ಹಂಬಲು
ಸು ರಂ ಎಕ್ಕುಂಡಿ
ನಕ್ಷತ್ರ ಉರಿಯುತಿದೆ ಮುಗಿಲು ಹಣತೆಗಳಿಂದ
ಗಾಳಿ ದಣಿವಾರಿಸಿದೆ ಬೀಸಿಬೀಸಿ
ಒಣಗಿದೆಲೆಗಳ ಹಾಗೆ ಉದುರುತಿವೆ ನಿಟ್ಟುಸಿರು
ದುಃಖವಡಗಿದೆ ಇಲ್ಲಿ ಚಾಪೆ ಹಾಸಿ
ಗಿಡದ ತೊಗಟೆಗಳಿಂದ ಅಂಟು ಒಸರುವ ಹಾಗೆ
ಒಸರಿ ಹೋಯಿತು ಒಡಲು ಕಂಡ ಹರುಷ
ವೀಣೆಯಂತಹ ಬದುಕು ಕೊರಡುಗಟ್ಟಿದೆ ಒಳಗೆ
ಇಂಗಿ ಹೋಗಿವೆ ಕಂಪು ಸುರಿದ ನಿಮಿಷ
ಬೆಳ್ಳಕ್ಕಿಗಳು ಹಾರಿ ಬರಲು ಹನಿಗೂಡಿದವು
ದೂರ ಕಡಲಿನ ನೆನಪು ತುಂಬಿ ಕಣ್ಣು
ಚೈತ್ರ ಪರಿಮಳ ನೆನೆದು ಬೆಟ್ಟಗಳು ಮರುಗಿದವು
ತೆನೆಯ ಕಾಣದೆ ಅಳುವ ಬಂಜೆ ಮಣ್ಣು
ಎಂದು ಬೆಳಗಾಗುವದು ಎಂದು ನನ್ನಂಗಳಕೆ
ಬಣ್ಣಬಣ್ಣದ ಹಕ್ಕಿ ಹಾರಿ ಬಂದು
ಮತ್ತೊಮ್ಮೆ ಹಾಡುವವು ಸೂರ್ಯ ಪುಷ್ಪದ ಹಾಡು
ಹೊಸದಿನದ ಹೊಂಬಿಸಿಲಿನಲ್ಲಿ ಮಿಂದು
***
ಸುಬ್ಬಣ್ಣ ಅವರಿಗೆ ಎಂಥ ಸೊಗಸಿನ ಕನಸುಗಳಿದ್ದವು....ಅವರ ಭಾವ ನೆಲೆಗಳು ನಮ್ಮಲ್ಲಿ ಚಿಗುರೊಡೆಯುತ್ತಿವೆ
ReplyDeleteಸುಬ್ಬಣ್ಣ ಅವರಿಗೆ ಎಂಥ ಸೊಗಸಿನ ಕನಸುಗಳಿದ್ದವು....ಅವರ ಭಾವ ನೆಲೆಗಳು ನಮ್ಮಲ್ಲಿ ಚಿಗುರೊಡೆಯುತ್ತಿವೆ
ReplyDelete