Tuesday, 24 September 2013

ತಿನ್ನಬಾರದ ಹಣ್ಣು ತಿಂದಿದೇವೆ ನಾವು

ಚೇತನಾ ತೀರ್ಥಳ್ಳಿ 



ಬಾಯಿ ಒರೆಸಿಕೋ
ನೀರು ಕುಡಿದುಬಿಡು
ರುಚಿ ನಾಲಗೆಯಗಲಿ
ತೊಲಗಿಹೋಯ್ತೋ ನೋಡು.
ತಿನ್ನಬಾರದ ಹಣ್ಣು
ತಿಂದಿದೇವೆ ನಾವು.

ಮೊದಲಿಂದಲೂ ಹಾಗೇನೇ
ದೇವರೆಂಬ ಅಪ್ಪ
ತೋಟದಲಿ ಗಿಡ ನೆಟ್ಟು
ಹೂಬಿಟ್ಟು ಹಣ್ಣಿಟ್ಟು
ತಿನ್ನಬೇಡಿರೆಂದ.
ಆಗಿಂದಲು ಹಿಗೇನೇ
ತಿನ್ನಬಾರದ ಹಣ್ಣು
ತಿಂದಿದೇವೆ ನಾವು.




ಪಾಪವೆಂದರೆ ಅಷ್ಟೇನೆ
ಅಪ್ಪನ ಮಾತು ಮುರಿಯೋದು
ಅದಕ್ಕವನು ಉರಿಯೋದು
ಪಾಪವೆಂದರೆ ಅಷ್ಟೇನೆ
ಚಿನ್ನವಾದರು ಪಂಜರ
ಹೊರೆಯೆಂದು ಅರಿಯೋದು.
ತಿನ್ನಬಾರದ ಹಣ್ಣನ್ನೆ
ಪಟ್ಟು ಹಿಡಿದು ತಿನ್ನೋದು.

ಅಪ್ಪನಹಂಕಾರ ಹಣ್ಣು
ತಿಳಿವ ತಿರುಳು ಮರದಲಿಟ್ಟ
ಗುಟ್ಟು ಹೇಳೋ ಹಾವು ಬಿಟ್ಟ
ತನ್ನ ಮಾತು ಮೀರೋದಿಲ್ಲ
ಶಾಪ ಭಯವ ದಾಟೋದಿಲ್ಲ
ಅನ್ನೋ ನೆಚ್ಚಿಕೆಯವನ ಮೀಸೆಗೆ
ಮಣ್ಣು ಮುಟ್ಟಿಸಿ ನೆಲವ ಮೆಟ್ಟಿ
ಗೆದ್ದಿದೇವೆ ನಾವು.
ತಿನ್ನಬಾರದ ತಿಳಿವ ಹಣ್ಣು
ಮರಳಿ ಮತ್ತೆ ಕದ್ದು ಕದ್ದು
ತಿಂದಿದೇವೆ ನಾವು.


***

No comments:

Post a Comment