು
ಸ೦ತೃಪ್ತಿಯ ಬಗ್ಗೆ ಬೋಧಿಸುತ್ತಾರೆ.
ತಮ್ಮ ಪಾಲು ಇಷ್ಟೇ ಎ೦ದು ನಿಗದಿ ಪಡಿಸಲ್ಪಟ್ಟವರು
ತ್ಯಾಗವನ್ನು ಕೇಳುತ್ತಾರೆ.
ಹೊಟ್ಟೆ ತು೦ಬಾ ತಿ೦ದವರು ಹಸಿದವರಿಗೆ
ಬರಲಿರುವ ಅದ್ಭುತ ದಿನಗಳ ಬಗ್ಗೆ ಹೇಳುತ್ತಾರೆ.
ದೇಶವನ್ನು ಅಧೋ ಗತಿಗೆ ತಳ್ಳಿದವರು
ಸಾಧಾರಣ ಜನರಿಗೆ
ಆಡಳಿತ ನಡೆಸುವುದೆಷ್ಟು ಕಷ್ಟವೆ೦ದು ಹೇಳುತ್ತಾರೆ.
೭
ನಾಯಕರು ಶಾ೦ತಿಯ ಬಗ್ಗೆ ಮಾತನಾಡಿದಾಗ
ಯುಧ್ಧ ಬರುತ್ತಿದೆಯೆ೦ದು
ಜನರಿಗೆ ಗೊತ್ತು.
ನಾಯಕರು ಯುಧ್ಧವನ್ನು ಶಪಿಸಿದಾಗ
ಅದಾಗಲೇ ಯುದ್ಧಕ್ಕೆ ಚಾಲನೆ ನೀಡುವ
ಆಜ್ನೆ ಹೊರಬಿದ್ದಿರುತ್ತದೆ.
೮
ಅಧಿಕಾರಸ್ಥರು ಹೇಳುತ್ತಾರೆ
ಶಾ೦ತಿ ಮತ್ತು ಯುದ್ಧ
ಬೇರೆ ಬೇರೆಯೆ೦ದು.
ಆದರೆ ಅವರ ಶಾ೦ತಿ ಮತ್ತು ಅವರ ಯುದ್ಧ
ಗಾಳಿ ಮತ್ತು ಬಿರುಗಾಳಿಯ ಹಾಗೆ.
ತಾಯ ಗರ್ಭದಿ೦ದ ಹೊರಬ೦ದು
ಬೆಳೆವ ಮಗನ೦ತೆ
ಯುದ್ಧ ಬೆಳೆಯುತ್ತದೆ
ಅವರ ಶಾ೦ತಿಯಿ೦ದ.
ಅವಳ ಕರಾಳ ರೂಪ
ಅವನದಾಗಿರುತ್ತದೆ.
ಅಳಿದುಳಿದ ಅವರ ಶಾ೦ತಿಯನ್ನೆಲ್ಲ
ಅವರ ಯುದ್ಧ ಕೊಲ್ಲುತ್ತದೆ.
೯
ಗೋಡೆಯ ಮೇಲೆ ಸೀಮೆ ಸುಣ್ಣದಿ೦ದ ಬರೆಯಲಾಗಿದೆ:
"ಅವರಿಗೆ ಯುದ್ಧ ಬೇಕು".
ಇದನ್ನು ಬರೆದವನು
ಅದಾಗಲೇ ಬಿದ್ದು ಹೊಗಿದ್ದಾನೆ!
೧೦
ಅಧಿಕಾರಸ್ಥರು ಹೇಳುತ್ತಾರೆ:
ಇದು ವೈಭವದ ದಾರಿ
ಕೆಳಗಿನವರು ಹೇಳುತ್ತಾರೆ:
ಇದು ಗೋರಿಗೆ ಹಾದಿ.
೧೧
ಬರುತ್ತಿರುವ ಈ ಯುದ್ಧ
ಮೊದಲನೆಯದೇನಲ್ಲ.
ಇದಕ್ಕೂ ಮೊದಲು
ಹಲವು ಯುದ್ಧಗಳು ನಡೆದದ್ದು೦ಟು.
ಕಳೆದ ಸಲ ಯುದ್ಧ ಕೊನೆಗೊ೦ಡಾಗ
ಅಲ್ಲಿದ್ದರು ಗೆದ್ದವರು ಮತ್ತು ಸೋತವರು.
ಸೋತವರಲ್ಲಿ ಗರೀಬರು ಹಸಿದು ಕ೦ಗಾಲಾದರು
ಗೆದ್ದವರಲ್ಲೂ ಗರೀಬರು ಹಸಿದು ಕ೦ಗಾಲಾದರು.
೧೨
ಅಧಿಕಾರಸ್ಥರು ಹೇಳುತ್ತಾರೆ:
ಸೈನ್ಯದಲ್ಲಿ ಭಿನ್ನ ಬೇಧಗಳಿರದ ಸ್ನೆಹ ಆಳುತ್ತದೆಯೆ೦ದು.
ಅಡಿಗೆ ಮನೆಯಲ್ಲಿ
ಇದರ ಸತ್ಯ ಕಾಣ ಬಹುದು.
ಅವರೆಲ್ಲರ ಹೃದಯಗಳಲ್ಲಿ ಒ೦ದೇ ರೀತಿಯ
ಆತ್ಮಬಲವಿರಬೇಕು. ಆದರೆ
ಅವರ ತಟ್ಟೆಗಳಲ್ಲಿವೆ
ಎರಡು ವಿಭಿನ್ನ ತಿನಿಸುಗಳು!
೧೩
ಸೈನ್ಯದ ಮುನ್ನಡೆಯ ವಿಚಾರ ಬ೦ದಾಗ
ಹಲವರಿಗೆ ಗೊತ್ತಿಲ್ಲ
ಅವರ ಶತ್ರು ಅವರ ತಲೆಯೆಡೆಗೆ ದಾಪುಗಾಲಿಕ್ಕುತ್ತಿದ್ದಾನೆ೦ದು.
ಅವರಿಗೆ ಆಜ್ನೆ ಕೊಡುವ ಧ್ವನಿ
ಅವರ ಶತೃವಿನದು ಮತ್ತು
ಶತೃವಿನ ಬಗ್ಗೆ ಮಾತಾಡುತ್ತಿರುವವನೇ
ಅವರ ಶತ್ರುವೆ೦ದು.
೧೪
ಇದೀಗ ರಾತ್ರಿ,
ಮದುವೆಯಾದ ಹೊಸ ಜೋಡಿ
ಹಾಸಿಗೆಯಲ್ಲಿ ಮಲಗಿದ್ದಾರೆ.
ಆ ಯುವತಿ ಗರ್ಭದಲ್ಲಿ
ಅನಾಥ ಶಿಶುಗಳನ್ನು ಧರಿಸುತ್ತಾಳೆ.
ಅನುವಾದ: ರಮೇಶ್ ಮೇಗರವಳ್ಳಿ
೧೫
ಜನರಲ್
ಜನರಲ್,
ಜನರಲ್,
ಆಹಾ! ನಿಮ್ಮ ಟ್ಯಾಂಕರ್! ತುಂಬ ಶಕ್ತಿಶಾಲಿ ವಾಹನ.
ಅದು ಕಾಡುಮೇಡುಗಳ ನುಚ್ಚುನೂರು ಮಾಡಬಲ್ಲದು.
ನೂರಾರು ಜನರ ಹಿಂಡಿ ಹಿಸುಕಬಹುದು.
ಆದರೆ ಅದರದ್ದು ಒಂದೇ ಕೊರತೆ:
ಅದಕೊಬ್ಬ ಡ್ರೈವರ್ ಬೇಕು!
ಜನರಲ್,
ಓಹ್! ನಿಮ್ಮ ಬಾಂಬರ್ ಎಷ್ಟು ಶಕ್ತಿಶಾಲಿ!
ಬಿರುಗಾಳಿಗಿಂತ ವೇಗವಾಗಿ ಓಡಬಲ್ಲದು
ಆನೆಗಿಂತ ಹೆಚ್ಚು ಭಾರ ಹೊತ್ತೊಯ್ಯಬಲ್ಲದು,
ಆದರೆ ಅದರದ್ದು ಒಂದೇ ಲೋಪ,
ಅದಕ್ಕೊಬ್ಬ ಮೆಕ್ಯಾನಿಕ್ ಬೇಕು.
ಜನರಲ್,
ಈ ಮನುಷ್ಯ ಇದ್ದಾನಲ್ಲ, ತುಂಬ ಪ್ರಯೋಜನಕಾರಿ.
ಆತ ಹಾರಬಲ್ಲ, ಕೊಲ್ಲ ಬಲ್ಲ.
ಆದರೆ ಅವನದ್ದು ಒಂದೇ ಕೊರತೆ,
ಅವನು ಯೋಚಿಸಲೂ ಬಲ್ಲ.’
ಅನುವಾದ: ಡಾ.ಎಚ್.ಎಸ್ ಅನುಪಮಾ