Sunday, 8 September 2013

ತಂಗಿ ನೀಲು

ಬಸವರಾಜ ಹಳ್ಳಿ

























ತಂಗಿ ನೀಲು 
ನಿನ್ನ ಮರಣದ ವಾರ್ತೆ
ಕಿವಿಗೆ ಬಿದ್ದಾಗ ಹಸಿದ ಹೊಟ್ಟೆಯ ಹೊತ್ತು
ಸತುವಿಲ್ಲದ ಕಾಲುಗಳಲ್ಲಿ ನಡೆಯುತ್ತಿದ್ದೆ
ಮನುಷ್ಯರೆಲ್ಲರೂ ಮಂದಿರ, ಮಸೀದಿಗೆ ಎಡೆ ಹಿಡಿದು ಹೊರಟಿದ್ದರು.

ಕೆಂಡದ ಮ್ಯಾಲೆ ಚಿಕ್ಕೆಗಳ ಎಣಿಸುತ ಮಲಗಿದ್ದವಳಿಗೆ
ಉರಗದ ನಾಲಿಗೆ ಬಡಿಯಿತೇ
ಬೂಜುಗಟ್ಟಿದ ಚರ್ಮ ಕಿತ್ತುಕೊಳ್ಳುತ್ತಲೇ
ಉಂಗುಟ ಹರಿದ ಚಪ್ಪಲಿಗೆ
ಹೊಟ್ಟೆಯ ಸಿಟ್ಟು ಚಿಮ್ಮುತ್ತದೆ
ನಿನ್ನ ನೆನೆದಾಗಲೆಲ್ಲಾ ನೆನೆಯುತ್ತಲೆ ಹೋಗುತ್ತೇನೆ.

ಅವ್ವನ ಮುರಿದ ಪೆಟಾರಿಯಲಿ ಮುಚ್ಚಿಟ್ಟ ಅಂಕಪಟ್ಟಿಗಳು
ಗೆದ್ದಲಗಳಿಗೆ ದಿನದೂಟ
ಹಣೆಗಚ್ಚಿಕೊಂಡು ತಿರುಗಿದರೆ ಕಸದ ಬುಟ್ಟಿಯೆಡೆಗೆ ತೋರುಬೆರಳು
ತೂತುಬಿದ್ದ ಬೊಕುಣದಲಿ ಗಾಂಧಿತಾತ ನಗುತ್ತಾನೆಯೇ ?
ನಿನಗೆ ಲಂಗ ಕೊಳ್ಳಲು ಆಕಾಶ ನೋಡಿದ ನಾನು ಶಾಪ ಹಾಕಿಕೊಂಡೆ.

ಹಿಂಗಾರು ಮಳೆಗೆ ಗುಡಿಸಲು ತುಂಬ ಸಾವಿರ ನಲ್ಲಿಯ ಆರ್ಭಟ
ತೊಯ್ದ ಬಟ್ಟೆಯಲಿ ನಿಂತ ಮುದ್ದು ಭಾವಚಿತ್ರ ಹಸಿಯಾಗಿದೆ
ಜಗಲಿ ಮ್ಯಾಲಿನ ಮೂರೂ ಫೋಟೋ ಕಟ್ಟುಗಳು ಹೊಗೆಯಾಗಿವೆ
ಅಪ್ಪ ಚುಟ್ಟಾ ಸೇದುತ್ತಲೆ ನಿನ್ನ ಆತ್ಮದ ಕುಲಾವಿ ನೇವರಿಸುತ್ತಿದ್ದಾನೆ
ಹಂಚಿಟ್ಟ ಅವ್ವ ಧ್ಯಾನದಲೆ ರೊಟ್ಟಿಯ ಬದಲು ಕೈಯಿಟ್ಟಿದ್ದಾಳೆ.

ಸಾವಿರ ಚೇಳು, ಉರಗ ಕಚ್ಚಿದರೂ

ಪಾಪಿ ಬದುಕಿದ್ದೇನೆ ಕೊನೆಯ ಮುಖ ನೋಡದೆ,
ನಾಲಿಗೆ ಹರಿದ, ಸೀಳು ಮೂಗಿನ, ಗಾಳಿಗೆ ತೇಲುವ ಮನುಷ್ಯರೇ ಬೇಕು
ಜಗದ ಅಪಮಾನಗಳನ್ನು ಹೊತ್ತು ತಿರುಗಲು.

ನಿನ್ನ ಚೆಲುವಿಗೆ ಬೆಂಕಿ ಹಚ್ಚಿದ ಖೂಳರು
ನನ್ನ ಮೂರು ಜನುಮದ ಯಜಮಾನರು
ಸೆಟೆದ ನಾಲಿಗೆ ಮಾತೆತ್ತಿದರೆ ತಿರುಗು ಯಂತ್ರಕೆ
ಲಕ್ಷ ತುಕಡಿಗಳು
ನಾನು ಮಾತನಾಡುವ ಮೂಕ, ನೋಡುವ ಕುರುಡ, ಕೇಳುವ ಕಿವುಡ.

ಮಹಲುಗಳ ಓಟಕೆ ಜೋಪಡಿ ಪಟ್ಟಿಗಳು ನರಳಿವೆ
ನಿನ್ನೆ ಕುಳಿತು ಉಂಡ ಜಾಗೆಯಲಿ ಪಿಲ್ಲರ್ಗಳೆದ್ದಿವೆ
ಬದುಕು ಕಪ್ಪೆ ಆಟ
ನಿದ್ದೆಗಳನು ಬಿಡದು ರೋಲರ್ಗಳ ಸದ್ದು..

ಜೀವ ಹಿಂಡುವ ಲೋಕಕೆ ಬಂದ ತಂಗಿ ಕ್ಷಮೆಯಿರಲಿ
ಸುಡುವ ಕಡಾಯಿಯಲಿ ಬಿದ್ದ ಕೈಗೆ ಸ್ಪರ್ಶ ಜ್ಞಾನವಿಲ್ಲ
ನಾಲ್ಕೆ ನಾಲ್ಕು ಹನಿ ಹನಿಸುವ ಶಕ್ತಿ ಕಣ್ಣುಗಳಿಗೆ
ಕಬರಸ್ತಾನ, ಸುಡುಗಾಡು ಸುತ್ತುತ್ತಲಿದ್ದೇನೆ
ಬೂದಿಯಾದರೂ ಸಿಕ್ಕೀತು ಎದೆಗಪ್ಪಿಕೊಳ್ಳಲೆಂದು

ಬಯಲ ಮೂರು ಹೊಲೆಗುಂಡುಗಳು
ಸುರಿದ ಬಿಸಿಲಿಗೆ
ಅನ್ನ ಬೇಯುತ್ತಿದೆ
ಗುಂಪಲ್ಲಿ ಊರ ಜಾತ್ರೆಯ ಸಡಗರ
ಬಾಯಿಗೆ ಇಷ್ಟಿಷ್ಟು ತುತ್ತಿನ ಸರಬರಾಜು
ಸಿಲ್ವರ್ ತಾಟಿಡಿದ ಹರಿದ ಲಂಗದ ತಂಗಿ ಮತ್ತೆ ಕಂಡಳು

ದಾರಿ ಹೋಕರು ಬರುವ ಮುಂಚೆ
ದೂರ ಸಾಗಬೇಕಾಗಿದೆ
ತಂಗಿಗೊಂದು ಹೊಸ ಲಂಗ ತರಲು
ಮೈ ಹುರಿಗೊಳಿಸಬೇಕಾಗಿದೆ ಕಾವಲಾಗಲು...


***

No comments:

Post a Comment