Tuesday, 10 September 2013




ಅರಬ್ ಜಗತ್ತಿನ ಹೆಣ್ಣುಮಕ್ಕಳ ಕವಿತೆ-
ಉರಿವ ಮರದ ಮೋಹಕತೆ

ಮುಫ್ರೆತ್

ಅನುವಾದ: ಎಮ್. ಆರ್ ಕಮಲಾ
 
Metikurke Ramaswamy Kamala

ಅವನ ನಗು:
ಬೆಳ್ಳಿ
ಸುಗಂಧ
ಬೆಚ್ಚನೆಯ ವಿಷಾದ

ದೂರದ ಬಯಲಲ್ಲಿ
ಕುದುರೆಗಳು
ಚೆಲ್ಲಿ ಹೋದ
ಉದಾತ್ತ ಸಂತಸ,
ಮಂದಹಾಸ

ನೆರಳ ಆಸರೆ ಪಡೆದ
ಪಾರಿವಾಳಗಳ ಗುಂಪು
ಚದುರಿ ಚೆಲ್ಲಾಡಿದ
ಉನ್ಮತ್ತ ಉಲ್ಲಾಸ

ಅವನ ನಗು:
ಅನಂತ ವಿವರಗಳ
ಕಲೆ ಹಾಕಿ
ಬೇಲಿ ಮಾಡಿದ
ಬೆಳಕಿನ ಸೀದಾ ಹಾದಿ

ನನ್ನ ವಿಷಾದದ
ವಿಶಾಲ ಕಡಲಿಗೆ
ಬೆಳ್ಳಿ ಹನಿ ಹನಿಸುವ
ಬೇಸಗೆಯ ಹಠಾತ್ ಮಳೆ

(ಒದ್ದೆ ಹಕ್ಕಿ
ಮೈ ಒದರುವಂತೆ
ನಿದ್ದೆ, ನೋವನ್ನು
ಕೊಡವುತ್ತಿದ್ದೇನೆ
ನಿನ್ನ ಮುಖಕ್ಕೆ
ಪೈಪೋಟಿ ಎನ್ನಿಸುವ
ಚಿತ್ರ ಬರೆಯುತ್ತಿದ್ದೇನೆ
ಪರ್ವತವ ಬಲ್ಲ
ಆರೋಹಿ! )

ಅವನ ನಗು;
ಪ್ರೇಮದ ಆದೇಶ
ಯುಧ್ಧ
ರಾಗದಿಂಪಿಗೂ
ಹತೋಟಿ
ದಿಕ್ಕು ದಿಕ್ಕಿಗೂ ಇಡುವ
ಕಚಗುಳಿ

ಬೂದಿಯಾದರು
ಉರಿವ ಮರದಂತೆ
ಮೋಹಕ
ಸೂರ್ಯನ ಆಕಾರ
ಪಡೆದರೂ
ಮುಳುಗದೇ ಉಳಿವ
ಮಾಯಕ

***

No comments:

Post a Comment